ಮೂವರು ಕನ್ನಡಿಗರು ಸೇರಿ 60 ಭಾರತೀಯರಿಗೆ ರಷ್ಯಾ ಸೇನೆ ವಂಚನೆ, ಶೀಘ್ರ ಬಿಡುಗಡೆಗೆ ಭಾರತ ಮನವಿ
ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಕಲಬುರಗಿಯ 3 ಮಂದಿಯೂ ಸೇರಿದಂತೆ 60 ಯುವಕರನ್ನು ಶೀಘ್ರ ಬಿಡುಗಡೆ ಮಾಡುವಂತೆ ವ್ಲಾದಿಮಿರ್ ಪುಟಿನ್ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ನವದೆಹಲಿ (ಫೆ.24): ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಕಲಬುರಗಿಯ 3 ಮಂದಿಯೂ ಸೇರಿದಂತೆ 60 ಯುವಕರನ್ನು ಶೀಘ್ರ ಬಿಡುಗಡೆ ಮಾಡುವಂತೆ ವ್ಲಾದಿಮಿರ್ ಪುಟಿನ್ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಈ ಕುರಿತು ರಷ್ಯಾದ ಭಾರತೀಯ ದೂತಾವಾಸ ಕಚೇರಿಯ ಜೊತೆ ಸಂಪರ್ಕದಲ್ಲಿದ್ದು, ರಷ್ಯಾ ಸೇನೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಭಾರತೀಯ ಯುವಕರನ್ನು ರಷ್ಯಾ ಸೇನೆಯಿಂದ ಶೀಘ್ರವಾಗಿ ಮುಕ್ತಿಗೊಳಿಸುವಂತೆ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಕಲಬುರಗಿ ಜಿಲ್ಲೆಯ ಮೂವರು ಸೇರಿದಂತೆ 60 ಭಾರತೀಯ ಯುವಕರು ರಷ್ಯಾ ಸೇನೆಯಲ್ಲಿ ಕಳೆದ ವರ್ಷ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ರಷ್ಯಾ ಸೇನೆ ಅವರಿಗೆ ವಂಚಿಸಿ ಎಲ್ಲರನ್ನು ರಷ್ಯಾದ ಖಾಸಗಿ ವ್ಯಾಗ್ನರ್ ಸೇನಾಪಡೆಗೆ ಸೇರಿಸುವ ಮೂಲಕ ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಹೋರಾಡುವಂತೆ ಒತ್ತಾಯ ಮಾಡುತ್ತಿದೆ. ಇದು ಭಾರತೀಯರಲ್ಲಿ ಕಳವಳ ಉಂಟು ಮಾಡಿದ್ದು, ಇವರ ಬಿಡುಗಡೆಗೆ ತೀವ್ರ ಒತ್ತಾಯ ಕೇಳಿಬಂದಿದೆ.
ರಷ್ಯಾದ ಆಂತರಿಕ ಧಂಗೆಯಲ್ಲಿ ಸಿಲುಕಿರುವ ಕಲಬುರಗಿ ಯುವಕರು; ರಕ್ಷಣೆಗೆ ಮುಂದಾದ ಸಚಿವ ಪ್ರಿಯಾಂಕ್ ಖರ್ಗೆ
ಏನಿದು ಪ್ರಕರಣ?: ಭಾರತೀಯ ಯುವಕರು ದುಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಮಹಾರಾಷ್ಟ್ರ ಮೂಲದ ಏಜೆಂಟ್‌ವೊಬ್ಬರು ರಷ್ಯಾದಲ್ಲಿ ಭಾರೀ ಮೊತ್ತದ ನೌಕರಿಯ ಆಸೆ ಹುಟ್ಟಿಸಿ ಅವರನ್ನು ಭಾರತಕ್ಕೆ ವಾಪಸ್ ಕರೆತಂದಿದ್ದರು. ಬಳಿಕ ಪ್ರತಿಯೊಬ್ಬರಿಂದ 3.5 ಲಕ್ಷ ರು. ಕಮಿಷನ್ ಪಡೆದು ರಷ್ಯಾ ಸೇನೆಯಲ್ಲಿ ಸಹಾಯಕರ ಕೆಲಸಕ್ಕೆ ಸೇರಿಸುವುದಾಗಿ ನಂಬಿಸಿ ವಿಸಿಟರ್ ವೀಸಾದಲ್ಲಿ ಕಳೆದ ಡಿಸೆಂಬರ್‌ನಲ್ಲಿ ರಷ್ಯಾ ವಿಮಾನ ಹತ್ತಿಸಿದ್ದರು.
