ಎಂ.ಪಿ. ರಾಮಚಂದ್ರನ್ ಅವರು ಕೇವಲ ₹5,000 ಸಾಲ ಪಡೆದು ತಮ್ಮ ಅಡುಗೆಮನೆಯಲ್ಲಿ 'ಉಜಾಲಾ' ಲಿಕ್ವಿಡ್ ವೈಟ್ನರ್ ಅನ್ನು ಸೃಷ್ಟಿಸಿದರು. ಈ ಸಣ್ಣ ಆರಂಭವು ಇಂದು 'ಜ್ಯೋತಿ ಲ್ಯಾಬ್ಸ್' ಎಂಬ ₹7,000 ಕೋಟಿಗೂ ಅಧಿಕ ಮೌಲ್ಯದ ಬೃಹತ್ ಉದ್ಯಮ ಸಾಮ್ರಾಜ್ಯವಾಗಿ ಬೆಳೆದು ನಿಂತಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ನಾವೀನ್ಯತೆ ಮತ್ತು ಕಠಿಣ ಪರಿಶ್ರಮದ ಸ್ಪೂರ್ತಿದಾಯಕ ಕಥೆಯಾಗಿದೆ.

ಒಬ್ಬ ಅಕೌಂಟೆಂಟ್. ಒಂದು ನೀಲಿ ಬಣ್ಣದ ಬಾಟಲಿ. ಮತ್ತು ಒಂದು ಸರಳ ಆಲೋಚನೆ. ಇಡೀ ಭಾರತದ ಬಟ್ಟೆ ತೊಳೆಯುವ ಅಭ್ಯಾಸವನ್ನೇ ಬದಲಿಸಿಬಿಟ್ಟಿತು!ಅಕೌಂಟೆಂಟ್ ಆಗಿದ್ದ ಎಂ.ಪಿ. ರಾಮಚಂದ್ರನ್ ಅವರು ಗಮನಿಸಿದ ಸಮಸ್ಯೆ ತುಂಬಾ ಸರಳವಾಗಿತ್ತು. ಬಿಳಿ ಬಟ್ಟೆಗಳನ್ನು ಎಷ್ಟೇ ಬಾರಿ ತೊಳೆದರೂ, ಮೊದಲಿನ ಆ ಅಸಲಿ ಬಿಳಿ ಹೊಳಪು ಏಕಿಲ್ಲ ಎಂಬುದು. ಆ ಸಮಯದಲ್ಲಿ ಮಾರುಕಟ್ಟೆಯಲ್ಲಿ 'ರಾಬಿನ್ ಬ್ಲೂ' ಎಂಬ ಪೌಡರ್ ತುಂಬಾ ಪ್ರಸಿದ್ಧವಾಗಿತ್ತು. ಆದರೆ ಅದನ್ನು ನೀರಿನಲ್ಲಿ ಸರಿಯಾಗಿ ಕರಗಿಸುವುದು ಅಷ್ಟೇ ಕಷ್ಟವಾಗಿತ್ತು. ಸ್ವಲ್ಪ ಹೆಚ್ಚು-ಕಡಿಮೆಯಾದರೂ ಬಟ್ಟೆಯ ಮೇಲೆ ನೀಲಿ ಕಲೆಗಳು ಬೀಳುತ್ತಿದ್ದವು! ರಾಮಚಂದ್ರನ್ ಅವರು ತಮ್ಮ ಮನೆಯ ಅಡುಗೆಮನೆಯಲ್ಲೇ ವಿಭಿನ್ನ ಪ್ರಯೋಗಗಳನ್ನು ಮಾಡಿ, ಪೌಡರ್ ಬದಲಿಗೆ 'ಲಿಕ್ವಿಡ್ ವೈಟ್ನರ್' ಸೃಷ್ಟಿಸಿದರು. ಅದೇ..."ಉಜಾಲಾ" ಆದರೆ ನಿಜವಾದ ಮ್ಯಾಜಿಕ್ ಇದ್ದದ್ದು ಕೇವಲ ಪ್ರೊಡಕ್ಟ್‌ನಲ್ಲಿ ಮಾತ್ರವಲ್ಲ ಅವರ ಮಾರ್ಕೆಟಿಂಗ್‌ನಲ್ಲಿ! ಉಜಾಲಾ... ಚಾರ್ ಬೂಂದೋಂ ವಾಲಾ! ಈ ಒಂದೇ ಒಂದು ಸರಳ ಸಾಲು ಕೋಟ್ಯಂತರ ಭಾರತೀಯರ ಮನೆ ಮನ ತಲುಪಿತು . ಮಾರುಕಟ್ಟೆಯಲ್ಲಿ ಶೇ. 84 ರಷ್ಟು ಸಿಂಹಪಾಲು ಪಡೆದುಕೊಂಡಿತು. ಕೇವಲ ₹5,000 ಸಾಲದಿಂದ ಶುರುವಾದ ಪಯಣ. ಇಂದು ₹7,000 ಕೋಟಿಗೂ ಅಧಿಕ ಮೌಲ್ಯದ ಬೃಹತ್ ಉದ್ಯಮ ಸಾಮ್ರಾಜ್ಯವಾಗಿ ಬೆಳೆದು ನಿಂತಿದೆ!

ಸಹೋದರನಿಂದ ಸಾಲ ಪಡೆದು ಕಟ್ಟಿದ ಕಂಪನಿ!

