ಇಸ್ಲಾಮಾಬಾದ್ ಮೇಲೆ ಭಾರತದ ದಾಳಿಯನ್ನು ತಡೆಯಲಾಗದೇ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಪಾಕಿಸ್ತಾನ ಇದಕ್ಕೆ ಪ್ರತಿಯಾಗಿ ನವದೆಹಲಿ ಮೇಲೂ ದಾಳಿಗೆ ಯತ್ನಿಸಿ ವಿಫಲಗೊಂಡ ಘಟನೆ ನಡೆದಿದೆ.
ನವದೆಹಲಿ (ಮೇ.11): ಇಸ್ಲಾಮಾಬಾದ್ ಮೇಲೆ ಭಾರತದ ದಾಳಿಯನ್ನು ತಡೆಯಲಾಗದೇ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಪಾಕಿಸ್ತಾನ ಇದಕ್ಕೆ ಪ್ರತಿಯಾಗಿ ನವದೆಹಲಿ ಮೇಲೂ ದಾಳಿಗೆ ಯತ್ನಿಸಿ ವಿಫಲಗೊಂಡ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ನವದೆಹಲಿಯನ್ನು ಗುರಿಯಾಗಿಸಿ ಪಾಕಿಸ್ತಾನದ ಹಾರಿಬಿಟ್ಟ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆಗಳು ಪಂಜಾಬ್ ಗಡಿಯಲ್ಲೇ ಹೊಡೆದುರುಳಿಸಿವೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ, ‘ಶನಿವಾರ ನಸುಕಿನ 1.40ಕ್ಕೆ ಪಾಕಿಸ್ತಾನ ಅತಿವೇಗದ ಕ್ಷಿಪಣಿಯನ್ನು ಉಡಾಯಿಸಿತ್ತು. ಪಂಜಾಬ್ ಮೇಲೆ ಇದು ಹಾರಿ ಬರುವಾಗ ಇದನ್ನು ನಾವು ವಾಯುರಕ್ಷಣಾ ವ್ಯವಸ್ಥೆ ಬಳಸಿ ನಿಷ್ಕ್ರಿಯಗೊಳಿಸಿದೆವು’ ಎಂದರು.
ಇದಲ್ಲದೆ, ‘ಪಾಕಿಸ್ತಾನವು ಭಾರೀ ಕ್ಷಮತೆಯ ಕ್ಷಿಪಣಿಗಳನ್ನು ಬಳಸಿ ಶ್ರೀನಗರ, ಅವಂತಿಪುರ ಮತ್ತು ಉಧಂಪುರದಲ್ಲಿನ ವೈದ್ಯಕೀಯ ಘಟಕಗಳ ಮೇಲೆ ದಾಳಿಗೆ ಪ್ರಯತ್ನಿಸಿತ್ತು. ಪಾಕಿಸ್ತಾನದ ಕ್ರಮಗಳಿಗೆ ಸೂಕ್ತ ಉತ್ತರ ನೀಡಲಾಗಿದೆ’ ಎಂದು ಖುರೇಷಿ ಹೇಳಿದರು. ಪಶ್ಚಿಮದ ಗಡಿಯಲ್ಲಿರುವ ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನವು ಡ್ರೋನ್‌ಗಳು, ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು, ಜೆಟ್‌ಗಳನ್ನು ಬಳಸಿದೆ. ಪಾಕಿಸ್ತಾನದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ, ಭಾರತವು ತಕ್ಕುದಾದ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಎಂದು ಇದೇ ವೇಳೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದಾರೆ.
ರಾಜನಾಥ್ ಆತ್ಮವಿಶ್ವಾಸದ ಛಾತಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಉನ್ನತ ಮಟ್ಟದ, ರಹಸ್ಯ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಭಾರತದ ಸಶಸ್ತ್ರ ಪಡೆಗಳ ಮುಖ್ಯಸ್ಥರು ಸಂಯಮದಿಂದ ಇರುವ ಮತ್ತು ಹಸನ್ಮುಖಿಗಳಾಗಿರುವ ಚಿತ್ರವೊಂದು ವೈರಲ್ ಆಗಿದೆ. ಇದು ಸವಾಲಿನ ಸಂದರ್ಭದಲ್ಲೂ ಇವರು ಆತ್ಮವಿಶ್ವಾಸ ಪ್ರದರ್ಶಿಸಿದ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಪಾಕಿಸ್ತಾನವು ಭಾರತದ ಪಶ್ಚಿಮ ಗಡಿಯಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಅಲೆಯನ್ನು ಪ್ರಾರಂಭಿಸಿದ 24 ಗಂಟೆಗಳ ಒಳಗೆ ರಾಜನಾಥ್ ಅವರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್.
ಪಾಕಿಸ್ತಾನದ ಕಪಟ ಕದನ ವಿರಾಮ: 4 ರಾಜ್ಯಗಳಲ್ಲಿ ಡ್ರೋನ್ ಮೊರೆತ, ಗಡಿಯಲ್ಲಿ ಶೆಲ್ ದಾಳಿ
ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆ ಮುಖ್ಯಸ್ಥ ಮಾರ್ಷಲ್ ಎ.ಪಿ. ಸಿಂಗ್ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಜತೆ ಸಭೆ ನಡೆಸಿದ್ದಾರೆ. ಪಾಕಿಸ್ತಾನದಿಂದ ಅಪ್ರಚೋದಿತ ಆಕ್ರಮಣದ ರಾತ್ರಿಯ ಹೊರತಾಗಿಯೂ, ಈ ಚಿತ್ರದಲ್ಲಿ ರಾಜನಾಥ್ ಹಾಗೂ ಸೇನಾ ಪ್ರಮುಖರು ಹಸನ್ಮುಖಿಗಳಾಗಿದ್ದರು. ಇದು ಭಾರತದ ದೃಢನಿಶ್ಚಯ, ನಿಯಂತ್ರಣ ಮತ್ತು ಅಚಲ ನಿಲುವಿನ ಸಂಕೇತವಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ವಿಶ್ಲೇಷಿಸಲಾಗಿದೆ.


