* ಕೋವಿಡ್ ಗುಳಿಗೆ ಉತ್ಪಾದನೆಗೆ  ಹೈದ್ರಾಬಾದ್‌ ಕಂಪನಿ ಅರ್ಜಿ* ತಿಂಗಳಲ್ಲಿ 8 ಕೋಟಿ ಗುಳಿಗೆ ಉತ್ಪಾದಿಸುವ ಗುರಿ* ಅಮೆರಿಕ ಕಂಪನಿ ಉತ್ಪಾದಿಸಿರುವ ಮೊಲ್ನುಪಿರಾವಿರ್‌ ಮಾತ್ರೆ

ನವದೆಹಲಿ (ಅ. 29) ಕೋವಿಡ್‌ (Coronavirus) ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಗುಳಿಗೆ (Tablet) ಭಾರತದಲ್ಲೂ ಉತ್ಪಾದನೆಯಾಗುವ ಸಾಧ್ಯತೆ ಇದೆ. ಅಮೆರಿಕ ಮೂಲದ ಮೆರ್ಕ್ ಆ್ಯಂಡ್‌ ಕೋ ಅಭಿವೃದ್ಧಿಪಡಿಸಿರುವ ಮೋಲ್ನುಪಿರಾವಿರ್‌ ಗುಳಿಗೆಯನ್ನು ಭಾರತದಲ್ಲೂ ಉತ್ಪಾದಿಸಲು ಅನುಮತಿ ಕೋರಿ ಹೈದ್ರಾಬಾದ್‌ (Hyderabad) ಮೂಲದ ಆಪ್ಟಿಮಸ್‌ ಫಾರ್ಮಾ, ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಈ ಗುಳಿಗೆ ಬಳಸಲು ಅಮೆರಿಕ(USA) ಸರ್ಕಾರ ಇನ್ನೂ ಅಂತಿಮ ಅನುಮೋದನೆ ನೀಡಿಲ್ಲ.

‘ಭಾರತದಲ್ಲಿ ಗುಳಿಗೆಯ ತುರ್ತು ಬಳಕೆಗೆ ಒಂದೊಮ್ಮೆ ಅನುಮೋದನೆ ದೊರೆತರೆ ಕಂಪನಿಯು ತಿಂಗಳಲ್ಲಿ 8 ಕೋಟಿ ಗುಳಿಗೆಗಳನ್ನು ಉತ್ಪಾದಿಸಲಿದೆ. ಪ್ರತಿ ಗುಳಿಗೆಗೆ ಅಂದಾಜು 30 ರು.ದರ ಇರಲಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.

ಕೊರೋನಾ ಲಸಿಕೆ ಬಗ್ಗೆ ಯಾಕೆ ಅನುಮಾನ?

ಒಬ್ಬ ಕೋವಿಡ್‌ ರೋಗಿಯು ಚಿಕಿತ್ಸೆಗಾಗಿ ಇಂಥ 40 ಗುಳಿಗೆಗಳನ್ನು ನುಂಗಬೇಕಾಗುತ್ತದೆ. ಅದಕ್ಕೆ ಒಟ್ಟು ಅಂದಾಜು 1196 ರು. ವೆಚ್ಚ ತಗುಲಬಹುದು ಎಂದು ತಿಳಿಸಿದ್ದಾರೆ.

ಸೌಮ್ಯ ಪ್ರಮಾಣದ ಸೋಂಕು ಇರುವ ರೋಗಿಗಳ ಮೇಲೆ ಗುಳಿಗೆ ಪ್ರಯೋಗಿಸಲು ಆಪ್ಟಿಮಸ್‌ ಫಾರ್ಮಾ ಕಳೆದ ಮೇನಲ್ಲಿ ಭಾರತೀಯ ಔಷಧ ಮಹಾ ನಿಯಂತ್ರಕ ಮಂಡಳಿಯಿಂದ ಅನುಮೋದನೆ ಪಡೆದಿತ್ತು. ಈ ಬಗ್ಗೆ ಹೇಳಿಕೆ ನೀಡಿರುವ ಕಂಪನಿ, ಮೊಲ್ನುಪಿರಾವಿರ್‌ ಅಂತಿಮ ಹಂತದ ಪರೀಕ್ಷೆ ಮುಕ್ತಾಯವಾಗಿದ್ದು ಗುಳಿಗೆ ಸೇವಿಸಿದ 5ನೇ ದಿನದಲ್ಲಿ ಶೇ.78ರಷ್ಟುರೋಗಿಗಳ ವರದಿ ಕೋವಿಡ್‌ ನೆಗೆಟಿವ್‌ ಬಂದಿದೆ.

ಲಸಿಕೆ ಸಾಧನೆ; ಭಾರತ ನೂರು ಕೋಟಿ ಜನರಿಗೆ ಲಸಿಕೆ ನೀಡಿದ್ದು ಜಗತ್ತು ಮೆಚ್ಚುವಂತಹ ಸಾಧನೆ ಮಾಡಿದೆ. ಅತಿದೊಡ್ಡ ಲಸಿಕಾ ಅಭಿಯಾನ ಯಶಸ್ಸು ಕಂಡಿದ್ದು ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಎರಡು ವರ್ಷದಿಂದ ಕಾಡುತ್ತಿದ್ದ ಮಹಾಮಾರಿ ತಹಬದಿಗೆ ಬಂದಿದೆ.