ತೆಲಂಗಾಣದಲ್ಲಿ ಚಿಲ್ಲರೆ ಹಣದ ವಿಚಾರವಾಗಿ ಮಹಿಳಾ ಪ್ರಯಾಣಿಕಳು ಮತ್ತು ಲೇಡಿ ಕಂಡಕ್ಟರ್ ನಡುವೆ ನಡೆದ ಗಲಾಟೆ ದುರಂತದಲ್ಲಿ ಅಂತ್ಯವಾಗಿದೆ. ಚಲಿಸುತ್ತಿದ್ದ ಬಸ್ನಿಂದ ಮಹಿಳೆ ನೂಕಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕಂಡಕ್ಟರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತೆಲಂಗಾಣ: ಚಿಲ್ಲರೆ ಹಣದ ವಿಚಾರವಾಗಿ ಮಹಿಳೆ ಮತ್ತು ಲೇಡಿ ಕಂಡಕ್ಟರ್ ಮಡುವೆ ನಡೆದ ಚಿಕ್ಕದೊಂದು ಗಲಾಟೆ ದೊಡ್ಡದಾಗಿದ್ದು, ಕಂಡಕ್ಟರ್ ಜೀವವನ್ನೇ ಬಲಿ ಪಡೆದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹತ್ತು ದಿನಗಳ ಹಿಂದೆ ನಡೆದ ಈ ಘಟನೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಂಡಕ್ಟರ್ ಇಂದು ಕೊನೆಯುಸಿರು ಎಳೆದಿದ್ದಾರೆ. ಚಿಲ್ಲರೆಯನ್ನು ಕೂಡಲೇ ಕೊಡುವಂತೆ ಮಹಿಳೆಯೊಬ್ಬಳು ಮಾಡಿದ ಗದ್ದಲ, ಈ ದುರಂತಕ್ಕೆ ಕಾರಣವಾಗಿದೆ. ಲೇಡಿ ಕಂಡಕ್ಟರ್ ಅನ್ನು ಚಲಿಸುತ್ತಿದ್ದ ಬಸ್ನಿಂದಲೇ ಮೌನಿಕಾ ಎನ್ನುವ ಮಹಿಳೆ ನೂಕಿದ್ದಾಳೆ. ಗಂಭೀರವಾಗಿ ಗಾಯಗೊಂಡ ಕಂಡಕ್ಟರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಎಲ್ಲಿಯ ಘಟನೆ ಇದು?
ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಶ್ವಪುರಂ ಮಂಡಲದ ಮಿಟ್ಟಗುಡೆಂ ಗ್ರಾಮದ ಮೌನಿಕಾ ಎಂಬ ಮಹಿಳೆ, ತನ್ನ ಮಗನೊಂದಿಗೆ ಮಣುಗೂರು ಸಮೀಪದಿಂದ ಭದ್ರಾಚಲಂಗೆ ತೆರಳಲು ಸರ್ಕಾರಿ ಬಸ್ ಹತ್ತಿದ್ದರು. ಈ ವೇಳೆ ಮಗನ ಟಿಕೆಟ್ಗಾಗಿ ಕಂಡಕ್ಟರ್ ಪ್ರವಳಿಕಾ ಅವರಿಗೆ 100 ರೂಪಾಯಿ ನೀಡಿದ್ದರು. ಟಿಕೆಟ್ ದರ ಹತ್ತು ರೂಪಾಯಿ ಆಗಿತ್ತು. 90 ರೂಪಾಯಿ ಚೇಂಜ್ ಇಲ್ಲದ ಹಿನ್ನೆಲೆಯಲ್ಲಿ, ಕಂಡಕ್ಟರ್ ಟಿಕೆಟ್ ಹಿಂದೆ 90 ರೂ. ಎಂದು ಬರೆದು ಕೊಟ್ಟಿದ್ದಾರೆ. ಆದರೆ ಮಹಿಳೆ, ಈಗಲೇ ದುಡ್ಡು ಬೇಕು ಎಂದು ಗಲಾಟೆ ಮಾಡಿದ್ದಾಳೆ.
ಮಾತಿನ ಚಮಮಕಿ
ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ, ವಾಗ್ವಾದ ತೀವ್ರಗೊಂಡಿದೆ. ಈ ವೇಳೆ ಆಕ್ರೋಶಗೊಂಡ ಮೌನಿಕಾ, ಚಲಿಸುತ್ತಿದ್ದ ಬಸ್ನಿಂದ ಕಂಡಕ್ಟರ್ ಪ್ರವಳಿಕಾ ಅವರನ್ನು ಕೆಳಕ್ಕೆ ತಳ್ಳಿದ್ದಾಳೆ ಎಂದು ವರದಿಯಾಗಿದೆ. ರಸ್ತೆಗೆ ಬಿದ್ದ ಪ್ರವಳಿಕಾ ಅವರ ಎರಡೂ ಕಾಲುಗಳ ಮೇಲೆ ಬಸ್ನ ಹಿಂಬದಿ ಚಕ್ರಗಳು ಹರಿದ ಪರಿಣಾಮ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪದ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.






