ಹರ್ಯಾಣ(ಅ.07): ಕೆಲ ದಿನಗಳ ಹಿಂದಷ್ಟೇ, ಮಳೆಗಾಲದ ಅಧಿವೇಶನದಲ್ಲಿ ಜಾರಿಯಾದ ಕೃಷಿ ಮಸೂದೆ ಸಂಬಂಧ ಪರ, ವಿರೋಧಗಳು ವ್ಯಕ್ತವಾಗಿವೆ. ಇದು ರೈತರಿಗೆ ಉಪಯೋಗಕಾರಿ ಎಂದು ಕೇಂದ್ರ ಸರ್ಕಾರ ಹೇಳಿದ್ದರೆ, ವಿಪಕ್ಷ ನಾಯಕರು ಇದನ್ನು ಖಂಡಿಸಿದ್ದಾರೆ. ಅನೇಕ ಕಡೆ ರೈತರೂ ಇದನ್ನು ಜಾರಿಗೊಳಿಸದಂತೆ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಕಾಂಗ್ರೆಸ್ ಈ ಮಸೂದೆ ವಿರೋಧಿಸಿ ಮೂರು ದಿನಗಳವರೆಗೆ ಇದನ್ನು ವಿರೋಧಿಸಿ ಹರ್ಯಾಣದಲ್ಲಿ ಅಭಿಯಾನ ನಡೆಸಿದ್ದು, ಈ ವೇಳೆ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ಕೃಷಿ ಮಸೂದೆ ಮಾತ್ರವಲ್ಲದೇ, ಹತ್ರಾಸ್ ಅತ್ಯಾಚಾರ ಪ್ರಕರಣ ಹಾಗೂ ಲಡಾಖ್‌ನಲ್ಲಿ ಕ್ಯಾತೆ ತೆಗೆದಿರುವ ಚೀನಾ ನಡೆ ವಿಚಾರವಾಗಿ ಸರ್ಕಾರ ತೆಗೆದುಕೊಂಡ ಕ್ರಮ ಸರಿಯಲ್ಲ ಎಂದಿದ್ದಾರೆ.

'ಅಜ್ಜಿಗೆ ರಕ್ಷಣೆ ನೀಡಿದ್ದರು, ಸಿಖ್ಖರ ಋುಣ ನನ್ನ ಮೇಲಿದೆ’

ಹರಿಯಾಣದ ಕುರುಕ್ಷೇತ್ರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲಡಾಖ್ ಗಡಿ ಸಂಘರ್ಷವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಕಿಡಿ ಕಾರಿದ್ದಾರೆ. ಅಲ್ಲದೇ ಒಂದು ವೇಳೆ ಯುಪಿಎ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ, ಕೇವಲ 15 ನಿಮಿಷಗಳಲ್ಲಿ ಲಡಾಖ್ ಗಡಿಯಿಂದ ಚೀನಾವನ್ನು ಹೊರಗಟ್ಟುತ್ತಿದ್ದೆವು ಎಂದೂ ಹೇಳಿದ್ದಾರೆ.

ಈ ಸಂಬಂಧ ಮತ್ತಷ್ಟು ಮಾತನಾಡಿದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಲಡಾಖ್ ಗಡಿಯಲ್ಲಿ ಸುಮಾರು 1,200 ಚ.ಕಿ.ಮೀ ಪ್ರದೇಶವನ್ನು ಚೀನಾ ಅತಿಕ್ರಮಿಸಿದೆ ಆದರೆ ನಮ್ಮ ಹೇಡಿ ಪ್ರಧಾನಿ ಒಂದಿಂಚೂ ಭೂಮಿ ಯಾರೂ ಅತಿಕ್ರಮಿಸಿಕೊಂಡಿಲ್ಲ ಎಂದು ಸುಳ್ಳು ಹೇಳುವ ಮೂಲಕ ಜನರಿಗೆ ಮೋಸ ಮಾಡಿದ್ದಾರೆ. ತಮ್ಮನ್ನು ತಾವು ದೇಶಭಕ್ತರೆಂದು ಕರೆಸಿಕೊಳ್ಳುವ ಮೋದಿ, ಲಡಾಖ್ ಗಡಿಯಲ್ಲಿ ಚೀನಾ ನಮ್ಮ ನೆಲವನ್ನು ಅತಿಕ್ರಮಣ ಮಾಡಿರುವುದನ್ನು ಒಪ್ಪಿಕೊಳ್ಳದೇ ದೇಶಕ್ಕೆ ದ್ರೋಹವೆಸಗಿದ್ದಾರೆಂದು ಆರೋಪಿಸಿದ್ದಾರೆ.

'ದೇಶವನ್ನೇ ಹಿಂದೆ ತಳ್ಳುತ್ತಿರುವವರು ನನ್ನನ್ನು ತಳ್ಳಿದ್ದರಲ್ಲಿ ಅಚ್ಚರಿ ಏನಿಲ್ಲ'

ಇಷ್ಟೇ ಅಲ್ಲದೇ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಚೀನಾವನ್ನು ನಿಯಂತ್ರಣದಲ್ಲಿಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.