ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಭಾರತೀಯ ರಾಜತಾಂತ್ರಿಕರು ಅಫ್ಘಾನಿಸ್ತಾನದ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ.
ನವದೆಹಲಿ: ಶತ್ರುವಿನ ಶತ್ರು ಮಿತ್ರ ಎಂಬ ಮಾತಿದೆ. ಅದೇ ರೀತಿ ಈಗ ಭಾರತ ತನ್ನ ರಾಜತಾಂತ್ರಿಕ ತಂತ್ರಗಳ ಮೂಲಕವೇ ಪಾಕಿಸ್ತಾನವನ್ನು ಕಟ್ಟಿ ಹಾಕುವ ಎಲ್ಲಾ ಪ್ರಯತ್ನ ಮಾಡಿದೆ. ಈಗಾಗಲೇ ಪಾಕಿಸ್ತಾನದ ಮಿತ್ರನಾಗಿದ್ದ ಚೀನಾ ಇಂತಹ ಯುದ್ಧದ ಆತಂಕವಿರುವ ಸಂದರ್ಭದಲ್ಲೇ ನಿಧಾನವಾಗಿ ಪಾಕಿಸ್ತಾನವನ್ನು ನಡುನೀರಿನಲ್ಲಿ ಕೈಬಿಟ್ಟ ಬಗ್ಗೆ ವರದಿಯಾಗಿದೆ. ಹೀಗಿರುವಾಗ ಈಗ ಪಾಕಿಸ್ತಾನದ ಬಗ್ಗಲಿನಲ್ಲೇ ಇರುವ ಇನ್ನೊಂದು ರಾಷ್ಟ್ರ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಅವರನ್ನು ಭಾರತದ ರಾಜತಾಂತ್ರಿಕ ಅಧಿಕಾರಿಗಳು ಭೇಟಿ ಮಾಡಿದ್ದು, ಹಲವು ವಿಚಾರಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನ ನಡುವೆ ಸಂಬಂಧ ಉದ್ವಿಘ್ನಗೊಂಡ ಬಗ್ಗೆ ಹಾಗೂ ರಾಜಕೀಯ, ಪ್ರಾದೇಶಿಕ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ವಿದೇಶಾಂಗ ಸಚಿವಾಲಯದ ಪಾಕಿಸ್ತಾನ-ಅಫ್ಘಾನಿಸ್ತಾನ-ಇರಾನ್ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿ ಎಂ. ಆನಂದ್ ಪ್ರಕಾಶ್ ಅವರು ಅಫ್ಘಾನ್ ರಾಜಧಾನಿಯಲ್ಲಿ ಭಾನುವಾರ ಮುತ್ತಾಖಿ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ತಾಲಿಬಾನ್ ವಿದೇಶಾಂಗ ಸಚಿವಾಲಯದ ಉಪ ವಕ್ತಾರ ಹಫೀಜ್ ಜಿಯಾ ಅಹ್ಮದ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದು, ಇತ್ತೀಚಿನ ಪ್ರಾದೇಶಿಕ ರಾಜಕೀಯ ಬೆಳವಣಿಗೆಯ ಬಗ್ಗೆ ಇಬ್ಬರೂ ಚರ್ಚೆ ನಡೆಸಿದರು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗುಜರಾತ್‌ನಲ್ಲಿ 1000 ಕ್ಕೂ ಅಧಿಕ ಬಾಂಗ್ಲಾದೇಶಿ ಅಕ್ರಮ ವಲಸಿಗರ ಬಂಧನ
ಈ ಭೇಟಿಯ ವೇಳೆಯೇ ದ್ವಿಪಕ್ಷೀಯ ರಾಜಕೀಯ ಸಂಬಂಧಗಳು, ವ್ಯಾಪಾರ ಮತ್ತು ಸಾರಿಗೆಯ ಬಗ್ಗೆಯೂ ಚರ್ಚೆ ನಡೆದಿದೆ. ಮುತಾಕಿ ಅವರು ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳ ಅಭಿವೃದ್ಧಿಗೆ ಒತ್ತು ನೀಡಿದರು ಮತ್ತು ಅಫ್ಘಾನಿಸ್ತಾನದಲ್ಲಿನ ಉತ್ತಮ ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳಲು ಭಾರತೀಯ ಹೂಡಿಕೆದಾರರನ್ನು ಆಹ್ವಾನಿಸಿದರು ಎಂದು ಅಹ್ಮದ್ ಹೇಳಿದ್ದಾರೆ. ಅಫ್ಘಾನಿಸ್ತಾನ ಮತ್ತು ಭಾರತದ ನಡುವೆ ಜನರ ಸಂಚಾರವನ್ನು ಸುಗಮಗೊಳಿಸಬೇಕು ಮತ್ತು ಅಫ್ಘಾನ್ ರೋಗಿಗಳು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ವೀಸಾ ನೀಡುವಿಕೆಯನ್ನು ಸಾಮಾನ್ಯ ಸ್ಥಿತಿಗೆ ತರಬೇಕು ಎಂದು ಮುತ್ತಕಿ ಈ ಭೇಟಿ ವೇಳೆ ಹೇಳಿದರು.
ಅಫ್ಘಾನಿಸ್ತಾನದೊಂದಿಗಿನ ಸಂಬಂಧಗಳು ಭಾರತಕ್ಕೆ ಮುಖ್ಯವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ವಿಸ್ತರಿಸುವ ಆಶಯವನ್ನು ಅವರು ಹೊಂದಿದ್ದಾರೆ ಎಂದು ಪ್ರಕಾಶ್ ಹೇಳಿರುವುದಾಗಿ ಅಹ್ಮದ್ ಉಲ್ಲೇಖಿಸಿದ್ದಾರೆ. ಭಾರತವು ಅಫ್ಘಾನಿಸ್ತಾನದೊಂದಿಗಿನ ಸಹಕಾರವನ್ನು ಮುಂದುವರಿಸುತ್ತದೆ ಮತ್ತು ಕೆಲವು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತದೆ ಎಂದು ಪ್ರಕಾಶ್ ಹೇಳಿರುವುದಾಗಿಯೂ ಉಲ್ಲೇಖಿಸಲಾಗಿದೆ. ಹೀಗಾಗಿ ಸ್ವಲ್ಪ ಸಮಯದಿಂದ ಸ್ಥಗಿತಗೊಂಡಿದ್ದ ಕೆಲವು ಯೋಜನೆಗಳ ಕೆಲಸವೂ ಪುನರಾರಂಭಗೊಂಡಿದೆ. ಸಂಬಂಧಗಳ ಅಭಿವೃದ್ಧಿ, ಎರಡು ಕಡೆಗಳ ನಿಯೋಗಗಳ ವಿನಿಮಯ, ವೀಸಾಗಳ ಸುಗಮಗೊಳಿಸುವಿಕೆ ಮತ್ತು ಪರಸ್ಪರ ಸಹಕಾರಕ್ಕೆ ಎರಡೂ ಕಡೆಯವರು ಒತ್ತು ನೀಡಿದ್ದಾರೆ ಎಂದು ಅಹ್ಮದ್ ಹೇಳಿದರು.
ಇದನ್ನೂ ಓದಿ: 22 ಲಕ್ಷದ ಉಂಗುರ ಹುಡುಕಿಕೊಟ್ಟು 5 ಲಕ್ಷದ ಬಹುಮಾನ ತಿರಸ್ಕರಿಸಿದ ಆದಿವಾಸಿಗಳು
ಆದರೆ ಈ ಸಭೆಯ ಬಗ್ಗೆ ಭಾರತದ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು, ಇದನ್ನು ಜಗತ್ತಿನ ವಿವಿಧ ದೇಶಗಳು ಖಂಡಿಸಿದಂತೆ ತಾಲಿಬಾನ್ ವಿದೇಶಾಂಗ ಸಚಿವಾಲಯವೂ ಖಂಡಿಸಿತ್ತು ಮತ್ತು ಇಂತಹ ಘಟನೆಗಳು ಪ್ರಾದೇಶಿಕ ಭದ್ರತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಸಚಿವಾಲಯ ಏಪ್ರಿಲ್ 23 ರಂದು ಹೇಳಿಕೆ ಪ್ರಕಟಿಸಿತ್ತು.
ದಾಳಿಯ ನಂತರ ಪಾಕಿಸ್ತಾನ ವಿರುದ್ಧ ದೆಹಲಿ ತೆಗೆದುಕೊಂಡ ಕಠಿಣ ಕ್ರಮಗಳಲ್ಲಿ ಒಂದಾದ ಅಟ್ಟಾರಿ ವಾಘಾ ರಸ್ತೆ ಮಾರ್ಗವನ್ನು ಮುಚ್ಚಿದ್ದರಿಂದ ಪಾಕಿಸ್ತಾನದ ಮೂಲಕ ನಡೆಯುತ್ತಿದ್ದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ವ್ಯಾಪಾರದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಇದು ಭಾರತದೊಂದಿಗೆ ವ್ಯಾಪಾರಕ್ಕಾಗಿ ಅಫ್ಘಾನಿಸ್ತಾನದ ಅತ್ಯಂತ ಕಡಿಮೆ ಮತ್ತು ಅಗ್ಗದ ಸಾರಿಗೆ ಮಾರ್ಗಗಳಲ್ಲಿ ಒಂದಾಗಿದೆ. ಈ ಮಾರ್ಗದ ಮೂಲಕ ವಾರ್ಷಿಕವಾಗಿ ನಡೆಯುತ್ತಿದ್ದ ವ್ಯಾಪಾರದ ಮೌಲ್ಯ 500 ಮಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ್ದು ಎಂದು ಅಫ್ಘಾನಿಸ್ತಾನ ವಾಣಿಜ್ಯ ಮತ್ತು ಹೂಡಿಕೆ ಮಂಡಳಿಯು ಹೇಳಿದೆ.
ಟೋಲೋ ನ್ಯೂಸ್ ಪ್ರಕಾರ, ಈ ಮಾರ್ಗವನ್ನು ನಿರಂತರವಾಗಿ ಮುಚ್ಚುವುದರಿಂದ ಆರ್ಥಿಕವಾಗಿ ಭಾರಿ ಹಾನಿಯಾಗಲಿದೆ. ಸಂಭವನೀಯ ಹಾನಿಯ ಬಗ್ಗೆ ಅಫ್ಘಾನ್ ವ್ಯಾಪಾರಿಗಳು ಮತ್ತು ಆರ್ಥಿಕ ಸಂಸ್ಥೆಗಳು ಎಚ್ಚರಿಸಿವೆ. ಅಲ್ಲಿನ ವಾಣಿಜ್ಯ ಮತ್ತು ಹೂಡಿಕೆ ಮಂಡಳಿಯ ಸದಸ್ಯ ಖಾನ್ ಜಾನ್ ಅಲೋಕೋಜಯ್ ಪ್ರಕಾರ ಪ್ರಸ್ತುತ, ಬಂದರುಗಳು ಮುಚ್ಚಲ್ಪಟ್ಟಿವೆ ಮತ್ತು ಸಮಸ್ಯೆಗಳು ಗಣನೀಯವಾಗಿವೆ. ಇದು ಈಗ ಒಣಗಿದ ಹಣ್ಣುಗಳ ಕಾಲವಾಗಿದೆ ಮತ್ತು ಎರಡು ತಿಂಗಳಲ್ಲಿ, ತಾಜಾ ಹಣ್ಣುಗಳ ಕಾಲ ಬರುತ್ತದೆ. ಆ ಹೊತ್ತಿಗೆ ಸಮಸ್ಯೆ ಬಗೆಹರಿಯುತ್ತದೆ ಎಂದು ನಾವು ಭಾವಿಸುತ್ತೇವೆ. ದುರದೃಷ್ಟವಶಾತ್, ಈಗ ಈ ಮಾರ್ಗದ ಮೂಲಕ ಭಾರತದೊಂದಿಗೆ ನಮ್ಮ ವ್ಯಾಪಾರವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಹಾಗೆಯೇ ಭಾರತದ ರಾಜತಾಂತ್ರಿಕ ಅಧಿಕಾರಿ ಪ್ರಕಾಶ್ ಈ ಹಿಂದಿನ ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜಾಯಿ ಅವರನ್ನು ಕೂಡ ಭೇಟಿ ಮಾಡಿದ್ದು, ಪ್ರಸ್ತುತ ಪ್ರಾದೇಶಿಕ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಲ್ಲದೇ ಭಾರತ ಹಾಗೂ ಅಫ್ಘಾನಿಸ್ತಾನದ ನಡುವಿನ ಸಂಬಂಧ ಬಲಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