ಬಳಿಕ ಅಲ್ಲಿ ಅವರಿಂದ ರಷ್ಯಾ ಭಾಷೆಯಲ್ಲಿದ್ದ ಕೆಲವು ಪತ್ರಗಳಿಗೆ ಸಹಿ ಪಡೆದು ಅವರನ್ನು ನೇರವಾಗಿ ವ್ಯಾಗ್ನರ್ ಸಂಸ್ಥೆಗೆ ಸೇರಿಸಿ ಉಕ್ರೇನ್ ಜೊತೆಗೆ ಯುದ್ಧ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ. ವ್ಯಾಗ್ನರ್ ಖಾಸಗಿ ಸೇನೆಯಾಗಿದ್ದು, ಹಣ ನೀಡಿದವರ ಪರವಾಗಿ ಸೇವೆ ನೀಡುತ್ತದೆ.
ಈ ಹಿನ್ನೆಲೆಯಲ್ಲಿ ಬುಧವಾರದಂದು ಹೈದರಾಬಾದ್ ಮೂಲದ ವ್ಯಕ್ತಿಯ ಕುಟುಂಬ ಸ್ಥಳೀಯ ಸಂಸದರಾದ ಅಸಾದುದ್ದೀನ್ ಓವೈಸಿ ಮೂಲಕ ವಿದೇಶಾಂಗ ಸಚಿವಾಲಯಕ್ಕೆ ಆದಷ್ಟು ಬೇಗ ಎಲ್ಲ ಭಾರತೀಯರನ್ನು ಮರಳಿ ಕರೆತರುವಂತೆ ಮನವಿ ಸಲ್ಲಿಸಿದ್ದಾರೆ.
ಮದುವೆಯಾಗಲು ಖ್ಯಾತ ಟಿವಿ ನಿರೂಪಕನನ್ನು ಅಪಹರಿಸಿದ ಉದ್ಯಮಿ ಮಹಿಳೆ!
ಉದ್ಯೋಗ ಅರಸಿ ಹೋದ ಕಲಬುರಗಿ ಯುವಕರು ರಷ್ಯಾದಲ್ಲಿ ಪರದಾಟ:
ಸೆಕ್ಯೂರಿಟಿ ಕೆಲಸ ಕೊಡಿಸುವುದಾಗಿ ಹೇಳಿದ ಏಜೆಂಟ್ ಮಾತು ನಂಬಿ ರಷ್ಯಾಗೆ ತೆರಳಿರುವ ಕಲಬುರಗಿ ಮೂಲದ ಮೂವರು ಯುವಕರು ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮನ್ನು ರಕ್ಷಣೆ ಮಾಡುವಂತೆ ವಿಡಿಯೋ ಮೂಲಕ ಮಾಡಿರುವ ಮನವಿ ಈಗ ತೀವ್ರ ಸಂಚಲನ ಮೂಡಿಸಿದೆ. ಯುವಕರನ್ನು ರಷ್ಯಾ ಯುದ್ಧಕ್ಕಾಗಿ ತನ್ನ ಖಾಸಗಿ ಸೈನ್ಯ ಪಡೆ ವ್ಯಾಘನರ್‌ಗೆ ಬಳಸಿಕೊಂಡಿದೆ ಎನ್ನಲಾಗಿದ್ದು, ಯುವಕರು ಕಂಗಾಲಾಗಿದ್ದಾರೆ.
