ಪ್ರಯಾಣದ ವೇಳೆ ರೈಲಿನಲ್ಲಿ ಅಸ್ವಸ್ಥಗೊಂಡ ಮಗುವಿಗೆ ಭಾರತೀಯ ರೈಲ್ವೆ ತಕ್ಷಣವೇ ವೈದ್ಯಕೀಯ ನೆರವು ನೀಡಿದೆ. ತಾಯಿಯೊಬ್ಬರು ಈ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರೈಲ್ವೆಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಪ್ರಯಾಣದ ವೇಳೆ ರೈಲಿನಲ್ಲಿ ಚಿಕ್ಕ ಮಗುವಿಗೆ ಆರೋಗ್ಯ ಕೈಕೊಟ್ಟಾಗ, ಭಾರತೀಯ ರೈಲ್ವೆ ತಕ್ಷಣವೇ ಚಿಕಿತ್ಸೆ ಒದಗಿಸಿರೋ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಭಾವನಾ ಅನ್ನೋ ದಂತ ವೈದ್ಯೆ ಹಾಗೂ ತಾಯಿಯೊಬ್ಬರು ತಮಗಾದ ಈ ಅನುಭವವನ್ನು 'X' ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗುವಿಗೆ ಇದ್ದಕ್ಕಿದ್ದಂತೆ ವಾಂತಿ ಶುರುವಾದಾಗ, ಯಾವುದೇ ಭರವಸೆ ಇರಲಿಲ್ಲ, ಆದರೆ ಭಾರತೀಯ ರೈಲ್ವೆ ನನ್ನನ್ನು ಅಚ್ಚರಿಗೊಳಿಸಿತು ಅಂತ ಭಾವನಾ ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನುಗ್ಗೆಕಾಯಿ ಸೂಪ್ ಕುಡಿದಿದ್ದೇ ತಡ, ಶುರುವಾಯ್ತು ವಾಂತಿ

ಪ್ರಯಾಣದ ಮಧ್ಯೆ ಮಗುವಿಗೆ ನುಗ್ಗೆಕಾಯಿ ಸೂಪ್ ಕೊಟ್ಟ ಸ್ವಲ್ಪ ಹೊತ್ತಲ್ಲೇ, ಮಗು ವಿಪರೀತವಾಗಿ ವಾಂತಿ ಮಾಡಲು ಶುರುಮಾಡಿತು. ಇದರಿಂದ ಗಾಬರಿಗೊಂಡ ಭಾವನಾ ತಕ್ಷಣ TTE (ಟಿಕೆಟ್ ಪರೀಕ್ಷಕರು) ಬಳಿ ಓಡಿಹೋದರು. ರೈಲಿನಲ್ಲಿ ಔಷಧಿ ಸಿಗಬಹುದಾ ಅಂತ ಅಷ್ಟೇನೂ ನಿರೀಕ್ಷೆ ಇಲ್ಲದೆ ಕೇಳಿದರು. ಆದರೆ, ರೈಲ್ವೆ ಸಿಬ್ಬಂದಿ ಸ್ಪಂದಿಸಿದ ರೀತಿ ಅವರನ್ನು ದಂಗುಬಡಿಸಿತು.

ಔಷಧಿ ಮಾತ್ರವಲ್ಲ, ವೈದ್ಯರೂ ಬಂದರು!

ಕೇವಲ ಔಷಧಿ ತಲುಪಿಸಿದ್ದು ಮಾತ್ರವಲ್ಲ, ರೈಲು ಮುಂದಿನ ನಿಲ್ದಾಣವಾದ ಹಿಂದೂಪುರ ತಲುಪುವಷ್ಟರಲ್ಲಿ, ಮಗುವನ್ನು ಪರೀಕ್ಷಿಸಲು ರೈಲ್ವೆ ಇಲಾಖೆ ಅಲ್ಲಿ ಒಬ್ಬ ವೈದ್ಯರನ್ನು ಸಹ ಸಿದ್ಧಪಡಿಸಿತ್ತು. ವೈದ್ಯರು ಮಗುವನ್ನು ಪರೀಕ್ಷಿಸಿ, ಸರಿಯಾದ ಔಷಧಿಗಳನ್ನು ನೀಡಿದರು. "ಆತಂಕದಿಂದ ನಿರಾಳತೆಗೆ... ನಾನು ಅಂದುಕೊಂಡಿದ್ದಕ್ಕಿಂತ ವೇಗವಾಗಿ ಸಹಾಯ ಸಿಕ್ಕಿತು" ಎಂದು ಭಾವನಾ ತಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ.

View post on Instagram

ವಿಡಿಯೋ ವೈರಲ್, ರೈಲ್ವೆಗೆ ಮೆಚ್ಚುಗೆಯ ಮಹಾಪೂರ

ಭಾವನಾ ಹಂಚಿಕೊಂಡ ಈ ವಿಡಿಯೋ ಈಗಾಗಲೇ 25 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 93,000ಕ್ಕೂ ಅಧಿಕ ಲೈಕ್ಸ್ ಗಳಿಸಿದೆ. ರೈಲ್ವೆಯ ಈ ಅದ್ಭುತ ಸೇವೆಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ತುರ್ತು ಸಂದರ್ಭಗಳನ್ನು ರೈಲ್ವೆ ಇಲಾಖೆ ನಿಭಾಯಿಸುವ ರೀತಿಯನ್ನು ಅನೇಕರು ಶ್ಲಾಘಿಸಿದ್ದಾರೆ. 'ನೆಗೆಟಿವ್ ಸುದ್ದಿಗಳೇ ವೈರಲ್ ಆಗೋ ಈ ಕಾಲದಲ್ಲಿ, ದೇಶದ ಬಗ್ಗೆ ಹೆಮ್ಮೆ ತರುವ ಇಂತಹ ಪಾಸಿಟಿವ್ ವಿಡಿಯೋ ನೋಡಲು ಖುಷಿಯಾಯ್ತು' ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಇದೇ ರೀತಿ ತಮಗಾದ ಅನುಭವವನ್ನು ಹಂಚಿಕೊಂಡ ಮತ್ತೊಬ್ಬ ಪ್ರಯಾಣಿಕ, 'ಒಮ್ಮೆ ಮಧ್ಯರಾತ್ರಿ 1:50ಕ್ಕೆ ಹೊಟ್ಟೆನೋವು ಬಂದಾಗ, ಕೇವಲ ಮೂರು ನಿಲ್ದಾಣ ಕಳೆಯುವಷ್ಟರಲ್ಲಿ ರೈಲ್ವೆ ಸಿಬ್ಬಂದಿ ನನ್ನ ಬರ್ತ್‌ ಬಳಿಯೇ ಔಷಧಿ ತಂದುಕೊಟ್ಟಿದ್ದರು' ಎಂದು ಹೇಳಿದ್ದಾರೆ.