ಸಿಂಧೂ ನದಿ ಒಪ್ಪಂದವನ್ನು ಅಮಾನತಿನಲ್ಲಿಟ್ಟಿರುವ ಭಾರತ, ರಣಬೀರ್ ಕಾಲುವೆಯನ್ನು ವಿಸ್ತರಿಸುವ ಚಿಂತನೆ ನಡೆಸುತ್ತಿದೆ. ಚಿನಾಬ್ ನದಿಯಿಂದ ಜಲವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಕಾಲುವೆಯ ಉದ್ದವನ್ನು ದ್ವಿಗುಣಗೊಳಿಸುವುದು ಯೋಜನೆಯ ಭಾಗವಾಗಿದೆ.
ನವದೆಹಲಿ: ಪಾಕಿಸ್ತಾನಕ್ಕೆ ಪಾಠ ಕಲಿಸುವ ಸಲುವಾಗಿ ಅದರೊಂದಿಗೆ 1960ರಲ್ಲಿ ಏರ್ಪಟ್ಟಿದ್ದ ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತಿನಲ್ಲಿ ಇಟ್ಟಿರುವ ಕೇಂದ್ರ ಸರ್ಕಾರ, ಇದರಿಂದ ತನಗೆ ಲಭ್ಯವಾಗುವ ಹೆಚ್ಚಿನ ನೀರನ್ನು ಚಿನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ರಣಬೀರ್ ಕಾಲುವೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಒಪ್ಪಂದದ ಪ್ರಕಾರ, ಭಾರತವು ಸಿಂಧೂ ನದಿಯ ಉಪನದಿಗಳ ನೀರನ್ನು ಸೀಮಿತವಾಗಿ ಬಳಸುತ್ತಿದ್ದು, ಉಳಿದದ್ದನ್ನು ಪಾಕಿಸ್ತಾನಕ್ಕೆ ಹರಿಬಿಡಬೇಕಾಗಿತ್ತು. ಜತೆಗೆ, ಆ ಬಗೆಗಿನ ಮಾಹಿತಿಯನ್ನು ಕಾಲಕಾಲಕ್ಕೆ ಪಾಕ್ ಜತೆ ಹಂಚಿಕೊಳ್ಳಬೇಕಿತ್ತು. ಆದರೆ ಒಪ್ಪಂದ ತಡೆಹಿಡಿಯಲಾಗಿರುವ ಕಾರಣ, ಇದ್ಯಾವುದರ ಅವಶ್ಯಕತೆಯೂ ಇಲ್ಲ.
ಈ ಮೊದಲು ಕೇವಲ ನೀರಾವರಿಗೆ ಬಳಕೆಯಾಗುತ್ತಿದ್ದ ಚಿನಾಬ್ ನೀರನ್ನು ಈಗ ಅನ್ಯ ಅವಶ್ಯಕತೆಗಳಿಗೆ ಬಳಸಿಕೊಳ್ಳಬಹುದು. ಹೀಗಿರುವಾಗ, ‘ಆ ನದಿಯಿಂದ ಜಲವಿದ್ಯುತ್ ಉತ್ಪಾದನೆಯನ್ನು 3000 ಮೆ.ವ್ಯಾ.ಗೆ ಹೆಚ್ಚಿಸುವ ಯೋಜನೆ ಸರ್ಕಾರ ಹಾಕಿಕೊಂಡಿದೆ. ಜತೆಗೆ, ಪ್ರಸ್ತುತ 60 ಕಿ.ಮೀ. ಉದ್ದವಿರುವ ರಣಬೀರ್ ಕಾಲುವೆಯನ್ನು 120 ಕಿ.ಮೀ.ವರೆಗೆ ವಿಸ್ತರಿಸುವ ಯೋಜನೆಯೂ ಇದ್ದು, ಕೆಲಸವನ್ನು ಬೇಗ ಮುಗಿಸುವಂತೆ ಸೂಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತ್ತ ಕಥುವಾ, ರಾವಿ, ಪರಾಗ್ವಾಲ್ ಕಾಲುವೆಗಳಲ್ಲಿ ಹೂಳು ತೆಗೆಯುವ ಕೆಲಸವೂ ಶುರುವಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದ ಅವುಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಲಿದ್ದು, ಕೃಷಿ, ವಿದ್ಯುತ್ ಉತ್ಪಾದನೆಗೆ ಅಧಿಕ ನೀರು ಸಿಗಲಿದೆ.
ಭಾರತದ ಜಲಗಡಿಯಲ್ಲಿ ಬಾಂಗ್ಲಾ ತೇಲುವ ಹೊರಠಾಣೆ ನಿರ್ಮಾಣ
ಢಾಕಾ: ಜಲಮಾರ್ಗಗಳಲ್ಲಿ ಕಣ್ಗಾವಲನ್ನು ಬಲಪಡಿಸುವ ಉದ್ದೇಶದಿಂದ ಬಾಂಗ್ಲಾದೇಶವು ಭಾರತದ ನೈಋತ್ಯ ಗಡಿಯಲ್ಲಿರುವ ಸುಂದರ್‌ಬನ್ ಪ್ರದೇಶದಲ್ಲಿ ತೇಲುವ ಗಡಿ ಹೊರಠಾಣೆ (ಬಿಒಪಿ)ಯನ್ನು ಸ್ಥಾಪಿಸಿದೆ.