ಸೈಯದ್ ಇಲಿಯಾಸ್ ಹುಸೇನಿ, ಮೊಹಮ್ಮದ್ ಸಮೀರ್ ಅಹಮದ್ , ಸೋಫಿಯಾ ಮೊಹಮ್ಮದ್ ಕಲಬುರಗಿ ನಗರದ ಇಸ್ಲಾಂಬಾದ್ ಕಾಲೋನಿ, ಮಿಲ್ಲಟ್ ನಗರ ಬಡಾವಣೆ ವಾಸಿಗಳಾಗಿದ್ದಾರೆ. ಈ ಪೈಕಿ ಓರ್ವ ಯುವಕನ ತಂದೆ ಸಯ್ಯದ್ ನವಾಜ್ ಅಲಿ ಕಾಳಗಿ ಅವರು ತಮ್ಮ ಪುತ್ರನ ರಕ್ಷಣೆಗೆ ಅಗ್ರಹಿಸಿದ್ದಾರೆ. ಸಯ್ಯದ್ ಅಲಿ ಅವರು ಮಾಡ್ಬುಲ್ ಠಾಣೆಯಲ್ಲಿ ಮುಖ್ಯ ಪೇದೆ ಆಗಿದ್ದಾರೆ.
ವಾಟ್ಸಾಪ್ ಗ್ರೂಪ್‌ನಲ್ಲಿ ಬರುವ ಸಂದೇಶದಿಂದ ಕಳೆದ ಸುಮಾರು ಒಂದು ತಿಂಗಳ ಹಿಂದೆ ದುಬೈ ಏಜೆಂಟನ ಪರಿಚಯವಾಗಿದೆ. ಯುವಕರು ಆತನನ್ನು ಕೆಲಸ ಕೊಡಿಸುವಂತೆ ಕೇಳಿದ್ದಾರೆ. ಮನೆಯಲ್ಲಿ ಸಹ ಈ ಯುವಕರು ತಮ್ಮ ಪೋಷಕರಿಗೆ ಕೆಲಸದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಕಲಬುರಗಿಯಿಂದ ದುಬೈಗೆ ತೆರಳಿ, ಬಾಬಾ ಎಂಬ ಏಜೆಂಟ್ ಮೂಲಕ ಅಲ್ಲಿಂದ ರಷ್ಯಾಕ್ಕೆ ತೆರಳಿದ್ದಾರೆ. ಏಜೆಂಟ್ ಯುವಕರಿಂದ ತಲಾ ಮೂರು ಲಕ್ಷ ಹಣ ಪಡೆದುಕೊಂಡಿದ್ದನೆಂದು ಗೊತ್ತಾಗಿದೆ. ಸೆಕ್ಯೂರಿಟಿ ಕೆಲಸ ನಂಬಿ ಹೋಗಿದ್ದು, ಅಲ್ಲಿ ವಾಸ್ತವ ಬೇರೆಯೇ ಆಗಿದೆ. ಯುದ್ಧ ಪೀಡಿತ ಉಕ್ರೇನ್ ಗಾಡಿಯಲ್ಲಿ ಯುದ್ಧಕ್ಕೆ ನಿಯೋಜನೆ ಮಾಡಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಈ ಯುವಕರು ವಿಡಿಯೋ ಸಂದೇಶ ಮಾಡಿ ರವಾನಿಸಿದ್ದಾರೆ. ತಮ್ಮನ್ನ ವಾಪಸ್ ತಾಯ್ನಾಡಿಗೆ ಕರೆಸಿಕೊಳ್ಳುವಂತೆ ವಿಡಿಯೋ ಸಂದೇಶದಲ್ಲಿ ದುಂಬಾಲು ಬಿದ್ದಿದ್ದಾರೆ. ಈ ನಡುವೆ ರಷ್ಯಾದಲ್ಲಿ ಸಿಲುಕಿದ ಯುವಕರನ್ನು ಸುರಕ್ಷಿತವಾಗಿ ಕರೆದು ತರುವಂತೆ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಭಾರತದಿಂದ ಒಟ್ಟು 60 ಜನರನ್ನು ರಷ್ಯಾಗೆ ಕಳುಹಿಸಿದ್ದ ಬಾಬಾ ಏಜೆಂಟ್, ಈ ಪೈಕಿ ಕರ್ನಾಟಕದಿಂದ ನಾಲ್ವರನ್ನು ಕಳುಹಿಸಿದ್ದ. ಕರ್ನಾಟಕದ ಇನ್ನೊಬ್ಬ ಯುವಕ ಎಲ್ಲಿಯವನು, ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲ ಎನ್ನಲಾಗಿದೆ.