ಅಮೃತ್‌ಪಾಲ್‌ನನ್ನು ತಾವು ಬಂಧಿಸಿದ್ದಾಗಿ ಪೊಲೀಸರು ಹೇಳಿಕೊಂಡಿದ್ದರೂ, ಆತ ವಿಶೇಷ ಕಾರಣಗಳಿಗಾಗಿ ರೋಡ್‌ ಗ್ರಾಮಕ್ಕೆ ಬಂದು ಅಲ್ಲೇ ಶರಣಾಗಲು ನಿರ್ಧರಿಸಿದ್ದ ಎಂದು ಮೂಲಗಳು ತಿಳಿಸಿವೆ.

ಚಂಡೀಗಢ (ಏಪ್ರಿಲ್ 24, 2023): ‘ವಾರಿಸ್‌ ಪಂಜಾಬ್‌ ದೇ’ ಸಂಘಟನೆಯ ಮುಖ್ಯಸ್ಥನಾಗಿ ಗುರುತಿಸಿಕೊಂಡಿರುವ ಅಮೃತ್‌ಪಾಲ್‌ ಸಿಂಗ್ ದಿಢೀರ್‌ ನಾಯಕನಾಗಿ ತೆರೆದುಕೊಂಡವನು. ಪಂಜಾಬ್‌ನ ಅಮೃತಸರ ಮೂಲದ ಅಮೃತ್‌ಪಾಲ್‌ನ ಕುಟುಂಬ ದುಬೈನಲ್ಲಿ ಸಾರಿಗೆ ಉದ್ಯಮ ಹೊಂದಿದೆ. 2012ರಿಂದಲೂ ಅಮೃತ್‌ಪಾಲ್‌ ಸಿಂಗ್ ಅಲ್ಲೇ ಇದ್ದ.

ಈ ನಡುವೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿ ಸಿಖ್‌ ಸಂಘಟನೆಗಳು ದೆಹಲಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದಾಗ, ಅಮೃತ್‌ ದುಬೈನಿಂದ ಬಂದು ಹೋರಾಟದಲ್ಲಿ ಭಾಗಿಯಾಗಿದ್ದ. ದಿಲ್ಲಿ ಹೋರಾಟದ ವೇಳೆ 2021ರ ಜನವರಿ 26ರಂದು ಕೆಂಪುಕೋಟೆ ವೇಳೆ ನಡೆದ ಹಿಂಸಾಚಾರದಲ್ಲಿ ದೀಪ್‌ ಸಿಧು ಎಂಬಾತ ಬಂಧನಕ್ಕೆ ಒಳಗಾಗಿದ್ದ. ಆತ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ವಾರಿಸ್‌ ಪಂಜಾಬ್‌ ದೇ ಎಂಬ ಸಂಘಟನೆ ಕಟ್ಟಿದ್ದ.

ಇದನ್ನು ಓದಿ: ಕೊನೆಗೂ ಸಿಕ್ಕಿಬಿದ್ದ ಖಲಿಸ್ತಾನಿ ಉಗ್ರ ಅಮೃತ್‌ಪಾಲ್‌ ಸಿಂಗ್‌: ಪಂಜಾಬ್‌ನಲ್ಲಿ ಅರೆಸ್ಟ್‌

ಆದರೆ 2022ರಲ್ಲಿ ದೀಪ್‌ ಸಿಧು ಅಪಘಾತಕ್ಕೆ ಬಲಿಯಾದ ಬಳಿಕ ಅಮೃತ್‌ಪಾಲ್‌ ಸಿಂಗ್ ತನ್ನನ್ನು ತಾನು ಸಂಘಟನೆಯ ನೇತಾರ ಎಂದು ಬಿಂಬಿಸಿಕೊಳ್ಳಲು ಆರಂಭಿಸಿದ್ದ. ದೀಪ್‌ ಸಿಧು ಪಂಜಾಬ್‌ನ ಹಕ್ಕುಗಳಿಗಾಗಿ ಹೋರಾಡಲು ಸಂಘಟನೆ ಕಟ್ಟಿದ್ದರೆ, ಅಮೃತ್‌ಪಾಲ್‌ ಸಿಂಗ್ ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಸಶಸ್ತ್ರ ಹೋರಾಟಕ್ಕೆ ಕರೆ ಕೊಟ್ಟಿದ್ದ.

ಭಿಂದ್ರನ್‌ವಾಲೆ ಶಿಷ್ಯ:
ಪ್ರತ್ಯೇಕ ಖಲಿಸ್ತಾನಿ ಹೋರಾಟದ ವೇಳೆ ಹತನಾದ ಉಗ್ರ ಭಿಂದ್ರನ್‌ವಾಲೆಯ ಕಟ್ಟಾ ಅನುಯಾಯಿ ಅಮೃತ್‌ಪಾಲ್‌ ಸಿಂಗ್. ಹೀಗಾಗಿಯೇ ಸದಾ ಆತನಂತೆ ತನ್ನ ಜೊತೆ ಬಿಲ್ಲುಬಾಣ, ಖಡ್ಗ ಇಟ್ಟುಕೊಂಡು ಅವನಂತೆ ವಸ್ತ್ ರತೊಟ್ಟು, ಪ್ರಚೋದನಾಕಾರಿ ಭಾಷಣಗಳ ಮೂಲಕ ಯುವಸಮೂಹದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ.

ಇದನ್ನೂ ಓದಿ: ದಿಲ್ಲಿಯಲ್ಲಿ ಮಾರುವೇಷದಲ್ಲಿ ಉಗ್ರ ಅಮೃತ್‌ಪಾಲ್‌ ಪ್ರತ್ಯಕ್ಷ: ಮಾಸ್ಕ್‌, ಸನ್‌ಗ್ಲಾಸ್‌ ಧರಿಸಿ ಸುತ್ತಾಟ

ಈ ನಡುವೆ ಕಳೆದ ಫೆಬ್ರವರಿಯಲ್ಲಿ ಅಪಹರಣ ಪ್ರಕರಣದ ಆರೋಪಿ ಲವ್‌ಪ್ರೀತ್‌ಸಿಂಗ್‌ ಬಿಡುಗಡೆಗೆ ಒತ್ತಾಯಿಸಿ ತನ್ನ ಬೆಂಬಲಿಗರೊಂದಿಗೆ ಠಾಣೆ ಮೇಲೆ ದಾಳಿ ಮಾಡಿ ಅಮೃತ್‌ಪಾಲ್‌ ಸಿಂಗ್ ಸುದ್ದಿಯಾಗಿದ್ದ. ನಂತರ ಮಾದಕ ವ್ಯಸನ ಕೇಂದ್ರಗಳ ಹೆಸರಲ್ಲಿ ಯುವಕರನ್ನು ಒಗ್ಗೂಡಿಸಿ ಅಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಿದ್ದು ಪತ್ತೆಯಾಗಿತ್ತು. ತನಿಖೆ ತೀವ್ರಗೊಂಡ ಬಳಿಕ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಬ್ರಿಟನ್‌ ಸೇರಿದಂತೆ ಹಲವು ದೇಶಗಳಲ್ಲಿನ ಖಲಿಸ್ತಾನಿ ಸಂಘಟನೆಗಳ ಜತೆ ನಂಟು, ಕೆಲ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದ್ದು ಕಂಡುಬಂದಿತ್ತು.

ಪೋಷಕರ ಪ್ರತಿಕ್ರಿಯೆ

  • ಅವನು ಸಿಂಹ ಮತ್ತು ಸಿಂಹದಂತೆ ಶರಣಾಗನಾಗಿದ್ದಾನೆ. ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ - ಬಲ್ವಿಂದರ್‌ ಕೌರ್‌, ಅಮೃತ್‌ಪಾಲ್‌ನ ತಾಯಿ
  • ನನ್ನ ಪುತ್ರ ಮಾದಕ ವಸ್ತು ಜಾಲದ ವಿರುದ್ಧ ಹೋರಾಡುತ್ತಿದ್ದಾನೆ. ಅವರ ಬಂಧನವಾದರೂ ಸಂಘಟನೆ ಆತನ ಕೆಲಸ ಮುಂದುವರೆಸಬೇಕು - ತರ್ಸೇಮ್‌ ಸಿಂಗ್‌, ಅಮೃತ್‌ಪಾಲ್‌ನ ತಂದೆ

ಇದನ್ನೂ ಓದಿ: ಖಲಿಸ್ತಾನಿ ಉಗ್ರ ಅಮೃತ್‌ಪಾಲ್‌ ಸಿಂಗ್ ನೇಪಾಳಕ್ಕೆ ಎಸ್ಕೇಪ್‌: ಹೈ ಅಲರ್ಟ್‌ ಘೋಷಣೆ

ಅಮೃತ್‌ಪಾಲ್‌ ಸಿಂಗ್ ಮೇಲಿರುವ ಪ್ರಕರಣಗಳು
ಅಪಹರಣ, ಕೊಲೆ ಯತ್ನ, ಪೊಲೀಸರ ಮೇಲೆ ಹಲ್ಲೆ, ಪೊಲೀಸ್‌ ಠಾಣೆಗೆ ಮುತ್ತಿಗೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ನಂಟು, ವಿದೇಶಿ ಉಗ್ರ ಸಂಘಟನೆಗಳ ಜೊತೆಗೆ ನಂಟಿನ ಹಲವು ಪ್ರಕರಣಗಳಿವೆ. 

ರೋಡ್‌ನಲ್ಲೇ ಏಕೆ ಶರಣು?
ಅಮೃತ್‌ಪಾಲ್‌ನನ್ನು ತಾವು ಬಂಧಿಸಿದ್ದಾಗಿ ಪೊಲೀಸರು ಹೇಳಿಕೊಂಡಿದ್ದರೂ, ಆತ ವಿಶೇಷ ಕಾರಣಗಳಿಗಾಗಿ ರೋಡ್‌ ಗ್ರಾಮಕ್ಕೆ ಬಂದು ಅಲ್ಲೇ ಶರಣಾಗಲು ನಿರ್ಧರಿಸಿದ್ದ ಎಂದು ಮೂಲಗಳು ತಿಳಿಸಿವೆ. ಇದಕ್ಕೆ 2 ಕಾರಣಗಳಿವೆ. ‘ರೋಡ್‌’ ಗ್ರಾಮವು ಹಿಂದೆ ಹತ್ಯೆಗೀಡಾದ ಕುಖ್ಯಾತ ಖಲಿಸ್ತಾನಿ ಹೋರಾಟಗಾರ ಜರ್ನೇಲ್‌ ಸಿಂಗ್‌ ಭಿಂದ್ರನ್‌ವಾಲೆಯ ಹುಟ್ಟೂರು. ಹೀಗಾಗಿ ಖಲಿಸ್ತಾನಿ ಬೆಂಬಲಿಗರ ಮತ್ತಷ್ಟು ಗಮನ ಸೆಳೆಯಲು ಈ ಅಂಶ ನೆರವಾಗಬಹುದು ಎಂಬುದು. ಜೊತೆಗೆ ಕೆಲ ತಿಂಗಳ ಹಿಂದೆ ‘ವಾರಿಸ್‌ ಪಂಜಾಬ್‌ ದೇ’ ಸಂಘಟನೆ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದು ಇದೇ ಗ್ರಾಮದಲ್ಲಿ.

ಇದನ್ನೂ ಓದಿ: ಇವಳೇ ನೋಡಿ ಖಲಿಸ್ತಾನಿ ಉಗ್ರನ ಎನ್‌ಆರ್‌ಐ ಪತ್ನಿ: ವಿದೇಶಿ ಹಣದ ಮೂಲದ ಬಗ್ಗೆಯೂ ಪಂಜಾಬ್‌ ಪೊಲೀಸರ ವಿಚಾರಣೆ

ಅಮೃತ್‌ಪಾಲ್‌ ಪಂಜಾಬ್‌ ಬದಲು ಅಸ್ಸಾಂಗೇಕೆ ರವಾನೆ?

  • ಪಂಜಾಬ್‌ನಲ್ಲಿಟ್ಟರೆ ಪ್ರತ್ಯೇಕತಾವಾದಿಗಳು ಹೋರಾಟ ರೂಪಿಸಲು ಪ್ರಚೋದನೆ ಸಿಗುವ ಸಾಧ್ಯತೆಯ ಆತಂಕ
  • ಪಂಜಾಬ್‌ ಜೈಲಿನ ಮೇಲೆ ದಾಳಿ ನಡೆಸಿ ಅಮೃತ್‌ಪಾಲ್‌ ಸಿಂಗ್ ಬಿಡುಗಡೆಗೆ ಬೆಂಬಲಿಗರು ಯತ್ನ ಮಾಡುವ ಸಂಭವ
  • ಪಂಜಾಬ್‌, ದೆಹಲಿ ಜೈಲುಗಳಲ್ಲಿ ಅಮೃತ್‌ಪಾಲ್‌ ಸಿಂಗ್‌ಗೆ ನಂಟಿರುವ ಗ್ಯಾಂಗ್‌ಸ್ಟರ್‌ಗಳಿದ್ದಾರೆ. ಹೀಗಾಗಿ ಅಪಾಯ
  • ಅಸ್ಸಾಂನಲ್ಲಿ ಸಿಖ್‌ ಸಂಘಟನೆಗಳಿಲ್ಲ, ಭಾಷೆ ಬದಲಿಂದ ಜೈಲಿನಲ್ಲಿ ಇತರರರ ಜತೆಗೆ ಸಂವಹನದ ಸವಾಲು ಇದೆ
  • ಅಸ್ಸಾಂನಲ್ಲಿ ಉಲ್ಫಾ ಉಗ್ರರಿಗಾಗಿ ನಿರ್ಮಿಸಿದ ಬಿಗಿಭದ್ರತೆಯ ಜೈಲು ಇದೆ. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

ಪತ್ನಿಗೆ ತೊಂದರೆ ಆಗುವ ಆತಂಕದಲ್ಲಿ ಶರಣು?
ಅಮೃತ್‌ಸರ: ತಾನು ವಿದೇಶಕ್ಕೆ ಪರಾರಿಯಾದರೆ ತನ್ನ ಹೆಂಡತಿಗೆ ಪೊಲೀಸರಿಂದ ತೊಂದರೆಯಾಗಬಹುದು ಎಂದು ಯೋಜಿಸಿ ತಲೆಮರೆಸಿಕೊಂಡಿದ್ದ ಖಲಿಸ್ತಾನಿ ಪ್ರತ್ಯೇಕವಾದಿ ಅಮೃತ್‌ಪಾಲ್‌ ಸಿಂಗ್‌ ಶರಣಾಗಿದ್ದಾನೆ ಎನ್ನಲಾಗಿದೆ. ಸದ್ಯ ಭಾರತದಲ್ಲಿರುವ ಬ್ರಿಟನ್‌ ಪ್ರಜೆಯಾಗಿರುವ ಕೌರ್‌, ಇತ್ತೀಚೆಗೆ ಲಂಡನ್‌ಗೆ ತೆರಳಲು ಯತ್ನಿಸಿದ್ದ ವೇಳೆ ಅಮೃತ್‌ಸರದ ವಿಮಾನ ನಿಲ್ದಾಣದಲ್ಲಿ ಪೊಲೀಸರು ಆಕೆಯನ್ನು ತಡೆದಿದ್ದರು. ಅಲ್ಲದೇ ಕಳೆದ ಫೆಬ್ರವರಿಯಲ್ಲಿ ಭಾರತಕ್ಕೆ ಬಂದಿದ್ದ ಕೌರ್‌ಳನ್ನು ಅಮೃತ್‌ ತಾಯಿಯೊಂದಿಗೆ ಅಮೃತ್‌ಸರ ಜಲ್ಲುಪುರ್‌ ಖೇರಾ ಗ್ರಾಮದಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಹೀಗಾಗಿ ಇದೇ ವೇಳೆ ತಾನೂ ವಿದೇಶಕ್ಕೆ ಹೋದರೆ ಕುಟುಂಬಸ್ಥರು, ಪತ್ನಿಗೆ ತೊಂದರೆಯಾಗಬಹುದು ಎಂದು ಅಮೃತ್‌ಪಾಲ್‌ ಕಳವಳಕ್ಕೆ ತುತ್ತಾಗಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಅಫೇರ್‌, ಬ್ಲ್ಯಾಕ್‌ಮೇಲ್‌: ಹನಿಮೂನ್‌ಗೆ ಹೋಗೋಣ ಎಂದು ಚಾಟ್‌ ಮಾಡಿದ್ದ ವಿವಾಹಿತ ಅಮೃತ್‌ಪಾಲ್‌ ಸಿಂಗ್..!