ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ವಿಧೇಯಕಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮತ್ತು ಸಾಮಾಜಿಕ ಬಹಿಷ್ಕಾರವನ್ನು ತಡೆಗಟ್ಟುವ ಹೊಸ ವಿಧೇಯಕಕ್ಕೆ ಅನುಮೋದನೆ ಸಿಗುವ ನಿರೀಕ್ಷೆಯಿದ್ದು, ರಾಜ್ಯದಾದ್ಯಂತ ಕುತೂಹಲ ಮೂಡಿಸಿದೆ.

ಬೆಂಗಳೂರು: ರಾಜ್ಯ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಕುತೂಹಲ ಮೂಡಿಸಿರುವ ಎರಡು ಪ್ರಮುಖ ವಿಧೇಯಕಗಳ ಬಗ್ಗೆ ಇಂದು ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಸಭೆಯು ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ಗೋಹತ್ಯೆ ನಿಷೇಧ ಕಾಯ್ದೆ: ಸಡಿಲವೋ? ಕಠಿಣವೋ?

ಸಚಿವ ಸಂಪುಟದಲ್ಲಿ ಚರ್ಚೆಗೆ ಬಂದಿರುವ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ (ತಿದ್ದುಪಡಿ) ವಿಧೇಯಕ – 2025’ ರಾಜ್ಯದಲ್ಲಿ ಈಗಿನ ಗೋಹತ್ಯೆ ನಿಷೇಧ ಕಾಯ್ದೆ ಸಡಿಲವಾಗುತ್ತದೆಯೇ ಅಥವಾ ಇನ್ನಷ್ಟು ಕಠಿಣಗೊಳ್ಳುತ್ತದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಕಾಯ್ದೆಯ ಹಲವು ಅಂಶಗಳನ್ನು ಪುನರ್ ಪರಿಶೀಲನೆ ಮಾಡುವ ವಿಚಾರವಾಗಿದ್ದು, ಜಾನುವಾರುಗಳ ಹತ್ಯೆ, ಸಾರಿಗೆ, ಮಾರಾಟ, ಕಳ್ಳಸಾಗಣೆ ಇತ್ಯಾದಿ ವಿಭಾಗಗಳಲ್ಲಿ ತಿದ್ದುಪಡಿ ತರಬಹುದೆಂಬ ಅಸಮಾಧಾನ ಹಾಗೂ ಚರ್ಚೆಗಳು ವಲಯಗಳಲ್ಲಿ ಕೇಳಿ ಬರುತ್ತಿವೆ. ಈ ಬಿಲ್‌ ಕುರಿತು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದ್ದು, ಚರ್ಚೆ ಅಂತ್ಯದಲ್ಲಿ ಸಚಿವ ಸಂಪುಟವು ಬಿಲ್‌ಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.

ಸಾಮಾಜಿಕ ಬಹಿಷ್ಕಾರ ತಡೆಗಟ್ಟುವ ವಿಧೇಯಕ — ಮತ್ತೊಂದು ಪ್ರಮುಖ ಚರ್ಚಾ ವಿಷಯ

ಇದರ ಜೊತೆಗೂಡಿ, ಸರ್ಕಾರ ಕರ್ನಾಟಕ ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ವಿಧೇಯಕ – 2025 ನ್ನು ಕೂಡ ಸಚಿವ ಸಂಪುಟ ಸಭೆಯ ಅಜೆಂಡಾಗೆ ಸೇರಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾಜಿಕ ಬಹಿಷ್ಕಾರ, ಜಾತಿ–ಕುಲ ಆಧಾರಿತ ದೂರವಿಡಿಕೆ, ಸಮೂಹ ಒತ್ತಡ ಮತ್ತು ಮಾನಸಿಕ ಹಿಂಸಾಚಾರವನ್ನು ತಡೆಯಲು ಈ ಕಾಯ್ದೆ ರೂಪಿಸಲಾಗುತ್ತಿದೆ.

ಇಂದು ನಡೆದಿರುವ ಸಚಿವ ಸಂಪುಟ ಸಭೆಯಲ್ಲಿ ಈ ಎರಡೂ ಮಹತ್ವದ ವಿಧೇಯಕಗಳ ಬಗ್ಗೆ ಚರ್ಚೆ ಪೂರ್ಣಗೊಂಡ ನಂತರ ಅವುಗಳಿಗೆ ಅನುಮೋದನೆ ಸಿಗುವ ಸಾಧ್ಯತೆ ಇರುವುದರಿಂದ, ರಾಜ್ಯದ ಜನತೆ, ಪಶುಪಾಲಕರು, ರೈತರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳು ಸಭೆಯ ಫಲಿತಾಂಶದತ್ತ ಕಣ್ಣಿಟ್ಟಿವೆ.

ಕರ್ನಾಟಕ ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ವಿಧೇಯಕ-2025

ಯಾವ್ಯಾವುದಕ್ಕೆ ನಿಷೇಧ?

  • ಗ್ರಾಮ ಅಥವಾ ಸಮುದಾಯದಿಂದ ಹೊರಹಾಕುವುದು
  • ಧಾರ್ಮಿಕ, ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ ವಿಧಿಸುವುದು
  • ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿ ಮಾಡುವುದು
  • ಸಾಮಾಜಿಕ-ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ತಡೆಯೊಡ್ಡುವುದು
  • ವ್ಯವಹಾರ ಅಥವಾ ಉದ್ಯೋಗ ತಿರಸ್ಕಾರ ಮಾಡುವುದು
  • ಶಾಲೆ, ಆಸ್ಪತ್ರೆ, ಸಮುದಾಯ ಭವನಗಳ ಪ್ರವೇಶಕ್ಕೆ ತಡೆಯೊಡ್ಡುವುದು
  • ಸೇವೆಗಳು, ಅವಕಾಶಗಳನ್ನು ನಿರಾಕರಿಸುವುದು
  • ಮದುವೆ, ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವುದಕ್ಕೆ ತಡೆಯೊಡ್ಡುವುದು
  • ಸಂಬಂಧ ಕಡಿತಗೊಳಿಸಲು ಪ್ರಚೋದನೆ ನೀಡುವುದು
  • ಲಿಂಗತ್ವದ ಆಧಾರದ ಮೇಲೆ ಭೇದ ಮಾಡುವುದು
  • ವ್ಯಾಪಾರ, ಸಾಮಾಜಿಕ ಸಂಬಂಧಗಳಿಗೆ ತಡೆಯೊಡ್ಡುವುದು
  • ಮಕ್ಕಳನ್ನು ಒಟ್ಟಿಗೆ ಆಡಲು ಅಡ್ಡಿ ಪಡಿಸುವುದು
  • ಮಾನವ ಹಕ್ಕುಗಳನ್ನು ನಿರಾಕರಿಸುವುದು
  • ಬಟ್ಟೆ, ಭಾಷೆ, ಸಾಂಸ್ಕೃತಿಕ ಭೇದ ಎಸಗುವುದು