ವಿಜಯಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ವಿಜಯಪುರ ಜಿಲ್ಲೆಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿ ಆಗಿದ್ದು, ಇನ್ನೂ ಆಗುತ್ತಲೇ ಇವೆ. ಕಾಂಗ್ರೆಸ್‌ ಸರ್ಕಾರ 50 ವರ್ಷಗಳ ಕಾಲ ದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಯೋಜನೆ ಹೊರತಾಗಿ ಒಂದು ನಯಾಪೈಸೆ ಜಿಲ್ಲೆಗೆ ಹರಿದು ಬರಲಿಲ್ಲ. ಆದರೆ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಬಳಿಕ ಅಭಿವೃದ್ಧಿಗೆ ಸಾಕಷ್ಟು ಹಣ ಹರಿದು ಬಂದಿದೆ. ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. 

ಇದು ಜಿಲ್ಲೆಯ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ಮೈಲುಗಲ್ಲು ಎಂದು ಹೇಳಬೇಕು ಎಂದು ತಮ್ಮ ಭಾವನೆಗಳನ್ನು ಕೇಂದ್ರದ ಮಾಜಿ ಸಚಿವ, ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ ರಮೇಶ ಜಿಗಜಿಣಗಿ ಅವರು ಕನ್ನಡಪ್ರಭದೊಂದಿಗೆ ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮೇ 30ರಂದು ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಕೇಂದ್ರದ ಹಿರಿಯ ಮಾಜಿ ಸಚಿವ, ಸಂಸದ ರಮೇಶ ಜಿಗಜಿಣಗಿ ಅವರು ಕನ್ನಡಪ್ರಭಕ್ಕೆ ಸಂದರ್ಶನ ನೀಡಿದ್ದಾರೆ.

ಎಲ್ಲಾ ಸಂಸದರಿಗೂ ಸೂಕ್ತ ಸಲಹೆ ಸೂಚನೆ ನೀಡುವ ಮೋದಿ: ಸಂಸದ ಪಿ.ಸಿ.ಮೋಹನ್‌

ಕೇಂದ್ರ ಸರ್ಕಾರದ ಸಾಧನೆ ತೃಪ್ತಿ ನೀಡಿದೆಯೇ?

ಕಳೆದೊಂದು ವರ್ಷಗಳಲ್ಲಿ ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಇದಕ್ಕೆಲ್ಲಾ ಕಾರಣ ನರೇಂದ್ರ ಮೋದಿ ಅವರು ಜಿಲ್ಲೆಗೆ ಯೋಜನೆ ಹೊರತಾಗಿಯೂ ವಿಶೇಷ ಯೋಜನೆಗಳ ಮೂಲಕ ಸಾಕಷ್ಟುಅನುದಾನ ನೀಡಿದ್ದು. ಮೋದಿ ಆಡಳಿತಾವಧಿಯಲ್ಲಿ ಜಿಲ್ಲೆಯು ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತುಂಗಕೇರುತ್ತಿದೆ.

ಜಿಲ್ಲೆಯಲ್ಲಿ ಅಂಥಾ ಸಾಧನೆ ಏನಾಗಿದೆ?

ಕಳೆದೊಂದು ವರ್ಷದಲ್ಲಿ ಹೊಸದಾಗಿ ಹಲವಾರು ಅಭಿವೃದ್ಧಿ ಯೋಜನೆ ಮಂಜೂರಾಗಿವೆ. ಆದರೆ ಹಿಂದಿನ ಅವಧಿಯಲ್ಲಿನ ಸಾಕಷ್ಟುಅಭಿವೃದ್ಧಿ ಕಾಮಗಾರಿಗಳು ಇನ್ನೂ ಅಭಿವೃದ್ಧಿ ಹಂತದಲ್ಲಿವೆ. ಹೀಗಾಗಿ ಹಿಂದಿನ ಯೋಜನೆ ಪೂರ್ಣಕ್ಕೆ ಹೆಚ್ಚು ಗಮನಹರಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಅವಧಿಯಲ್ಲಿ ಒಟ್ಟು 4 ರೈಲ್ವೆ ಓವರ್‌ ಬ್ರಿಡ್ಜ್‌ ಮಂಜೂರಾಗಿವೆ. ಅವುಗಳಲ್ಲಿ ಈಗಾಗಲೇ ವಿಜಯಪುರ ಹೊರ ವಲಯದ ವಜ್ರಹನುಮಾನ ಬಡಾವಣೆ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುಕ್ತ ಚಾಲನೆಯಷ್ಟೇ ಬಾಕಿ ಉಳಿದಿದೆ. ಹೊನಗನಹಳ್ಳಿ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗಿದೆ. ವಿಜಯಪುರದ ಇಬ್ರಾಹಿಂಪುರ ಬಡಾವಣೆ ಬಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಯುದ್ಧೋಪಾದಿಯಲ್ಲಿ ನಡೆದಿದೆ. ಅಲಿಯಾಬಾದ್‌ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಶೀಘ್ರ ಈ ಕಾಮಗಾರಿಯೂ ಆರಂಭವಾಗಲಿದೆ.

