ಹಾವೇರಿ: ಕೇಂದ್ರ ಸರ್ಕಾರದ ಯಾವುದೇ ಜನ ಕಲ್ಯಾಣ ಕಾರ್ಯಕ್ರಮ, ಯೋಜನೆಯಿದ್ದರೂ ಅದರ ಗರಿಷ್ಠ ಪ್ರಯೋಜನ ತನ್ನ ಕ್ಷೇತ್ರದ ಜನರಿಗೆ ಸಿಗಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿ ಅದರಲ್ಲಿ ಬಹುಮಟ್ಟಿಗೆ ಯಶಸ್ಸು ಕಂಡವರು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಶಿವಕುಮಾರ ಉದಾಸಿ. 2009ರಿಂದ ಸತತವಾಗಿ ಮೂರು ಬಾರಿ ಕ್ಷೇತ್ರದಿಂದ ಗೆದ್ದು ಹ್ಯಾಟ್ರಿಕ್‌ ಬಾರಿಸಿರುವ ಅವರು, ಹಾವೇರಿ ಮತ್ತು ಗದಗ ಜಿಲ್ಲೆಯನ್ನು ಒಳಗೊಂಡ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಹೆದ್ದಾರಿ, ರೈಲ್ವೆ ಮುಂತಾದ ಬೃಹತ್‌ ಯೋಜನೆಗಳಷ್ಟೇ ಅಲ್ಲದೇ, ಬಡ ಕುಟುಂಬಗಳಿಗೆ ಉಜ್ವಲ ಯೋಜನೆ, ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ, ಜನಧನ ಖಾತೆ ಮೂಲಕ ಲಕ್ಷಾಂತರ ಜನರ ಆರ್ಥಿಕ ಸೇರ್ಪಡೆ, ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಹೊಸ ಬ್ಯಾಂಕ್‌ ಶಾಖೆಗಳ ಆರಂಭ, ಜನೌಷಧ ಮಳಿಗೆ, ಕಿಸಾನ್‌ ಸಮ್ಮಾನ ಮುಂತಾದ ಯೋಜನೆಗಳ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ದೊರಕಿಸಿಕೊಟ್ಟಕೀರ್ತಿ ಸಂಸದ ಶಿವಕುಮಾರ ಉದಾಸಿ ಅವರಿಗೆ ಸಲ್ಲುತ್ತದೆ. ಎರಡನೇ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ‘ಕನ್ನಡಪ್ರಭ’ಕ್ಕೆ ಸಂಸದ ಶಿವಕುಮಾರ ಉದಾಸಿ ನೀಡಿದ ಸಂದರ್ಶನದ ವಿವರ ಹೀಗಿದೆ.

ಸಲಹೆ ಕೇಳಿಯೇ ತೀರ್ಮಾನ ತಗೊಳ್ತಾರೆ: 6 ವರ್ಷದಿಂದ ಮೋದಿ ಜೊತೆಗಿರೋ ಸದಾನಂದ ಗೌಡ ಮುಕ್ತ ಮಾತು

* ಉಜ್ವಲ ಯೋಜನೆಯಲ್ಲಿ ದಕ್ಷಿಣ ಭಾರತದಲ್ಲೇ ನಂಬರ್‌ 1 ಸ್ಥಾನ ಹೇಗೆ ಸಾಧ್ಯವಾಯಿತು?

ಉಜ್ವಲ ಭಾರತ ಯೋಜನೆಯಲ್ಲಿ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚಿನ ಗ್ಯಾಸ್‌ ಸಂಪರ್ಕ ನೀಡಿದ ನಂಬರ್‌ 1 ಲೋಕಸಭಾ ಕ್ಷೇತ್ರ ನನ್ನದು ಎಂಬ ಹೆಮ್ಮೆಯಿದೆ. ಕ್ಷೇತ್ರ ವ್ಯಾಪ್ತಿಯ 8 ತಾಲೂಕುಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಿಶನ್‌ ಮೋಡ್‌ ರೀತಿಯಲ್ಲಿ ಯೋಜನೆಯನ್ನು ಪರಿಗಣಿಸಿದ್ದರಿಂದ ಹಾವೇರಿ, ಗದಗ ಜಿಲ್ಲೆಗಳಲ್ಲಿ 1.97 ಲಕ್ಷ ಅರ್ಹ ಫಲಾನುಭವಿಗಳಿಗೆ ಗ್ಯಾಸ್‌ ಸಂಪರ್ಕ ಕಲ್ಪಿಸಿದ್ದೇನೆ. ಯಾವ ಬಡ ಕುಟುಂಬವೂ ಯೋಜನೆಯಲ್ಲಿ ತಪ್ಪದಂತೆ ನೋಡಿಕೊಳ್ಳಲಾಯಿತು. ಇದರಲ್ಲಿ ಪಕ್ಷದ ಕಾರ್ಯಕರ್ತರ ಶ್ರಮವೂ ಅಪಾರವಾಗಿದೆ.

