ಸಂಬಂಧಿಕರ ಮದುವೆಯ ಖುಷಿಯಲ್ಲಿದ್ದ ಯುವಕರು ಕಾರಿನ ಸನ್‌ರೂಫ್‌ ಮೇಲೆ ಪಟಾಕಿ ಸ್ಪೋಟಿಸಿದ ಪರಿಣಾಮ ಕಾರು ಬೆಂಕಿಗಾಹುತಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. 

ಸಹ್ರಾನ್‌ಪುರ: ಕೆಲ ದಿನಗಳ ಹಿಂದಷ್ಟೇ ಕಾರಿನ ಸನ್‌ರೂಫ್‌ ಮೇಲೆ ಕೋತಿಯೊಂದು ಬಿದ್ದ ಪರಿಣಾಮ ಸನ್‌ರೂಫ್ ಮುರಿದು ಕೋತಿ ಕಾರಿನೊಳಗೆ ಬಿದ್ದು ಎದ್ದು ಹೋದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಬುದ್ಧಿಗೇಡಿ ಯುವಕರಿಬ್ಬರು ಕಾರಿನ ಸನ್‌ರೂಫ್ ಮೇಲೆ ಪಟಾಕಿ ಇಟ್ಟು ಬೆಂಕಿ ಕೊಟ್ಟ ಪರಿಣಾಮ ಈಗ ಇಡೀ ಕಾರೇ ಬೆಂಕಿಗಾಹುತಿಯಾಗಿದೆ. 

ಸಂಬಂಧಿಕರ ಮದ್ವೆ ಖುಷಿಯಲ್ಲಿದ್ದ ಯುವಕರು ಕಾರಿನ ಸನ್‌ರೂಫ್‌ ಮೇಲೆಯೇ ಪಟಾಕಿ ಶಾಟ್ಸ್‌ಗಳನ್ನು ಇಟ್ಟು ಸ್ಪೋಟಿಸಿದ್ದು, ಇದರಿಂದ ಇಡೀ ಕಾರೇ ಬೆಂಕಿಗಾಹುತಿಯಾದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಹ್ರಾನ್‌ಪುರದಲ್ಲಿ ನಡೆದಿದೆ. ಸುರಕ್ಷಿತವಾದ ತೆರೆದ ಸ್ಥಳದಲ್ಲಿ ಪಟಾಕಿ ಸ್ಪೋಟಿಸುವ ಬದಲು ಇಬ್ಬರು ತರುಣರು ಕಾರಿನ ಸನ್‌ರೂಫ್ ಮೇಲೆ ಪಟಾಕಿ ಇಟ್ಟು ಬೆಂಕಿ ಕೊಟ್ಟಿದ್ದಾರೆ. ಬೆಂಕಿ ಕೊಟ್ಟ ನಂತರ ಪಟಾಕಿ ಶಾಟ್ಸ್‌ ಮಗುಚಿದ್ದು, ಕಾರಿನೊಳಗೆ ಪಟಾಕಿ ಬಿದ್ದಿದೆ. ಪರಿಣಾಮ ಇಡೀ ಕಾರೇ ಬೆಂಕಿಗಾಹುತಿಯಾಗಿದ್ದು, ಇದರ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಕಾರಿನ ಒಳಗೆ ಕುಳಿತಿದ್ದ ಇಬ್ಬರು ಗಾಯಗೊಂಡಿದ್ದಾರೆ. ಈ ಘಟನೆಯ ಆಘಾತಕಾರಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ. 

ಮದುವೆ ಸಂಭ್ರಮದ ಖುಷಿಗಾಗಿ ಈ ಪಟಾಕಿ ಹಾರಿಸಲಾಗಿದ್ದು, ಪಟಾಕಿಯಿಂದಾಗಿ ಲಕ್ಷಾಂತರ ಮೊತ್ತದ ಕಾರು ಬೆಂಕಿಗಾಹುತಿಯಾಗಿದೆ. ಸಹ್ರಾನ್‌ಪುರದ ಗಂಡ್ವೆಡಾ ಗ್ರಾಮದ ನಿವಾಸಿಯೊಬ್ಬರ ಮದುವೆ ದಿಬ್ಬಣ ತೆರಳುವ ವೇಳೆ ಈ ಖುಷಿಯನ್ನು ಆಚರಿಸುವ ಸಲುವಾಗಿ ಪಟಾಕಿ ಹಾರಿಸಲಾಗಿದೆ. ವರನ ಕಡೆಯವರು ರಾತ್ರಿ ಡೆಹ್ರಾಡೂನ್‌ಗೆ ಹೊರಡಬೇಕಿತ್ತು. ಆ ಸಂದರ್ಭದಲ್ಲಿ ಪಟಾಕಿ ಹಾರಿಸಲಾಗಿದೆ. ಸನ್‌ರೂಪ್‌ ಮೂಲಕ ಕಾರಿನ ಒಳಗೆ ಬಿದ್ದ ಶಾಟ್ಸ್‌ ಅಲ್ಲೇ ದಡಬಡ ಸ್ಪೋಟಿಸಲು ಆರಂಭವಾಗಿದ್ದು, ಈ ವೇಳೆ ಕಾರಿನ ಒಳಗಿದ್ದ ಇಬ್ಬರಿಗೆ ಗಾಯವಾಗಿದೆ. ಕಾರಿನ ಒಳಗಿದ್ದವರು ಕೂಡಲೇ ಕಾರಿನಿಂದ ಹೊರಗೆ ಬಂದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಯುವಕರ ಈ ಬೇಜವಾಬ್ದಾರಿ ವರ್ತನೆಯಿಂದ ಲಕ್ಷಾಂತರ ಮೌಲ್ಯದ ಕಾರು ಬೆಂಕಿಗಾಹುತಿಯಾಗಿದೆ. ಗಾಯಾಳು ಯುವಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವೀಡಿಯೋ ಇಲ್ಲಿದೆ ನೋಡಿ:

Scroll to load tweet…

ಇದನ್ನೂ ಓದಿ: ಕೋತಿ ಬಿದ್ದ ರಭಸಕ್ಕೆ ಮುರಿದ ಕಾರಿನ ಸನ್‌ರೂಫ್: ವೀಡಿಯೋ ವೈರಲ್
ಇದನ್ನೂ ಓದಿ: ಕಾರ್ ಸನ್‌ರೂಫ್ ತೆರೆದು ಕೈಯಲ್ಲಿ ಎಣ್ಣೆ ಹಿಡಿದು ಬ್ಯುಸಿ ರೋಡ್‌ಲ್ಲಿ ಗೆಳತಿ ಜೊತೆ ಕಾನೂನು ವಿದ್ಯಾರ್ಥಿಯ ಮೋಜು ಮಸ್ತಿ