ಕೇರಳದ ರೈಲ್ವೇ ನಿಲ್ದಾಣದಲ್ಲಿ ಬುರ್ಖಾ ಧರಿಸಿದ್ದ ಯಾಸ್ಮಿನ್ ಎಂಬ ಯುವತಿಯ ಮುಂದೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆಯನ್ನು ಧೈರ್ಯವಾಗಿ ಚಿತ್ರೀಕರಿಸಿದ ಯುವತಿ, 'ದೌರ್ಜನ್ಯಕ್ಕೆ ಬಟ್ಟೆಯೇ ಕಾರಣ' ಎನ್ನುವವರಿಗೆ ಉತ್ತರ ನೀಡಲು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಕೊಚ್ಚಿ (ಮಾ.20): ರೈಲ್ವೇ ನಿಲ್ದಾಣದಲ್ಲಿ ಕುಳಿತಿದ್ದ ಯುವತಿಯನ್ನು ನೋಡಿಕೊಂಡು ಮಧ್ಯವಯಸ್ಕ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕುಟ್ಟಿಪುರಂನಲ್ಲಿ ನಡೆದಿದೆ. ಈ ಅಸಹ್ಯಕರ ಘಟನೆಯನ್ನು ಧೈರ್ಯವಾಗಿ ಚಿತ್ರೀಕರಿಸಿದ ಯುವತಿ, ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಕಾಮುಕನ ಮುಖವಾಡ ಕಳಚಿದ್ದಾರೆ. ಯಾಸ್ಮಿನ್ ಎಂಬ ಯುವತಿ ತಮಗಾದ ಕೆಟ್ಟ ಅನುಭವವನ್ನು ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಕುಟ್ಟಿಪುರಂ ರೈಲ್ವೇ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ, ಎದುರಿಗೇ ಕುಳಿತಿದ್ದ ಮಧ್ಯವಯಸ್ಕ ವ್ಯಕ್ತಿಯೊಬ್ಬ ತನ್ನನ್ನು ದಿಟ್ಟಿಸುತ್ತಾ ಹಸ್ತಮೈಥುನ ಮಾಡಲಾರಂಭಿಸಿದ್ದಾನೆ. ಇದನ್ನು ಕಂಡು ಬೆಚ್ಚಿಬೀಳದ ಯಾಸ್ಮಿನ್, ತಕ್ಷಣವೇ ಮೊಬೈಲ್ ತೆಗೆದು ಆತನ ಕೃತ್ಯವನ್ನು ಸಾಕ್ಷ್ಯ ಸಮೇತ ಚಿತ್ರೀಕರಿಸಿದ್ದಾರೆ.

'ಬಟ್ಟೆಯೇ ಕಾರಣ ಎನ್ನುವವರಿಗೆ ಇದೇ ನನ್ನ ಉತ್ತರ'

ಯಾಸ್ಮಿನ್ ಈ ವಿಡಿಯೋವನ್ನು ಮಧ್ಯರಾತ್ರಿ 1:30 ಗಂಟೆಗೆ ಅಪ್‌ಲೋಡ್ ಮಾಡಿದ್ದು, ಸಮಾಜದ ಮನಸ್ಥಿತಿಯನ್ನು ಪ್ರಶ್ನಿಸಿದ್ದಾರೆ. "ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ ಅವರು ಹಾಕಿರುವ ಬಟ್ಟೆಯೇ ಕಾರಣ ಎಂದು ಕೆಲವರು ವಾದಿಸುತ್ತಾರೆ. ಆದರೆ ನಾನು ಸಂಪೂರ್ಣವಾಗಿ ಮೈ ಮುಚ್ಚುವ ಬುರ್ಖಾ (ಪರ್ದಾ) ಧರಿಸಿದ್ದೆ. ಕವಚದಂತಿರುವ ಬಟ್ಟೆಯಲ್ಲಿದ್ದರೂ ಆತ ನನ್ನ ಮುಂದೆ ಇಂತಹ ಅಸಭ್ಯ ಕೆಲಸ ಮಾಡಿದ್ದಾನೆ. ಬಟ್ಟೆಯೇ ಸಮಸ್ಯೆ ಎನ್ನುವವರು ಈಗ ಏನು ಹೇಳುತ್ತಾರೆ?" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ವಿಡಿಯೋ ಡಿಲೀಟ್ ಮಾಡಲ್ಲ ಎಂದ ಯುವತಿ

ಈ ವಿಡಿಯೋವನ್ನು ಈಗಾಗಲೇ 60 ಲಕ್ಷಕ್ಕೂ (6 Million) ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿರುವ ಯಾಸ್ಮಿನ್, "ಯಾರೇ ಬಂದು ಈ ವಿಡಿಯೋವನ್ನು ಅಳಿಸಿ (Delete) ಎಂದು ಕೇಳಿಕೊಂಡರೂ ನಾನು ಅದನ್ನು ಮಾಡುವುದಿಲ್ಲ. ನನ್ನ ವಿಡಿಯೋ ದಾಖಲೆಯಾಗಿ ಇರಲಿ. ಇನ್ಯಾವ ಹೆಣ್ಣುಮಗಳಿಗೂ ಇಂತಹ ಪರಿಸ್ಥಿತಿ ಬರಬಾರದು," ಎಂದು ದೃಢವಾಗಿ ಹೇಳಿದ್ದಾರೆ.

View post on Instagram

View post on Instagram