ಜನಸ್ನೇಹಿ ಸೇವೆಗೆ ರೈಲ್ವೆ ಇಲಾಖೆ ಸಂಕಲ್ಪ: ಸುರೇಶ್ ಅಂಗಡಿ

ರೈಲ್ವೆ ಕ್ಷೇತ್ರದಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು?

ವಿಜಯಪುರ ಜಿಲ್ಲೆಯಲ್ಲಿ ಡಬಲ್‌ ರೈಲ್ವೆ ಹಳಿ ಜೋಡಿಸುವ ಕೆಲಸ ಮುಗಿದಿದೆ. ಇದರಿಂದ ರೈಲ್ವೆ ಪ್ರಯಾಣದಲ್ಲಿ ಸಾರ್ವಜನಿಕರಿಗೆ ಅನಗತ್ಯ ವಿಳಂಬ ತಪ್ಪಿದೆ. ಎಲೆಕ್ಟ್ರಿಕಲ್‌ ರೈಲು ಕೂಡ ಮಂಜೂರಾಗಿದೆ. ವಿಜಯಪುರದ ಜನತೆ ರೈಲ್ವೆ ಕ್ಷೇತ್ರದಲ್ಲಿ ಇಂತಹ ಅಭಿವೃದ್ಧಿಯನ್ನು ಹಿಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಕಂಡಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹೊಸತನ ಕಾಣುವಂತಾಗಿದೆ. ಜಿಲ್ಲೆಯಲ್ಲಿ ಬಸವನ ಬಾಗೇವಾಡಿ ತಾಲೂಕಿನ ಕೂಡಗಿಯಲ್ಲಿ 4 ಸಾವಿರ ಮೆಗಾವ್ಯಾಟ್‌ ಸಾಮರ್ಥ್ಯದ ಉಷ್ಣ ವಿದ್ಯುತ್‌ ಸ್ಥಾವರ ಘಟಕ ಸ್ಥಾಪಿಸಲಾಗಿದೆ. ಈಗಾಗಲೇ ಅದು ವಿದ್ಯುತ್‌ ಉತ್ಪಾದನೆ ಆರಂಭಿಸಿದೆ.

ಜಿಲ್ಲೆಯಲ್ಲಿ ಕ್ರಾಂತಿ ಮಾಡಿದ ಕಾಮಗಾರಿ?

ಜಿಲ್ಲೆಯಲ್ಲಿ ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರಮುಖವಾಗಿ ಎದ್ದು ಕಾಣುವುದು ರಸ್ತೆ ಕಾಮಗಾರಿ. ಸೊಲ್ಲಾಪುರ- ವಿಜಯಪುರ, ವಿಜಯಪುರ ಕಲಬುರಗಿ, ವಿಜಯಪುರ- ಬಾಗಲಕೋಟೆ ಹಾಗೂ ವಿಜಯಪುರ- ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗಿದೆ. ವಿಜಯಪುರ- ಸಂಕೇಶ್ವರ ರಸ್ತೆ ಕೆಲವೊಂದು ತಾಂತ್ರಿಕ ತೊಂದರೆಯಿಂದ ಪೂರ್ಣಗೊಂಡಿಲ್ಲ. ಉಳಿದಂತೆ 3 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದಿವೆ. ಇದಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿನ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ರಸ್ತೆ ಅಭಿವೃದ್ಧಿಯಿಂದ ರೈತರ ಕೃಷಿ ಚಟುವಟಿಕೆಗಳು, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿವೆ. ವಿಜಯಪುರ- ಪಂಢರಪುರ ರಸ್ತೆ ಡಬ್ಲಿಂಗ್‌ ಮಾಡಲಾಗುತ್ತಿದೆ. 80 ಅಡಿ ರಸ್ತೆ ಮಾಡಲಾಗುವುದು. ಅಪಘಾತ ತಪ್ಪಿಸಲು ರಸ್ತೆ ಅಂಕುಡೊಂಕು ಸರಿಪಡಿಸಿ ನೇರ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ಇದು ಅಭಿವೃದ್ಧಿಯಲ್ಲಿ ದೊಡ್ಡ ಕ್ರಾಂತಿ ಎಂದೇ ಹೇಳಬಹುದು.

ಸಂಸತ್ತಲ್ಲಿ ಮೊಳಗಿದೆಯೇ ಜಿಲ್ಲೆಯ ಧ್ವನಿ?

ಶೂನ್ಯ ವೇಳೆಯಲ್ಲಿ ಹಲವು ಪ್ರಶ್ನೆ ಕೇಳುವ ಮೂಲಕ ಜಿಲ್ಲೆಯ ಅಭಿವೃದ್ಧಿ ಕೆಲಸಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ. ವಿಮಾನ ನಿಲ್ದಾಣ, ಗೋಳಗುಮ್ಮಟವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ನಾವು ಪ್ರಶ್ನೆ ಕೇಳುವ ಮುನ್ನವೇ ನಮ್ಮ ಪ್ರಧಾನಮಂತ್ರಿಗಳು ಯೋಜನೆಗಳಿಗೆ ಅನುದಾನ ನೀಡುತ್ತಿದ್ದಾರೆ. ನಮಗೆ ಪ್ರಶ್ನೆ ಕೇಳುವ ಪ್ರಮೇಯವೇ ಬರುವುದಿಲ್ಲ.

ಆರ್ಥಿಕತೆಗಿಂತ ಜನರ ಆರೋಗ್ಯಕ್ಕೆ ನಮೋ ಆದ್ಯತೆ: ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ

ಮುಂದೇನಿದೆ ಗುರಿ?

ಜಿಲ್ಲೆಯಲ್ಲಿ ಬೃಹತ್‌ ಕೈಗಾರಿಕೆ ಸ್ಥಾಪಿಸಲು ಕೇಂದ್ರದಿಂದ ಯೋಜನೆ ತರಲು ಯೋಜಿಸಿದ್ದೇನೆ. ಏಕೆಂದರೆ ವಿಜಯಪುರ ಜಿಲ್ಲೆಯಲ್ಲಿ ಮಳೆ ಸರಿಯಾಗಿ ಆಗುವುದಿಲ್ಲ. ಬರ ಪರಿಸ್ಥಿತಿ ತಲೆದೋರಿ ಬಡತನ ಇನ್ನೂ ತಾಂಡವವಾಡುತ್ತಿದೆ. ಕೆಲಸ ಅರಸಿ ಜನರು ಬೇರೆ ರಾಜ್ಯಗಳಿಗೆ ಗುಳೇ ಹೋಗುತ್ತಿದ್ದಾರೆ. ಅದನ್ನು ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ನೀಡಲು ಬೃಹತ್‌ ಕೈಗಾರಿಕೆಗಳನ್ನು ತರಲಾಗುವುದು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು. ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಹಾಗೂ ವಿಶ್ವವಿಖ್ಯಾತ ಗೋಳಗುಮ್ಮಟ ಸ್ಮಾರಕವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

ಮೋದಿ ಜೊತೆ ನಿಮ್ಮ ಒಡನಾಟ?

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅವರು ಸಂಸದರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮನೋಭಾವ ಹೊಂದಿದವರಾಗಿದ್ದಾರೆ. ಅವರು ಯಾರಿಗಾಗಿ ಆಸ್ತಿ ಮಾಡುವ ಇರಾದೆ ಹೊಂದಿಲ್ಲ. ನಿಸ್ವಾರ್ಥ ಸ್ವಭಾವದ ಪ್ರಧಾನಿ ನಮ್ಮ ದೇಶಕ್ಕೆ ದೊರೆತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ.

20 ಲಕ್ಷ ಕೋಟಿ ಪ್ಯಾಕೇಜ್‌ ಬಗ್ಗೆ ಅನಿಸಿಕೆ?

ಕೊರೋನಾದಿಂದ ಇಡೀ ವಿಶ್ವವೇ ತತ್ತರಿಸಿದೆ. ಇಂಥ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎದೆಗುಂದಲಿಲ್ಲ. ಕೊರೋನಾ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂಬುವುದನ್ನು ಆಲೋಚಿಸಿದರು. ಅವರ ಜಾಣ್ಮೆಯನ್ನು ಪ್ರತಿಯೊಬ್ಬರು ಮೆಚ್ಚಲೇಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಷ್ಟೇ ತೊಂದರೆಯಾದರೂ ಲಾಕ್‌ಡೌನ್‌ ಜಾರಿಗೆ ತಂದರು. ಇದರಿಂದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು. ಈಗ ಬಡವರು, ಕಾರ್ಮಿಕರು, ಮಧ್ಯಮ ವರ್ಗದವರ ಪುನಶ್ಚೇತನಕ್ಕೆ .20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿದ್ದು ದೇಶಕ್ಕೆ ನೀಡಿದ ದೊಡ್ಡ ಕೊಡುಗೆ. ಇದು ಪ್ರಧಾನಮಂತ್ರಿಗಳು ಬಡವರು, ಕಾರ್ಮಿಕರು, ಮಧ್ಯಮ ವರ್ಗದವರ ಬಗ್ಗೆ ಹೊಂದಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ.