ನವದೆಹಲಿ(ಜೂ.22): ಇತ್ತೀಚೆಗೆ ಗಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ ಯೋಧರು ಚೀನಾದ 40ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆಗೈದಿದ್ದಾರೆ ಎಂದು ಕೇಂದ್ರ ಸರ್ಕಾರ ಮೊದಲ ಬಾರಿ ‘ಅಧಿಕೃತವಾಗಿ’ ಹೇಳಿದೆ.

ಸೇನಾಪಡೆಯ ಮಾಜಿ ಮುಖ್ಯಸ್ಥರೂ ಆಗಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಜನರಲ್‌ ವಿ.ಕೆ.ಸಿಂಗ್‌, ‘ನಾವು 20 ಯೋಧರನ್ನು ಕಳೆದುಕೊಂಡರೆ ಅದರ ದುಪ್ಪಟ್ಟು ಸಂಖ್ಯೆಯ ಶತ್ರು ಸೈನಿಕರನ್ನು ಕೊಂದಿದ್ದೇವೆ’ ಎಂದು ಶನಿವಾರ ತಿಳಿಸಿದ್ದಾರೆ. ಅದರೊಂದಿಗೆ, ಜೂ.15ರಂದು ಪೂರ್ವ ಲಡಾಖ್‌ನ ಗಲ್ವಾನ್‌ ಪ್ರದೇಶದಲ್ಲಿ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ದಾಟಿ ಬಂದು ಉದ್ಧಟತನ ಮೆರೆದ ಚೀನಾದ 40ಕ್ಕೂ ಹೆಚ್ಚು ಸೈನಿಕರನ್ನು ಭಾರತದ ಯೋಧರು ಕೊಂದಿದ್ದಾರೆ ಎಂಬ ಮಾಹಿತಿಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

ಹುತಾತ್ಮರ ಬಲಿದಾನಕ್ಕೆ ನ್ಯಾಯ ಒದಗಿಸಿ: ಮೌನ ಮುರಿದ ಮಾಜಿ ಪ್ರಧಾನಿ ಡಾ. ಸಿಂಗ್!

ಇನ್ನೊಂದು ಮೂಲದ ಪ್ರಕಾರ, ಭಾರತದ ಯೋಧರು ಕನಿಷ್ಠ 45ರಿಂದ 50 ಚೀನಿ ಯೋಧರನ್ನು ಕೊಂದಿದ್ದಾರೆ. ಸಂಘರ್ಷದ ವೇಳೆ ಚೀನಾದ ಒಬ್ಬ ಕರ್ನಲ್‌ನನ್ನು ಸೆರೆಹಿಡಿಯಲಾಗಿತ್ತು. ನಂತರ ಭಾರತೀಯ ಸೇನಾಪಡೆ ಆತನನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.

ಈ ಕುರಿತು ಹೆಚ್ಚಿನ ವಿವರ ನೀಡಿರುವ ವಿ.ಕೆ.ಸಿಂಗ್‌, ‘ಚೀನಾ ಯಾವತ್ತೂ ಸಂಖ್ಯೆಗಳನ್ನು ಬಚ್ಚಿಡುತ್ತದೆ. 1962ರ ಯುದ್ಧದಲ್ಲೂ ಅದು ತನ್ನ ಸೈನಿಕರು ಮೃತಪಟ್ಟಿರುವುದನ್ನು ಒಪ್ಪಿಕೊಂಡಿರಲಿಲ್ಲ. ಗಲ್ವಾನ್‌ ಕಣಿವೆಯಲ್ಲಿ ನಮ್ಮ ಯೋಧರು ಹತ್ಯೆಗೈದಿರುವ ಚೀನಾದ ಸೈನಿಕರ ಸಂಖ್ಯೆ 40ಕ್ಕೂ ಹೆಚ್ಚು. ಈಗ ನಮ್ಮ ಭೂಭಾಗದಲ್ಲಿ ಅವರು ಇಲ್ಲ. 1959ರ ನಕ್ಷೆಯನ್ನು ಆಧರಿಸಿ ಭಾರತ-ಚೀನಾ ನಡುವಿನ ಎಲ್‌ಎಸಿಯನ್ನು ವಿಶ್ಲೇಷಿಸಲಾಗುತ್ತದೆ. ಚೀನಾದವರು ಯಾವಾಗಲೂ ನಮ್ಮ ಗಡಿಯೊಳಗೆ ನುಸುಳಿ ಈ ಜಾಗ ತಮ್ಮದು ಎಂದು ಹೇಳುತ್ತಿರುತ್ತಾರೆ. ಭೂಮಿಯ ಮೇಲೆ ಎಲ್‌ಎಸಿಯನ್ನು ಭೌತಿಕವಾಗಿ ಗುರುತಿಸಿಲ್ಲ. ಅದರ ಬಗ್ಗೆ ಒಪ್ಪಂದ ಕೂಡ ಇಲ್ಲ. ಹೀಗಾಗಿ ಅಲ್ಲಿ ಗಡಿ ಎಲ್ಲಿದೆ ಎಂಬ ಅಭಿಪ್ರಾಯದಲ್ಲಿ ವ್ಯತ್ಯಾಸಗಳಿರುತ್ತವೆ’ ಎಂದು ತಿಳಿಸಿದ್ದಾರೆ.