ಸುಮಾರು 10 ವರ್ಷಗಳಿಂದ ಭದ್ರತಾ ಪಡೆಗಳಿಂದ ತಪ್ಪಿಸಿಕೊಂಡಿದ್ದ ಅಂತಾರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆಗಾರ್ತಿ ಯಾಂಗ್ಚೆನ್ ಲಾಚುಂಗ್ಪಾಳನ್ನು ಇಂಡೋ-ಚೀನಾ ಗಡಿಯಲ್ಲಿ ಬಂಧಿಸಲಾಗಿದೆ. ಮಧ್ಯಪ್ರದೇಶ ಹುಲಿ ದಾಳಿ ಪಡೆ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಬಂಧನವಾಗಿದೆ.
10 ವರ್ಷಗಳ ಕಾಲ ಭದ್ರತಾ ಪಡೆಗಳು ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ಮಹಿಳಾ ಸ್ಮಗ್ಲರ್ ಓರ್ವಳನ್ನು ಪೊಲೀಸರು ಇಂಡೋ ಚೀನಾ ಬಾರ್ಡರ್‌ನಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಉತ್ತರ ಸಿಕ್ಕಿಂನ ಲಾಚುಂಗ್‌ನಲ್ಲಿ ಮಂಗಳವಾರ 43 ವರ್ಷದ ಆರೋಪಿ ವನ್ಯಜೀವಿಗಳ ಕಳ್ಳಸಾಗಣೆದಾರೆ ಯಾಂಗ್ಚೆನ್ ಲಾಚುಂಗ್ಪಾಳನ್ನು ಬಂಧಿಸಲಾಗಿದೆ.
ಹಿಮಾಲಯದ ಗಡಿಭಾಗದಲ್ಲಿ ನಡೆದ ರಹಸ್ಯ ಹಾಗೂ ಸಿನಿಮೀಯ ಶೈಲಿಯ ಕಾರ್ಯಾಚರಣೆಯಲ್ಲಿ ಮಧ್ಯಪ್ರದೇಶ ರಾಜ್ಯ ಹುಲಿ ದಾಳಿ ಪಡೆ (STSF)ಯು ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ(WCCB)ದ ಜೊತೆಗೆ ಸಮನ್ವಯದೊಂದಿಗೆ, ಅಂತಾರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆದಾರ ಯಾಂಗ್ಚೆನ್ ಲಾಚುಂಗ್ಪಾನನ್ನು ಬಂಧಿಸಲಾಗಿದೆ. ಯಾಂಗ್ಚೆನ್ ಲಾಚುಂಗ್ಪಾ ಏಷ್ಯಾದ ಮೋಸ್ಟ್ ವಾಂಟೆಡ್ ವನ್ಯಜೀವಿ ಅಪರಾಧಿಗಳಲ್ಲಿ ಒಬ್ಬಳಾಗಿದ್ದಾಳೆ ಈಕೆಯ ವಿರುದ್ಧ ಇಂಟರ್ಪೋಲ್ ರೆಡ್ ನೋಟಿಸ್ ಹೊರಡಿಸಿತ್ತು. ಆದರೂ ಈಕೆ ಹಲವು ವರ್ಷಗಳಿಂದ ಯಾರ ಕೈಗೂ ಸಿಗದೇ ಎಸ್ಕೇಪ್ ಆಗಿದ್ದಳು.
