Indian Flag Rules: ಭಾರತದ ರಾಷ್ಟ್ರೀಯ ಧ್ವಜದ ಜೊತೆಗೆ ಮತ್ತೊಂದು ಧ್ವಜವನ್ನು ಹಾರಿಸಬಹುದೇ? ತಮಿಳುನಾಡು, ಕರ್ನಾಟಕ ಮತ್ತು ನಾಗಾಲ್ಯಾಂಡ್ ರಾಜ್ಯಗಳು ಪ್ರತ್ಯೇಕ ಧ್ವಜದ ಬೇಡಿಕೆ ಇಟ್ಟಿರುವ ಬೆನ್ನಲ್ಲೇ ಈ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ಸಿಗುತ್ತದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಷ್ಟ್ರಧ್ವಜದ ಜೊತೆ ರಾಜ್ಯ ಧ್ವಜ ಹಾರಿಸಬಹುದೇ?

ಭಾರತದ ರಾಷ್ಟ್ರೀಯ ಧ್ವಜ ತ್ರಿವರ್ಣ ಧ್ವಜ ಎಂಬುದು ಇಡೀ ಜಗತ್ತಿಗೆ ತಿಳಿದಿರುವ ವಿಚಾರ. ಆದರೆ ಇದೀಗ ಭಾರತದಲ್ಲಿ ರಾಜ್ಯ ಧ್ವಜದ ಬೇಡಿಕೆಗಳು ಹೆಚ್ಚಾಗುತ್ತಿವೆ. ಹೌದು, ತಮಿಳುನಾಡಿನಲ್ಲಿ ಸಿಎಂ ವಿಜಯ್ ಅವರ ಟಿವಿಕೆ ಸರ್ಕಾರದ ಸಚಿವ ಅಧವ್ ಅರ್ಜುನ್ ಅವರು ಕೇಂದ್ರ ಸರ್ಕಾರದ ಮುಂದೆ ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಬೇಡಿಕೆ ಇಟ್ಟಿದ್ದಾರೆ. ಆದರೆ ಸರ್ಕಾರ ಈ ಬೇಡಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.

ತಮಿಳುನಾಡಿನಲ್ಲಿ ಪ್ರತ್ಯೇಕ ರಾಜ್ಯ ಧ್ವಜದ ಬೇಡಿಕೆಯ ಇತಿಹಾಸ ಹಲವು ದಶಕಗಳಷ್ಟು ಹಳೆಯದು. 1970ರಲ್ಲಿ ಆಗಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಕೇಂದ್ರ ಸರ್ಕಾರದ ಮುಂದೆ ರಾಜ್ಯ ಧ್ವಜದ ಪ್ರಸ್ತಾವನೆ ಸಲ್ಲಿಸಿದ್ದರು. ಈ ಧ್ವಜದ ಒಂದು ಮೂಲೆಯಲ್ಲಿ ತಿರಂಗವನ್ನು ಹಾಗೂ ಮುಖ್ಯ ಭಾಗದಲ್ಲಿ ತಮಿಳುನಾಡಿನ ರಾಜ್ಯ ಲಾಂಛನವಾದ ಶ್ರೀವಿಲ್ಲಿಪುತ್ತೂರು ಗೋಪುರವನ್ನು ಅಳವಡಿಸಲಾಗಿತ್ತು. ಆದರೆ ಆಗ ಕೇಂದ್ರ ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.

ಸಂವಿಧಾನದಲ್ಲಿ ರಾಜ್ಯ ಧ್ವಜಕ್ಕೆ ಸಂಬಂಧಿಸಿದ ಕಾನೂನು ಏನಿದೆ?

ಭಾರತೀಯ ಸಂವಿಧಾನದಲ್ಲಿ ರಾಷ್ಟ್ರೀಯ ಧ್ವಜದ ಹೊರತಾಗಿ ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಹೊಂದುವ ಕುರಿತು ಯಾವುದೇ ನಿಯಮ, ನಿರ್ಬಂಧ ಅಥವಾ ನಿರ್ದಿಷ್ಟ ಕಾನೂನು ಇಲ್ಲ. 1994ರಲ್ಲಿ ಎಸ್.ಆರ್. ಬೊಮ್ಮಾಯಿ ವಿರುದ್ಧ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಸಾಂಸ್ಕೃತಿಕ ಗುರುತನ್ನು ಪ್ರತಿನಿಧಿಸುವ ಧ್ವಜದ ಮೇಲೆ ಯಾವುದೇ ನಿರ್ಬಂಧವಿಲ್ಲ. ಆದರೆ ಅದರಿಂದ ರಾಷ್ಟ್ರ ಧ್ವಜಕ್ಕೆ ಅವಮಾನವಾಗಬಾರದು ಎಂದು ಹೇಳಿತ್ತು.

ಯಾವ ಯಾವ ರಾಜ್ಯಗಳು ಪ್ರತ್ಯೇಕ ಧ್ವಜದ ಬೇಡಿಕೆ ಇಟ್ಟಿವೆ?

