ಕೆಲಸದ ಬಳಿಕ ಗೆಳಯನಿಗೆ ಸಹಾಯ ಮಾಡಲು ಹೋಗಿ ದುರಂತ ಅಂತ್ಯ ಕಂಡ ಭಾರತೀಯ ವಿದ್ಯಾರ್ಥಿ!
ಅಮೆರಿಕದಲ್ಲಿ ಎಂಬಿಎ ಓದುತ್ತಿದ್ದ ವಿದ್ಯಾರ್ಥಿ ಖರ್ಚಿಗಾಗಿ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ.ತನ್ನ ಕೆಲಸದ ಸಮಯದ ಮುಗಿದ ಬಳಿಕ ಗೆಳೆಯನಿಗೆ ಸಹಾಯ ಮಾಡಲು ಹೋದ ವಿದ್ಯಾರ್ಥಿ ದುರಂತ ಅಂತ್ಯ ಕಂಡಿದ್ದಾನೆ.
ಹೈದರಾಬಾದ್(ಡಿ.02) ತೆಲಂಗಾಣದಿಂದ ಅಮೆರಿಕಕ್ಕೆ ತೆರಳಿ ಎಂಬಿಎ ವ್ಯಾಸಾಂಗ ಮಾಡುತ್ತಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿ ಚಿಕಾಗೋದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ದುರಂತ ಅಂತ್ಯಕಂಡ ಘಟನೆ ನಡೆದಿದೆ. ತನ್ನ ಕೆಲಸದ ಅವಧಿ ಮುಗಿದ ಬಳಿಕ ಗೆಳೆಯನಿಗಾಗಿ ಹೆಚ್ಚುವರಿ ಸಮಯ ಕೆಲಸ ಮಾಡಿದ ವೇಳೆ ಈ ಗುಂಡಿನ ದಾಳಿ ನಡೆದಿದೆ. ಅಪರಿಚಿತರ ಗುಂಡಿನ ದಾಳಿಯಲ್ಲಿ ವಿದ್ಯಾರ್ಥಿ ಸಾಯಿ ತೇಜ್ ನುಕರಪು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತೆಲಂಗಾಣದ ಖಮ್ಮಾಮ್ ಜಿಲ್ಲೆಯ ನಿವಾಸಿಯಾಗಿರುವ ಸಾಯಿ ತೇಜ್, ಹೈದರಾಬಾದ್‌ನಲ್ಲಿ ಬಿಬಿಎ ಪದವಿ ಪಡೆದು ಎಂಬಿಎ ಪದವಿಗಾಗಿ ಅಮೆರಿಕಾಗೆ ತೆರಳಿದ್ದರು. ಎಂಬಿಎ ಒದುತ್ತಾ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಮೂಲಕ ತನ್ನ ವಿದ್ಯಾಭ್ಯಾಸ ಹಾಗೂ ಇತರ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದರು. ತರಗತಿ ಮುಗಿಸಿ ಪೆಟ್ರೋಲ್ ಪಂಪ್‌ಗೆ ಕೆಲಸಕ್ಕೆ ಆಗಮಿಸಿದ ಸಾಯಿ ತೇಜ್ ತನ್ನ ಅವಧಿಯ ಕೆಲಸ ಮುಗಿಸಿದ್ದಾನೆ. ಇದೇ ವೇಳೆ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಸಹದ್ಯೋಗಿ ಕೆಲಸದ ನಿಮಿತ್ತ ಕೆಲ ಹೊತ್ತು ಹೊರಗಡೆ ತೆರಳುತ್ತಿರುವುದಾಗಿ ಹೇಳಿದ್ದಾನೆ. ಹೀಗಾಗಿ ತಾನು ಬರುವ ವರೆಗೆ ಹೆಚ್ಚುವರಿ ಕೆಲಸ ಮಾಡುವಂತೆ ಮನವಿ ಮಾಡಿದ್ದಾನೆ.
ಜಿಮ್‌ನಲ್ಲಿ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿ ಮೇಲೆ ಹಲ್ಲೆ, ಚಿಕಿತ್ಸೆ ಫಲಕಾರಿಯಾಗದೆ ಸಾವು!
