ಉದ್ಯಮಿ ಅನಿಲ್ ಧೀರೂಭಾಯಿ ಅಂಬಾನಿ ಅವರಿಗೆ ಸಂಬಂಧಿಸಿದ ಕಪ್ಪುಹಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು ಹಾಗೂ ತೆರಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅನಿಲ್ ಅಂಬಾನಿ ಸೇರಿದಂತೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದೆ.
ನವದೆಹಲಿ: ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ಮತ್ತು ತೆರಿಗೆ ಹೇರಿಕೆ ಕಾಯ್ದೆ, 2015ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಸಲ್ಲಿಸಿರುವ ಅರ್ಜಿಯನ್ನು ಬಾಂಬೆ ಹೈಕೋರ್ಟ್ನಿಂದ ದೆಹಲಿ ಹೈಕೋರ್ಟ್ಗೆ ವರ್ಗಾಯಿಸಬೇಕೆಂದು ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಸೋಮವಾರ ಅನಿಲ್ ಅಂಬಾನಿ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕೇಂದ್ರ ಸರ್ಕಾರದ ವರ್ಗಾವಣೆ ಅರ್ಜಿಯ ವಿಚಾರಣೆ ನಡೆಸಿತು.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, 2015ರ ಕಪ್ಪು ಹಣ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ದೇಶದ ಐದು ವಿಭಿನ್ನ ಹೈಕೋರ್ಟ್ಗಳಲ್ಲಿ ಒಟ್ಟು 45 ಅರ್ಜಿಗಳು ಬಾಕಿ ಇವೆ. ಹೀಗಾಗಿ, ಪ್ರಕರಣಗಳ ಏಕರೂಪದ ವಿಚಾರಣೆಗಾಗಿ ಅನಿಲ್ ಅಂಬಾನಿ ಅವರ ಪ್ರಕರಣವನ್ನು ದೆಹಲಿ ಹೈಕೋರ್ಟ್ಗೆ ವರ್ಗಾಯಿಸಬೇಕು. ಉಳಿದ ಅರ್ಜಿದಾರರು ಸೂಕ್ತ ಪರಿಹಾರಕ್ಕಾಗಿ ಸ್ವತಂತ್ರವಾಗಿ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಲು ಅವಕಾಶ ನೀಡಬಹುದು" ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ವಾದವನ್ನು ಆಲಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.
ಪ್ರಕರಣದ ಹಿನ್ನೆಲೆ ಮತ್ತು ₹420 ಕೋಟಿ ತೆರಿಗೆ ವಂಚನೆ ಆರೋಪ
ಅನಿಲ್ ಅಂಬಾನಿ ಅವರು ಸ್ವಿಟ್ಜರ್ಲ್ಯಾಂಡ್ನ ಎರಡು ಬ್ಯಾಂಕ್ ಖಾತೆಗಳಲ್ಲಿ ಸುಮಾರು ₹814 ಕೋಟಿ ಮೊತ್ತದ ಅಘೋಷಿತ ವಿದೇಶಿ ಆಸ್ತಿಯನ್ನು ಹೊಂದಿದ್ದು, ಇದಕ್ಕೆ ಸಂಬಂಧಿಸಿದಂತೆ ₹420 ಕೋಟಿ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿದೆ.
ಈ ಆರೋಪದಡಿ ತಮ್ಮ ವಿರುದ್ಧ 2015ರ ಕಪ್ಪು ಹಣ ಕಾಯ್ದೆಯ ಸೆಕ್ಷನ್ 3(1), 50, 51, 59 ಮತ್ತು 72C ಅಡಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದನ್ನು ಪ್ರಶ್ನಿಸಿ ಅಂಬಾನಿ 2022ರಲ್ಲಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕಾಯ್ದೆಯ ನಿಬಂಧನೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂಬುದು ಅವರ ವಾದವಾಗಿತ್ತು.
ಬಾಂಬೆ ಹೈಕೋರ್ಟ್ನ ಮಧ್ಯಂತರ ರಕ್ಷಣೆ
ಈ ವರ್ಷದ ಜೂನ್ 8, 2026ರಂದು ಬಾಂಬೆ ಹೈಕೋರ್ಟ್ ಅನಿಲ್ ಅಂಬಾನಿ ಅವರಿಗೆ ಮಹತ್ವದ ಮಧ್ಯಂತರ ಪರಿಹಾರ ನೀಡಿತ್ತು. ಅಂಬಾನಿ ಸಲ್ಲಿಸಿರುವ ರಿಟ್ ಅರ್ಜಿಯ ಅಂತಿಮ ಇತ್ಯರ್ಥವಾಗುವವರೆಗೆ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಅಥವಾ ದಂಡ ವಿಧಿಸುವಂತಹ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಆದಾಯ ತೆರಿಗೆ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಕೇಂದ್ರ ಸರ್ಕಾರದ ಆತಂಕವೇನು?
ವಿವಿಧ ಹೈಕೋರ್ಟ್ಗಳಲ್ಲಿ ಕಪ್ಪು ಹಣ ಕಾಯ್ದೆಯನ್ನು ಪ್ರಶ್ನಿಸಿ ದೊಡ್ಡ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಿಂದಾಗಿ ವಿದೇಶದಲ್ಲಿರುವ ಕಪ್ಪು ಹಣವನ್ನು ಮರಳಿ ತರುವ ಪ್ರಕ್ರಿಯೆಗೆ ಹಿನ್ನಡೆಯಾಗುತ್ತಿದೆ ಮತ್ತು ಸರ್ಕಾರಕ್ಕೆ ಭಾರಿ ಪ್ರಮಾಣದ ಆದಾಯ ನಷ್ಟವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದೆ. ದೆಹಲಿ ಹೈಕೋರ್ಟ್ನಲ್ಲಿ ಈಗಾಗಲೇ ಇದೇ ಕಾಯ್ದೆಗೆ ಸಂಬಂಧಿಸಿದ 15ರಿಂದ 20 ಪ್ರಕರಣಗಳು ಅಂತಿಮ ವಿಚಾರಣೆಗೆ ಸಿದ್ಧವಾಗಿವೆ. ಆದರೆ ಬಾಂಬೆ ಹೈಕೋರ್ಟ್ನಲ್ಲಿ ಪ್ರಕರಣ ಬಾಕಿ ಉಳಿದಿರುವುದರಿಂದ, ಎಲ್ಲವನ್ನೂ ದೆಹಲಿ ಹೈಕೋರ್ಟ್ಗೆ ವರ್ಗಾಯಿಸುವುದು ಸೂಕ್ತ ಎಂಬುದು ಸರ್ಕಾರದ ನಿಲುವಾಗಿದೆ.
ಈ ಹಿಂದೆ ಸೆಪ್ಟೆಂಬರ್ನಲ್ಲಿ ನಡೆದ ವಿಚಾರಣೆ ವೇಳೆ, ಒಂದು ಹೈಕೋರ್ಟ್ಗಿಂತ ಇನ್ನೊಂದು ಹೈಕೋರ್ಟ್ಗೆ ಏಕೆ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತಲ್ಲದೆ, ದೆಹಲಿ ಹೈಕೋರ್ಟ್ನ ತೀರ್ಪಿನ ಆಧಾರದ ಮೇಲೆ ಬಾಂಬೆ ಹೈಕೋರ್ಟ್ನಲ್ಲೂ ಪ್ರಕರಣ ಇತ್ಯರ್ಥಪಡಿಸಲು ಕೇಂದ್ರ ಪ್ರಯತ್ನಿಸಬೇಕು ಎಂದು ಸಲಹೆ ನೀಡಿತ್ತು. ಇದೀಗ ನೋಟಿಸ್ ಜಾರಿಯಾಗಿರುವುದರಿಂದ ಮುಂದಿನ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.
















