ಬೃಹತ್‌ ಹಾಗೂ ಅತ್ಯಾಧುನಿಕ ಶಿಶು ಮಾರಾಟ ಜಾಲವನ್ನು ತೆಲಂಗಾಣ ಪೊಲೀಸರು ಬೇಧಿಸಿದ್ದು, ಹಲವು ಸ್ಫೋಟಕ ವಿಚಾರಗಳನ್ನು ಬಯಲಿಗೆಳೆದಿದ್ದಾರೆ. ಈ ಜಾಲವೂ ರಾಜ್ಯದುದ್ದಕ್ಕೂ ಕಾರ್ಯಾಚರಿಸಿ ಲಕ್ಷಾಂತರ ರೂಪಾಯಿಗಳಿಗೆ ಮಕ್ಕಳ ಮಾರಾಟ ಹಾಗೂ ಕೊಳ್ಳುವ ವ್ಯವಹಾರ ನಡೆಸುತ್ತಿತ್ತು.

ಹೈದರಾಬಾದ್‌: ಬೃಹತ್‌ ಹಾಗೂ ಅತ್ಯಾಧುನಿಕ ಶಿಶು ಮಾರಾಟ ಜಾಲವನ್ನು ತೆಲಂಗಾಣ ಪೊಲೀಸರು ಬೇಧಿಸಿದ್ದು, ಹಲವು ಸ್ಫೋಟಕ ವಿಚಾರಗಳನ್ನು ಬಯಲಿಗೆಳೆದಿದ್ದಾರೆ. ಈ ಜಾಲವೂ ರಾಜ್ಯದುದ್ದಕ್ಕೂ ಕಾರ್ಯಾಚರಿಸಿ ಲಕ್ಷಾಂತರ ರೂಪಾಯಿಗಳಿಗೆ ಮಕ್ಕಳ ಮಾರಾಟ ಹಾಗೂ ಕೊಳ್ಳುವ ವ್ಯವಹಾರ ನಡೆಸುತ್ತಿತ್ತು.

ಹೀಗೆ ಈ ಮಾರಾಟ ಜಾಲಕ್ಕೆ ಸಿಗುವ ಶಿಶುಗಳು ಜನಿಸಿ ಕೇವಲ ಕೆಲ ದಿನಗಳಷ್ಟೇ ಆಗಿರುತ್ತಿದ್ದವು. ಪ್ರಕರಣದಲ್ಲಿ ಬಂಧಿತರಾದವರ ವಿರುದ್ಧ ಈ ಹಿಂದೆಯೇ ಹಲವು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿದ್ದವು ಎಂದು ಮಾದಪುರ ಡಿಸಿಪಿ ರಿತಿರಾಜ್ ಹೇಳಿದ್ದಾರೆ. ಪ್ರತಿ ಶಿಶುವನ್ನು ಸರಿಸುಮಾರು 15 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈ ಗ್ಯಾಂಗ್ ಆರಂಭದಲ್ಲಿ ಮಕ್ಕಳಿಲ್ಲದ ಶ್ರೀಮಂತ ದಂಪತಿಗಳನ್ನು ಗುರಿಯಾಗಿಸಿಕೊಂಡು ಈ ವ್ಯವಹಾರವನ್ನು ಆರಂಭಿಸಿದ್ದು, ಅವರು ದತ್ತು ಪಡೆದ ಮಗು ಕಾನೂನುಬದ್ಧವೆಂದು ದಂಪತಿಗೆ ಖಚಿತಪಡಿಸಲು ನಕಲಿ ದಾಖಲೆಗಳನ್ನು ಕೂಡ ಒದಗಿಸುತ್ತಿತ್ತು.

ಈಗ ಹೈದರಾಬಾದ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ದೇಶಾದ್ಯಂತ ಮಕ್ಕಳಿಲ್ಲದ ದಂಪತಿಗಳಿಗೆ ಶಿಶುಗಳನ್ನು ಕಳ್ಳಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದ ಸಂಘಟಿತ ಜಾಲದಲ್ಲಿ ಭಾಗಿಯಾಗಿದ್ದ 12 ವ್ಯಕ್ತಿಗಳನ್ನು ಬಂಧಿಸಲಾಗಿದೆ. ತನಿಖೆಯ ಸಮಯದಲ್ಲಿ ಈ ಗ್ಯಾಂಗ್ ರಾಷ್ಟ್ರವ್ಯಾಪಿ ಮಕ್ಕಳ ಪೂರೈಕೆ ಸರಪಳಿಯನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಈ ಜಾಲವೂ ಅಹಮದಾಬಾದ್‌ನಂತಹ ನಗರಗಳಿಂದ ಶಿಶುಗಳನ್ನು ತಂದು ಹೈದರಾಬಾದ್‌ನಲ್ಲಿ ಮಾರಾಟ ಮಾಡುತ್ತಿತ್ತು. ಪೊಲೀಸ್ ಮೂಲಗಳ ಪ್ರಕಾರ, ಪೊಲೀಸರು ಈ ಖದೀಮರನ್ನು ಬಂಧಿಸುವ ಮೊದಲು ಕೇವಲ ಹೈದರಾಬಾದ್ ಪ್ರದೇಶದಲ್ಲಿಯೇ ಕನಿಷ್ಠ 15 ಮಕ್ಕಳನ್ನು ಈ ಮಕ್ಕಳ ಕಳ್ಳಸಾಗಣೆ ಗ್ಯಾಂಗ್ ಯಶಸ್ವಿಯಾಗಿ ಮಾರಾಟ ಮಾಡಿತ್ತು.