ಯಾಂಗ್ಚೆನ್ ಲಾಚುಂಗ್ಪಾಳ ಬಂಧನಕ್ಕೆ ಪೊಲೀಸರು ತಿಂಗಳುಗಳಿಂದ ಕಣ್ಣಿಟ್ಟಿದ್ದರು, ಗುಪ್ತಚರ ಕಾರ್ಯಾಚರಣೆಗಳು ಮತ್ತು ರಾತ್ರಿಯ ವೇಳೆ ಕಾರ್ಯಾಚರಣೆಯ ನಂತರ, ಹಿಮಾಲಯದ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಭಾರತ ಚೀನಾ ಗಡಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಉತ್ತರ ಸಿಕ್ಕಿಂನ ಲಾಚುಂಗ್‌ನಲ್ಲಿ ಮಂಗಳವಾರ ಬಂಧಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ವಂಚಕರ ಸೋಗಿನಲ್ಲಿ, ಮೌನವಾಗಿ ಸುತ್ತುವರೆದು, ಮಧ್ಯಂತರ ಫೋನ್ ಸಿಗ್ನಲ್‌ಗಳ ಸಹಾಯದಿಂದ ಮತ್ತು ಸ್ಥಳೀಯರ ಪ್ರತಿರೋಧದೊಂದಿಗೆ ಸಿನಿಮಾ ಶೈಲಿಯಲ್ಲಿ ಈಕೆಯ ಬಂಧನ ನಡೆಸಲಾಗಿದೆ ಎಂದು ಹೇಳಿದರು. ಬಂಧನದ ವೇಳೆ ಈಕೆ ಎರಡು ಮೊಬೈಲ್ ಫೋನ್‌ಗಳು ಮತ್ತು ಶಂಕಿತರ ಹೆಸರುಗಳು, ಕಳ್ಳಸಾಗಣೆ ಮಾರ್ಗಗಳು ಮತ್ತು ಹವಾಲಾ ಉಲ್ಲೇಖಗಳನ್ನು ಒಳಗೊಂಡಿರುವ ಕೋಡೆಡ್ ಡೈರಿಯನ್ನು ನಾಶ ಮಾಡಲು ಪ್ರಯತ್ನಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಈಕೆಯ ಬಗ್ಗೆ ಸಾರ್ವಜನಿಕ ಭಾವನೆಗಳು ಸೂಕ್ಷ್ಮವಾಗಿದ್ದ ಕಾರಣಮತ್ತು ವಿವೇಚನಾಯುಕ್ತ ಸಾಗಣೆಯ ಅಗತ್ಯವಿದ್ದ ಕಾರಣ, ಸಿಕ್ಕಿಂ ಪೊಲೀಸರು, ಅರಣ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಸಿಕ್ಕಿಂ ಮತ್ತು ಸಿಲಿಗುರಿಯ ಎಸ್‌ಎಸ್‌ಬಿಯಿಂದ ಈ ಕಾರ್ಯಾಚರಣೆಗೆ ಸಂಪೂರ್ಣ ಸಹಕಾರ ದೊರೆಯಿತು ಎಂದು ಪೊಲೀಸರು ಹೇಳಿದ್ದಾರೆ.
ಯಾಂಗ್ಚೆನ್‌ಳನ್ನು ಬಂಧಿಸಿ ನಂತರ ಗ್ಯಾಂಗ್ಟಾಕ್‌ಗೆ ಕರೆದೊಯ್ಯಲಾಗಿದೆ. ವೈದ್ಯಕೀಯ ಪರೀಕ್ಷೆಯ ನಂತರ ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವೂ ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ ಹಾಗೂ ಆಕೆಯನ್ನು ಮಧ್ಯಪ್ರದೇಶಕ್ಕೆ ಸಾಗಿಸಲು ರಿಮಾಂಡ್‌ನಲ್ಲಿ ಇರಿಸಲಾಗಿದೆ. ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ಮುಂದಿನ ಕಾನೂನು ಕ್ರಮಗಳು ಮುಂದುವರಿಯಲಿವೆ. ಇಂಟರ್‌ಪೋಲ್ ರೆಡ್ ನೋಟಿಸ್ ಜಾರಿಯಿಂದಾಗಿ ವನ್ಯಜೀವಿ ಅಪರಾಧಿಯನ್ನು ನೇರವಾಗಿ ಸೆರೆಹಿಡಿಯಲಾದ ಕೆಲವೇ ಪ್ರಕರಣಗಳಲ್ಲಿ ಇದೂ ಒಂದಾಗಿರುವುದರಿಂದ, ಈ ಬಂಧನವು ಭಾರತದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಈ ನೋಟಿಸ್ ಅನ್ನು ಕೇವಲ ಎರಡು ತಿಂಗಳ ಹಿಂದೆ, ಅಕ್ಟೋಬರ್ 2 ರಂದು ನೀಡಲಾಗಿತ್ತು.
