ಮೋದಿ ವರ್ಚಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿ; ಸಂಸದ ನಾರಾಯಣ ಸ್ವಾಮಿ
ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಯಲ್ಲಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ಸುವರ್ಣ ನ್ಯೂಸ್ ಸೋದರ ಸಂಸ್ಥೆ ಕನ್ನಡಪ್ರಭ ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.
ಚಿತ್ರದುರ್ಗ(ಜೂ.02): ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಸದಸ್ಯರಾಗಿ ಮೇ 23ಕ್ಕೆ ಬರೋಬ್ಬರಿ ಒಂದು ವರ್ಷ ಪೂರೈಸಿದ ಎ.ನಾರಾಯಣಸ್ವಾಮಿ ಮೂಲತಃ ಶೋಷಿತ ಸಮುದಾಯದಿಂದ ಬಂದವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆನೇಕಲ್ ಕ್ಷೇತ್ರದಲ್ಲಿ ಸೋತ ನಂತರ ನೇರವಾಗಿ ಚಿತ್ರದುರ್ಗಕ್ಕೆ ಆಗಮಿಸಿ ಲೋಕಸಭೆಯಲ್ಲಿ ಗೆದ್ದು ಅಚ್ಚರಿ ಮೂಡಿಸಿದವರು.
ಹಿಂದೊಮ್ಮೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಒಂದಷ್ಟುಸುತ್ತಾಟ ನಡೆಸಿದ್ದ ನಾರಾಯಣಸ್ವಾಮಿಗೆ ಈ ಪ್ರಾಂತ್ಯ ಚಿರಪರಿಚಿತ. ಮೇ 30ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಎರಡನೇ ಅವಧಿಯಲ್ಲಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ಕ್ಕೆ ಸಂದರ್ಶನ ನೀಡಿದ್ದಾರೆ.
ನರೇಂದ್ರ ಮೋದಿ ಅವರು 2ನೇ ಅವಧಿಯ ಮೊದಲ ವರ್ಷ ಪೂರೈಸಿದ್ದಾರೆ. ಆಡಳಿತ ವೈಖರಿ ಹೇಗಿದೆ?
ನರೇಂದ್ರ ಮೋದಿ ವರ್ಚಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿಯಾಗಿದೆ. ಅಭಿವೃದ್ಧಿ ಕಲ್ಪನೆಗಳ ಮಾದರಿಗಳು ತುಂಬಾ ವಿಶಿಷ್ಟವಾದವುಗಳು. ದೇಶದ ಭದ್ರತೆ ಸೇರಿದಂತೆ ಎಲ್ಲ ಸಂಕಷ್ಟಸಂದರ್ಭಗಳಲ್ಲೂ ಅವರು ದೇಶವನ್ನು ಮುನ್ನಡೆಸಿದ್ದಾರೆ. ಕೊರೋನಾ ವೇಳೆ .20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ವಿಶ್ವದಲ್ಲಿ ಯಾವ ದೇಶಗಳು ಇಂತಹ ನಡೆ ಇಟ್ಟಿವೆ ಹೇಳಿ.
ಕ್ಷೇತ್ರದ ಅಭಿವೃದ್ಧಿಗೆ ಏನೇನು ಯೋಜನೆ ಹಾಕಿಕೊಂಡಿದ್ದೀರಿ?
ಚಿತ್ರದುರ್ಗ ಲೋಕಸಭೆ ಪರಿಶಿಷ್ಟರಿಗೆ ಮೀಸಲಾಗಿದ್ದು ವಿಶಿಷ್ಟವಾದ ಭೌಗೋಳಿಕ ಹಿನ್ನೆಲೆ ಇದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ಪರಿಶಿಷ್ಟಪಂಗಡ ಹಾಗೂ ಎರಡು ಪರಿಶಿಷ್ಟಜಾತಿಯ ಮೀಸಲು ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಪರಿಶಿಷ್ಟರೇ ಹೆಚ್ಚು ಇರುವ ಕ್ಷೇತ್ರದಲ್ಲಿ ಆ ಸಮುದಾಯಗಳ ಉನ್ನತಿಗೆ ಮಾರ್ಗೋಪಾಯ ಹುಡುಕಬೇಕಿದೆ. ಬಗರ್ ಹುಕುಂ ಭೂಮಿಗೆ ಸಾಗುವಳಿ ಪತ್ರ ಕೊಟ್ಟಿಲ್ಲ. ಎಸ್ಸಿಪಿ, ಟಿಎಸ್ಪಿ ಅನುದಾನವ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗಿಲ್ಲ. ಶೈಕ್ಷಣಿಕ ವ್ಯವಸ್ಥೆಗೊಂದು ಅರ್ಥಪೂರ್ಣ ಚೌಕಟ್ಟು ನೀಡಬೇಕಾಗಿದೆ. ಕೇಂದ್ರೀಯ ಶಾಲೆ ಇಲ್ಲದೇ ಇರುವುದು ಈ ಭಾಗದ ದೌರ್ಭಾಗ್ಯವಾಗಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲಾಗಿದ್ದು ಉಳಿದ ನಾಲ್ಕುವರ್ಷಗಳಲ್ಲಿ ಒಂದೊಂದಾಗಿ ಪೂರ್ಣಗೊಳಿಸುವ ಸ್ವಯಂ ಕರಡು ತಯಾರು ಮಾಡಿಕೊಂಡಿದ್ದೇನೆ. ಎಲ್ಲವನ್ನು ಸವಲಾಗಿ ಸ್ವೀಕರಿಸಿದ್ದೇನೆ.
