ರಾಜಕೀಯ ಪುಡಾರಿಗಳನ್ನು ವಿಧಾನ ಪರಿಷತ್ ತಂದು ಬಿಡುತ್ತಿರುವುದರಿಂದ ಪರಿಷತ್ತಿನ ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ. ಇದು ನಿರಾಶ್ರಿತರ ಆಶ್ರಯ ಕೇಂದ್ರದಂತಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ನ.27): ರಾಜ್ಯದಲ್ಲಿನ ರಾಜಕೀಯ ಪಕ್ಷಗಳು ರಾಜಕೀಯ ಪುಡಾರಿಗಳು ಯಾರು ಇರುತ್ತಾರೋ ಅವರನ್ನ ತಂದು ತಂದು ವಿಧಾನ ಪರಿಷತ್‌ಗೆ ಹಾಕುತ್ತಿದ್ದಾರೆ. ಇದರಿಂದಾಗಿ ಕಲಾಪಗಳು ಸರಿಯಾಗಿ ನಡೆಯದೇ ನಿರಾಶ್ರಿತರ ಆಶ್ರಯ ಕೇಂದ್ರಗಳಂತಾಗಿವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಪರಿಷತ್ ಸದಸ್ಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ರಾಜಕೀಯದಲ್ಲಿ ಗಾಡ್ ಫಾದರ್ ಇದ್ದಾರೆ ನನಗೆ ಯಾರು ಇಲ್ಲ. ರಾಜಕೀಯಕ್ಕೆ ನನ್ನನ್ನ‌ ಯಾರು ತಂದಿಲ್ಲ. ನಾನೇ ಸ್ವಂತ ಶಕ್ತಿಯಿಂದ ಬಂದಿದ್ದೇನೆ. ರಾಜಕೀಯಕ್ಕೆ ಬಂದ ಮೇಲೆ ಗಾಡ್ ಫಾದರ್ ಶುರುವಾದರು. ಕಲಾಪದಲ್ಲಿ ಭಾಗಿಯಾದ ಎಲ್ಲಾ ಶಾಸಕರ ಬಗ್ಗೆ ನನಗೆ ಮಾಹಿತಿ ಗೊತ್ತಿದೆ. ಅವರು ಏನ್ ಚರ್ಚೆ ಮಾಡಿದ್ದಾರೆ ನನಗೆ ಗೊತ್ತಿದೆ. ನಾನು ಪರಿಷತ್ ಗೆ ಬಂದಾಗ ಬೆಳಗ್ಗೆ 9.30ಕ್ಕೆ ಕಲಾಪ ಶುರುವಾಗಿ, ರಾತ್ರಿ 8 ಗಂಟೆಗೆ ಮುಗಿಯುತ್ತಿತ್ತು. ಸದನ ನಡೆಯುತ್ತಿದ್ದ ಸಂದರ್ಭದಲ್ಲಿ ಒಂದು ಸೂಜಿ ಬಿದ್ದರೂ ಅದರ ಶಬ್ದ ಕೇಳಿಸುವಷ್ಟು ನಿಶ್ಯಬ್ದ ಇರುತ್ತಿತ್ತು ಎಂದರು.

ಇದೀಗ ವಿಧಾನ ಪರಿಷತ್ ಅಂದರೆ ಮುನಿಸಿಪಾಲಿಟಿ ತರಹ ಆಗಿದೆ. ನನಗೆ ಇದರ ಬಗ್ಗೆ ಸಾಕಷ್ಟು ನೋವಾಗಿದೆ‌. ವಿಧಾನ ಪರಿಷತ್ ಗೌರವ ಕಡಿಮೆ ಆಗುತ್ತಿದೆ. ರಾಜಕೀಯ ಪುಡಾರಿಗಳು ಯಾರು ಇರುತ್ತಾರೋ ಅವರನ್ನ ತಂದು ತಂದು ಪರಿಷತ್‌ಗೆ ಹಾಕ್ತಿದ್ದಾರೆ. ನಿರಾಶ್ರಿತರ ಕೇಂದ್ರದ ತರಹ ಪರಿಷತ್ ಆಗಿದೆ. ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ. ಎಲ್ಲದ್ದಕ್ಕೂ ಬಾವಿಗೆ ಬಂದು ಇಳಿಯೋದು, ಧಿಕ್ಕಾರ ಕೂಗೋದು ಜಾಸ್ತಿ ಆಗಿದೆ. ನಾವೆಲ್ಲ ಅಜೆಂಡಾ ಇಟ್ಟುಕೊಂಡು ಓದಿಕೊಂಡು ಬರುತ್ತಿದ್ದೆವಯ. ಈಗ ಪ್ರಶ್ನೆ ಕೇಳಿ ಎರಡು ನಿಮಿಷಕ್ಕೆ ಹೊರಗೆ ಹೋಗುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ನೇಣಿನ ಭಾಗ್ಯ, ಮುಳುಗುವ ಬೆಂಗಳೂರು ಸೃಷ್ಟಿ; ಇದೇ ಕಾಂಗ್ರೆಸ್ ಸಾಧನೆ ಎಂದ ಆರ್.ಅಶೋಕ

ನಮ್ಮ ದೇಶದಲ್ಲಿ ದುಡ್ಡು ಕೊಟ್ಟು ಓಟ್ ಹಾಕಿಸಿಕೊಳ್ಳೋರು, ದುಡ್ಡು ಪಡೆದು ಓಟ್ ಹಾಕೋರು ಎಲ್ಲಿವರೆಗೂ ಇರುತ್ತಾರೋ ಅಲ್ಲಿವರೆಗೂ ಪ್ರಜಾಪ್ರಭುತ್ವ ಸರಿ ಆಗಲ್ಲ. ಇದೆಲ್ಲವನ್ನೂ ಕಾಲವೇ ಸುಧಾರಣೆ ಮಾಡಬೇಕು. ನಾನು 8 ಬಾರಿ ಆಯ್ಕೆಯಾಗಿ ಬಂದಿದ್ದೇನೆ. ಅದರ ಗುಟ್ಟು ಸುಖಕರ ಆಗಿಲ್ಲ. ಆದರೆ, ಈಗಿನವರು ಶಿಕ್ಷಕರ ಮತದಾರ ಕ್ಷೇತ್ರದಿಂದಲೂ ದುಡ್ಡು ತಿಂದು, ದುಡ್ಡು ಕೊಟ್ಟು ಓಟ್ ಹಾಕಿಸಿಕೊಂಡು ಬಂದಿದ್ದಾರೆ. ಶಿಕ್ಷಕರು ಸಹ ದುಡ್ಡು ತೆಗೆದುಕೊಂಡು ಮತ ಹಾಕುತ್ತಿದ್ದಾರೆ. ಶಿಕ್ಷಕರು ಸಹ ಚುನಾವಣೆ ದುಡ್ಡಿನ ಮೇಲೆ ಮಾಡಿದರೆ, ರಾಜಕೀಯ ಎಲ್ಲಿಗೆ ಬರ್ತಿದೆ ಎಂದು ಆಕ್ರೋಶ ಹೊರಹಾಕಿದರು.