ಗಣ್ಯ ವ್ಯಕ್ತಿಗಳಿಗೆ ಅವರ ಜೀವಭೀತಿಯ ಆಧಾರದ ಮೇಲೆ X, Y, Z, Z+ ಮತ್ತು SPG ಎಂಬ ವಿವಿಧ ಶ್ರೇಣಿಗಳ ಭದ್ರತೆಯನ್ನು ಒದಗಿಸಲಾಗುತ್ತದೆ. ಈ ಲೇಖನವು ಪ್ರತಿ ಭದ್ರತಾ ಶ್ರೇಣಿಯ ವಿವರ, ಅದರಲ್ಲಿರುವ ಸಿಬ್ಬಂದಿಯ ಸಂಖ್ಯೆ ಮತ್ತು ಅದರ ಜವಾಬ್ದಾರಿ ಹೊರುವ ಏಜೆನ್ಸಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.

ಬೆಂಗಳೂರು (ಜೂ.18): ಭಾರತದಲ್ಲಿ ಗಣ್ಯ ವ್ಯಕ್ತಿಗಳಿಗೆ (VIPs) ಅವರಿಗಿರುವ ಜೀವಭೀತಿಯ ಆಧಾರದ ಮೇಲೆ ವಿವಿಧ ಐದು ಶ್ರೇಣಿಗಳಲ್ಲಿ ಭದ್ರತೆಯನ್ನು ಒದಗಿಸಲಾಗುತ್ತದೆ. ಈ ಭದ್ರತಾ ಶ್ರೇಣಿಗೆ ಅನುಗುಣವಾಗಿ ನಿಯೋಜನೆಗೊಳ್ಳುವ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಹಾಗಾದರೆ ಎಕ್ಸ್ (X), ವೈ (Y), ಜೆಡ್ (Z), ಜೆಡ್ ಪ್ಲಸ್ (Z+) ಹಾಗೂ ಎಸ್‌ಪಿಜಿ (SPG) ಭದ್ರತೆ ಎಂದರೇನು? ಅದರ ಸಂಪೂರ್ಣ ವಿವರ ಇಲ್ಲಿದೆ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತದಲ್ಲಿ ವಿಐಪಿಗಳಿಗೆ ಪೊಲೀಸ್ ರಕ್ಷಣೆ ನೀಡುವಾಗ, ಅವರ ಜೀವಕ್ಕಿರುವ ಅಪಾಯದ ತೀವ್ರತೆಯನ್ನು ಆಧರಿಸಿ ಐದು ಶ್ರೇಣಿಗಳಲ್ಲಿ ಭದ್ರತೆಯನ್ನು ಒದಗಿಸಲಾಗುತ್ತದೆ. ಕೇಂದ್ರ ಗೃಹ ಸಚಿವಾಲಯವು ಈ ಭದ್ರತೆಯನ್ನು ಮಂಜೂರು ಮಾಡುತ್ತದೆ. ಈ ವಿಐಪಿ ಭದ್ರತೆಯಲ್ಲಿ ವಿವಿಧ ಶ್ರೇಣಿಗೆ ತಕ್ಕಂತೆ ಭದ್ರತಾ ಸಿಬ್ಬಂದಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ವಾಹನಗಳನ್ನು ಒದಗಿಸಲಾಗುತ್ತದೆ.

ಕೇಂದ್ರ ಗೃಹ ಸಚಿವಾಲಯವು ದೇಶದ ಗಣ್ಯರ ಭದ್ರತೆಯ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸುತ್ತಿರುತ್ತದೆ. ಯಾರಿಗೆ ಯಾವ ಭದ್ರತೆ ನೀಡಬೇಕು ಎಂಬ ಸಂಪೂರ್ಣ ನಿರ್ಧಾರ ಗೃಹ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ನಿಯಮಿತವಾಗಿ ನಡೆಸುವ ಈ ಪರಿಶೀಲನೆಯ ಆಧಾರದ ಮೇಲೆ ವಿಐಪಿಗಳ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ ಅಥವಾ ಕಡಿಮೆ ಮಾಡಲಾಗುತ್ತದೆ. ದೇಶದಲ್ಲಿ ಗಣ್ಯರ ರಕ್ಷಣೆಗಾಗಿ ಎಸ್‌ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್), Z+, Z, Y+, Y ಮತ್ತು X ಶ್ರೇಣಿಯ ಭದ್ರತಾ ವ್ಯವಸ್ಥೆಗಳು ಜಾರಿಯಲ್ಲಿವೆ.

