ಉಕ್ರೇನ್‌-ರಷ್ಯಾ ಸಮರ ವಿಶ್ವಾದ್ಯಂತ ಸುದ್ದಿ ಮಾಡುತ್ತಿರುವ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಡಿ.4ರಿಂದ 2 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

ನವದೆಹಲಿ : ಉಕ್ರೇನ್‌-ರಷ್ಯಾ ಸಮರ ವಿಶ್ವಾದ್ಯಂತ ಸುದ್ದಿ ಮಾಡುತ್ತಿರುವ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಡಿ.4ರಿಂದ 2 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯ ಭೇಟಿಯನ್ನು ಪ್ರಕಟಿಸಿದೆ.

ಮೋದಿ ಅವರ ಆಹ್ವಾನದ ಹಿನ್ನೆಲೆಯಲ್ಲಿ ಪುಟಿನ್‌ ಅವರು ಡಿ.4, 5ರಂದು ಭಾರತಕ್ಕೆ ಭೇಟಿ ನೀಡಲಿದ್ದು, 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಭೇಟಿ ಎರಡೂ ದೇಶಗಳ ನಡುವಿನ ವ್ಯೂಹಾತ್ಮಕ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆ ಇದೆ.

ಪುಟಿನ್‌ ಅವರಿಗೆ ವಿಶೇಷ ಔತಣಕೂಟ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಪುಟಿನ್‌ ಅವರಿಗೆ ವಿಶೇಷ ಔತಣಕೂಟ ಆಯೋಜಿಸಲಿದ್ದಾರೆ. ಈ ಭೇಟಿ ಉಭಯ ದೇಶಗಳ ನಾಯಕತ್ವಕ್ಕೆ ದ್ವಿಪಕ್ಷೀಯ ಸಂಬಂಧದ ಪ್ರಗತಿಯನ್ನು ಮರುವಿಮರ್ಶೆಗೆ ವೇದಿಕೆ ಮಾಡಿಕೊಡಲಿದೆ. ವಿಶೇಷ ವ್ಯೂಹಾತ್ಮಕ ಸಹಭಾಗಿತ್ವವನ್ನು ಬಲಪಡಿಸಲಿದೆ ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಕ್ಷಣೆ, ಭದ್ರತೆ, ವ್ಯಾಪಾರ ಮತ್ತು ನಾಗರಿಕ ಉದ್ದೇಶದ ಅಣು ಶಕ್ತಿ ಚರ್ಚೆ

ಮಾತುಕತೆ ವೇಳೆ ಉಭಯ ನಾಯಕರು ರಕ್ಷಣೆ, ಭದ್ರತೆ, ವ್ಯಾಪಾರ ಮತ್ತು ನಾಗರಿಕ ಉದ್ದೇಶದ ಅಣು ಶಕ್ತಿ ಕ್ಷೇತ್ರಗಳಲ್ಲಿನ ಸಹಭಾಗಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ. ಉಕ್ರೇನ್‌ ಸಂಘರ್ಷದ ವಿಚಾರ ಕೂಡ ಮಾತುಕತೆ ವೇಳೆ ಚರ್ಚೆಗೆ ಬರುವ ನಿರೀಕ್ಷೆ ಇದೆ ಎಂದು ಸಚಿವಾಲಯ ತಿಳಿಸಿದೆ.

ಭಾರತವು ರಷ್ಯಾದಿಂದ ಮತ್ತಷ್ಟು ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೆ ಆಸಕ್ತಿ ತೋರಿದ್ದು, ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ಇದರ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ.