ಮತ್ತೆ ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಹೇಳಿಕೆ ನೀಡಿದ ಮೆಹಬೂಬಾ ಮುಫ್ತಿ
Indus Waters Treaty: ಪಾಕಿಸ್ತಾನದೊಂದಿಗಿನ ಸಿಂಧು ಜಲ ಒಪ್ಪಂದ ತಡೆಹಿಡಿದ ನಂತರ, ಭಾರತವು ನೀರನ್ನು ಬಳಸಿಕೊಳ್ಳುವ ಬಗ್ಗೆ ಒಮರ್ ಅಬ್ದುಲ್ಲಾ ಅವರ ಪ್ರಸ್ತಾವನೆಯನ್ನು ಮೆಹಬೂಬಾ ಮುಫ್ತಿ ವಿರೋಧಿಸಿದ್ದಾರೆ. ಇದು ಪಾಕಿಸ್ತಾನ ಪರ ಹೇಳಿಕೆ ಎಂದು ಒಮರ್ ಟೀಕಿಸಿದ್ದಾರೆ. ಮುಫ್ತಿಯವರು ಮಾತುಕತೆಗೆ ಒತ್ತು ನೀಡಿದ್ದಾರೆ.

ನವದೆಹಲಿ: ಪಾಕಿಸ್ತಾನದೊಂದಿಗಿನ ಸಿಂಧು ಜಲ ಒಪ್ಪಂದ ತಡೆಹಿಡಿದ ಬೆನ್ನಲ್ಲೇ, ಆ ನೀರನ್ನು ಭಾರತ ಬಳಸಿಕೊಳ್ಳುವ ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರ ಪ್ರಸ್ತಾವನೆಯನ್ನು ವಿರೋಧಿಸಿರುವ ಪಿಡಿಪಿ ಮುಖ್ಯಸ್ಥೆ ಮಾಜಿ ಸಿಎಂ ಮೆಹಬೂಬಾ ಮುಫ್ರಿ ಪಾಕಿಸ್ತಾನ ಪರ ವಾಗಿ ಮಾತನಾಡಿದ್ದಾರೆ. ಇದು, ಒಮರ್-ಮುಫ್ರಿ ನಡುವೆ ಟ್ವಿಟ್ ಸಮರಕ್ಕೆ ನಾಂದಿ ಹಾಡಿದೆ.
'ಪಾಕಿಸ್ತಾನದೊಂದಿಗೆ ಸಿಂಧು ನೀರನ್ನು ಹಂಚಿಕೊಳ್ಳುವ ಒಪ್ಪಂದ ಸ್ಥಗಿತವಾಗಿರುವ ಕಾರಣ, 1987 ಶುರುವಾಗಿ 2007ರಲ್ಲಿ ಪಾಕ್ ನಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ತುಬುಲ್ ಯೋಜನೆಗೆ ಮರುಜೀವ ತುಂಬಬೇಕು' ಎಂದು ಒಮರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಯೋಜನೆಯಡಿ, ಜಮ್ಮುವಿನ ಬಂಡೀಪೊರಾ ಜಿಲ್ಲೆಯ ವುಲಾರ್ ಕೆರೆಗೆ ಝೇಲಂ ನದಿಯ ನೀರು ಹರಿಬಿಟ್ಟರೆ, ಅದರಿಂದ ಸಂಚಾರ ಹಾಗೂ ವಿದ್ಯುತ್ ಉತ್ಪಾದನೆಗೆ ಸಹಾಯವಾಗುತ್ತದೆ ಎಂಬುದು ಅವರ ಇಂಗಿತವಾಗಿತ್ತು.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮುಪ್ತಿ, 'ಒಮರ್ ಅವರ ಪ್ರಸ್ತಾವನೆ ದುರದೃಷ್ಟಕರ. ಭಾರತ-ಪಾಕ್ ಯುದ್ದದಿಂದ ಈಗಷ್ಟೇ ಹಿಂದೆ ಸರಿದಿವೆ. ಹೀಗಿರುವಾಗ ಇಂತಹ ಹೇಳಿಕೆ ಕೊಡುವುದು ಬೇಜವಾಬ್ದಾರಿಯುತ, ಅಪಾಯಕಾರಿನಡೆ. ನೀರನ್ನು ಶಸ್ತ್ರದಂತೆ ಬಳಸುವುದು ಅಮಾನವೀಯ 2 ದೇಶಗಳ ನಡುವಿನ ವಿಷಯವಾಗಿ ಉಳಿಯಬೇಕಾದದ್ದನ್ನು ಅಂತಾ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಅಪಾಯವೂ ಇದೆ' ಎಂದು ಪಾಕ್‌ಗೆ ಅನುಕೂಲವಾಗುವ ಹೇಳಿಕೆ ನೀಡಿದ್ದಾರೆ. ಇದನ್ನು ಅಬ್ದುಲ್ಲಾ, 'ಗಡಿಯಾಚೆ ಇರುವ ಕೆಲವರನ್ನು ಪ್ರಸನ್ನಪಡಿಸುವ ಹೇಳಿಕೆ' ಎಂದು ಟೀಕಿಸಿದ್ದಾರೆ.
ಈ ಹಿಂದೆ ಮಾತನಾಡಿದ್ದ ಮೆಹಬೂಬಾ ಮುಫ್ತಿ, ಮಿಲಿಟರಿ ಕ್ರಮ, ಉದ್ವಿಗ್ನತೆ ಹೆಚ್ಚಳದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಮಾತುಕತೆ ನಡೆಸಿ ಎಂದಿದ್ದರು. ಮಿಲಿಟರಿ ಕಾರ್ಯಾಚರಣೆ ನಡೆದಾಗಲೆಲ್ಲಾ ನಾವು ನೋಡಿದ್ದೇವೆ. ಇದು ಯಾವುದೇ ಪರಿಹಾರವನ್ನು ತರುವುದಿಲ್ಲ. ಶಾಂತಿಯನ್ನು ಸ್ಥಾಪಿಸಲು ನೆರವಾಗುವುದಿಲ್ಲ. ಪಾಕಿಸ್ತಾನದ ಪರಿಸ್ಥಿತಿ ಚೆನ್ನಾಗಿಲ್ಲ. ಆದ್ದರಿಂದ ಎರಡೂ ದೇಶಗಳು ರಾಜಕೀಯ ಹಸ್ತಕ್ಷೇಪಕ್ಕೆ ಪ್ರಯತ್ನಿಸಬೇಕು. ಮಿಲಿಟರಿ ಹಸ್ತಕ್ಷೇಪದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ, ಪಾಕಿಸ್ತಾನದ ದಾಳಿಯಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ, ಅವರು ಬಂದೂಕುಗಳನ್ನು ಮೌನಗೊಳಿಸಬೇಕು. ಪರಿಸ್ಥಿತಿ ಸಾಮಾನ್ಯಗೊಳಿಸಲು ಸಹಾಯ ಮಾಡಬೇಕು ಎಂದಿದ್ದರು. ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ( ಎಐಎಂಪಿಎಲ್‌ಬಿ) ಕೂಡ ಈ ಬಗ್ಗೆ ಆಗ್ರಹಿಸಿದ್ದು‘ ಉಭಯ ದೇಶಗಳು ದ್ವಿಪಕ್ಷೀಯ ಸಂವಾದ, ಮತ್ತು ಚರ್ಚೆಗಳ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು. ಯುದ್ಧವೂ ಯಾವುದೇ ಸಮಸ್ಯೆಗೆ ಪರಿಹಾರವಲ್ಲ’ ಎಂದಿದ್ದಾರೆ.