ತಮಿಳುನಾಡಿಗೂ ಮೊದಲು ಕರ್ನಾಟಕ ಮತ್ತು ನಾಗಾಲ್ಯಾಂಡ್ ರಾಜ್ಯಗಳು ಸಾಂಸ್ಕೃತಿಕ ಗುರುತು, ಪ್ರಾದೇಶಿಕ ಹೆಮ್ಮೆ ಮತ್ತು ಭಾಷಾ ಅಸ್ಮಿತೆಯ ಆಧಾರದ ಮೇಲೆ ಪ್ರತ್ಯೇಕ ರಾಜ್ಯ ಧ್ವಜದ ಬೇಡಿಕೆ ಇಟ್ಟಿವೆ.

ಕರ್ನಾಟಕದ ಕನ್ನಡ ಧ್ವಜದ ಬೇಡಿಕೆ

1960ರ ದಶಕದಿಂದ ಕರ್ನಾಟಕದಲ್ಲಿ ಹಳದಿ ಮತ್ತು ಕೆಂಪು ಬಣ್ಣದ 'ಕನ್ನಡ ಧ್ವಜ'ವನ್ನು ಸಾಂಸ್ಕೃತಿಕ ಸಂಕೇತವಾಗಿ ಬಳಸಲಾಗುತ್ತಿದೆ. ಆದರೆ ಇದಕ್ಕೆ ಅಧಿಕೃತ ರಾಜ್ಯ ಧ್ವಜದ ಮಾನ್ಯತೆ ಇಲ್ಲ. 2018ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಅಧಿಕೃತ ರಾಜ್ಯ ಧ್ವಜದ ಪ್ರಸ್ತಾವನೆ ಸಿದ್ಧಪಡಿಸಿತ್ತು. ಈ ಧ್ವಜದಲ್ಲಿ ಹಳದಿ, ಬಿಳಿ ಮತ್ತು ಕೆಂಪು ಬಣ್ಣಗಳಿದ್ದು, ಮಧ್ಯಭಾಗದಲ್ಲಿ ರಾಜ್ಯದ ಲಾಂಛನವಾದ 'ಗಂಡಭೇರುಂಡ' ಚಿತ್ರ ಅಳವಡಿಸಲಾಗಿತ್ತು. ಆದ ಈ ಪ್ರಸ್ತಾವನೆ ಮುಂದುವರಿಯಲಿಲ್ಲ. 2026ರ ನವೆಂಬರ್‌ನಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜದ ಜೊತೆಗೆ ಕನ್ನಡ ಧ್ವಜ ಹಾರಿಸಲು ಕಾನೂನು ಮಾನ್ಯತೆ ನೀಡುವ ಪ್ರಸ್ತಾವನೆ ಮಂಡಿಸುವ ಸುಳಿವು ನೀಡಿದ್ದಾರೆ.

ಈಶಾನ್ಯ ಭಾರತದ ನಾಗಾಲ್ಯಾಂಡ್ ರಾಜ್ಯವೂ ಪ್ರತ್ಯೇಕ ಧ್ವಜದ ಬೇಡಿಕೆ ಇಟ್ಟಿದೆ. ಆದರೆ ನಾಗಾಲ್ಯಾಂಡ್‌ನ ಬೇಡಿಕೆ ತಮಿಳುನಾಡು ಮತ್ತು ಕರ್ನಾಟಕದ ಬೇಡಿಕೆಗಳಿಗಿಂತ ಭಿನ್ನವಾಗಿದ್ದು, ರಾಜಕೀಯವಾಗಿ ಹೆಚ್ಚು ಸೂಕ್ಷ್ಮವಾಗಿದೆ. ಇನ್ನು 2019ರಲ್ಲಿ ಜಮ್ಮು-ಕಾಶ್ಮೀರದಿಂದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಮೊದಲು, ಜಮ್ಮು-ಕಾಶ್ಮೀರಕ್ಕೆ ತನ್ನದೇ ಆದ ಅಧಿಕೃತ ಸಂವಿಧಾನಾತ್ಮಕ ಮಾನ್ಯತೆ ಹೊಂದಿದ್ದ ರಾಜ್ಯ ಧ್ವಜವಿತ್ತು. ಆದರೆ ಈಗ ಅಂತಹ ಧ್ವಜ ಇಲ್ಲ. ಜಮ್ಮು-ಕಾಶ್ಮೀರದ ರಾಜ್ಯ ಧ್ವಜವು ಕೆಂಪು ಬಣ್ಣದ್ದಾಗಿದ್ದು, ಅದರಲ್ಲಿ ನೇಗಿಲು ಮತ್ತು ಮೂರು ಬಿಳಿ ಪಟ್ಟಿಗಳಿದ್ದವು. ಆಗಸ್ಟ್ 2019ರಲ್ಲಿ 370ನೇ ವಿಧಿ ರದ್ದಾದ ಬಳಿಕ ಮತ್ತು ವಿಶೇಷ ಸ್ಥಾನಮಾನ ಕೊನೆಗೊಂಡ ನಂತರ ರಾಜ್ಯ ಧ್ವಜವನ್ನು ತೆಗೆದುಹಾಕಲಾಯಿತು.

ಭಾರತದಲ್ಲಿ ತಿರಂಗದ ಬಗ್ಗೆ ಇರುವ ನಿಯಮಗಳು ಮತ್ತು ಷರತ್ತುಗಳೇನು?

ಭಾರತದಲ್ಲಿ ಭಾರತೀಯ ಧ್ವಜ ಸಂಹಿತೆ 2002 ಜಾರಿಯಲ್ಲಿದೆ. ಇದರ ಅಡಿಯಲ್ಲಿ ರಾಜ್ಯಗಳು, ಸಂಸ್ಥೆಗಳು ಅಥವಾ ಸಂಘಟನೆಗಳು ರಾಷ್ಟ್ರೀಯ ಧ್ವಜದ ಜೊತೆಗೆ ತಮ್ಮ ಧ್ವಜವನ್ನು ಹಾರಿಸುವ ಕುರಿತು ನಿಯಮಗಳನ್ನು ನಿಗದಿಪಡಿಸಲಾಗಿದೆ. ಆ ನಿಯಮಗಳು ಇವು

  • ರಾಷ್ಟ್ರೀಯ ಧ್ವಜವನ್ನು ರಾಜ್ಯ ಧ್ವಜಕ್ಕಿಂತ ಕೆಳಗೆ ಹಾರಿಸಬಾರದು. ಅಂದರೆ ತ್ರಿವರ್ಣ ಧ್ವಜದ ಮೇಲ್ಭಾಗದಲ್ಲಿ ಮತ್ತೊಂದು ಧ್ವಜ ಇರಬಾರದು.
  • ಒಂದೇ ಕಂಬದಲ್ಲಿ ರಾಷ್ಟ್ರ ಧ್ವಜದ ಜೊತೆಗೆ ಮತ್ತೊಂದು ಧ್ವಜವನ್ನು ಹಾರಿಸುವಂತಿಲ್ಲ. ಪಕ್ಕಪಕ್ಕದಲ್ಲಿ ಪ್ರತ್ಯೇಕ ಕಂಬಗಳಲ್ಲಿ ಧ್ವಜಗಳನ್ನು ಹಾರಿಸುವಾಗಲೂ ನಿಯಮಗಳನ್ನು ಪಾಲಿಸಬೇಕು.
  • ಧ್ವಜಗಳನ್ನು ನೇರ ಸಾಲಿನಲ್ಲಿ ಹಾರಿಸುವಾಗ ರಾಷ್ಟ್ರ ಧ್ವಜ ಮೊದಲ ಸ್ಥಾನದಲ್ಲಿ ಇರಬೇಕು. ವೀಕ್ಷಕರ ದೃಷ್ಟಿಯಿಂದ ಅದು ಎಡಭಾಗದಲ್ಲಿರುತ್ತದೆ.
  • ರಾಷ್ಟ್ರ ಧ್ವಜವನ್ನು ಇತರ ಧ್ವಜಗಳಿಗಿಂತ ಎತ್ತರದ ಕಂಬದಲ್ಲಿ ಹಾರಿಸಬೇಕು.
  • ಇತರ ಧ್ವಜಗಳ ಗಾತ್ರವು ರಾಷ್ಟ್ರ ಧ್ವಜಕ್ಕಿಂತ ದೊಡ್ಡದಾಗಿರಬಾರದು. ಸಮಾನ ಅಥವಾ ಚಿಕ್ಕ ಗಾತ್ರದಲ್ಲಿರಬಹುದು.
  • ರಾಷ್ಟ್ರ ಧ್ವಜದ ಮೇಲೆ ಯಾವುದೇ ಚಿಹ್ನೆ, ಹೂವು, ಹಾರ ಅಥವಾ ಪ್ರಚಾರ ಸಾಮಗ್ರಿಗಳನ್ನು ಇಡುವಂತಿಲ್ಲ. ಧ್ವಜದ ಕಂಬಕ್ಕೆ ಇಂತಹ ವಸ್ತುಗಳನ್ನು ಜೋಡಿಸುವುದೂ ನಿಷಿದ್ಧ.

ತಿರಂಗಕ್ಕೆ ಅವಮಾನ ಮಾಡಿದರೆ ಏನು ಶಿಕ್ಷೆ?

ಭಾರತದಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971ರ ಅಡಿಯಲ್ಲಿ ರಾಷ್ಟ್ರೀಯ ಚಿಹ್ನೆಗಳಿಗೆ ಅವಮಾನ ಮಾಡುವುದಕ್ಕೆ ಶಿಕ್ಷೆ ನಿಗಧಿ ಪಡಿಸಿದೆ. ಈ ಕಾಯ್ದೆಯ ಸೆಕ್ಷನ್ 2ರ ಪ್ರಕಾರ, ಯಾರಾದರೂ ಉದ್ದೇಶಪೂರ್ವಕವಾಗಿ ರಾಷ್ಟ್ರೀಯ ಧ್ವಜದ ಮೇಲೆ ಮತ್ತೊಂದು ಧ್ವಜವನ್ನು ಇರಿಸಿದರೆ ಅಥವಾ ಬೇರೆ ರೀತಿಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದರೆ, ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು.