ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತಹೀನತೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ O+ ಬದಲು A+ ರಕ್ತ ನೀಡಿ ವೈದ್ಯಕೀಯ ನಿರ್ಲಕ್ಷ್ಯ ಎಸಗಲಾಗಿದೆ. ಈ ಎಡವಟ್ಟಿನಿಂದ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ರಕ್ತಹೀನತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಅದಲು ಬದಲು ರಕ್ತವನ್ನು ಕೊಟ್ಟು ಎಡವಟ್ಟು ಮಾಡಿದ ಪರಿಣಾಮ ಆತನ ಆರೋಗ್ಯ ಸ್ಥಿತಿ ಗಂಭೀರಗೊಂಡಿದ್ದು, ತಕ್ಷಣವೇ ಐಸಿಯುವಿಗೆ ಶಿಫ್ಟ್ ಮಾಡಲಾಗಿದೆ.
ತಪ್ಪು ರಕ್ತ ಕೊಟ್ಟ ಸಿಬ್ಬಂದಿ
ಪುನೀತ್ ಸೂರ್ಯ ಎಂಬುವವರು ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದು, ರಕ್ತ ಕಮ್ಮಿಯಾಗಿದೆ ಎಂಬ ಕಾರಣದಿಂದ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದರು. ವೈದ್ಯರ ಸಲಹೆಯಂತೆ ರಕ್ತ ನೀಡಲು ನಿರ್ಧರಿಸಲಾಗಿದ್ದು, ರೋಗಿಯ ರಕ್ತದ ಗುಂಪು O+ ಆಗಿದ್ದರೂ ಸಹ, ಆಸ್ಪತ್ರೆಯ ಸಿಬ್ಬಂದಿ ಮತ್ತು ಲ್ಯಾಬ್ ವಿಭಾಗದ ನಿರ್ಲಕ್ಷ್ಯದಿಂದ A+ ರಕ್ತವನ್ನು ಹಾಕಲಾಗಿದೆೆ.
ತಪ್ಪು ರಕ್ತವನ್ನು ನೀಡಿದ ಕೆಲವೇ ಸಮಯದಲ್ಲಿ ಪುನೀತ್ ಸೂರ್ಯ ಅವರಿಗೆ ತೀವ್ರ ತಲೆನೋವು, ಹೃದಯ ಭಾಗದಲ್ಲಿ ತೀವ್ರ ನೋವು, ಉಸಿರಾಟದ ಸಮಸ್ಯೆ ಹಾಗೂ ಸಂಪೂರ್ಣ ದೇಹ ನಡುಗುವಂತಹ ಗಂಭೀರ ಲಕ್ಷಣಗಳು ಕಾಣಿಸಿಕೊಂಡಿವೆ. ನೋವು ಹೆಚ್ಚಾಗುತ್ತಿರುವುದನ್ನು ಪುನೀತ್ ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದರೂ, “ಏನೂ ಆಗಲ್ಲ, ಸುಮ್ಮನೆ ಇರಿ” ಎಂದು ಸಿಬ್ಬಂದಿ ನಿರ್ಲಕ್ಷ್ಯ ತೋರಿದ ಆರೋಪ ಕುಟುಂಬಸ್ಥರಿಂದ ಕೇಳಿಬಂದಿದೆ.
ನೋವು ಮತ್ತಷ್ಟು ಹೆಚ್ಚಾಗಿ ಉಸಿರುಗಟ್ಟುವ ಸ್ಥಿತಿ ಉಂಟಾದಾಗ ಆತಂಕಗೊಂಡ ಪುನೀತ್ ಅವರ ಪೋಷಕರು ರಕ್ತದ ಎಕ್ಸ್ಪೈರಿ ದಿನಾಂಕ ಪರಿಶೀಲಿಸಲು ಮುಂದಾಗಿದ್ದಾರೆ. ಈ ವೇಳೆ ರಕ್ತದ ಬಾಟಲ್ ಮೇಲೆ A+ ಎಂದು ಬರೆದಿರುವುದು ಕಂಡುಬಂದಿದ್ದು, ತಕ್ಷಣವೇ ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ ಪುನೀತ್‌ಗೆ O ಪಾಸಿಟಿವ್ ಬದಲು A ಪಾಸಿಟಿವ್ ರಕ್ತವನ್ನು ಯಾಕೆ ಹಾಕಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಲ್ಯಾಬ್ ಟೆಕ್ನಿಷಿಯನ್ ಉಮೇಶ್ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. “ನಮಗೆ ಕಾಲು ನೋವು ಇತ್ತು, ರಜೆ ಕೇಳಿದ್ದರೂ ಕೊಡಲಿಲ್ಲ. ನಮ್ಮ ಗೋಳು ಕೇಳೋವರು ಯಾರು?” ಎಂದು ಉಮೇಶ್ ಹೇಳಿದರೆಂದು ಪುನೀತ್ ಸೂರ್ಯ ಮತ್ತು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಗಂಭೀರ ಘಟನೆಯ ಬಳಿಕ ಪುನೀತ್ ಸೂರ್ಯ ಅವರನ್ನು ತಕ್ಷಣವೇ ಐಸಿಯುವಿಗೆ ಸ್ಥಳಾಂತರಿಸಿ ತೀವ್ರ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಹಾಯ ದೊರೆತ ಕಾರಣ, ಅವರ ಆರೋಗ್ಯ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದ್ದು, ಸದ್ಯ ಐಸಿಯುನಲ್ಲೇ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲ್ಯಾಬ್ ಟೆಕ್ನಿಷಿಯನ್ ಉಮೇಶ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪುನೀತ್ ಸೂರ್ಯ ಕುಟುಂಬ ದೂರು ದಾಖಲಿಸಿದೆ. ತಿಲಕ್ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆಸ್ಪತ್ರೆ ಆಡಳಿತದ ಪ್ರತಿಕ್ರಿಯೆ
ಈ ಕುರಿತು ಜಯನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸುರೇಂದ್ರ ಪ್ರತಿಕ್ರಿಯೆ ನೀಡಿದ್ದು, “ಲ್ಯಾಬ್ ಟೆಕ್ನಿಷಿಯನ್ ಉಮೇಶ್ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಘಟನೆಯ ಕುರಿತು ವಿವರವಾದ ವರದಿ ಸಲ್ಲಿಸಲು ಸಮಿತಿಯನ್ನು ರಚಿಸಲಾಗಿದೆ. ವಿಷಯವನ್ನು ಈಗಾಗಲೇ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ” ಎಂದು ತಿಳಿಸಿದ್ದಾರೆ.
“ಉಮೇಶ್ ಕಳೆದ 9 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ಇದುವರೆಗೂ ಇಂತಹ ಯಾವುದೇ ಘಟನೆಗಳು ನಡೆದಿಲ್ಲ. ಆದರೂ ಇಂತಹ ದುರಂತಗಳು ಮರುಕಳಿಸದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ನಿಗಾವಹಿಸಲಾಗುವುದು” ಎಂದು ವೈದ್ಯಕೀಯ ಅಧೀಕ್ಷಕರು ಭರವಸೆ ನೀಡಿದ್ದಾರೆ.
ಇತ್ತ, ಆಸ್ಪತ್ರೆ ಸಿಬ್ಬಂದಿ ಹಾಗೂ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ರೋಗಿಯ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಡ ರೋಗಿಗಳ ಜೀವದ ಜೊತೆ ಆಸ್ಪತ್ರೆ ಸಿಬ್ಬಂದಿ ಚೆಲ್ಲಾಟ ಮಾಡುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳ ಸುರಕ್ಷತೆ ಎಲ್ಲಿದೆ?” ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಸದ್ಯ ಪುನೀತ್ ಸೂರ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಐಸಿಯುನಲ್ಲೇ ಸುಧಾರಿಸಿಕೊಳ್ಳುತ್ತಿದ್ದಾರೆ. ಈ ಘಟನೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಜಾಗರೂಕತೆ, ಹೊಣೆಗಾರಿಕೆ ಮತ್ತು ಕಠಿಣ ಮೇಲ್ವಿಚಾರಣೆಯ ಅಗತ್ಯವನ್ನು ಮತ್ತೆ ಒತ್ತಿಹೇಳುತ್ತಿದೆ.


