2026ರ ಮಾ.31ರ ವೇಳೆಗೆ ಭಾರತವನ್ನು ನಕ್ಸಲ್ ಮುಕ್ತ ಮಾಡುವ ಗುರಿಯೊಂದಿಗೆ ಒಂದು ಕಡೆ ಭರ್ಜರಿ ಕಾರ್ಯಾಚರಣೆಗಳು ನಡೆಯುತ್ತಿದ್ದರೆ, ಇತ್ತ ನಕ್ಸಲ್‌ವಾದ ಬಿಟ್ಟು ಮುಖ್ಯವಾಹಿನಿಗೆ ಬರುವಂತೆ ಅವರನ್ನು ಪ್ರೋತ್ಸಾಹಿಸಲು ನೀಡಲಾಗುವ ನೆರವಿನ ಮೊತ್ತವನ್ನು ಒಡಿಶಾ ಸರ್ಕಾರ, ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ.
ಭುವನೇಶ್ವರ : 2026ರ ಮಾ.31ರ ವೇಳೆಗೆ ಭಾರತವನ್ನು ನಕ್ಸಲ್ ಮುಕ್ತ ಮಾಡುವ ಗುರಿಯೊಂದಿಗೆ ಒಂದು ಕಡೆ ಭರ್ಜರಿ ಕಾರ್ಯಾಚರಣೆಗಳು ನಡೆಯುತ್ತಿದ್ದರೆ, ಇತ್ತ ನಕ್ಸಲ್‌ವಾದ ಬಿಟ್ಟು ಮುಖ್ಯವಾಹಿನಿಗೆ ಬರುವಂತೆ ಅವರನ್ನು ಪ್ರೋತ್ಸಾಹಿಸಲು ನೀಡಲಾಗುವ ನೆರವಿನ ಮೊತ್ತವನ್ನು ಒಡಿಶಾ ಸರ್ಕಾರ, ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ.
ಈ ಸಂಬಂಧ ಹೊಸ ಶರಣಾಗತಿ ಹಾಗೂ ಪುನರ್ವಸತಿ ನೀತಿ ಜಾರಿಗೆ ತಂದಿದ್ದು, ಟಾಪ್ ನಕ್ಸಲರಿಗೆ 1.20 ಕೋಟಿ ರು. ಶರಣಾಗತಿ ಪ್ಯಾಕೇಜ್ ಲಭಿಸಲಿದೆ. ಉಳಿದ ನಕ್ಸಲರಿಗೆ ಅವರ ಶ್ರೇಣಿ ಆಧರಿಸಿ ಹಣ ನೀಡಲಾಗುತ್ತದೆ.
ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಂಜೀಬ್ ಪಾಂಡಾ ಈ ಬಗ್ಗೆ ಮಾಹಿತಿ ನೀಡಿ, ‘ನಕ್ಸಲ್ ಸಂಘಟನೆಗಳ ಕೇಂದ್ರ ಸಮಿತಿ, ಪಾಲಿಟ್‌ಬ್ಯೂರೋ ಅಥವಾ ಕೇಂದ್ರ ಮಿಲಿಟರಿ ಆಯೋಗದಂತಹ ಉನ್ನತ ಹುದ್ದೆಯಲ್ಲಿರುವವರು ಶರಣಾದರೆ 1.20 ಕೋಟಿ ರು. ಪರಿಹಾರ ಕೊಡಲಾಗುವುದು. ಇದರಲ್ಲಿ 10 ಲಕ್ಷ ರು.ನಷ್ಟನ್ನು ನಗದು ರೂಪದಲ್ಲಿ ನೀಡಲಾಗುವುದು’ ಎಂದರು, ಉಳಿದ ಮೊತ್ತವನ್ನು ಎಫ್‌ಡಿ, ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಖರ್ಚುಗಳಿಗೆ ನೀಡಲಾಗುವುದು.