ಪ್ಯಾರಾಮಿಲಿಟರಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ನಿರ್ಮಿಸಿದ 3ನೇ ಬಿಒಪಿ ಇದಾಗಿದೆ. ಢಾಕಾದಿಂದ ನೈಋತ್ಯಕ್ಕೆ ಸುಮಾರು 300 ಕಿ.ಮೀ. ದೂರದಲ್ಲಿ ರಾಯ್‌ಮಂಗೋಲ್ ನದಿ ಮತ್ತು ಬೋಯೆಸಿಂಗ್ ಕಾಲುವೆಯ ಸಂಗಮದಲ್ಲಿ ನಿರ್ಮಾಣವಾಗಿದ್ದು, ಬಾಂಗ್ಲಾ ಮಧ್ಯಂತರ ಸರ್ಕಾರದ ನಿವೃತ್ತ ಗೃಹ ವ್ಯವಹಾರಗಳ ಸಲಹೆಗಾರ ಲೆ. ಜ. ಜಹಾಂಗೀರ್ ಆಲಂ ಚೌಧರಿ ಉದ್ಘಾಟಿಸಿದ್ದಾರೆ.‘ವಿಶಾಲವಾದ ಜೌಗು ಪ್ರದೇಶ ಮತ್ತು ನದಿ ತೀರದ ಗಡಿ ಪ್ರದೇಶಗಳಲ್ಲಿ ಭದ್ರತೆ ಮತ್ತು ಗಸ್ತು ನಿರ್ವಹಿಸುವುದು ಸವಾಲಿನ ಕೆಲಸ. ಈ ತೇಲುವ ಬಿಒಪಿಯು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಅರಣ್ಯ ಸಂಪನ್ಮೂಲ ಲೂಟಿ ಮತ್ತು ಇತರ ಗಡಿ ಅಪರಾಧಗಳನ್ನು ತಡೆಯಲು ಬಿಜಿಬಿಗೆ ತಕ್ಷಣದ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಗಳನ್ನು ನೀಡುತ್ತದೆ’ ಎಂದು ಚೌಧರಿ ಹೇಳಿದ್ದಾರೆ.
ಪಾಕ್ ಮನುಕುಲಕ್ಕೆ ಅಪಾಯಕಾರಿ: ಸಂಸದ ಒವೈಸಿ
‘ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಾಯೋಜಿಸುವ ದೀರ್ಘ ಇತಿಹಾಸ ಹೊಂದಿದ್ದು, ಮನುಕುಲಕ್ಕೆ ಅಪಾಯಕಾರಿಯಾಗಿದೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ಈ ಕುರಿತು ತಿಳಿಸಬೇಕಾಗಿದೆ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಪಾಕ್ ಪ್ರಾಯೋಜಿತ ಉಗ್ರವಾದವನ್ನು ಜಾಗತಿಕ ವೇದಿಕೆಯಲ್ಲಿ ಎತ್ತಿ ತೋರಿಸಲು ಸರ್ಕಾರವು ಹಲವಾರು ದೇಶಗಳಿಗೆ ಕಳುಹಿಸುತ್ತಿರುವ ಸರ್ವಪಕ್ಷ ನಿಯೋಗದಲ್ಲಿ ಒಬ್ಬರಾಗಿರುವ ಓವೈಸಿ, ‘ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ದೊಡ್ಡ ಬಲಿಪಶು ಭಾರತ. ಜಿಯಾ-ಉಲ್-ಹಕ್ ಕಾಲದಿಂದಲೂ ಜನರ ಹತ್ಯೆಯನ್ನು ನಾವೆಲ್ಲರೂ ನೋಡಿದ್ದೇವೆ. ಪಾಕಿಸ್ತಾನ ಅಮಾಯಕ ನಾಗರಿಕರನ್ನು ಕೊಲ್ಲುತ್ತಿರುವ ಬಗ್ಗೆ ಜಗತ್ತಿಗೆ ತಿಳಿಸಬೇಕಾಗಿದೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ನನ್ನ ಸಂದೇಶದ ತಿರುಳು ಇದೇ ಆಗಿರುತ್ತದೆ’ ಎಂದಿದ್ದಾರೆ.
ಪಾಕ್ ವಿರುದ್ಧ ಒವೈಸಿ ವಾಗ್ದಾಳಿ
ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಮತ್ತೆ ನೆರೆಯ ರಾಷ್ಟ್ರದ ವಿರುದ್ಧ ಕಿಡಿ ಕಾರಿದ್ದು, ‘ಪಾಕಿಸ್ತಾನದಲ್ಲಿ ಅಸಂಬದ್ಧವಾಗಿ ಮಾತನಾಡುವವರಿಗೆ ಇಸ್ಲಾಂ ಗೊತ್ತಿಲ್ಲ. ಪಾಕ್ ಒಂದು ವಿಫಲ ದೇಶ’ ಎಂದಿದ್ದಾರೆ. ಪಾಕಿಸ್ತಾನದಲ್ಲಿ ಅಸಂಬದ್ಧವಾಗಿ ಮಾತನಾಡುವವರಿಗೆ ಇಸ್ಲಾಂ ಗೊತ್ತಿಲ್ಲ. ನೀವು ಜನರನ್ನು ಮಹಾಜಿರ್, ಪಠಾಣ್‌ಗಳು ಎಂದು ಕರೆಯುವ ದೇಶದಲ್ಲಿದ್ದೀರಿ, ನಿಮ್ಮ ದೇಶವು ತುಂಬಾ ಬಡವಾಗಿದೆ. ಜನರು ಚಿಂತಿತರಾಗಿದ್ದಾರೆ. ನಿಮಗೆ ಅಪ್ಘಾನಿಸ್ತಾನದೊಂದಿಗೆ ಭಿನ್ನಾಭಿಪ್ರಾಯಗಳಿವೆ. ಇರಾನ್‌ನೊಂದಿಗೆ ಗಡಿ ವಿವಾದವಿದೆ. ಹೀಗಾಗಿ ಪಾಕಿಸ್ತಾನ ವಿಫಲ ರಾಷ್ಟ್ರವಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ .


