ಆಪರೇಷನ್‌ ಸಿಂದೂರ’ದಂಥ ಸೇನಾಬಲ ಹಾಗೂ ಇದರ ಜತೆಗೆ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ತನ್ನ ಬಲವನ್ನು ವಿಶ್ವದ ಮುಂದೆ ಸಾಬೀತುಪಡಿಸಿರುವ ಭಾರತ ಈಗ ಏಷ್ಯಾ ಪವರ್‌ ಇಂಡೆಕ್ಸ್‌-2025ರಲ್ಲಿ 3ನೇ ಸ್ಥಾನಕ್ಕೇರಿದೆ. ಈ ಮೂಲಕ ‘ಮೇಜರ್‌ ಪವರ್‌’ ಎಂಬ ಪಟ್ಟಕ್ಕೆ ಭಾಜನವಾಗಿದೆ.

ನವದೆಹಲಿ: ‘ಆಪರೇಷನ್‌ ಸಿಂದೂರ’ದಂಥ ಸೇನಾಬಲ ಹಾಗೂ ಇದರ ಜತೆಗೆ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ತನ್ನ ಬಲವನ್ನು ವಿಶ್ವದ ಮುಂದೆ ಸಾಬೀತುಪಡಿಸಿರುವ ಭಾರತ ಈಗ ಏಷ್ಯಾ ಪವರ್‌ ಇಂಡೆಕ್ಸ್‌-2025ರಲ್ಲಿ 3ನೇ ಸ್ಥಾನಕ್ಕೇರಿದೆ. ಈ ಮೂಲಕ ‘ಮೇಜರ್‌ ಪವರ್‌’ ಎಂಬ ಪಟ್ಟಕ್ಕೆ ಭಾಜನವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ಈ ಬಾರಿ ಜಪಾನ್‌ ಅನ್ನು ಹಿಂದಿಕ್ಕಿ 40 ಅಂಕಗಳನ್ನು ಪಡೆದಿದ್ದು, ಅಮೆರಿಕ ಹಾಗೂ ಚೀನಾ ನಂತರದ ಸ್ಥಾನ ಪಡೆದಿದೆ. 40 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆಯುವುದು ‘ಮೇಜರ್ ಪವರ್’ ಪಟ್ಟಕ್ಕೆ ಮಾನದಂಡ.

ಏಷ್ಯಾ ಖಂಡದ ದೇಶಗಳ ಮೇಲೆ ಪ್ರಭಾವ ಬೀರುವ ರಾಷ್ಟ್ರಗಳ ಸೇನಾ ಸಾಮರ್ಥ್ಯ, ಆರ್ಥಿಕತೆ, ರಾಜತಾಂತ್ರಿಕ ಬಲ, ಭವಿಷ್ಯದ ಸಂಪನ್ಮೂಲ, ಸಂಸ್ಕೃತಿ ಸೇರಿದಂತೆ ಹಲವು ಅಂಶಗಳ ಆಧಾರದಲ್ಲಿ ಆಸ್ಟ್ರೇಲಿಯಾ ಮೂಲದ ಚಿಂತಕರ ಚಾವಡಿಯಾಗಿರುವ ಲೋವಿ ಇನ್ಸ್‌ಟಿಟ್ಯೂಟ್‌ ಈ ವರದಿಯನ್ನು ಸಿದ್ಧಪಡಿಸಿದೆ.

ಮೊದಲ ಸ್ಥಾನದಲ್ಲಿರುವ ಅಮೆರಿಕ 100ಕ್ಕೆ 80.4 ಅಂಕ ಪಡೆದರೆ, ಚೀನಾ 73.5 ಅಂಕ ಪಡೆದಿದೆ. ಕಳೆದ ವರ್ಷಕ್ಕಿಂತ 0.9ರಷ್ಟು ಅಂಕ ಹೆಚ್ಚಿಸಿಕೊಂಡು 40 ಪಾಯಿಂಟ್ಸ್‌ ಪಡೆದ ಭಾರತ, ಜಪಾನ್‌ ಅನ್ನು ಹಿಂದಿಕ್ಕಿದೆ.

ಈ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೂ, ಅದರ ಅಂಕಗಳು ವರ್ಷ ಕಳೆದಂತೆ ಕುಸಿಯುತ್ತಿವೆ.

ಭಾರತದ ಬಲ ಹೆಚ್ಚಳ:

ಇತ್ತ ಭಾರತದ ಬಲ ಹೆಚ್ಚುತ್ತಾ ಸಾಗಿದ್ದು, ಅದರಲ್ಲೂ ಪಾಕ್‌ ವಿರುದ್ಧ ನಡೆಸಲಾದ ‘ಆಪರೇಷನ್‌ ಸಿಂದೂರ’ದಲ್ಲಿ ಅದರ ಸಾಮರ್ಥ್ಯ ಜಗಜ್ಜಾಹೀರಾಗಿದೆ. ವಿದೇಶಗಳಿಂದ ಹೂಡಿಕೆ ಸೆಳೆಯುವ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ, ಅಮೆರಿಕದ ಬಳಿಕ 2ನೇ ಸ್ಥಾನ ಪಡೆದಿದೆ. ಭಾರತದ ರಾಜತಾಂತ್ರಿಕತೆಯಲ್ಲಿಯೂ ಗಣನೀಯ ಸುಧಾರಣೆ ಕಂಡುಬಂದಿದೆ.

ಏಷ್ಯಾ ಪವರ್‌ ಇಂಡೆಕ್ಸ್‌

ದೇಶ ಅಂಕ

ಅಮೆರಿಕ 80.4

ಚೀನಾ 73.5

ಭಾರತ 40

ಜಪಾನ್‌ 38.8

ರಷ್ಯಾ 32.1