ಚೀನಾ ತಂಟೆಗೆ ಭಾರತದ ಮಿಸೈಲ್ ಸಡ್ಡು: ಡ್ರ್ಯಾಗನ್ ವಿರುದ್ಧ ಮಹತ್ತರ ಹೆಜ್ಜೆ!
ಚೀನಾ ತಂಟೆಗೆ ಭಾರತದ ಮಿಸೈಲ್ ಸಡ್ಡು| ಭೂಸೇನೆ, ವಾಯುಪಡೆಯಿಂದ ಗಡಿಯಲ್ಲಿ ಕ್ಷಿಪಣಿ ಧ್ವಂಸ ವ್ಯವಸ್ಥೆಗಳ ನಿಯೋಜನೆ| ಮಿತ್ರದೇಶದಿಂದ ಮತ್ತೊಂದು ಕ್ಷಿಪಣಿ ನಾಶಕ ಪಡೆದು ಶೀಘ್ರದಲ್ಲೇ ಗಡಿಗೆ ರವಾನೆ| ಗಲ್ವಾನ್ ಬಳಿ ಚೀನಾದ ಬಾಂಬರ್ ವಿಮಾನಗಳ ಹಾರಾಟ ಬೆನ್ನಲ್ಲೇ ಭಾರತ ಅಲರ್ಟ್
ನವದೆಹಲಿ(ಜೂ.28): ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾದ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳ ಹಾರಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ತನ್ನ ಬಳಿ ಇರುವ ಅತ್ಯಾಧುನಿಕ ಕ್ಷಿಪಣಿ ಹೊಡೆದುರುಳಿಸುವ ವ್ಯವಸ್ಥೆಗಳನ್ನು ಗಡಿಯಲ್ಲಿ ನಿಯೋಜನೆ ಮಾಡಿದೆ. ಇದರಿಂದಾಗಿ ಮಾತುಕತೆ ಮೂಲಕ ಬಗೆಹರಿಯಬಹುದು ಎಂದು ಊಹಿಸಲಾಗಿದ್ದ ಗಲ್ವಾನ್ ಬಿಕ್ಕಟ್ಟು, ಮತ್ತಷ್ಟುವಿಷಮ ಪರಿಸ್ಥಿತಿಯತ್ತ ಹೊರಳುತ್ತಿದ್ದು ಗಡಿಯಲ್ಲಿ ಕುದಿಯುವ ವಾತಾವರಣ ಕಂಡುಬರುತ್ತಿದೆ.
ಭಾರತ ಜೊತೆ ಸಂಘರ್ಷ: ಮಡಿದ ಸೈನಿಕರಿಗೆ ಚೀನಾ ಪತ್ರಿಕೆ ಕಂಬನಿ!
ಕ್ಷಿಪಣಿ ದಾಳಿ ಮೂಲಕ ಭಾರತದ ಮೇಲೆ ಆಕ್ರಮಣ ಮಾಡುವ ದುಸ್ಸಾಹಕ್ಕೆ ಚೀನಾ ಇಳಿಯುವ ಸಾಧ್ಯತೆಗಳೂ ಇರುವ ಕಾರಣ, ನೆಲದಿಂದ ಆಗಸಕ್ಕೆ ಚಿಮ್ಮಿ ದಾಳಿಗೆ ಬರುವ ಕ್ಷಿಪಣಿಗಳನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ನಾಶಗೊಳಿಸುವ ವ್ಯವಸ್ಥೆಗಳನ್ನು ಭೂಸೇನೆ ಹಾಗೂ ವಾಯುಪಡೆಗಳೆರಡೂ ನಿಯೋಜಿಸಿವೆ. ಅತ್ಯಧಿಕ ಸಾಮರ್ಥ್ಯದ ಕ್ಷಿಪಣಿ ಹೊಡೆವ ವ್ಯವಸ್ಥೆ ಮಿತ್ರ ರಾಷ್ಟ್ರವೊಂದರಿಂದ ಭಾರತಕ್ಕೆ ಶೀಘ್ರದಲ್ಲೇ ಲಭ್ಯವಾಗಲಿದೆ. ಅದನ್ನೂ ಲಡಾಖ್ ವಲಯಕ್ಕೇ ನಿಯೋಜಿಸಿ, ಚೀನಾ ದಾಳಿಯನ್ನು ಎದುರಿಸಲು ಭಾರತ ಸಜ್ಜಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಗಡಿಯಲ್ಲಿ ಭಾರತೀಯ ಸೇನೆ ಸುಕೋಯ್ ಎಂಕೆಐಎಸ್, ಅಪಾಚೆ ಕಾಪ್ಟರ್, ಬೋಯಿಂಗ್ 47 ಚಿನೂಕ್ ಸೇರಿದಂತೆ ನಾನಾ ರೀತಿಯ ಯುದ್ಧ ವಿಮಾನ ಮತ್ತು ಕಾಪ್ಟರ್‌ಗಳನ್ನು ನಿಯೋಜಿಸಿದೆ.
ಈ ನಡುವೆ, ಭಾರತ ಹೊಂದಿರುವ ಸುಖೋಯ್ ದರ್ಜೆಯ ಯುದ್ಧ ವಿಮಾನವನ್ನು ಚೀನಾ ಕೂಡ ಗಡಿಯತ್ತ ತಂದಿದೆ. ಅಲ್ಲದೆ ಚೀನಾದ ಬಾಂಬರ್ ವಿಮಾನಗಳು ಗಡಿಯ 10 ಕಿ.ಮೀ. ಸರಹದ್ದಿನಲ್ಲಿ ಹಾರಾಡುತ್ತಿರುವುದನ್ನು ಭದ್ರತಾ ಪಡೆಗಳು ಕಂಡಿವೆ. ಹೀಗಾಗಿ ಚೀನಾದ ಯಾವುದೇ ವಿಮಾನಗಳು ಕಣ್ತಪ್ಪಿ ಹಾರಾಡದಂತೆ ಅತ್ಯುನ್ನತ ನಿಗಾ ವಹಿಸಲಾಗಿದೆ.
ಚೀನಾ ಮತ್ತೆ ಕುತಂತ್ರ: ಶಾಂತಿ ಮಂತ್ರ ಪಠಿಸುತ್ತಲೇ ಹೆಲಿಪ್ಯಾಡ್ ನಿರ್ಮಾಣ!
ಶತ್ರು ದೇಶದಿಂದ ಶರವೇಗದಲ್ಲಿ ಬರುವ ಯುದ್ಧ ವಿಮಾನ ಹಾಗೂ ಡ್ರೋನ್‌ಗಳನ್ನು ಕ್ಷಣಾರ್ಧದಲ್ಲಿ ಆಗಸದಲ್ಲೇ ಛಿದ್ರಗೊಳಿಸುವ ಆಕಾಶ್ ಕ್ಷಿಪಣಿ ವ್ಯವಸ್ಥೆ ಭಾರತದ ಬಳಿ ಇದೆ. ಪರ್ವತ ಪ್ರದೇಶಗಳಲ್ಲಿ ನಿಯೋಜನೆ ಮಾಡುವ ಸಲುವಾಗಿ ಅದನ್ನು ಮೇಲ್ದರ್ಜೆಗೆ ಕೂಡ ಏರಿಸಲಾಗಿದೆ. ಆದರೆ ಇದೀಗ ಅದನ್ನೇ ಗಡಿಯಲ್ಲಿ ನಿಯೋಜಿಸಲಾಗಿದೆಯೇ ಎಂಬುದು ತಿಳಿದುಬಂದಿಲ್ಲ.