ಜಮ್ಮು-ಕಾಶ್ಮೀರದಲ್ಲಿ ಪಾಕ್ ದಾಳಿ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸೇನಾ ಕಾರ್ಯಾಚರಣೆಯಿಂದ ಮನೆ/ಆಸ್ತಿ ಹಾನಿಗೊಳಗಾದ ಅಮಾಯಕರಿಗೆ ಸರ್ಕಾರ 10 ಲಕ್ಷದವರೆಗೆ ಪರಿಹಾರ ನೀಡುತ್ತದೆ. ಮನೆಗೆ 7 ಲಕ್ಷ, ಸರಕುಗಳಿಗೆ 3 ಲಕ್ಷ ಪರಿಹಾರ. ಭಯೋತ್ಪಾದಕರಿಗೆ ಆಶ್ರಯ ನೀಡಿದವರಿಗೆ ಪರಿಹಾರವಿಲ್ಲ. 30

ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿದ್ದ ಜಮ್ಮು ಕಾಶ್ಮೀರ (Jammu Kashmir) ಅಕ್ಷರಶಃ ರಣರಂಗವಾಗಿದೆ. ಎಲ್ಲಿ, ಯಾವಾಗ ಬಾಂಬ್ ದಾಳಿಯಾಗುತ್ತೆ, ಯಾವ ಮನೆ ಹೊತ್ತಿ ಉರಿಯುತ್ತೆ ಹೇಳಲು ಸಾಧ್ಯವಿಲ್ಲ. ಇಷ್ಟು ದಿನ ಶಾಂತಿಯಿಂದ ನಿದ್ರೆ ಮಾಡ್ತಿದ್ದ ಜಮ್ಮು – ಕಾಶ್ಮೀರ ನಾಗರಿಕರು ಪ್ರತಿ ಕ್ಷಣ ಜೀವ ಕೈನಲ್ಲಿ ಹಿಡಿದು ಬದುಕುವಂತಾಗಿದೆ. ನಿದ್ರೆ ಮರೀಚಿಕೆಯಾಗಿದೆ. ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆ, ಜಮ್ಮು – ಕಾಶ್ಮೀರಿ ಜನರನ್ನು ಸುರಕ್ಷಿತವಾಗಿಡುವ ಎಲ್ಲ ಪ್ರಯತ್ನ ನಡೆಸುತ್ತಿದೆ. ಗಡಿಯುದ್ಧಕ್ಕೂ ಪಾಕ್ ಡ್ರೋನ್ (Pak Drone) ದಾಳಿಯನ್ನು ಭಾರತೀಯ ಸೇನೆ (Indian Army) ನಿಷ್ಕ್ರಿಯಗೊಳಿಸಿದೆ. ಈಗ ಕಾಣಿಸಿಕೊಂಡ ಭಾರತ – ಪಾಕ್ ಬೆಂಕಿ ಕಿಡಿ ತಣ್ಣಗಾಗುವಂತಹದ್ದಲ್ಲ. ಜಮ್ಮು – ಕಾಶ್ಮೀರಿ ಜನರಿಗೆ ಇದು ಹೊಸದೇನಲ್ಲ. ಹಿಂದಿನಿಂದಲೂ ಗುಂಡಿನ ಶಬ್ಧದ ಮಧ್ಯೆಯೇ ಬದುಕಿದವರು ಅವರು. ಕಟ್ಟಿದ ಹೊಸ ಮನೆ ಅರೆ ಕ್ಷಣದಲ್ಲಿ ಭಸ್ಮವಾಗ್ಬಹುದು ಎಂಬುದು ಅವರಿಗೆ ಗೊತ್ತು. ಗಡಿ ಭಾಗವನ್ನು ರಕ್ಷಿಸುವ ಸೇನೆ, ಆಗಾಗ ಭಯೋತ್ಪಾದಕ (Terrorist)ರ ಹುಟ್ಟಡಗಿಸಲು ದಾಳಿ ನಡೆಸುತ್ತೆ. 

ಪಹಲ್ಗಾಮ್ ದಾಳಿ (Pahalgam attack ) ಯ ನಂತರ, ಭಾರತವು ಆಪರೇಷನ್ ಸಿಂಧೂರ್ (Operation Sindhur) ಪ್ರಾರಂಭಿಸುವುದರೊಂದಿಗೆ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವ ಅಭಿಯಾನ ಪ್ರಾರಂಭಿಸಿದೆ. ಪಾಕಿಸ್ತಾನಕ್ಕೆ ಬಲವಾದ ಹೊಡೆತ ನೀಡುವುದರ ಜೊತೆಗೆ, ಭಯೋತ್ಪಾದಕರನ್ನು ಸಹ ನಿರ್ಮೂಲನೆ ಮಾಡಲಾಗುತ್ತಿದೆ. ಸೇನೆ ಜಮ್ಮುವಿನಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಭಯೋತ್ಪಾದಕರು ಅಡಗಿ ಕುಳಿತಿದ್ದಾರೆಂಬ ಮಾಹಿತಿ ಸಿಗ್ತಿದ್ದಂತೆ ಸೇನೆ, ಅಲ್ಲಿರುವ ಮನೆಗಳ ಮೇಲೂ ದಾಳಿ ನಡೆಸುತ್ತದೆ. ಇಂಥ ಸಮಯದಲ್ಲಿ ಅನೇಕ ನಾಗರಿಕರು ಮನೆ ಕಳೆದುಕೊಳ್ತಾರೆ. ಸೇನೆ ಹಾಗೂ ಭಯೋತ್ಪಾದಕ ದಾಳಿಗೆ ಆಸ್ತಿ ನಷ್ಟವಾಗುತ್ತೆ. ಯುದ್ಧದ ಸಮಯದ ದಾಳಿಯಲ್ಲಿ ಅಮಾಯಕ ನಾಗರಿಕನ ಮನೆ ನಾಶವಾದರೆ, ಸರ್ಕಾರ ಅವನಿಗೆ ಪರಿಹಾರ ನೀಡುತ್ತದೆಯೇ? ಅದಕ್ಕೆ ಉತ್ತರ ಇಲ್ಲಿದೆ.

ಸರ್ಕಾರದಿಂದ ಪರಿಹಾರ :  ಜಮ್ಮು ಮತ್ತು ಕಾಶ್ಮೀರದಲ್ಲಿ, ಭಯೋತ್ಪಾದಕ ವಿರುದ್ಧ ಸೇನಾ ನಡೆಸುವ ಕಾರ್ಯಾಚರಣೆಯಿಂದ ಮನೆ ಅಥವಾ ಆಸ್ತಿ ಹಾನಿಯಾದ್ರೆ ಸರ್ಕಾರ ಅದಕ್ಕೆ ಪರಿಹಾರ ನೀಡುತ್ತದೆ. ಕೇಂದ್ರ ಗೃಹ ಸಚಿವಾಲಯ ಇದಕ್ಕಾಗಿ ವಿಶೇಷ ಯೋಜನೆಯನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಪಿಎಂಎಫ್‌ಗಳು ಮತ್ತು ಸೇನೆಯಿಂದ ಕಾರ್ಯಾಚರಣೆಯ ಸಮಯದಲ್ಲಿ ಹಾನಿಗೊಳಗಾದ ಸ್ಥಿರ/ಚರ ಆಸ್ತಿಯ ಪರಿಹಾರವಾಗಿ ಕೇಂದ್ರ ಯೋಜನೆ ಎಂಬ ಯೋಜನೆಯಡಿಯಲ್ಲಿ ಪರಿಹಾರ ನೀಡಲಾಗುತ್ತದೆ. ಸರ್ಕಾರ 10 ಲಕ್ಷ ರೂಪಾಯಿಗಳವರೆಗೆ ಪರಿಹಾರ ನೀಡುತ್ತದೆ. ಈ ಯೋಜನೆ 2010 ರಿಂದ ಜಾರಿಯಲ್ಲಿದೆ. ಮನೆಗೆ ಹಾನಿಯಾದರೆ 7 ಲಕ್ಷ ರೂ.ಗಳನ್ನು ನೀಡಲಾಗುವುದು. ಸರಕುಗಳಿಗೆ ಮೂರು ಲಕ್ಷದವರೆಗೆ ಪರಿಹಾರ ನೀಡುತ್ತದೆ. ಕೇಂದ್ರ ಸರ್ಕಾರ ಪರಿಹಾರ ಹಣವನ್ನು ಫಲಾನುಭವಿಗಳಿಗೆ ನೀಡುತ್ತದೆ. ಕಾರ್ಯಾಚರಣೆಯ 30 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಯಾರಿಗೆ ಸಿಗೋದಿಲ್ಲ ಈ ಪರಿಹಾರ ? : ಅಮಾಯಕರು ಮನೆ ಕಳೆದುಕೊಂಡ್ರೆ ಅಥವಾ ಇತರೇ ಆಸ್ತಿಗೆ ಹಾನಿಯಾದ್ರೆ ಸರ್ಕಾರ ಪರಿಹಾರ ನೀಡುತ್ತದೆ. ಆದ್ರೆ ನಾಗರಿಕರು, ತಮ್ಮ ಮನೆಯಲ್ಲಿ ಭಯೋತ್ಪಾದಕರನ್ನು ಅಡಗಿಸಿಟ್ಟಿದ್ದು, ಅವರಿಗೆ ಆಶ್ರಯ ನೀಡಿದ್ದು, ಆ ಭಯೋತ್ಪಾದಕರ ಹತ್ಯೆಗೆ ಸೇನೆ ಆ ಮನೆ ಮೇಲೆ ದಾಳಿ ನಡೆಸಿದ್ರೆ ಸರ್ಕಾರ ಯಾವುದೆ ಪರಿಹಾರವನ್ನು ನೀಡೋದಿಲ್ಲ. ಇದಕ್ಕೆ ವಿರುದ್ಧವಾಗಿ, ಭಯೋತ್ಪಾದಕರಿಗೆ ಆಶ್ರಯ ನೀಡಿದವರನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತದೆ.