ಪಾಕಿಸ್ತಾನದಿಂದ ಗುಂಡು ಬಂದರೆ, ಭಾರತದಿಂದ ಬಾಂಬ್ ಹೋಗಲಿದೆ ಎಂದು ಪ್ರಧಾನಿ ಮೋದಿ ಸೇನೆಗೆ ಸೂಚನೆ ನೀಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದೇ ಭಾರತದ ಗುರಿಯಾಗಿದ್ದು, ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತ್ರ ಮಾತುಕತೆ ನಡೆಸಲು ಸಿದ್ಧ ಎಂದಿದ್ದಾರೆ.

ನವದೆಹಲಿ: ಅಲ್ಲಿಂದ ಗುಂಡು ಬಂದರೆ, ಇಲ್ಲಿಂದ ಬಾಂಬ್ ಹೋಗಲಿ ('Wahan se goli chalegi, yahan se gola chalega') ಎಂದು ಪ್ರಧಾನಿ ನರೇಂದ್ರ ಮೋದಿ ಸೇನೆಗೆ ಸೂಚನೆ ನೀಡಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ಕಾಶ್ಮೀರದ ಬಗ್ಗೆ ಭಾರತ ಸ್ಪಷ್ಟವಾದ ನಿಲುವನ್ನು ಹೊಂದಿದೆ. ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆದುಕೊಳ್ಳುವುದೇ ಈಗ ಉಳಿದಿರುವ ಒಂದೇ ವಿಷಯ. ಈಗ ಮಾತನಾಡಲು ಬೇರೆ ಏನು ಇಲ್ಲ. ಪಾಕಿಸ್ತಾನ ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡಿದ್ರೆ ನಾವು ಸಹ ಮಾತನಾಡಬಹುದು. ನಮಗೆ ಬೇರೆ ಯಾವುದೇ ವಿಷಯದ ಉದ್ದೇಶವಿಲ್ಲ. ನಾವು ಯಾರ ಮಧ್ಯಸ್ಥಿಕೆಯನ್ನು ಬಯಸಲ್ಲ ಮತ್ತು ಭಾರತಕ್ಕೆ ಅದರ ಅಗತ್ಯವು ಇಲ್ಲ ಎಂದು ಪ್ರಧಾನಿಗಳು ಹೇಳಿದ್ದಾರೆ ಎಂದು ಎಎನ್‌ಐ ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ನೀಡಿದೆ. ತನಗೆ ಲಭ್ಯವಿರುವ ಮೂಲಗಳಿಂದ ಈ ಮಾಹಿತಿ ಲಭ್ಯವಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. 

ಈ ಮೂಲಕ ಭಯೋತ್ಪಾದನೆ ವಿರುದ್ಧ ಭಾರತ ರಾಜಿಯಾಗುವುದಿಲ್ಲ. ಪಾಕಿಸ್ತಾನ ದಾಳಿ ಮಾಡಿದ್ರೆ ಭಾರತ ಪ್ರತಿದಾಳಿ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಕದನ ವಿರಾಮ ಘೋಷಣೆಯಾದ ಬಳಿಕವೂ ಪಾಕಿಸ್ತಾನ ಮತ್ತೆ ನರಿಬುದ್ದಿಯನ್ನು ಪ್ರದರ್ಶಿಸಿತ್ತು. ಶನಿವಾರ ರಾತ್ರಿ ಪಾಕಿಸ್ತಾನದ ಡ್ರೋನ್‌ಗಳು ಜಮ್ಮು, ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್ ಭಾಗದಲ್ಲಿ ಹಾರಾಡಿದ್ದವು. ಕದನ ವಿರಾಮವಾದ್ರೂ ಮತ್ತೆ ಸ್ಫೋಟದ ಸದ್ದು ಕೇಳಿಸುತ್ತಿದೆ ಎಂದು ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದರು. 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ
ಉತ್ತರ ಪ್ರದೇಶದ ಲಕ್ನೋದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್ ಮತ್ತು ಪರೀಕ್ಷಾ ಸೌಲಭ್ಯವನ್ನು ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಸೇನೆಯು ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿದೆ. ಈ ಕಾರ್ಯಾಚರಣೆಯನ್ನು ನಡೆಸುವ ಮೂಲಕ, ಭಾರತ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ನಾವು ಏನು ಎಂಬುದನ್ನು ವೈರಿಗಳಿಗೆ ತೋರಿಸಲಾಗಿದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದನೆಯನ್ನು ಕೊನೆಗೊಳಿಸಲು ಭಾರತದ ಆಪರೇಷನ್ ಸಿಂದೂರ ಹೆಸರಿನಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಹೇಳಿದರು.

ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿದೆ. ಆದರೆ ಪಾಕಿಸ್ತಾನ ಸಾಮನ್ಯ ನಾಗರೀಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಇಷ್ಟು ಮಾತ್ರವಲ್ಲ ಭಾರತದಲ್ಲಿರುವ ದೇವಸ್ಥಾನ, ಮಸೀದಿ, ಚರ್ಚ್ ಮತ್ತು ಗುರುದ್ವಾರಗಳನ್ನು ಗುರಿಯಾಗಿಸಿಕೊಂಡಿತ್ತು. ಪಾಕ್ ದಾಳಿಯನ್ನು ನಮ್ಮ ಸೇನೆ ಸಂಪೂರ್ಣವಾಗಿ ವಿಫಲಗೊಳಿಸಿದೆ ಎಂದು ರಕ್ಷಣಾ ಸಚಿವರು ಮಾಹಿತಿ ನೀಡಿದರು. 

ಭಾರತೀಯ ಸೇನೆಯು ಧೈರ್ಯ ಮತ್ತು ಶೌರ್ಯ ಹಾಗೂ ಸಂಯಮವನ್ನು ಪ್ರದರ್ಶಿಸಿದೆ. ಪಾಕಿಸ್ತಾನದ ಅನೇಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಸೂಕ್ತ ಪ್ರತ್ಯುತ್ತರ ನೀಡಿದೆ. ಗಡಿಯ ಪಕ್ಕದಲ್ಲಿರುವ ಸೇನಾ ನೆಲೆಗಳ ಮೇಲೆ ನಾವು ಕ್ರಮ ಕೈಗೊಂಡಿದ್ದಲ್ಲದೆ, ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿಯವರೆಗೂ ಭಾರತೀಯ ಪಡೆಗಳ ಗುರಿ ಇತ್ತು ಎಂದು ರಾಜನಾಥ್ ಸಿಂಗ್ ಹೇಳಿದರು.

ಉರಿ ದಾಳಿ ಬಳಿಕ ನಮ್ಮ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪುಲ್ವಾಮಾ ದಾಳಿ ನಡೆಸಿದಾಗಲೂ ಬಾಲಕೋಟ್‌ ಮೇಲೆ ಏರ್‌ಸ್ಟ್ರೈಕ್ ನಡೆಸಲಾಗಿತ್ತು. ಈಗ ಪಹಲ್ಗಾಮ್ ಘಟನೆಯ ನಂತರ ಭಾರತ ಪಾಕಿಸ್ತಾನಕ್ಕೆ ಪ್ರವೇಶಿಸಿ ಹಲವಾರು ದಾಳಿಗಳನ್ನು ನಡೆಸಿದೆ. ಇದೆಲ್ಲವನ್ನು ಇಡೀ ಜಗತ್ತು ನೋಡುತ್ತಿದೆ ಎಂದು ರಕ್ಷಣಾ ಸಚಿವರು ಹೇಳಿದರು.