ಭಾರತದಲ್ಲಿ ರಾಜಕೀಯ ಮುಖಂಡರು, ಹಾಲಿ ಮತ್ತು ಮಾಜಿ ಪ್ರಧಾನಿಗಳು, ರಾಷ್ಟ್ರಪತಿಗಳು, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು, ಹೈ-ಪ್ರೊಫೈಲ್ ಗಣ್ಯರು, ಪ್ರಮುಖ ಉದ್ಯಮಿಗಳು ಹಾಗೂ ದಿಗ್ಗಜ ಕ್ರೀಡಾಪಟುಗಳಿಗೆ ಇಂತಹ ವಿಐಪಿ ಭದ್ರತೆಯನ್ನು ನೀಡಲಾಗುತ್ತದೆ. ಸ್ಥಳೀಯ ರಾಜ್ಯ ಪೊಲೀಸ್ ಮತ್ತು ಎನ್‌ಸ್‌ಜಿ (NSG), ಐಟಿಬಿಪಿ (ITBP) ಹಾಗೂ ಸಿಆರ್‌ಪಿಎಫ್ (CRPF) ಯೋಧರು ಈ ರಕ್ಷಣೆಯ ಜವಾಬ್ದಾರಿಯನ್ನು ಹೊರುತ್ತಾರೆ. ಅತ್ಯಂತ ಪ್ರಮುಖ ವ್ಯಕ್ತಿಗಳ (VVIP) ರಕ್ಷಣೆಗಾಗಿ ಎನ್‌ಎಸ್‌ಜಿ ಕಮಾಂಡೋಗಳನ್ನು ಸಹ ನಿಯೋಜಿಸಲಾಗುತ್ತದೆ.

ದೇಶದಲ್ಲಿರುವ ವಿಐಪಿ ಭದ್ರತಾ ಶ್ರೇಣಿಗಳ ವಿವರ..

ಎಸ್‌ಪಿಜಿ (SPG - ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್‌)

ಇದು ದೇಶದ ಅತ್ಯುನ್ನತ ಮತ್ತು ಅತ್ಯಂತ ಕಟ್ಟುನಿಟ್ಟಿನ ಭದ್ರತಾ ಸಂಸ್ಥೆ. ಈ ಭದ್ರತೆಯನ್ನು ಕೇವಲ ದೇಶದ ಅತ್ಯಂತ ಪ್ರಮುಖ ವಿವಿಐಪಿಗಳಿಗೆ ಮಾತ್ರ ನೀಡಲಾಗುತ್ತದೆ. ಎಸ್‌ಪಿಜಿ ಭದ್ರತೆಯು ನಾಲ್ಕು ಹಂತದ (Four-tier) ರಕ್ಷಣಾ ಕವಚವನ್ನು ಹೊಂದಿರುತ್ತದೆ. ದೇಶದ ಪ್ರಧಾನ ಮಂತ್ರಿಯ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಎಸ್‌ಪಿಜಿ ಮೇಲಿರುತ್ತದೆ. ಇದಲ್ಲದೆ, ಮಾಜಿ ಪ್ರಧಾನ ಮಂತ್ರಿಗಳು ಮತ್ತು ಅವರ ಕುಟುಂಬಸ್ಥರಿಗೆ ಕೂಡ ಒಂದು ನಿರ್ದಿಷ್ಟ ಅವಧಿಯವರೆಗೆ ಎಸ್‌ಪಿಜಿ ಭದ್ರತೆಯನ್ನು ಒದಗಿಸಲಾಗುತ್ತದೆ. ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ, 1988 ರಲ್ಲಿ ಎಸ್‌ಪಿಜಿಯನ್ನು ಸ್ಥಾಪಿಸಲಾಯಿತು. ಎಸ್‌ಪಿಜಿಯ ವಾರ್ಷಿಕ ಬಜೆಟ್ 300 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿರುತ್ತದೆ.

Z+ ಭದ್ರತೆ

ಎಸ್‌ಪಿಜಿ ನಂತರ 'Z+' ದೇಶದ ಎರಡನೇ ಅತ್ಯಂತ ಪ್ರಮುಖ ವಿಐಪಿ ಭದ್ರತೆಯಾಗಿದೆ. ಜೆಡ್ ಪ್ಲಸ್‌ನಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ ಇರುತ್ತದೆ. ಈ ಪಡೆಯಲ್ಲಿ ಒಟ್ಟು 36 ಭದ್ರತಾ ಸಿಬ್ಬಂದಿ ಇರುತ್ತಾರೆ. ಅದರಲ್ಲಿ 10 ಜನ ಎನ್‌ಎಸ್‌ಜಿಯ (NSG) ವಿಶೇಷ ಕಮಾಂಡೋಗಳಾಗಿದ್ದು, ಅವರು ಮೊದಲ ಹಂತದ ರಕ್ಷಣೆಯನ್ನು ನೋಡಿಕೊಳ್ಳುತ್ತಾರೆ. ಎರಡನೇ ಹಂತದ ಭದ್ರತೆಯನ್ನು ಎಸ್‌ಪಿಜಿಯ ಇತರ ಯೋಧರು ನಿರ್ವಹಿಸಿದರೆ, ಮೂರನೇ ಹಂತದ ರಕ್ಷಣೆಯನ್ನು ಐಟಿಬಿಪಿ, ಸಿಆರ್‌ಪಿಎಫ್ ಮತ್ತು ಸಿಐಎಸ್‌ಎಫ್‌ನಂತಹ ಅರೆಸೇನಾ ಪಡೆಗಳ ಯೋಧರು ನಿಭಾಯಿಸುತ್ತಾರೆ. ಸಾಮಾನ್ಯವಾಗಿ ಕೇಂದ್ರ ಸಚಿವರು ಹಾಗೂ ತೀವ್ರ ಭಯೋತ್ಪಾದಕ ದಾಳಿಯ ಭೀತಿ ಎದುರಿಸುತ್ತಿರುವ ಗಣ್ಯರಿಗೆ ಈ ಭದ್ರತೆ ನೀಡಲಾಗುತ್ತದೆ.

Z ಭದ್ರತೆ

ಇದು ದೇಶದ ಮೂರನೇ ಅತ್ಯುನ್ನತ ವಿಐಪಿ ಭದ್ರತೆಯಾಗಿದೆ. Z ಶ್ರೇಣಿಯ ಭದ್ರತೆಯಲ್ಲಿ ಒಟ್ಟು 22 ಯೋಧರು ನಿಯೋಜನೆಗೊಂಡಿರುತ್ತಾರೆ. ಈ ಶ್ರೇಣಿಯಲ್ಲಿ ಐಟಿಬಿಪಿ ಮತ್ತು ಸಿಆರ್‌ಪಿಎಫ್ ಜವಾನರು ಹಾಗೂ ಅಧಿಕಾರಿಗಳು ರಕ್ಷಣೆಗೆ ಇರುತ್ತಾರೆ. ಈ ಭದ್ರತೆಯನ್ನು ಹೊಂದಿರುವ ಗಣ್ಯರಿಗೆ ಬೆಂಗಾವಲು (Escort) ಮತ್ತು ಪೈಲಟ್ ವಾಹನವನ್ನೂ ನೀಡಲಾಗುತ್ತದೆ.

Y ಭದ್ರತೆ

ಇದು ದೇಶದ ನಾಲ್ಕನೇ ಸ್ಥಾನದಲ್ಲಿರುವ ವಿಐಪಿ ಭದ್ರತೆಯಾಗಿದೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ವಿಐಪಿಗಳಿಗೆ ಕೇಂದ್ರ ಗೃಹ ಸಚಿವಾಲಯವು ಈ 'ವೈ' ಶ್ರೇಣಿಯ ಭದ್ರತೆಯನ್ನೇ ಒದಗಿಸುತ್ತದೆ. ಇದರಲ್ಲಿ ಒಟ್ಟು 11 ಯೋಧರು ಇರುತ್ತಾರೆ. ಅವರಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು, ಇಬ್ಬರು ಪರ್ಸನಲ್ ಸೆಕ್ಯೂರಿಟಿ ಆಫೀಸರ್ಸ್ (PSO) ಮತ್ತು ಉಳಿದವರು ಅರೆಸೇನಾ ಪಡೆಯ ಜವಾನರಾಗಿರುತ್ತಾರೆ.

Y+ ಭದ್ರತೆ

ವೈ ಪ್ಲಸ್ ಶ್ರೇಣಿಯ ಭದ್ರತೆಯಲ್ಲಿ ಒಂದು ಬೆಂಗಾವಲು ವಾಹನ (Escort Vehicle) ಇರುತ್ತದೆ. ವೈಯಕ್ತಿಕ ಭದ್ರತಾ ಸಿಬ್ಬಂದಿಯ ಜೊತೆಗೆ ಗಣ್ಯರ ನಿವಾಸದಲ್ಲಿ ಒಬ್ಬ ಗಾರ್ಡ್ ಕಮಾಂಡರ್ ಮತ್ತು ನಾಲ್ಕು ಗಾರ್ಡ್‌ಗಳನ್ನು ನಿಯೋಜಿಸಲಾಗುತ್ತದೆ. ಈ ಗಾರ್ಡ್‌ಗಳ ಪೈಕಿ ಒಬ್ಬರು ಸಬ್-ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿಯಾಗಿದ್ದರೆ, ಉಳಿದ ಮೂವರು ಸಿಬ್ಬಂದಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ.

X ಭದ್ರತೆ

ಇದು ವಿಐಪಿಗಳಿಗೆ ನೀಡಲಾಗುವ ಆರಂಭಿಕ ಹಂತದ ಭದ್ರತೆಯಾಗಿದೆ. ಎಕ್ಸ್ ಶ್ರೇಣಿಯ ಭದ್ರತೆಯಲ್ಲಿ ಕೇವಲ ಇಬ್ಬರು ಯೋಧರು ಮಾತ್ರ ಇರುತ್ತಾರೆ. ಇವರ ಪೈಕಿ ಒಬ್ಬರನ್ನು ಪರ್ಸನಲ್ ಸೆಕ್ಯುರಿಟಿ ಆಫೀಸರ್ (PSO) ಆಗಿ ಒದಗಿಸಲಾಗುತ್ತದೆ.