ಸವಾಲು ಅಂದ್ರೆ ಅದಕ್ಕೊಂದು ಸ್ವರೂಪ ಇರುತ್ತೆ ಅಲ್ವ?
ಹೌದು, ಅಭಿವೃದ್ಧಿಗೆ ವೇಗ ಕೊಡುವ ಸಾಧ್ಯತೆಗಳ ಚಿಂತನೆಗಳೇ ಒಂದರ್ಥದಲ್ಲಿ ನಾನು ಗ್ರಹಿಸಿರುವ ಸ್ವರೂಪಗಳು. ಎಲ್ಲವನ್ನು ಒಂದೇ ಬಾರಿ ಹಿಡಿಯಾಗಿ ಕೈಗೆತ್ತಿಕೊಂಡು ಹೋಗುವುದಕ್ಕಿಂತ ಬಿಡಿಯಾಗಿ ಸಮಸ್ಯೆಗಳ ನಿವಾರಣೆಗೆ ಯತ್ನಿಸುತ್ತೇನೆ. ಕೊರೋನಾ ಪ್ರವೇಶ ಮಾಡಿದ್ದೂ ನನ್ನ ಅಭಿವೃದ್ಧಿ ವೇಗಕ್ಕೆ ಒಂದಿಷ್ಟುಹಿನ್ನಡೆ ಒದಗಿಸಿತು. ತುಮಕೂರು-ಚಿತ್ರದುರ್ಗ-ದಾವಣಗೆರೆ ನಡುವಿನ ನೇರ ರೈಲು ಮಾರ್ಗ, ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸುವುದು, ಚಿತ್ರದುರ್ಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ತರುವುದು ಸದ್ಯಕ್ಕೆ ನನ್ನ ಆದ್ಯತಾ ವಲಯಗಳಾಗಿವೆ.
ಭದ್ರಾ ಕಾಮಗಾರಿ ತಡವಾಗಿದ್ದು ಯಾಕೆ?
ಅಜ್ಜಂಪುರ ಸಮೀಪದ ರೇಲ್ವೆ ಹಳಿಗಳ ಕೆಳಗೆ ಭದ್ರಾ ಕಾಲುವೆ ಹೋಗಬೇಕಾಗಿದೆ. ಈ ಕಾಮಗಾರಿ ಎಂದೋ ಮುಗಿಸಬೇಕಿತ್ತು, ಯಾಕೆ ತಡಮಾಡಿದರೋ ಅರ್ಥವಾಗುತ್ತಿಲ್ಲ. ಗುತ್ತಿಗೆದಾರ ಅರ್ಧಕ್ಕೆ ಕೆಲಸ ನಿಲ್ಲಿಸಿ ಪರಾರಿಯಾಗಿದ್ದ. ಅವನ ಮನೆಗೆ ತೆರಳಿ ಆತನ ಜೊತೆ ಮಾತುಕತೆ ನಡೆಸಿ, ನಂತರ ರೇಲ್ವೆ ಇಲಾಖೆ ಉನ್ನತ ಅಧಿಕಾರಿಗಳ ಸಂಗಡವೂ ಚರ್ಚಿಸಿದ್ದೇನೆ. ಸಾಲದೆಂಬಂತೆ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಸಂಪರ್ಕಿಸಿ ಕಾಮಗಾರಿಗೆ ಇದ್ದ ಅಡ್ಡಿ ಆತಂಕಗಳ ದೂರ ಮಾಡಿದ್ದೇನೆ. ಹಾಲಿ ಹಳಿಗಳ ಪರ್ಯಾಯ ಮಾರ್ಗದ ಕೆಲಸ ನಡೆಯುತ್ತಿದೆ. ಜೂನ್ ತಿಂಗಳ ಮೊದಲ ವಾರ ಈ ಕೆಲಸ ಪೂರ್ಣಗೊಳ್ಳಲಿದ್ದು ಯೋಜನೆಗೆ ಇದ್ದ ಪ್ರಮುಖ ಅಡ್ಡಿಯೊಂದು ನಿವಾರಣೆ ಆದಂತಾಗುತ್ತದೆ.
ಪ್ರಧಾನಿಯ ಸ್ವಾವಲಂಬಿ ಭಾರತದ ಕನಸೇ ನನ್ನ ಕನಸು: ಸಂಸದ ಬಿ ವೈ ರಾಘವೇಂದ್ರ
ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಯಾವ ಯೋಜನೆ ಹಾಕಿಕೊಂಡಿದ್ದೀರಿ?
ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಿದರೆ ವಿದ್ಯಾರ್ಥಿಗಳ ಆಕರ್ಷಿಸಲು ಸಾಧ್ಯವಾಗುತ್ತದೆ. ಅವರು ಖಾಸಗಿಯವರ ಕಡೆ ಮುಖ ಮಾಡುವುದಿಲ್ಲ. ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ತಲಾ ಹತ್ತು ಕೋಟಿ ಖರ್ಚು ಮಾಡಿ ಎರಡು ಕಾಲೇಜು ಕಟ್ಟಡ ನಿರ್ಮಿಸಲಾಗಿದೆ. ಆದರೆ, ಈ ಕಾಲೇಜುಗಳಿಗೆ ಪೀಠೋಪಕರಣ ವ್ಯವಸ್ಥೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ವಹಿವಾಟು ನಡೆಸುತ್ತಿರುವ ಗಣಿ ಕಂಪನಿಗಳು, ಪ್ರಮುಖ ಗುತ್ತಿಗೆದಾರರು, ವಿಂಡ್ ಮಿಲ್ ಮಾಲೀಕರು ಸಿಎಸ್ ಆರ್ ಫಂಡ್‌ಗೆ ಶೇಕಡಾ ಎರಡರಷ್ಟುಮೊತ್ತ ಪಾವತಿಸಬೇಕಿದೆ. ಈ ಸಂಗತಿ ಪ್ರಧಾನವಾಗಿಟ್ಟುಕೊಂಡು ಎಲ್ಲ ಕಂಪನಿಗಳ ಮುಖ್ಯಸ್ಥರನ್ನು ಕರೆಯಿಸಿ ಮಾತನಾಡಲಾಗಿದೆ. ಸುಮಾರು ಹತ್ತು ಕೋಟಿಯಷ್ಟುಪೀಠೋಪಕರಣಗಳು, ಶಾಲೆ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಕೊರೋನಾ ಗ್ಯಾಪ್ ಬರದಿದ್ದರೆ ಇಷ್ಟೊತ್ತಿಗೆ ಈ ಎಲ್ಲ ಪ್ರಾಜೆಕ್ಟ್ಗಳಿಗೆ ಅಂತಿಮ ರೂಪ ಬರುತ್ತಿತ್ತು.
ಈ ಭಾಗದ ಯುವಕರಿಗೆ ಉದ್ಯೋಗ ಹೇಗೆ ಸೃಷ್ಟಿಮಾಡುತ್ತೀರಿ?
ಸಚಿವ ಜಗದೀಶ್ ಶೆಟ್ಟರ್ ಬಳಿ ಈಗಾಗಲೇ ಎರಡು ಬಾರಿ ಮಾತನಾಡಿದ್ದೇನೆ. ಕೈಗಾರಿಕಾ ವಸಾಹತು ಆರಂಭಿಸುವಂತೆ ಮನವಿ ಮಾಡಿದ್ದೇನೆ. ರೇಲ್ವೆ ಕನೆಕ್ಟಿವಿಟಿ ಇಲ್ಲದಿದ್ದರೆ ಕೈಗಾರಿಕೆಗಳು ಬರುವುದು ಕಷ್ಟಸಾಧ್ಯ. ಹಾಗಾಗಿ ನೇರ ರೈಲು ಮಾರ್ಗ ಅನುಷ್ಠಾನವಾದರೆ ಈ ಭಾಗದಲ್ಲಿ ಕೈಗಾರಿಕೆಗಳ ಆರಂಭಿಸಲು ಸಾಧ್ಯವಾಗುತ್ತದೆ. ನೇರ ರೈಲು ಮಾರ್ಗಕ್ಕೆ ಇರುವ ಅಡೆ ತಡೆಗಳ ನಿವಾರಿಸಲು ಗಂಭೀರ ಯತ್ನ ನಡೆಸಿರುವೆ. ಮದಕರಿ ಥೀಮ್ ಪಾರ್ಕ್ ಆರಂಭಿಸಲು ಚಿಂತಿಸಿದ್ದೇನೆ.
ಕೊರೋನಾ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಹೇಗೆ ಸ್ಪಂದಿಸಿದ್ದೀರಿ?
ಕೂಲಿ ಕಾರ್ಮಿಕರು ಹಾಗೂ ಮಧ್ಯಮವರ್ಗದ ಬಡ ಜನರು ಕೊರೋನಾ ಹೊಡೆತಕ್ಕೆ ತತ್ತರಿಸಿದ್ದರು. ದಿನಕ್ಕೆ ಕನಿಷ್ಠ ಎರಡು ಹೊತ್ತು ಆದರೂ ಇವರ ತುತ್ತಿನ ಚೀಲ ತುಂಬಿಸಬೇಕೆಂದು ಭಾವಿಸಿ ಐದು ಕಡೆ ಭೋಜನಾಲಯಗಳ ತೆರೆದೆ. ಚಿತ್ರದುರ್ಗ, ಚಳ್ಳಕೆರೆ, ಪರಶುರಾಂಪುರ, ಹಿರಿಯೂರಿನಲ್ಲಿ ದಿನಕ್ಕೆ ಕನಿಷ್ಠ ಎರಡು ಸಾವಿರದಷ್ಟುಮಂದಿ ಊಟ ಮಾಡಿದರು. ಸಂಕಷ್ಟದ ವೇಳೆ ಹಸಿವು ನೀಗಿಸಿದ ಧನ್ಯತೆ ನನ್ನದು.
ಪರಿಸ್ಥಿತಿ ನಿರ್ವಹಣೆಗೆ ಕಾರ್ಯಸೂಚಿಗಳು ಏನು?
ಕೊರೋನಾದಿಂದಾಗಿ ಗ್ರಾಮೀಣ ಕರ್ನಾಟಕ ತತ್ತರಿಸಿದೆ. ಉದ್ಯೋಗ ಖಾತ್ರಿ ಯೋಜನೆ ಮೂಲಕ ಅವರ ಬದುಕಿಗೆ ಆಸರೆಯಾಗಬೇಕು. ಈಗಾಗಲೇ ರಾಜ್ಯ ಸರ್ಕಾರ ತೋಟಗಾರಿಕೆ, ಕೃಷಿಗೆ ನರೇಗಾ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ನರೇಗಾದಲ್ಲಿ ಸಮರ್ಪಕ ಕೆಲಸವಾಗಿಲ್ಲ. ಅಧಿಕಾರಿಗಳು ಉತ್ಸಾಹ ತೋರುತ್ತಿಲ್ಲ. ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ನಡುವೆ ಸಂವಹನ ಸಾಧಿಸಿ ನರೇಗಾವನ್ನು ಉತ್ತಮವಾಗಿ ಬಳಸಿಕೊಳ್ಳಬೇಕಿದೆ.
ತಾವು ಎಂಪಿ ಆದ ನಂತರ ಪ್ರಮುಖ ಸನ್ನಿವೇಶಗಳೇನಾದರೂ ಇವೆಯೇ?
ತುಮಕೂರು ಜಿಲ್ಲೆಯ ಪಾವಗಡದ ಹಟ್ಟಿಯೊಂದಕ್ಕೆ ಹೋದಾಗ ಅಲ್ಲಿನ ಜನ ನನ್ನನ್ನು ತಡೆದರು. ಈ ವಿಚಾರವಾಗಿ ನನಗೆ ಕಿಂಚಿತ್ತೂ ಬೇಸರವಾಗಿಲ್ಲ. ಅವರು ನಂಬಿಕೊಂಡು ಬಂದಿರುವ ಆಚರಣೆಗಳು ಹಾಗೆ ಇವೆ. ಅವರನ್ನು ಮತ್ತಷ್ಟುಎಜ್ಯುಕೇಟ್ ಮಾಡುವ ಜವಾಬ್ದಾರಿಯನ್ನು ಎಲ್ಲ ಸಮುದಾಯಗಳು ಹೊರಬೇಕು.