ಥೈಲ್ಯಾಂಡ್ ಭಾರತೀಯ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಲಾಗುತ್ತಿದೆಯಾ? ಇದೀಗ ಭಾರತೀಯನೊಬ್ಬ 1000 ರೂಪಾಯಿ ಕ್ರಿಕೆಡ್ ಕಾರ್ಡ್ ಮೂಲಕ ಪಾವತಿ ಮಾಡಿದ್ದಾನೆ. ಆದರೆ 75 ಸಾವಿರ ರೂಪಾಯಿ ಕಡಿತಗೊಂಡಿದೆ.

ಪಟ್ಟಾಯ (ನ.02) ಭಾರತೀಯರು ಅತೀ ಹೆಚ್ಚು ತೆರಳುವ ಪ್ರವಾಸಿ ದೇಶಗಳ ಪೈಕಿ ಥೈಲಾಂಡ್ ಕೂಡ ಒಂದು. ಪ್ರಾಕೃತಿಕವಾಗಿ ಅತ್ಯಂತ ಸುಂದರ ದೇಶ. ಥೈಲ್ಯಾಂಡ್‌ನ ಪಟ್ಟಾಯ ಬಹುತೇಕರಿಗೆ ಅಚ್ಚುಮೆಚ್ಚು. ಇದೀಗ ಇದೇ ಪಟ್ಟಾಯಗೆ ಪ್ರವಾಸ ತೆರಳಿದ ಭಾರತೀಯನಿಗೆ ಶಾಕ್ ಎದುರಾಗಿದೆ. ಕೇವಲ 1000 ರೂಪಾಯಿ ಮೌಲ್ಯದ ಗಿಡಮೂಲಿಕೆಯನ್ನು ಭಾರತೀಯ ಪ್ರವಾಸಿ ಖರೀದಿಸಿದ್ದಾನೆ. ಕ್ರಿಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದ್ದಾನೆ. ಆದರೆ ಕ್ರೆಡಿಟ್ ಚಾರ್ಜ್ ಹೆಸರಿನಲ್ಲಿ ಬರೋಬ್ಬರಿ 75,000 ರೂಪಾಯಿ ಕಡಿತಗೊಂಡಿದೆ. ಕ್ರಿಡಿಟ್ ಕಾರ್ಟ್ ಸ್ಕ್ಯಾಮ್‌ನಲ್ಲಿ ಭಾರತೀಯ ಪ್ರವಾಸಿಗ ಸಿಲುಕಿದ್ದಾನೆ.

ಕ್ರಿಡಿಟ್ ಕಾರ್ಡ್ ಪಾವತಿ ಸ್ಕ್ಯಾಮ್

ಭಾರತದ 28ರ ವರ್ಷದ ಪ್ರವಾಸಿ ಥೈಲ್ಯಾಂಡ್‌ನ ಪಟ್ಟಾಯಗೆ ಪ್ರವಾಸಕ್ಕೆ ತೆರಳಿದ್ದಾನೆ. ರಾತ್ರಿ11.30ರ ಸಮಯಕ್ಕೆ ಪಟ್ಟಾಯದ 2ನೇ ರಸ್ತೆಯಲ್ಲಿರುವ 1000 ರೂಪಾಯಿ (ಭಾರತೀಯ ರೂ) ಗಿಡಮೂಲಿಕೆ ಖರೀದಿಗೆ ಪಾವತಿ ಮಾಡಿದ್ದಾನೆ. ಕ್ರಿಡಿಟ್ ಕಾರ್ಡ್ ಮೂಲಕ ಪಾವತಿ ಮಾಡಲಾಗಿದೆ. ಕ್ರಿಡಿಟ್ ಕಾರ್ಡ್ ಸ್ಪೈಪ್ ಮಾಡಿದ ಬೆನ್ನಲ್ಲೇ ಮೊಬೈಲ್‌ಗೆ ಸಂದೇಶ ಬಂದಿದೆ. ಹಣ ಕಡಿತದ ಮೆಸೇಜ್ ನೋಡಿ ಗಾಬರಿಯಾಗಿದ್ದಾನೆ. ಕಾರಣ 1000 ರೂಪಾಯಿ ಪಾವತಿಗೆ 75000 ರೂಪಾಯಿ ಕಡಿತವಾಗಿದೆ.

