ಮಕ್ಕಳ ಕಳ್ಳಸಾಗಣೆ ಜಾಲ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿದ್ದು, ಎರಡು ನವಜಾತ ಶಿಶುಗಳ ರಕ್ಷಣೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ನವದೆಹಲಿ: ಮಕ್ಕಳ ಕಳ್ಳಸಾಗಣೆ ಜಾಲ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿದ್ದು, ಎರಡು ನವಜಾತ ಶಿಶುಗಳ ರಕ್ಷಣೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ನಿನ್ನೆ ಸಂಜೆಯ ಕೇಂದ್ರೀಯ ತನಿಖಾ ಸಂಸ್ಥೆ ದೆಹಲಿಯ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಮಹಿಳೆಯರು ಸೇರಿದಂತೆ ಅನೇಕರನ್ನು ಬಂಧಿಸಿ ಮಕ್ಕಳ ಕಳ್ಳಸಾಗಣೆ ಬಗ್ಗೆ ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಮಕ್ಕಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಬಿಐ ಬಂಧಿಸಿದ್ದು, ಇದರ ಜೊತೆಗೆ ಎರಡು ನವಜಾತ ಶಿಶುಗಳನ್ನು ರಕ್ಷಣೆ ಮಾಡಲಾಗಿದೆ. ದೆಹಲಿಯ ಕೇಶವಪುರಂನ ಮನೆಯೊಂದರಿಂದ ಈ ಎರಡು ನವಜಾತ ಶಿಶುಗಳನ್ನು ರಕ್ಷಣೆ ಮಾಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಂತೆ ಇದು ಮಕ್ಕಳನ್ನು ಖರೀದಿಸಿ ಮಾರಾಟ ಮಾಡುವ ವ್ಯವಹಾರವನ್ನು ಆರೋಪಿಗಳು ನಡೆಸುತ್ತಿದ್ದರು. ಪ್ರಸ್ತುತ ಸಿಬಿಐ ಮಹಿಳೆಯೊಬ್ಬಳ ವಿಚಾರಣೆ ನಡೆಸುತ್ತಿದ್ದು, ಈ ಮಹಿಳೆ ಮಕ್ಕಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿದ್ದಳು, ಹಾಗೆಯೇ ಮತ್ತೊಬ್ಬ ಆರೋಪಿ ಈ ಮಕ್ಕಳನ್ನು ಖರೀದಿಸುವ ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಮಹಿಳೆ ಮಗುವಿನ ಮಾರಾಟಕ್ಕೆ ಮುಂದಾಗಿದ್ದಳು, ಆತ ಖರೀದಿಗೆ ಬಂದಿದ್ದ ಎಂದು ತನಿಖಾ ಏಜೆನ್ಸಿ ಹೇಳಿದೆ.
