Meta Tech Layoffs  Cutsಜಾಗತಿಕ ಟೆಕ್ ದೈತ್ಯ ಮೆಟಾ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಕಾರಣ, ತನ್ನ ಇತಿಹಾಸದಲ್ಲೇ ಅತಿದೊಡ್ಡ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ನಿರ್ಧಾರದಿಂದಾಗಿ ಸುಮಾರು 16,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ವಾಷಿಂಗ್ಟನ್ (ಮಾ.15): ಜಾಗತಿಕ ಟೆಕ್ ದೈತ್ಯ ಮೆಟಾ (Meta) ಸಂಸ್ಥೆಯು ತನ್ನ ಇತಿಹಾಸದಲ್ಲೇ ಅತಿದೊಡ್ಡ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Add Asianetnews Kannada as a Preferred SourcegooglePreferred

16,000 ಉದ್ಯೋಗಿಗಳಿಗೆ ಗೇಟ್‌ಪಾಸ್!

ಅಮೆರಿಕದ ಮೂಲದ ಮೆಟಾ ಕಂಪನಿಯು ತನ್ನ ಒಟ್ಟು ಉದ್ಯೋಗಿಗಳಲ್ಲಿ ಶೇ. 20ರಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ. ಅಂದರೆ ಬರೋಬ್ಬರಿ 16,000 ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆದರೆ, ಈ ಪ್ರಕ್ರಿಯೆ ಯಾವ ದಿನಾಂಕದಿಂದ ಆರಂಭವಾಗಲಿದೆ ಎಂಬ ಬಗ್ಗೆ ಕಂಪನಿಯು ಇನ್ನೂ ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ.

ಉದ್ಯೋಗಿಗಳ ವಜಾಕ್ಕೆ 'ಎಐ' ಕಾರಣ

ಸಿಇಒ ಮಾರ್ಕ್ ಜುಕರ್‌ಬರ್ಗ್ ನೇತೃತ್ವದಲ್ಲಿ ಮೆಟಾ ಸಂಸ್ಥೆಯು ಈಗ 'ಕೃತಕ ಬುದ್ಧಿಮತ್ತೆ' (AI) ತಂತ್ರಜ್ಞಾನದತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಕೆಲಸದ ದಕ್ಷತೆ ಹೆಚ್ಚಿಸಲು ಮತ್ತು ವೆಚ್ಚ ತಗ್ಗಿಸಲು ಮಾನವ ಸಂಪನ್ಮೂಲದ ಬದಲಾಗಿ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಕಂಪನಿ ನಿರ್ಧರಿಸಿರುವುದು ಈ ಬೃಹತ್ ಲೇ-ಆಫ್‌ಗೆ ಮುಖ್ಯ ಕಾರಣವಾಗಿದೆ.

ಮೆಟಾ ಇತಿಹಾಸದಲ್ಲೇ ಅತಿದೊಡ್ಡ ಉದ್ಯೋಗ ಕಡಿತ!

ಒಂದು ವೇಳೆ ಈ 16,000 ಮಂದಿಯ ವಜಾ ಪ್ರಕ್ರಿಯೆ ಜಾರಿಯಾದಲ್ಲಿ, ಇದು ಮೆಟಾ ಸಂಸ್ಥೆ ಆರಂಭವಾದಾಗಿನಿಂದ ನಡೆದ ಅತ್ಯಂತ ದೊಡ್ಡ ಉದ್ಯೋಗ ಕಡಿತ ಎಂದು ಗುರುತಿಸಿಕೊಳ್ಳಲಿದೆ. ಈಗಾಗಲೇ ಹಂತ ಹಂತವಾಗಿ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಬಂದಿರುವ ಕಂಪನಿ, ಈಗ ಶೇ. 20ರಷ್ಟು ದೊಡ್ಡ ಪ್ರಮಾಣದ ಕಡಿತಕ್ಕೆ ಕೈಹಾಕಿರುವುದು ಐಟಿ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.

2022 ರಲ್ಲಿ 11000 ಉದ್ಯೋಗಿಗಳನ್ನ ತೆಗೆದುಹಾಕಿದ್ದ ಮೆಟಾ!

ಮೆಟಾ ಸಂಸ್ಥೆಯು ಉದ್ಯೋಗಿಗಳನ್ನು ವಜಾ ಮಾಡುತ್ತಿರುವುದು ಇದೇ ಮೊದಲೇನಲ್ಲ. 2022ರ ನವೆಂಬರ್‌ನಲ್ಲಿ ಶೇ. 13ರಷ್ಟು ಅಂದರೆ 11,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿತ್ತು. ಅದರ ಬೆನ್ನಲ್ಲೇ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಮತ್ತೆ 10,000 ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಿತ್ತು. ಈಗ ಮೂರನೇ ಬಾರಿಗೆ ದೊಡ್ಡ ಮಟ್ಟದ ಲೇ-ಆಫ್‌ಗೆ ಸಿದ್ಧತೆ ನಡೆಸಿದೆ.