* ಕ್ಷೇತ್ರದ ರೈತರಿಗೆ ಫಸಲ್‌ ಬಿಮಾ ಯೋಜನೆಯಲ್ಲೂ ಹೆಚ್ಚಿನ ಪ್ರಯೋಜನ ಆಗಿದೆಯಂತೆ ನಿಜವೆ?

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ಪರಿಣಾಮಕಾರಿ ರೀತಿಯಲ್ಲಿ ಗದಗ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಬೆಳೆ ವಿಮೆ ಪಡೆದುಕೊಂಡಿದೆ. ಹಾವೇರಿಯಲ್ಲೂ ಹೆಚ್ಚಿನ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ವಿಮಾ ಪರಿಹಾರ ಪಡೆದ ದೇಶದ ಟಾಪ್‌ 15 ಲೋಕಸಭಾ ಕ್ಷೇತ್ರಗಳ ಪೈಕಿ ನನ್ನ ಕ್ಷೇತ್ರ ಬರುತ್ತದೆ. ಯೋಜನೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದ್ದರಿಂದ ಇದು ಸಾಧ್ಯವಾಗಿದೆ. ಇಷ್ಟುವರ್ಷ ಬೆಳೆ ಸಾಲ ಪಡೆದ ಎಲ್ಲ ರೈತರಿಗೆ ಕಡ್ಡಾಯವಾಗಿದ್ದ ಬೆಳೆ ವಿಮೆ ಈ ವರ್ಷದಿಂದ ಬದಲಾಗಿದೆ. ವಿಮೆ ಮಾಡಿಸುವುದನ್ನು ರೈತರ ಇಚ್ಛೆಗೆ ಬಿಡಲಾಗಿದೆ. ಬೆಳೆ ಸಾಲ ಪಡೆದವರು, ಪಡೆಯದ ರೈತರೂ ಸೇರಿದಂತೆ ನನ್ನ ಕ್ಷೇತ್ರದ ಎಲ್ಲ ರೈತರು ಫಸಲ್‌ ಬಿಮಾ ಯೋಜನೆ ಮಾಡಿಸಬೇಕು ಎಂಬುದು ನನ್ನ ಕಳಕಳಿಯ ಮನವಿ.

'ತೆಗಳುವವರೆಲ್ಲಾ ಮೋದಿಗೆ ರಾಜಮಾರ್ಗ ನಿರ್ಮಿಸಿ ಕೊಟ್ಟಿದ್ರು'..! ಪ್ರಧಾನಿ ಬಗ್ಗೆ ವಾಗ್ಮಿ ಸೂಲಿಬೆಲೆ ಮಾತು

* ಬಡ ಕುಟುಂಬಗಳ ಆರ್ಥಿಕ ಚೇತರಿಕೆಗೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯೇನು?

