ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು (DAC) ಭೂಸೇನೆ, ವಾಯುಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳಿಗಾಗಿ 2.38 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. 

ನವದೆಹಲಿ (ಮಾ. 27): ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಕ್ಷಣಾ ಸ್ವಾಧೀನ ಮಂಡಳಿಯು (DAC) ಬುಧವಾರ 2.38 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಿವಿಧ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಸೇನೆ, ವಾಯುಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳಿಗೆ ಅಗತ್ಯವಿರುವ ವಿವಿಧ ಶಸ್ತ್ರಾಸ್ತ್ರ ವ್ಯವಸ್ಥೆ ಹಾಗೂ ಪ್ಲಾಟ್‌ಫಾರ್ಮ್‌ಗಳಿಗೆ 'ಅಗತ್ಯತೆಯ ಅಂಗೀಕಾರ' (AoN) ನೀಡಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಸಕ್ತ 2025-26ರ ಹಣಕಾಸು ವರ್ಷದಲ್ಲಿ ರಕ್ಷಣಾ ಖರೀದಿಗೆ ಸಂಬಂಧಿಸಿದಂತೆ ಇದು ದಾಖಲೆಯ ವರ್ಷವಾಗಿದೆ. ಈವರೆಗೆ ಒಟ್ಟು 55 ಪ್ರಸ್ತಾವನೆಗಳ ಅಡಿಯಲ್ಲಿ 6.73 ಲಕ್ಷ ಕೋಟಿ ರೂಪಾಯಿ ಮೌಲ್ಯದ 'AoN' ನೀಡಲಾಗಿದೆ. ಅಲ್ಲದೆ, ಈ ವರ್ಷವೊಂದರಲ್ಲೇ 2.28 ಲಕ್ಷ ಕೋಟಿ ರೂಪಾಯಿ ಮೊತ್ತದ ಬಂಡವಾಳ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಇದು ಒಂದೇ ಹಣಕಾಸು ವರ್ಷದಲ್ಲಿ ನಡೆದ ಅತ್ಯಧಿಕ ಮಟ್ಟದ ಒಪ್ಪಂದವಾಗಿದೆ.

ಯಾವ ಪಡೆಗಳಿಗೆ ಏನು ಸಿಗಲಿದೆ?

ಭಾರತೀಯ ಭೂಸೇನೆಗೆ ಎಲ್ಲ ಮಾದರಿಯ ಭೂಪ್ರದೇಶಗಳಲ್ಲಿ ದೂರದ ಗುರಿಗಳನ್ನು ಹೊಡೆದುರುಳಿಸಲು ಸಹಕಾರಿ ಆಗಲಿರುವ ಧನುಷ್ ಗನ್ ಸಿಸ್ಟಮ್‌ಗೆ ಅನುಮೋದನೆ ಸಿಕ್ಕಿದೆ. ಅದರೊಂದಿಗೆ ನೈಜ ಸಮಯದಲ್ಲಿ ವೈಮಾನಿಕ ದಾಳಿಗಳನ್ನು ನಿಯಂತ್ರಿಸುವ ಸಾಮರ್ಥ್ಯ ನೀಡುವ ವಾಯು ರಕ್ಷಣಾ ಟ್ರ್ಯಾಕ್ಡ್ ಸಿಸ್ಟಮ್, ಶತ್ರುಗಳ ಟ್ಯಾಂಕ್‌ಗಳನ್ನು ಭೇದಿಸುವ ಸಾಮರ್ಥ್ಯ ಹೆಚ್ಚಿಸಲಿರುವ ಆರ್ಮರ್ಡ್ ಪಿಯರ್ಸಿಂಗ್ ಟ್ಯಾಂಕ್ ಯುದ್ಧಸಾಮಗ್ರಿ, ಯುದ್ಧಭೂಮಿಯಲ್ಲಿ ತಡೆರಹಿತ ಸಂವಹನಕ್ಕೆ ಅನುವು ಮಾಡಿಕೊಡುವ ಹೈ ಕೆಪಾಸಿಟಿ ರೇಡಿಯೋ ರಿಲೇ, ರನ್‌ವೇ ಅಗತ್ಯವಿಲ್ಲದೆಯೇ ವೈಮಾನಿಕ ಕಣ್ಗಾವಲು ನಡೆಸಲು ಭೂಸೇನೆಗೆ ಸಹಾಯ ಮಾಡುವ ರನ್‌ವೇ ಇಂಡಿಪೆಂಡೆಂಟ್ ವೈಮಾನಿಕ ಕಣ್ಗಾವಲು ವ್ಯವಸ್ಥೆಗೆ ಅನುಮೋದನೆ ಸಿಕ್ಕಿದೆ.

ಭಾರತೀಯ ವಾಯುಪಡೆಗೆ ಶತ್ರು ರಾಷ್ಟ್ರಗಳ ವೈಮಾನಿಕ ದಾಳಿಗಳನ್ನು ಹತ್ತಿಕ್ಕಲು ಹೆಚ್ಚುವರಿ ಎಸ್-400 ದೀರ್ಘ ವ್ಯಾಪ್ತಿಯ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಹಳೆಯದಾಗಿರುವ AN-32 ಮತ್ತು IL-76 ವಿಮಾನಗಳ ಬದಲಿಗೆ ಹೊಸ ಮಧ್ಯಮ ಗಾತ್ರದ ಸಾರಿಗೆ ವಿಮಾನಗಳನ್ನು ಖರೀದಿಸಲಾಗುತ್ತದೆ.

ಆಕ್ರಮಣಕಾರಿ ಮತ್ತು ಕಣ್ಗಾವಲು ಕಾರ್ಯಾಚರಣೆಗಾಗಿ ಬಳಸಾಗುವ ರಿಮೋಟ್ಲಿ ಪೈಲಟೆಡ್ ಸ್ಟ್ರೈಕ್ ಏರ್‌ಕ್ರಾಫ್ಟ್ ಜೊತೆಯಲ್ಲಿ ಸುಖೋಯ್-30 ವಿಮಾನಗಳ ಎಂಜಿನ್ ಸಾಮರ್ಥ್ಯ ಹೆಚ್ಚಿಸಿ ಅವುಗಳ ಸೇವಾ ಅವಧಿಯನ್ನು ವಿಸ್ತರಿಸಲು ಅನುಮೋದನೆ ನೀಡಲಾಗಿದೆ.

ಭಾರತೀಯ ಕರಾವಳಿ ರಕ್ಷಣಾ ಪಡೆಯ ಗಸ್ತನ್ನು ಬಲಪಡಿಸಲು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಭಾರಿ ಸಾಮರ್ಥ್ಯದ 'ಏರ್ ಕುಶನ್' ವಾಹನಗಳನ್ನು (Air Cushion Vehicles) ಖರೀದಿಸಲು ನಿರ್ಧರಿಸಲಾಗಿದೆ.