ಈ ಕಳ್ಳಸಾಗಣೆ ಜಾಲವೂ ಆಸ್ಪತ್ರೆಗಳೊಂದಿಗೆ ಒಳ್ಳೆಯ ಸಂಪರ್ಕಗಳನ್ನು ಇರಿಸಿಕೊಂಡಿತ್ತು. ಆರೋಪಿಗಳು ಎಂಟು ವಿಭಿನ್ನ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಮತ್ತು ಮಧ್ಯವರ್ತಿಗಳೊಂದಿಗೆ ಉತ್ತಮವಾದ ಸಂಪರ್ಕವನ್ನು ಸ್ಥಾಪಿಸಿಕೊಂಡಿದ್ದರು ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಈ ಮಕ್ಕಳ ಕಳ್ಳಸಾಗಣೆ ಜಾಲದ ಏಜೆಂಟರು ಆರ್ಥಿಕವಾಗಿ ದುರ್ಬಲರಾದ ಪೋಷಕರನ್ನು ಗುರಿ ಮಾಡಿಕೊಳ್ಳುತ್ತಿದ್ದರು ಹಾಗೂ ಬೇಡದ ಶಿಶುಗಳನ್ನು ಪಡೆಯಲು ಪ್ಲಾನ್ ಮಾಡುತ್ತಿದ್ದರು. ನಂತರ ಅವುಗಳನ್ನು ಶ್ರೀಮಂತ ಖರೀದಿದಾರರಿಗೆ ಮಾರಾಟ ಮಾಡುತ್ತಿದ್ದರು. ಪ್ರತಿ ಶಿಶುವನ್ನು ಸರಿಸುಮಾರು 15 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿತ್ತು. ಹೈದರಾಬಾದ್ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ನಡೆಸಿದ ದಾಳಿಯಲ್ಲಿ, ಎರಡು ಶಿಶುಗಳನ್ನು ಕಳ್ಳಸಾಗಣೆದಾರರಿಂದ ರಕ್ಷಿಸಲಾಗಿದೆ. ಶಿಶುಗಳನ್ನು ವೈದ್ಯಕೀಯ ಮೌಲ್ಯಮಾಪನ ಮತ್ತು ರಕ್ಷಣೆಗಾಗಿ ಸರ್ಕಾರಿ ಶಿಶುಪಾಲನಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದರೂ ಒಂದು ತಿಂಗಳ ನಂತರ ಬಾಲಕಿ ಸಾವು

ಬಂಧಿತ 12 ವ್ಯಕ್ತಿಗಳಲ್ಲಿ ಪ್ರಮುಖ ಕಿಂಗ್‌ಪಿನ್‌ಗಳು, ಅಂತಾರಾಜ್ಯ ಕಳ್ಳ ಸಾಗಣೆದಾರರು ಮತ್ತು ಸ್ಥಳೀಯ ಆಸ್ಪತ್ರೆ ಆಧಾರಿತ ಏಜೆಂಟರುಗಳು ಸೇರಿದ್ದಾರೆ. ಸೈಬರಾಬಾದ್ ಪೊಲೀಸರು ಪ್ರಸ್ತುತ ಆಸ್ಪತ್ರೆಗಳ ದಾಖಲೆಗಳು ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ. ಹಣದ ಜಾಡನ್ನು ಪತ್ತೆಹಚ್ಚಲು ಮತ್ತು ಗ್ಯಾಂಗ್‌ಗೆ ಸಹಾಯ ಮಾಡಿರಬಹುದು ಎನ್ನಲಾದ ವೈದ್ಯಕೀಯ ವೃತ್ತಿಪರರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಬಹು ರಾಜ್ಯಗಳಲ್ಲಿ ಬೇರುಗಳನ್ನು ಹೊಂದಿರುವ ಬೃಹತ್ ಜಾಲವಾಗಿದೆ. ರಕ್ಷಿಸಲ್ಪಟ್ಟ ಶಿಶುಗಳ ಜೈವಿಕ ಪೋಷಕರನ್ನು ಪತ್ತೆಹಚ್ಚಲು ಮತ್ತು ಈ ಅಕ್ರಮ ಮಾರ್ಗದ ಮೂಲಕ ಮಾರಾಟವಾದ ಇತರ ಮಕ್ಕಳನ್ನು ಗುರುತಿಸಲು ನಾವು ಗುಜರಾತ್ ಪೊಲೀಸರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸೈಬರಾಬಾದ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾ ಅಕ್ರಮ ವಲಸಿಗರ ಸಂಖ್ಯೆ ಶೇ.10 ರಷ್ಟು ಹೆಚ್ಚಾದರೂ ಅಸ್ಸಾಂ ಬಾಂಗ್ಲಾದೇಶದ ಭಾಗವಾಗಲಿದೆ: ಅಸ್ಸಾಂ ಸಿಎಂ