Asianet Suvarna News Asianet Suvarna News

ಮಗು ಸತ್ತಿದೆ ಎಂದು ಹೇಳಿ ಮಕ್ಕಳ ಮಾರಾಟ ಮಾಡುತ್ತಿದ್ದ ನರ್ಸ್! ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದ ಪ್ರಕರಣ ಬಯಲಿಗೆ!

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಗಂಟೆಗೊಂದು ಹೆರಿಗೆಯಾಗುತ್ತವೆ. ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಜಿಲ್ಲಾಸ್ಪತ್ರೆ ಬಂದ ಮೇಲೆ ಹೆರಿಗಾಗಿಯೇ ಫೇಮಸ್ ಆಗಿದೆ. ಹೀಗಾಗಿ, ಕೊಪ್ಪಳ ಜಿಲ್ಲೆ ಅಷ್ಟೇ ಅಲ್ಲ ಸುತ್ತಮುತ್ತಲ ಜಿಲ್ಲೆಯಿಂದಲೂ ಹೆರಿಗೆಗಾಗಿ ದಾಖಲಾಗುತ್ತಾರೆ. ಶುಶ್ರೂಷಕಿಯೋರ್ವಳ ಕೈಚಳಕದಿಂದಲೇ ಮಗು ಸಾವಿನ ನಾಟಕವಾಡಿ, ಅಮ್ಮನ ಮಡಿಲಿನಿಂದ ಬೇರ್ಪಡಿಸಿ, ಮಾರಾಟ ಮಾಡುವ ದಂಧೆ ಮಾಡುತ್ತಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

infant trafficking racket in koppal district hospital rav
Author
First Published Feb 25, 2024, 8:18 AM IST

- ಸೋಮರಡ್ಡಿ ಅಳವಂಡಿ

ಕೊಪ್ಪಳ (ಫೆ.25): ಈ ಭಾಗದ ಜೀವನಾಡಿ ಎಂದೇ ಖ್ಯಾತವಾಗಿರುವ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಆರು ವರ್ಷಗಳ ಹಿಂದೆ ನಡೆದ ಅಮಾನವೀಯ ಘಟನೆಯೊಂದು ಇದೀಗ ಬೆಳಕಿಗೆ ಬಂದಿದ್ದು, ಹೆರಿಗೆಯಾದ (2017 ರಲ್ಲಿ) ತಕ್ಷಣವೇ, ಆರೋಗ್ಯವಾಗಿರುವ ಮಗು ಮೃತವಾಗಿದೆ ಎಂಬ ಆಘಾತಕಾರಿ ಸುಳ್ಳು ಮಾಹಿತಿಯನ್ನು ಅವರ ತಾಯಿಗೆ ತಿಳಿಸಿ ಆ ಮಗುವನ್ನು ಕಳವು ಮಾಡಿ ಬಳಿಕ ಆರೈಕೆ ಮಾಡಿ ಮಾರಾಟ ಮಾಡುತ್ತಿರುವ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

9 ತಿಂಗಳು ತಪಸ್ಸು ಮಾಡಿ ಹೆತ್ತ ಮಗು ಭೂಮಿಗೆ ಬಂತಲ್ಲ ಎಂದು ಅಮ್ಮ ಖುಷಿ ಪಡುವಾಗಲೇ, ಆರೋಗ್ಯವಾಗಿರುವ ಮಗುವಿನ ಸಾವಿನ ಸುದ್ದಿಯನ್ನು ಅದೇ ಆಸ್ಪತ್ರೆಯ ಶುಶ್ರೂಶಕಿಯೋರ್ವಳು ಹೇಳಿ, ಸತ್ತ ಮಗುವನ್ನು ನೋಡಬಾರದು ಎಂಬ ಸಬೂಬು ನೀಡಿ ದೂರ ಮಾಡಿದ್ದು, ಆ ಮಗುವನ್ನು ತಾನು ಕರೆದೊಯ್ದು ಆರೈಕೆ ಮಾಡಿ ಮಾರಾಟ ಮಾಡಿದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಮಕ್ಕಳ ಮಾರಾಟ ಗ್ಯಾಂಗ್‌ನಿಂದ 10 ಶಿಶು ಬಿಕರಿ: ಖತರ್ನಾಕ್‌ ಖದೀಮರ ಬಂಧನ

ಈ ಕುರಿತು ಮಹಿಳಾ ಮತ್ತು ಮಕ್ಕಳ ನಿರ್ದೇಶನಾಲಯ ಬೆಂಗಳೂರಿಗೆ ದಾಖಲೆ, ಉದಾಹರಣೆ ಸಮೇತ ದೂರು ಬಂದಿರುವ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ಜಿಲ್ಲಾಡಳಿತವೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆಗೆ ಆದೇಶಿಸಿದೆ. ಆದರೆ, ಜಿಲ್ಲಾಸ್ಪತ್ರೆಯ ವೈದ್ಯರಿಂದಲೇ ತನಿಖೆ ನಡೆಸುತ್ತಿರುವುದು ಟೀಕೆಗೆ ಗುರಿಯಾಗಿದೆ. ತಟಸ್ಠ ವೈದ್ಯಕೀಯ ತಂಡದಿಂದ ತನಿಖೆಗೆ ಒತ್ತಾಯ ಕೇಳಿ ಬಂದಿದೆ.

ನಡೆದಿದ್ದು ಹೇಗೆ?

ಜಿಲ್ಲಾಸ್ಪತ್ರೆಯಲ್ಲಿ ಗಂಟೆಗೊಂದು ಹೆರಿಗೆಯಾಗುತ್ತವೆ. ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಜಿಲ್ಲಾಸ್ಪತ್ರೆ ಬಂದ ಮೇಲೆ ಹೆರಿಗಾಗಿಯೇ ಫೇಮಸ್ ಆಗಿದೆ. ಹೀಗಾಗಿ, ಕೊಪ್ಪಳ ಜಿಲ್ಲೆ ಅಷ್ಟೇ ಅಲ್ಲ ಸುತ್ತಮುತ್ತಲ ಜಿಲ್ಲೆಯಿಂದಲೂ ಹೆರಿಗೆಗಾಗಿ ದಾಖಲಾಗುತ್ತಾರೆ. ಶುಶ್ರೂಷಕಿಯೋರ್ವಳ ಕೈಚಳಕದಿಂದಲೇ ಮಗು ಸಾವಿನ ನಾಟಕವಾಡಿ, ಅಮ್ಮನ ಮಡಿಲಿನಿಂದ ಬೇರ್ಪಡಿಸಿ, ಮಾರಾಟ ಮಾಡುವ ದಂಧೆ ಮಾಡುತ್ತಿದ್ದಾಳೆ ಎನ್ನಲಾಗುತ್ತಿದೆ. 

2017ರ ಎಪ್ರಿಲ್ 25ರಂದು ಹೆರಿಗೆಯಾದ ತಕ್ಷಣ ಅಮ್ಮನಿಗೆ ಮಗು ಸತ್ತಿದೆ ಎಂದು ತಿಳಿಸಿ, ಮಗುವನ್ನು ಶುಶ್ರೂಷಕಿಯೇ ತನ್ನ ಬಳಿ ಇಟ್ಟುಕೊಂಡು ಆರೈಕೆ ಮಾಡುತ್ತಿದ್ದಾಳೆ ಎನ್ನುವುದು ಸದ್ಯದ ದೂರು. ಇಂಥದ್ದೊಂದು ದೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಕಚೇರಿಯಲ್ಲಿ 2023ರ ಡಿಸೆಂಬರ್‌ 11ರಂದೇ ಸಲ್ಲಿಕೆಯಾಗಿದೆ. ಈ ದೂರಿನ ಕುರಿತು ಪರಿಶೀಲಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಪತ್ರದನ್ವಯ ಜಿಲ್ಲಾಧಿಕಾರಿ 2023ರ ಡಿಸೆಂಬರ್‌ 16ರಂದೇ ಕಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದ್ದು, ಕಿಮ್ಸ್ ನಿರ್ದೇಶಕರು ತನಿಖಾ ತಂಡ ರಚನೆ ಮಾಡಿ 2024ರ ಜನೇವರಿ 1ರಂದು ಆದೇಶಿಸಿದ್ದಾರೆ. 

ಜಿಲ್ಲಾಸ್ಪತ್ರೆಯ ಅಧೀಕ್ಷಕರನ್ನೊಳಗೊಂಡು 6 ವೈದ್ಯರು ಇರುವ ತನಿಖಾ ತಂಡ ರಚನೆ ಮಾಡಲಾಗಿದೆ. ಆದರೆ ಇದುವರೆಗೆ ತನಿಖಾ ತಂಡ ಯಾವುದೇ ವರದಿ ಸಲ್ಲಿಕೆ ಮಾಡಿಲ್ಲ. ಇದಷ್ಟೇ ಅಲ್ಲ, ಇನ್ನೊಂದು ಘಟನೆಯ ಸಾಕ್ಷಿಯನ್ನೂ ನೀಡಲಾಗಿದೆ. ಇದೇ ಶುಶ್ರೂಷಕಿಯ ಮನೆಯಲ್ಲಿ ಸುಮಾರು18-23 ವರ್ಷದ ಯುವಕನೋರ್ವ ಇದ್ದಾನೆ. ಈತನನ್ನು ತನ್ನ ಸಹೋದರ ಎಂದು ಹೇಳಿಕೊಳ್ಳುತ್ತಾಳೆ. 60-70 ವರ್ಷದ ತಾಯಿಗೆ ಹೆರಿಗೆಯಾಗಿದೆ ಎಂದು ದಾಖಲೆ ಸೃಷ್ಟಿ ಮಾಡಿದ್ದಾಳೆ. ಆದರೆ ಈ ಯುವಕನು ಸಹ ಜಿಲ್ಲಾಸ್ಪತ್ರೆಯಲ್ಲಿಯೇ ಕಳ್ಳತನ ಮಾಡಿ ಬಳಿಕ ಆರೈಕೆ ಮಾಡಿದ್ದ ಶಿಶುವೇ ಆಗಿದೆ ಎನ್ನುವುದು ದೂರುದಾರರ ವಾದ. ಕಳ್ಳತನ ಮಾಡಿದ ಮಗು ಮಾರಾಟವಾಗದೇ ಇದ್ದಾಗ ತಾನೇ ಆರೈಕೆ ಮಾಡುತ್ತಾಳೆ. ಕಡುಬಡವರನ್ನು ಗುರುತಿಸಿ, ಹೆರಿಗೆಯಾದ ತಕ್ಷಣ ತನ್ನ ಕೈಗೆ ಬಂದಾಗ ಮಗು ಸತ್ತಿದೆ ಎಂದು ಹೇಳಿ, ತೋರಿಸದೆಯೇ ತೆಗೆದುಕೊಂಡು ಹೋಗುತ್ತಾಳೆ. ನಂತರ ಆರೈಕೆ ಮಾಡಿ, ಮಾರಾಟ ಮಾಡುತ್ತಾಳೆ. ಮಾರಾಟವಾಗದ ಇಬ್ಬರು ಈಗ ಅವರ ಮನೆಯಲ್ಲಿಯೇ ಬೆಳೆಯುತ್ತಿದ್ದು, ಡಿಎನ್ಎ ಟೆಸ್ಟ್ ಮಾಡಿದರೆ ಸತ್ಯ ಹೊರಬರುತ್ತದೆ ಎಂಬ ಆಗ್ರಹ ಕೇಳಿ ಬರುತ್ತಿದೆ.

ಸಮಂತಾಳ ಯಶೋಧಾ ಸಿನಿಮಾ ರೀತಿ ಮಹಿಳೆಯರ ಗರ್ಭದಲ್ಲಿ ಮಕ್ಕಳನ್ನು ಬೆಳಸಿ, ಹೆರಿಗೆ ನಂತರ ಬೆಂಗಳೂರಲ್ಲಿ ಮಗು ಮಾರಾಟ!

ಸತ್ಯ ಬೆಳಕಿಗೆ ಬರಲೇಬೇಕು:
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇದುವರೆಗೂ ಸತ್ತಿರುವ ಮಕ್ಕಳ ಸಂಖ್ಯೆ ಎಷ್ಟು? ಹೆರಿಗೆಯಾಗುತ್ತಲೇ ಮೃತಪಟ್ಟ ಮಕ್ಕಳು ಎಷ್ಟು? ಎನ್ನುವುದನ್ನು ತನಿಖೆ ಮಾಡಬೇಕು. ಈಗ ಶುಶ್ರೂಷಕಿಯ ಮನೆಯಲ್ಲಿರುವ ಮಕ್ಕಳ ಡಿಎನ್‌ಎ ಟೆಸ್ಟ್ ಮಾಡಿ, ಆಕೆಯನ್ನು ವಿಚಾರಣೆಗೆ ಒಳಪಡಿಸಿದರೆ ಇಡೀ ಪ್ರಕರಣ ಬೆಳಕಿಗೆ ಬರುತ್ತದೆ. ಇದರ ಹಿಂದಿರುವ ಮುಖವಾಡ ಕಳಚಿ ಬೀಳುತ್ತದೆ ಎಂದು ಹೇಳಲಾಗುತ್ತಿದೆ.

ಪ್ರಕರಣದ ಕುರಿತು ತನಿಖೆ ನಡೆಸಲು ಸಮಿತಿ ರಚನೆ ಮಾಡಲಾಗಿದೆ. ಇದು ಅತ್ಯಂತ ಗಂಭೀರ ಪ್ರಕರಣವಾಗಿರುವುದರಿಂದ ವೈದ್ಯರನ್ನೊಳಗೊಂಡ ಸಮಿತಿ ತನಿಖಾ ವರದಿ ಸಲ್ಲಿಸಿದ ಮೇಲೆ ಸತ್ಯ ಗೊತ್ತಾಗುತ್ತದೆ ಎನ್ನುತ್ತಾರೆ ಕೊಪ್ಪಳ ಕಿಮ್ಸ್ ನಿರ್ದೇಶಕ ವಿಜಯಕುಮಾರ ಇಟಗಿ.

Follow Us:
Download App:
  • android
  • ios