ದೂರು ಹಿಂಪಡೆಯಲು ಬೆದರಿಕೆ

ಭಾರತೀಯ ಪ್ರವಾಸಿಗ ತಾನು ಮೋಸ ಹೋಗಿದ್ದೇನೆ ಅನ್ನೋದು ಅರಿವಾಗಿದೆ. ಕ್ರಿಡಿಟ್ ಕಾರ್ಡ್ ಸ್ಕ್ಯಾಮ್‌ಗೆ ತುತ್ತಾಗಿರುವುದಾಗಿ ಗೊತ್ತಾಗಿದೆ. ಹೀಗಾಗಿ ತಕ್ಷಣವೇ ಪಟ್ಟಾಯ ಸಿಟಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. 1000 ರೂಪಾಯಿ ಪಾವತಿಗೆ 75000 ರೂಪಾಯಿ ಕಡಿತಗೊಂಡಿದ್ದು ಹೇಗೆ, ಇದು ಸ್ಕ್ಯಾಮ್ ಎಂದು ದೂರು ನೀಡಿದ್ದಾನೆ. ಇದರ ಬೆನ್ನಲ್ಲೇ ನೆಟ್‌ವರ್ಕ್ ಪ್ರತಿನಿಧಿ ಎಂಬ ಹೆಸರಲ್ಲಿ ಭಾರತೀಯ ಪ್ರವಾಸಿಗನಿಗೆ ಕರೆಯೊಂದು ಬಂದಿದೆ. ದೂರು ಹಿಂಪಡೆಯುವಂತೆ ಬೆದರಿಸಿದ್ದಾನೆ. ಕೊನೆಗೆ ಹಣ ರೀಫಂಡ್ ಮಾಡುವುದಾಗಿ ಹೇಳಿದ್ದಾನೆ. ಆದರೆ ಹಣ ರೀಫಂಡ್ ಆಗಿದೆಯಾ ಅಥವಾ ದೂರು ಹಿಂಪಡೆಯಲಾಗಿದೆಯೋ ಅನ್ನೋ ಕುರಿತು ಸ್ಪಷ್ಟನೆ ಸಿಕ್ಕಿಲ್ಲ.

ಪ್ರವಾಸಿಗರ ಟಾರ್ಗೆಟ್ ಮಾಡಿ ಸ್ಕ್ಯಾಮ್

ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ವಂಚನೆ ನಡೆಯುತ್ತಿದೆ. ಈ ಕುರಿತು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಕ್ರಿಡಿಟ್ ಕಾರ್ಡ್ ಸೇರಿದಂತೆ ಇತರ ಕಾರ್ಡ್ ಮೂಲಕ ಪಾವತಿ ಮಾಡುವಾಗ ಅತೀವ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ. ಪಾವತಿ ವೇಳೆ ಹೆಚ್ಚುವರಿ ಮೊತ್ತ ಕಡಿತಗೊಳ್ಳುತ್ತಿದೆ. ಈ ರೀತಿ ಕೆಲ ಪ್ರಕರಣ ದಾಖಲಾಗಿದೆ. ಜನವರಿಯಲ್ಲಿ ಭಾರತದ 45 ವರ್ಷದ ಪ್ರವಾಸಿಗನಿಂದ 43,000 ಥೈಲ್ಯಾಂಡ್ ಬಾಟ್ ಹಾಗೂ ಶ್ರೀಲಂಕಾ ಪ್ರವಾಸಿಗನಿಂದ 3,3000 ಥೈಲ್ಯಾಂಡ್ ಬಾಟ್ ಕಡಿತಗೊಂಡು ವಂಚನೆಗೆ ಒಳಗಾಗಿದ್ದಾರೆ. ಹೀಗಾಗಿ ಪಾವತಿ ಹಣ, ಕಡಿತಗೊಂಡಿರುವ ಹಣ ಸರಿಯಾಗಿದೆಯಾ ಅನ್ನೋದು ಪರಿಶೀಲಿಸಲು ಪಟ್ಟಾಯ ಪೊಲೀಸರು ಸೂಚಿಸಿದ್ದಾರೆ. ಯಾವುದೇ ರೀತಿಯ ವಂಚನೆಗೆ ಸಿಲುಕಿದರೆ ತಕ್ಷಣವೆ ಪೊಲೀಸರ ಸಂಪರ್ಕಿಸಲು ಸೂಚಿಸಿದ್ದಾರೆ.