ಯಾಂಗ್ಚೆನ್ ವಿರುದ್ಧ 2015ರ ಜುಲೈ 13ರಂದು ಮೊದಲು ಪ್ರಕರಣ ದಾಖಲಾಗಿತ್ತು. ಮಧ್ಯಪ್ರದೇಶ ಅರಣ್ಯ ಇಲಾಖೆಯು ಸತ್ಪುರ ಹುಲಿ ಅಭಯಾರಣ್ಯದ ಕಾಮ್ಟಿ ಶ್ರೇಣಿಯಲ್ಲಿ ಈಕೆಯ ವಿರುದ್ಧ ವನ್ಯಜೀವಿ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು. ಈಕೆಯಿಂದ ವಶಪಡಿಸಿಕೊಂಡ ಪ್ರಾಣಿಗಳ ಭಾಗಗಳಲ್ಲಿ ಹುಲಿ ಚರ್ಮ, ನಾಲ್ಕು ಹುಲಿ ಮೂಳೆಗಳು, ಹುಲಿ ಮೂಳೆಯ ಎಣ್ಣೆಯ ಸಾರ ಮತ್ತು 1.5 ಕೆಜಿ ಪ್ಯಾಂಗೋಲಿನ್ ಕವಚಗಳು ಸೇರಿದ್ದವು. ಅಕ್ಟೋಬರ್ 2015 ರಲ್ಲಿ ಬಂಧಿಸಲ್ಪಟ್ಟ ಮತ್ತೊಬ್ಬ ಪ್ರಮುಖ ಆರೋಪಿ ಜೈ ತಮಾಂಗ್, ಯಾಂಗ್ಚೆನ್‌ಗೆ ವನ್ಯಜೀವಿ ಕಳ್ಳಸಾಗಣೆ ವಸ್ತುಗಳನ್ನು ಪೂರೈಸಿದ್ದಾಗಿ ಮತ್ತು ಆಕೆಯೇ ತನಗೆ ಆಶ್ರಯ ನೀಡಿದ್ದಾಗಿ ಒಪ್ಪಿಕೊಂಡಿದ್ದ. ಇದರಿಂದಾಗಿ ಆಕೆಯನ್ನು ಸಂಘಟಿತ ಕಳ್ಳಸಾಗಣೆ ಜಾಲದ ಪ್ರಮುಖ ರೂವಾರಿ ಎಂದು ಪೊಲೀಸರು ಗುರುತಿಸಿದ್ದರು.
ಈ ಪ್ರಕರಣದಲ್ಲಿ ಒಟ್ಟು 36 ಜನರನ್ನು ಹೆಸರಿಸಲಾಗಿದ್ದು, ಡಿಸೆಂಬರ್ 2022 ರಲ್ಲಿ ನರ್ಮದಾಪುರಂ ನ್ಯಾಯಾಲಯವು 27 ಜನರನ್ನು ದೋಷಿಗಳು ಎಂದು ತೀರ್ಪು ನೀಡಿದೆ. ಆದರೆ ಯಾಂಗ್ಚೆನ್ ವಿರುದ್ಧದ ವಿಚಾರಣೆಗಳು ಅಪೂರ್ಣವಾಗಿಯೇ ಉಳಿದಿದ್ದವು. ಏಕೆಂದರೆ ಸೆಪ್ಟೆಂಬರ್ 2017 ರಲ್ಲಿ STSF ವಶದಿಂದ ಆಕೆ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಳು. ಜಾಮೀನು ಷರತ್ತುಗಳನ್ನು ಉಲ್ಲಂಘಿಟಿದ ನಂತರ 2019ರ ಜುಲೈನಲ್ಲಿ ಆಕೆಯ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಹೀಗೆ ಆಕೆ ಪೊಲೀಸರಿಂದ ನಿರಂತರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಿಂದ ಹಾಗೂ ಆಕೆಗಿರುವ ಶಂಕಿತ ಅಂತರರಾಷ್ಟ್ರೀಯ ಅಪರಾಧ ಸಂಪರ್ಕಗಳಿಂದಾಗಿ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋವು ಆಕೆಯ ಬಂಧನಕ್ಕೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿತು. ಇದು ಅಂತಿಮವಾಗಿ ಆಕೆಯ ನಾಟಕೀಯ ಬಂಧನಕ್ಕೆ ಕಾರಣವಾಯ್ತು.