ಸಹದ್ಯೋಗಿ ಗೆಳೆಯನಿಗೆ ಸಹಾಯ ಮಾಡಲು ಸಾಯಿ ತೇಜ್ ತನ್ನ ಕಲಸದ ಅವಧಿ ಮುಗಿದಿದ್ದರೂ ಗೆಳೆಯನಿಗಾಗಿ ಹೆಚ್ಚುವರಿ ಕೆಲಸ ಮಾಡುತ್ತಿದ್ದ ವೇಳೆ ಅಪರಿಚಿತರು ಪೆಟ್ರೋಲ್ ಪಂಪ್‌ಗೆ ಆಗಮಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಸಾಯಿ ತೇಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರು ಕಂಗಲಾಗಿದ್ದಾರೆ. ಉತ್ತಮ ವಿದ್ಯಾಭ್ಯಾಸ ಪಡೆದು ಕೈತುಂಬ ಸಂಬಳದ ಕೆಲಸದ ಕನಸು ಕಂಡಿದ್ದ ಸಾಯಿ ತೇಜ್ ಅಮೆರಿಕದಲ್ಲಿ ದುರಂತ ಅಂತ್ಯ ಕಂಡಿದ್ದಾನೆ.
ಸಾಯಿ ತೇಜ್ ಶಿಕ್ಷಣಕ್ಕಾಗಿ ಪೋಷಕರು ಸಾಲ ಮಾಡಿದ್ದರು. ಶಿಕ್ಷಣದಲ್ಲಿ ಪುತ್ರ ಉತ್ತಮವಾಗಿದ್ದ ಕಾರಣ ಹಿಂದೂ ಮುಂದು ನೋಡದೆ ಸಾಲ ಮಾಡಿದ್ದರು. ಇದೀಗ ಸಾಯಿ ತೇಜ್ ಸಾವು ಪೋಷಕರ ಕಂಗೆಡಿಸಿದೆ. ಇತ್ತ ಚಿಕಾಗೋದಲ್ಲಿನ ಭಾರತೀಯ ರಾಯಭಾರಿ ಅಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಚಿಕಾಗೋ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ದಾಳಿಕೋರರಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಅಮೆರಿಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದೇ ವೇಳೆ ಸಾಯಿ ತೇಜ್ ಕುಟುಂಬಕ್ಕೆ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದೆ.
ಸಾಯಿ ತೇಜ್ ನಾಲ್ಕು ತಿಂಗಳ ಹಿಂದೆ ಅಮೆರಿಕಾಗೆ ತೆರಳಿದ್ದರು. ವಿಸ್‌ಕನ್ಸಿನ್ ಬಳಿ ಇರುವ ಕಾನ್‌ಕಾರ್ಡಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ವ್ಯಾಸಾಂಗ ಮಾಡುತ್ತಿದ್ದ. ಮೂರು ವಾರಗಳಿಂದ ಚಿಕಾಗೋ ಪೆಟ್ರೋಲ್ ಪಂಪ್ ಸ್ಟೇಶನ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಸಾಯಿ ತೇಜ್ ತನ್ನ ಖರ್ಚು ವೆಚ್ಚ ನಿಭಾಯಿಸುತ್ತಿದ್ದ. ಪಾರ್ಟ್ ಟೈಮ್ ಜಾಬ್ ಮಾಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದ ಸಾಯಿ ತೇಜ್ ಸಾವಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಾಯಿ ತೇಜ್ ಕುಟುಂಬಕ್ಕೆ ಸಂತಾಪ ಸೂಚಿಸಿದ ಜೈಶಂಕರ್, ಭಾರತೀಯ ರಾಯಭಾರ ಕಚೇರಿ ಸಾಯಿ ತೇಜ್ ಕುಟುಂಬಕ್ಕೆ ಎಲ್ಲಾ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ಈ ಘಟನೆ ನವೆಂಬರ್ 30 ರಂದು ನಡೆದಿದೆ. ಚಿಕಾಗೋ ಭಾರತೀಯ ರಾಯಭಾರ ಕಚೇರಿ ಸಾಯಿ ತೇಜ್ ಕುಟುಂಬ ಸಂಪರ್ಕಿಸಿದೆ. ಮೃತದೇಹವನ್ನು ಭಾರತಕ್ಕೆ ತರಲು ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಸಿದ್ದು, ಶೀಘ್ರದಲ್ಲೇ ಸಾಯಿ ತೇಜ್ ಮೃತದೇಹ ಭಾರತಕ್ಕೆ ರವಾನೆಯಾಗಲಿದೆ.