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ವೇಳೆ ಸಾರ್ವಜನಿಕರ ಆರ್ಥಿಕ ಅಂಶಗಳು ಸೇರ್ಪಡೆಯಾಗಿರಲಿಲ್ಲ. ಅದುವರೆಗೆ ಗರೀಬಿ ಹಠಾವೋ ಮುಂತಾದ ಘೋಷಣೆಗಳಿದ್ದವು. ಕೇಂದ್ರ ಸರ್ಕಾರದ ಸಹಾಯಧನ, ಸಬ್ಸಿಡಿ, ಪ್ರೋತ್ಸಾಹಧನ ಅರ್ಹ ಫಲಾನುಭವಿಗಳಿಗೆ ತಲುಪಬೇಕಾದರೆ ಆರ್ಥಿಕ ಸೇರ್ಪಡೆ. ಅದನ್ನು ಮೊದಲು ಮಾಡಿದ್ದು ಮೋದಿ ಸರ್ಕಾರ. ದೇಶದಲ್ಲಿ ಸುಮಾರು 32 ಕೋಟಿ ಜನಧನ ಖಾತೆ ತೆರೆಯಲಾಯಿತು. ಹಾವೇರಿ ಜಿಲ್ಲೆಯಲ್ಲಿ 3.61 ಲಕ್ಷ ಹಾಗೂ ಗದಗ ಜಿಲ್ಲೆಯಲ್ಲಿ 6.5 ಲಕ್ಷ ಸೇರಿ ನನ್ನ ಕ್ಷೇತ್ರದಲ್ಲಿ 10 ಲಕ್ಷ ಜನಧನ ಖಾತೆ ಆರಂಭವಾಗಿದೆ. ಆರ್ಥಿಕ ಸೇರ್ಪಡೆಯ ಮಹತ್ವ ಈಗ ಅರಿವಾಗುತ್ತಿದೆ. ಬರ, ಕೊರೋನಾ ಮುಂತಾದ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೀಡುವ ನೆರವು ನೇರವಾಗಿ ಫಲಾನುಭವಿಗಳಿಗೆ ತಲುಪಲು ಇದರಿಂದ ಅನುಕೂಲವಾಗಿದೆ. ಇದು ಕೇಂದ್ರ ಸರ್ಕಾರದ ಐತಿಹಾಸಿಕ ಕ್ರಮವಾಗಿದೆ. ಇದರೊಂದಿಗೆ ರೇಶನ್‌ ಕಾರ್ಡಿಗೆ ಆಧಾರ್‌ ಲಿಂಕ್‌ ಮಾಡಿದ್ದರಿಂದ ಅರ್ಹರಿಗೆ ಯೋಜನೆ ತಲುಪುವಂತಾಗಿದೆ.

* ಕೇಂದ್ರದ ಯೋಜನೆಗಳು ಕ್ಷೇತ್ರದ ಜನರಿಗೆ ತಲುಪಿದೆಯೇ?

5 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯಿರುವ ಎಲ್ಲ ಗ್ರಾಮಗಳಲ್ಲಿ ಬ್ಯಾಂಕ್‌ ಶಾಖೆ ಆರಂಭಿಸಿದ್ದು, ಈ ಸಾಧನೆಯಲ್ಲಿ ದೇಶದ ಟಾಪ್‌ 20ರೊಳಗೆ ನನ್ನ ಕ್ಷೇತ್ರ ಬರುತ್ತದೆ. 2009ರಲ್ಲಿ ಹಾವೇರಿಯಲ್ಲಿ 142 ಹಾಗೂ 118 ಗದಗ ಜಿಲ್ಲೆಯಲ್ಲಿ ಬ್ಯಾಂಕ್‌ ಶಾಖೆಗಳಿದ್ದವು. ಈಗ ಹಾವೇರಿ ಜಿಲ್ಲೆಯಲ್ಲಿ 86 ಮತ್ತು ಗದಗ ಜಿಲ್ಲೆಯಲ್ಲಿ 55 ಸೇರಿ ಒಟ್ಟು 2019ರಿಂದೀಚೆಗೆ 145 ಬ್ಯಾಂಕ್‌ ಶಾಖೆ ಹೆಚ್ಚಳವಾಗಿದೆ. ಅದೇ ರೀತಿ ಕಡಿಮೆ ದರಕ್ಕೆ ಔಷಧ ಲಭ್ಯವಾಗುವಂತೆ ಮಾಡಲು 22 ಜನೌಷಧ ಕೇಂದ್ರ ಆರಂಭಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೊರೋನಾ ವೈರಸ್‌ ಶುರುವಾದ ಮೇಲೆಯೇ ಕ್ಷೇತ್ರದಲ್ಲಿ 3.36 ಲಕ್ಷಕ್ಕೂ ಹೆಚ್ಚು ಮಾನವ ದಿನಗಳು ಸೃಜನೆಯಾಗಿವೆ. ಹಾವೇರಿ ಜಿಲ್ಲೆಯಲ್ಲಿ 927 ಕೋಟಿ, . 520 ಕೋಟಿ ಮೊತ್ತದ ಕೂಲಿ ಹಣ ಪಾವತಿಯಾಗಿದ್ದು ಸಾಧನೆಯೇ ಸರಿ. ಅದೇ ರೀತಿ ಹಲವು ವರ್ಷಗಳ ಕಾಲ ಸ್ಥಗಿತವಾಗಿದ್ದ ಗ್ರಾಮ ಸಡಕ್‌ ಯೋಜನೆ ಮತ್ತೆ ಶುರುವಾಗಿದ್ದು, ಹಾವೇರಿ ಜಿಲ್ಲೆಯಲ್ಲಿ . 130 ಕೋಟಿ ವೆಚ್ಚದಲ್ಲಿ 162 ಕಿಮೀ ಹಾಗೂ ಗದಗ ಜಿಲ್ಲೆಯಲ್ಲಿ . 109 ಕೋಟಿ ವೆಚ್ಚದಲ್ಲಿ 149 ಕಿಮೀ ರಸ್ತೆ ಕಾಮಗಾರಿ ಶೀಘ್ರದಲ್ಲಿ ಶುರುವಾಗಲಿದೆ. ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಲ್ಲಿ ಪರಿಶಿಷ್ಟಜಾತಿ, ಪಂಗಡ ಹೆಚ್ಚಿರುವ 67 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ತಲಾ . 40 ಲಕ್ಷ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುವುದು. ಇನ್ನು ಪ್ರತಿ ರೈತರಿಗೆ . 6 ಸಾವಿರ ನೀಡುವ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಹಾವೇರಿ ಜಿಲ್ಲೆಯಲ್ಲಿ 1.84 ಲಕ್ಷ, ಗದಗ ಜಿಲ್ಲೆಯಲ್ಲಿ 1.31 ಲಕ್ಷ ಫಲಾನುಭವಿಗಳಿಗೆ ಪ್ರಯೋಜನ ಸಿಗುತ್ತಿದೆ. ಹೀಗೇ ಪಟ್ಟಿಮಾಡುತ್ತ ಹೋದರೆ ಸಾವಿರಾರು ಕೋಟಿ ರು.ಗಳ ಪ್ರಯೋಜನ ನೇರವಾಗಿ ಫಲಾನುಭವಿಗಳಿಗೆ ಸಿಕ್ಕಿದೆ.

* ಕ್ಷೇತ್ರದ ಜನತೆ ತಮ್ಮನ್ನು ನೆನಪಿಡುವ ಪ್ರಮುಖ ಸಾಧನೆಗಳು?

ಬಹುವರ್ಷಗಳ ಬೇಡಿಕೆಯಾದ ಮೆಡಿಕಲ್‌ ಕಾಲೇಜು ಮಂಜೂರಿಯಾಗಿ, ಅನುದಾನವೂ ಬಿಡುಗಡೆಯಾಗಿದೆ. ರೈಲ್ವೆ ಇಲಾಖೆಯಿಂದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಬ್ಯಾಡಗಿ, ಯಲವಿಗಿ, ದೇವರಗುಡ್ಡ, ಹಾವೇರಿ, ರಾಣಿಬೆನ್ನೂರು ನಿಲ್ದಾಣ ಮೇಲ್ದರ್ಜೆಗೇರಿಸಲಾಗುತ್ತಿದೆ. ಮೂರು ರೈಲ್ವೆ ಮೇಲ್ಸೇತುವೆ ಆರಂಭಿಸಲಾಗಿದೆ. ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಗದಗ ಜಿಲ್ಲೆಯಲ್ಲಿ ಸಾಗುವ ಹೊಸಪೇಟೆ-ಹುಬ್ಬಳ್ಳಿ ಹೆದ್ದಾರಿ ಚತುಷ್ಪಥ ಕಾಮಗಾರಿಯೂ ಪ್ರಗತಿಯಲ್ಲಿದೆ. ಈ ಸಲ ರಾಣಿಬೆನ್ನೂರು ಶಿವಮೊಗ್ಗ ಹೊಸ ರೈಲು ಮಾರ್ಗಕ್ಕೆ . 960 ಕೋಟಿ ಮಂಜೂರಾಗಿದ್ದು, ಭೂಸ್ವಾಧೀನವಾಗುತ್ತಿದೆ. ಗದಗ-ಯಲವಿಗಿ ಮಾರ್ಗಕ್ಕೂ ಮಂಜೂರಿ ಸಿಕ್ಕಿದೆ. ಭೂಸ್ವಾಧೀನ ಪ್ರಕ್ರಿಯೆಯೂ ರಾಜ್ಯ ಸರ್ಕಾರದಿಂದ ಶೀಘ್ರದಲ್ಲಿ ಆಗಲಿದ್ದು, ಕ್ಷೇತ್ರದ ಜನರ ಬಹುವರ್ಷಗಳ ಬೇಡಿಕೆಗಳೆಲ್ಲ ಈಡೇರಿವೆ.

* ಯಾವ ಭರವಸೆ ಈಡೇರಿಸುವುದು ಬಾಕಿಯಿದೆ?

ಕೃಷಿ ಪ್ರಧಾನವಾದ ನನ್ನ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ಆರಂಭಿಸಬೇಕು ಎಂಬುದು ರೈತರ ಬೇಡಿಕೆಯಾಗಿತ್ತು. ಅದರಂತೆ ಈ ಸಲ ಹಾನಗಲ್ಲ, ಬ್ಯಾಡಗಿ ಹಾಗೂ ಹಿರೇಕೆರೂರು ತಾಲೂಕುಗಳಲ್ಲಿ ಸಾವಿರಾರು ಕೋಟಿ ರು. ವೆಚ್ಚದಲ್ಲಿ ಏತ ನೀರಾವರಿ ಯೋಜನೆಗಳು ಮುಂಜೂರಿಯಾಗಿ ಕಾಮಗಾರಿ ಶುರುವಾಗಿವೆ. ಹಾವೇರಿಯಲ್ಲಿ 27 ಕೋಟಿ ವೆಚ್ಚದಲ್ಲಿ ಕೇಂದ್ರೀಯ ವಿದ್ಯಾಲಯ ಕಟ್ಟಡ ಕಾಮಗಾರಿಗೆ ಟೆಂಡರ್‌ ಆಗಿದೆ. ಗದಗ ಜಿಲ್ಲೆಯಲ್ಲೂ ಜಾಗ ಸಿಕ್ಕ ತಕ್ಷಣ ಕೆಲಸ ಆರಂಭವಾಗಲಿದೆ.

ಆರ್ಥಿಕತೆಗಿಂತ ಜನರ ಆರೋಗ್ಯಕ್ಕೆ ನಮೋ ಆದ್ಯತೆ: ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ

* ಪ್ರಧಾನಿ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್‌ನಿಂದ ಪ್ರಯೋಜನ?

ಇದು ದೇಶದ ಆರ್ಥಿಕತೆ ಚೇತರಿಕೆಗೆ ವರದಾನವಾಗಲಿದೆ. ನೆರೆ ಮತ್ತು ಕೊರೋನಾದಿಂದ ಸಂಕಷ್ಟದಲ್ಲಿರುವ ಕ್ಷೇತ್ರದ ಜನರಿಗೆ ಪ್ಯಾಕೇಜ್‌ನಿಂದ ಗರಿಷ್ಠ ಮಟ್ಟದಲ್ಲಿ ಪ್ರಯೋಜನ ಸಿಗುವಂತೆ ಮಾಡಲು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಎಲ್ಲ ಕ್ಷೇತ್ರಗಳಿಗೆ ಸಿಕ್ಕಿರುವ ಪ್ಯಾಕೇಜ್‌ನಿಂದ ಕ್ಷೇತ್ರದ ಜನರಿಗೆ ಲಾಭ ಸಿಗುವಂತೆ ಮಾಡುವುದು ಆದ್ಯತೆಯಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವುದರ ಜತೆಗೆ ಕೇಂದ್ರದಿಂದ ಕೃಷಿ ಆಧಾರಿತ ಕೈಗಾರಿಕೆ ಸ್ಥಾಪನೆಗೂ ಪ್ರಯತ್ನಿಸುತ್ತೇನೆ.