ಸುವೆಂದು ಅಧಿಕಾರಿಯನ್ನು ಅಲ್ಲಾ ಬೇಗ ಕರೆಯಿಸಿಕೊಳ್ಳುತ್ತಾನೆ, ಸುವೆಂದು ಸಾವಿಗಾಗಿ ಪ್ರಾರ್ಥಿಸುತ್ತೇನೆ ಎಂದು ಟಿಎಂಸಿಯಿಂದ ಹೊರನಡೆದು ಹೊಸ ಪಕ್ಷ ಕಟ್ಟಿದ ಹುಮಾಯುನ್ ಕಬೀರ್ ವಿವಾದ ಸೃಷ್ಟಿಸಿದ್ದಾರೆ. ಆದರೆ ಬಿಸಿಮುಟ್ಟುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ.
ಕೋಲ್ಕತಾ (ಸೆ.27) ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೆಂದು ಅಧಿಕಾರಿ ಸಾವಿಗಾಗಿ ನಾನು ಪ್ರಾರ್ಥಿಸುತ್ತೇನೆ. ಅಲ್ಲಾ ಆತನ ಬೇಗ ಕರೆಯಿಸಿಕೊಳ್ಳುವ ವಿಶ್ವಾಸವಿದೆ ಎಂದು ಟಿಎಂಸಿಯಿಂದ ಹೊರನಡೆದು ಹೊಸ ಪಕ್ಷ ಕಟ್ಟಿದ ವಿವಾದಿತ ನಾಯಕ ಹುಮಾಯುನ್ ಕಬೀರ್ ಹೇಳಿದ್ದಾರೆ. ಈ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಫೈಯರ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಸುವೆಂದು ಅಧಿಕಾರಿ ವಿರುದ್ಧ ನೀಡಿದ ಹೇಳಿಕೆ ಬೆನ್ನಲ್ಲೇ ಹುಮಾಯುನ್ ಕಬೀರ್‌ಗೆ ತಪ್ಪಿನ ಅರಿವಾಗಿದೆ. ತಕ್ಷಣವೇ ಮಾತು ಬದಲಿಸಿ ಹೇಳಿಕೆ ನೀಡಿದ್ದಾರೆ. ಆದರೆ ಕೋಲಾಹಲ ಅಲ್ಲಿಗೆ ನಿಂತಿಲ್ಲ.
ವಿವಾದಿತ ಹೇಳಿಕೆಯಿಂದ ಕೋಲಾಹಲ
ಬಾಬ್ರಿ ಮಸೀದಿ ನಿರ್ಮಾಣ ಸೇರಿದಂತೆ ಹಲವು ವಿವಾದಾತ್ಮಕ ಹೇಳಿಕೆ ಹಾಗೂ ನಡೆಗಳಿಂದ ಗುರುತಿಸಿಕೊಂಡಿರುವ ಹುಮಾಯುನ್ ಕಬೀರ್ ಇದೀಗ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸುವೆಂದು ಅಧಿಕಾರಿ ಸಾವಿಗೆ ನಾನು ಅಲ್ಲಾ ಬಳಿ ಪ್ರಾರ್ಥಿಸಿದ್ದೇನೆ. ಅಲ್ಲಾ ಸುವೆಂದು ಅಧಿಕಾರಿಯನ್ನು ಬೇಗನೆ ಕರೆಯಿಸಿಕೊಳ್ಳಲಿ ಎಂದು ಹುಮಾಯುನ್ ಕಬೀರ್ ಹೇಳಿದ್ದಾರೆ. ಸುವೆಂದು ಅಧಿಕಾರಿ ಪೊಲೀಸರು ನಮಗೆ ತೊಂದರೆ ಕೊಡುತ್ತಿದ್ದಾರೆ. ಅಧಿಕಾರಿ ಸಾವಿನಿಂದ ಎಲ್ಲಾ ಕೊನೆಗೊಳ್ಳಲಿದೆ ಎಂದು ಹುಮಾಯುನ್ ಕಬೀರ್ ಹೇಳಿದ್ದಾರೆ.
ಇಂದಿರಾ ಗಾಂಧಿ, ಅಜಿತ್ ಪವಾರ್ ಸಾವು ಉಲ್ಲೇಖಿಸಿದ ಕಬೀರ್
ಹುಮಾನಯುನ್ ಕಬೀರ್ ವಿವಾದಿತ ಹೇಳಿಕೆಯಲ್ಲಿ ಕೆಲ ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಇಂದಿರಾ ಗಾಂಧಿ, ಇತ್ತೀಚೆಗೆ ಸಂಭವಿಸಿದ ಅಜಿತ್ ಪವಾರ್ ನಿಧನ ಸೇರಿದಂತೆ ಹಲವು ಘಟನೆಗಳನ್ನು ಕಬೀರ್ ಉಲ್ಲೇಖಿಸಿದ್ದಾರೆ. ಇದೇ ರೀತಿ ಸುವೆಂದು ಅಧಿಕಾರಿಯ ಅವಧಿಯೂ ಅಂತ್ಯಗೊಳ್ಳಲಿದೆ ಎಂದಿದ್ದಾರೆ.
ಬಿಸಿಮುಟ್ಟುತ್ತಿದ್ದಂತೆ ಯೂಟರ್ನ್
ಹುಮಾಯುನ್ ಕಬೀರ್ ವಿವಾದಿತ ಹೇಳಿಕೆ ನೀಡಿದ ಬೆನ್ನಲ್ಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ. ಟೀಕೆಗಳು, ಬೆದರಿಕೆಗಳು ಎದುರಾಗಿದೆ. ಇತ್ತ ಸುವೆಂದು ಅಧಿಕಾರಿ ಖಡಕ್ ಹಾಗೂ ಫೈಯರ್ ಬ್ರ್ಯಾಂಡ್ ಸಿಎಂ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಮೊದಲೇ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ. ಸುವೆಂಧು ಅದಿಕಾರಿಗೆ ದೇವರು ದೀರ್ಘಾಯುಷ್ಯ ನೀಡಲಿ, ಪ್ರಧಾನಿಯಾಗಲಿ ಎಂದು ಹಾರೈಸಿದ್ದಾರೆ.
ಪೊಲೀಸ್ ದರ್ಪದ ವಿರುದ್ದ ನನ್ನ ಹೇಳಿಕೆಯಾಗಿತ್ತು. ನಮ್ಮ ಪಕ್ಷ ಹಾಗೂ ಬೆಂಬಲಿಗರಿಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಆಕ್ರೋಶದಲ್ಲಿ ಹೇಳಿಕೆ ನೀಡಿದ್ದೆ. ಸುವೆಂದು ಅಧಿಕಾರಿ ಬಗ್ಗೆ ನನಗೆ ದ್ವೇಷವಿಲ್ಲ ಎಂದಿದ್ದಾರೆ. ಆದರೆ ಕಬೀರ್ ಹೇಳಿಕೆ ಇದೀಗ ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಸೃಷ್ಟಿಸಿದೆ.


