ಮಹಾರಾಷ್ಟ್ರದ ಥಾಣೆಯಲ್ಲಿ, ನಾಯಿ ಕಚ್ಚಿದ ನಂತರ ರೇಬಿಸ್ ವಿರೋಧಿ ಲಸಿಕೆ ಸೇರಿದಂತೆ ಚಿಕಿತ್ಸೆ ಪಡೆದರೂ 6 ವರ್ಷದ ಬಾಲಕಿ ಒಂದು ತಿಂಗಳ ನಂತರ ರೇಬಿಸ್‌ನಿಂದ ಸಾವನ್ನಪ್ಪಿದ್ದು, ಕುಟುಂಬದವರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ನಾಯಿ ಕಚ್ಚಿದ ಮೇಲೆ ಇಂಜೆಕ್ಷನ್ ಸೇರಿದಂತೆ ಚಿಕಿತ್ಸೆ ಪಡೆದರೂ ಒಂದು ತಿಂಗಳ ನಂತರ ಬಾಲಕಿಯೊಬ್ಬಳು ರೇಬಿಸ್‌ಗೆ ಬಲಿಯಾದಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. 6 ವರ್ಷದ ನಿಶಾ ಶಿಂಧೆ ಎಂಬ ಬಾಲಕಿಗೆ ಒಂದು ತಿಂಗಳ ಹಿಂದೆ ನಾಯಿ ಕಚ್ಚಿತ್ತು. ಆಕೆಗೆ ಆ ಸಮಯದಲ್ಲೇ ಚಿಕಿತ್ಸೆ ನೀಡಲಾಗಿತ್ತು ರೇಬಿಸ್ ವಿರೋಧಿ ಲಸಿಕೆ ಸೇರಿದಂತೆ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ನೀಡಲಾಗಿತ್ತು. ಆಕೆಯ ಆರೋಗ್ಯ ತೀವ್ರವಾಗಿ ಹದಗೆಡುವ ಮೊದಲು ಆಕೆ ಆಕೆ ತನ್ನ 6ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಳು. ಆದರೆ ಹಠಾತ್ ಆಗಿ ಅವಳ ಆರೋಗ್ಯ ಹದಗೆಟ್ಟು ಆಕೆ ಸಾವನ್ನಪ್ಪಿದ್ದಾಳೆ.
ನವೆಂಬರ್ 17ರಂದು ಥಾಣೆಯ ದಿವಾ ಪ್ರದೇಶದಲ್ಲಿ ಮನೆ ಹೊರಗೆ ಆಟವಾಡುತ್ತಿದ್ದಾಗ ಆಕೆಗೆ ಬೀದಿ ನಾಯಿ ಕಚ್ಚಿತ್ತು. ನಾಯಿ ಕಡಿತದಿಂದ ಆಕೆಯ ಹೆಗಲು ಹಾಗೂ ಕೆನ್ನೆಗೆ ಗಾಯವಾಗಿತ್ತು. ಆ ಬಾಲಕಿಯನ್ನು ಆರಂಭದಲ್ಲಿ ಸ್ಥಳೀಯ ವೈದ್ಯರ ಬಳಿ ಕರೆದೊಯ್ದು ನಂತರ ಶಾಸ್ತ್ರಿನಗರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ಆಸ್ಪತ್ರೆ ಕಲ್ಯಾಣ ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ ಅಡಿ ಕಾರ್ಯನಿರ್ವಹಿಸುತ್ತಿದೆ.
ಬಾಲಕಿಯ ತಾಯಿ ಸುಷ್ಮಾ ಶಿಂಧೆ ಅವರ ಪ್ರಕಾರ, ಬಾಲಕಿಗೆ ಎಲ್ಲಾ ಕಡ್ಡಾಯ ಚುಚ್ಚುಮದ್ದುಗಳನ್ನು ನಿಗದಿತ ಸಮಯಕ್ಕೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಆರಂಭಿಕ ಚಿಕಿತ್ಸೆಯ ಸಮಯದಲ್ಲಿ ನಿಶಾ ಬಹಳ ಆರೋಗ್ಯಕರವಾಗಿ ಕಾಣಿಸಿಕೊಂಡಿದ್ದಳು. ಆಕೆ ಡಿಸೆಂಬರ್ 3 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು ಎಂದು ಬಾಲಕಿಯ ತಾಯಿ ಹೇಳಿದ್ದಾರೆ.
ಆದರೆ ಡಿಸೆಂಬರ್ 16ರಂದು ಆಕೆಗೆ ತೀವ್ರವಾದ ಜ್ವರ ಹಾಗೂ ತಲೆನೋವು ಕಾಣಿಸಿಕೊಂಡಿತ್ತು. ಆಂಟಿ ರೇಬೀಸ್ ಇಂಜೆಕ್ಷನ್‌ನ ಕೊನೆ ಡೋಸ್ ಪಡೆದ ಮರುದಿನ ಬಾಲಕಿಯ ವರ್ತನೆಯಲ್ಲಿ ಅಸಹಜ ಬದಲಾವಣೆಯಾಗಿದ್ದು, ಆಕೆ ತನ್ನ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುವುದಕ್ಕೆ ಮುಂದಾದಳು. ಜೊತೆಗೆ ಸಮೀಪದಲ್ಲಿರುವ ವಸ್ತುಗಳನ್ನು ಕೆರೆಯುವುದಕ್ಕೆ ಶುರು ಮಾಡಿದ್ದಳು. ಕೂಡಲೇ ಆಕೆಯನ್ನು ಕೆಡಿಎಂಸಿ ನಡೆಸುವ ಆಸ್ಪತ್ರೆಗೆ ದಾಖಲಿಸಿ ನಂತಸ ಮುಂಬೈನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಅಲ್ಲಿ ಬದುಕುಳಿಯಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಅಕ್ರಮ ವಲಸಿಗರ ಸಂಖ್ಯೆ ಶೇ.10 ರಷ್ಟು ಹೆಚ್ಚಾದರೂ ಅಸ್ಸಾಂ ಬಾಂಗ್ಲಾದೇಶದ ಭಾಗವಾಗಲಿದೆ: ಅಸ್ಸಾಂ ಸಿಎಂ
ಈ ಸಂದರ್ಭದಲ್ಲಿ ಬಾಲಕಿಗೆ ಚಿಕಿತ್ಸೆ ನೀಡುತ್ತಿದ್ದ ಸಮಯದಲ್ಲಿ ನಿಗದಿತ ವೈದ್ಯಕೀಯ ಪ್ರೋಟೋಕಾಲ್‌ಗಳನ್ನು ಪಾಲಿಸಲಾಗಿದೆ ಎಂದು ಕೆಡಿಎಂಸಿ ಆರೋಗ್ಯ ಅಧಿಕಾರಿ ಡಾ ದೀಪಾ ಶುಕ್ಲಾ ಹೇಳಿದ್ದಾರೆ. ಇತ್ತೀಚೆಗೆ ರೇಬಿಸ್‌ಗೆ ಬಲಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾಕುನಾಯಿ ಅಥವಾ ಬೆಕ್ಕುಗಳು ಕಚ್ಚಿದಾಗ ಅವುಗಳ ಉಗುರು ಹಲ್ಲು ತಾಗಿದಾಗ ಕೂಡಲೇ ಶುದ್ಧ ನೀರಿನಿಂದ ಗಾಯವನ್ನು ಸ್ವಚ್ಛಗೊಳಿಸಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ.
ಇದನ್ನೂ ಓದಿ: ಲೈಂಗಿಕ ಕಿರುಕುಳದ ಆರೋಪದ ನಂತರ ವಿದ್ಯಾರ್ಥಿ ಸಾವು: 4ನೇ ಮಹಡಿಯಿಂದ ಕೆಳಗೆ ಹಾರಿರುವ ಶಂಕೆ