ಯಾರಿಗೆ ಎಷ್ಟೆಷ್ಟು?:
ನಕ್ಸಲ್ ಸಂಘಟನೆಗಳ ದೊಡ್ಡ ತಲೆಗಳಿಗೆ 1.20 ಕೋಟಿ ರು. ನೀಡಲಾಗುವುದು. ರಾಜ್ಯ ಸಮಿತಿ/ವಿಶೇಷ ವಲಯ ಸಮಿತಿ ಸದಸ್ಯರಿಗೆ 65 ಲಕ್ಷ ರು., ಪ್ರಾದೇಶಿಕ ಸಮಿತಿ ಸದಸ್ಯರಿಗೆ 33 ಲಕ್ಷ ರು., ವಿಭಾಗೀಯ ಸಮಿತಿ ಕಾರ್ಯದರ್ಶಿ/ಮಿಲಿಟರಿ ತುಕಡಿಯ ಕಮಾಂಡರ್‌ಗೆ 27.50 ಲಕ್ಷ ರು., ವಿಭಾಗೀಯ ಸಮಿತಿ/ಸೇನಾ ತುಕಡಿಯ ಉಪ ಕಮಾಂಡರ್/ಪ್ರದೇಶ ಸಮಿತಿ ಕಾರ್ಯದರ್ಶಿಗೆ 22 ಲಕ್ಷ ರು., ಕಮಾಂಡರ್, ಸ್ಥಳೀಯ ಸಂಘಟನಾ ಪಡೆ/ಸ್ಥಳೀಯ ಗೆರಿಲ್ಲಾ ಪಡೆ ಸದಸ್ಯರಿಗೆ 11 ಲಕ್ಷ ರು. ನೀಡಲಾಗುವುದು. ಸ್ಥಳೀಯ ಸಂಘಟನಾ ಪಡೆ/ಸ್ಥಳೀಯ ಗೆರಿಲ್ಲಾ ಪಡೆಗಳ ಉಪ ಕಮಾಂಡರ್‌ಗೆ 5.50 ಲಕ್ಷ ರು., ತಾಂತ್ರಿಕ, ಗುಪ್ತಚರ, ಪೂರೈಕೆ, ವೈದ್ಯಕೀಯ, ಗಣ ನಾಟ್ಯ ಸಂಘ ಮತ್ತು ಕೇಂದ್ರ ಪ್ರಾದೇಶಿಕ ಕಮಾಂಡ್‌ನಂತಹ ವಿಶೇಷ ತಂಡಗಳ ಸದಸ್ಯರಿಗೆ 2.75 ಲಕ್ಷ ರು. ನೀಡಲಾಗುವುದು. ದಳಮ್/ಕಾರ್ಡರ್‌ಗಳು/ಪಕ್ಷದ ಸದಸ್ಯರಿಗೂ 1.65 ಲಕ್ಷ ರು. ಕೊಡಲಾಗುವುದು ಎಂದು ಗೃಹ ಇಲಾಖೆ ಅಧಿಸೂಚನೆ ಹೇಳಿದೆ.
ಶಸ್ತ್ರಗಳ ಆಧಾರದಲ್ಲಿ:
‘ಶರಣಾದ ಮಾವೋವಾದಿ ಸರ್ಕಾರ ಘೋಷಿಸಿದ ಬಹುಮಾನ ಹಣವನ್ನು ಹೊಂದಿದ್ದರೆ, ಅವರಿಗೆ ಆರ್ಥಿಕ ನೆರವು ಅಥವಾ ಘೋಷಿತ ಬಹುಮಾನ ಮೊತ್ತವನ್ನು ನೀಡಲಾಗುತ್ತದೆ. ಕಾರ್ಯಾಚರಣೆ ನಡೆಸುತ್ತಿರುವ ಸ್ಥಿತಿಯಲ್ಲಿ ಶಸ್ತ್ರಾಸ್ತ್ರಗಳು, ಜೀವಂತ ಮದ್ದುಗುಂಡುಗಳು ಮತ್ತು ಸ್ಫೋಟಕಗಳೊಂದಿಗೆ ಶರಣಾದರೂ ಇದರ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಲಘು ಮೆಷಿನ್ ಗನ್‌ನೊಂದಿಗೆ ಶರಣಾದರೆ 4.95 ಲಕ್ಷ ರು. ನೀಡಲಾಗುವುದು.
ಎಕೆ-47 ಹೊಂದಿದ್ದರೆ ಈ ಮೊದಲು ಕೊಡಲಾಗುತ್ತಿದ್ದ 10000 ರು. ಬದಲು 3.3 ಲಕ್ಷ ರು., ಎಸ್‌ಎಸ್‌ಆರ್/ಇನ್ಸಾಸ್ ರೈಫಲ್ ಇದ್ದರೆ 10000 ರು. ಬದಲು 1.65 ಲಕ್ಷ ರು., .303 ರೈಫಲ್ ಇದ್ದರೆ 5000 ರು. ಬದಲು 82500 ರು. ಕೊಡಲಾಗುವುದು’ ಎಂದು ತಿಳಿಸಲಾಗಿದೆ. ಜತೆಗೆ, ನಕ್ಸಲರ ಬಗ್ಗೆ ಮಾಹಿತಿ ನೀಡಿದ ಜನಸಾಮಾನ್ಯರಿಗೂ ಬಹುಮಾನ ಕೊಡಲಾಗುವುದು.ನಕ್ಸಲರ ವಿರುದ್ಧ ಗಂಭೀರ ಕ್ರಮಿನಲ್ ಪ್ರಕರಣಗಳು ದಾಖಲಾಗಿದ್ದರೆ, ಅದು ನ್ಯಾಯಾಲಯದಲ್ಲಿ ಮುಂದುವರೆಯಲಿವೆ. ಅವರಿಗೆ ಉಚಿತವಾಗಿ ಉಚಿತ ಕಾನೂನು ಸೇವೆಗಳು/ವಕೀಲರನ್ನೂ ಒದಗಿಸಲಾಗುವುದು. ಸಣ್ಣ ಪ್ರಕರಣಗಳಿದ್ದರೆ ಅಂತಹವರನ್ನು ಖುಲಾಸೆಗೊಳಿಸುವ ಬಗ್ಗೆಯೂ ಸರ್ಕಾರ ಯೋಚಿಸಬಹುದು ಎಂದು ತಿಳಿಸಲಾಗಿದೆ.