ಭಾರತದ ಪ್ರಮುಖ ಗ್ರಾಹಕ ಬಳಕೆಯ ವಸ್ತುಗಳ ಮಾರುಕಟ್ಟೆಯಲ್ಲಿ ನಾವೀನ್ಯತೆ, ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪಕ್ಕೆ ಅತ್ಯಂತ ದೊಡ್ಡ ಉದಾಹರಣೆಯಾಗಿ ನಿಲ್ಲುವ ಹೆಸರು ಎಂ.ಪಿ. ರಾಮಚಂದ್ರನ್ . ತಮ್ಮ ಸಹೋದರನಿಂದ ಪಡೆದ ಕೇವಲ ₹5,000 ಸಾಲದಿಂದ 1983 ರಲ್ಲಿ ಕೇರಳದ ತ್ರಿಶೂರ್‌ನಲ್ಲಿ ಸಣ್ಣ ಘಟಕವಾಗಿ ಪ್ರಾರಂಭವಾದ 'ಜ್ಯೋತಿ ಲ್ಯಾಬ್ಸ್ ಲಿಮಿಟೆಡ್' ಇಂದು ಶೇರ್‌ ಮಾರುಕಟ್ಟೆಯಲ್ಲಿ ₹7,000 ಕೋಟಿಗೂ ಅಧಿಕ ಮೌಲ್ಯದ ಬೃಹತ್ ಉದ್ಯಮ ಸಾಮ್ರಾಜ್ಯವಾಗಿ ಬೆಳೆದು ನಿಂತಿದೆ.

ಅಡುಗೆಮನೆಯ ಪ್ರಯೋಗ ಮತ್ತು 'ಉಜಾಲಾ' ಸೃಷ್ಟಿ

ಕೇರಳದ ತ್ರಿಶೂರ್‌ನ ಸೇಂಟ್ ಥಾಮಸ್ ಕಾಲೇಜಿನಿಂದ ಬಿ.ಕಾಂ ಪದವಿ ಮುಗಿಸಿ ಅಕೌಂಟಂಟ್‌ ಆಗಿ ವೃತ್ತಿಜೀವನ ಆರಂಭಿಸಿದ್ದ ರಾಮಚಂದ್ರನ್ ಅವರಿಗೆ, ಕಲೆಯಾದ ಬಟ್ಟೆಯನ್ನು ಬಿಳಿ ಮಾಡುವುದೇ ಸಾಹಸ. ಆ ಸಮಯದಲ್ಲಿ ಮಾರುಕಟ್ಟೆಯಲ್ಲಿದ್ದ ಫ್ಯಾಬ್ರಿಕ್ ವೈಟ್ನರ್‌ಗಳ ಗುಣಮಟ್ಟದಿಂದ ಅವರು ತೃಪ್ತರಾಗಿರಲಿಲ್ಲ. ತಮ್ಮದೇ ಆದ ಹೊಸ ಉತ್ಪನ್ನ ತಯಾರಿಸಲು ನಿರ್ಧರಿಸಿದ ಅವರು, ಸ್ವಂತ ಮನೆಯ ಅಡುಗೆಮನೆಯಲ್ಲೇ ವಿಭಿನ್ನ ರಾಸಾಯನಿಕ ಹಾಗೂ ನೇರಳೆ ಬಣ್ಣಗಳೊಂದಿಗೆ ಪ್ರಯೋಗ ಮಾಡಲು ಪ್ರಾರಂಭಿಸಿದರು.

ರಾಸಾಯನಿಕ ಉದ್ಯಮದ ಪತ್ರಿಕೆಯೊಂದರಲ್ಲಿ ನೇರಳೆ ಬಣ್ಣದ ಸೂಕ್ತ ಮಿಶ್ರಣದಿಂದ ಬಟ್ಟೆಗೆ ಅತ್ಯುತ್ತಮ ಬಿಳಿ ಪ್ರಕಾಶ ನೀಡಬಹುದು ಎಂದು ಓದಿದ ನಂತರ, ರಾಮಚಂದ್ರನ್ ಸತತ ಒಂದು ವರ್ಷಗಳ ಕಾಲ ನಿರಂತರ ಶ್ರಮಿಸಿ ಸರಿಯಾದ ಸೂತ್ರವನ್ನು ಕಂಡುಕೊಂಡರು. ಹೀಗೆ ಭಾರತೀಯ ಗೃಹಬಳಕೆ ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸಿದ 'ಉಜಾಲಾ ಸುಪ್ರೀಂ ಲಿಕ್ವಿಡ್ ಫ್ಯಾಬ್ರಿಕ್ ವೈಟ್ನರ್' ಜನ್ಮತಾಳಿತು.

ಸಣ್ಣ ಆರಂಭದಿಂದ ಮನೆಮಾತಾದ ಬ್ರ್ಯಾಂಡ್:

1983 ರಲ್ಲಿ ರಾಮಚಂದ್ರನ್ ತಮ್ಮ ಮಗಳು 'ಜ್ಯೋತಿ'ಯ ಹೆಸರಿನಲ್ಲಿ 'ಜ್ಯೋತಿ ಲ್ಯಾಬೋರೇಟರೀಸ್' ಅನ್ನು ನೋಂದಾಯಿಸಿ, ತ್ರಿಶೂರ್‌ನ ಕುಟುಂಬದ ಜಮೀನಿನಲ್ಲಿ ಸಣ್ಣ ಕೊಠಡಿಯೊಂದನ್ನು ಕಾರ್ಖಾನೆಯನ್ನಾಗಿ ಮಾಡಿಕೊಂಡರು. ಆರಂಭದಲ್ಲಿ ಕೇವಲ ಆರು ಜನ ಮಹಿಳೆಯರ ತಂಡ ಮನೆ ಮನೆಗೆ ತೆರಳಿ 'ಉಜಾಲಾ' ವೈಟ್ನರ್ ಅನ್ನು ಮಾರಾಟ ಮಾಡುತ್ತಿತ್ತು. ಉತ್ಪನ್ನದ ಅತ್ಯುತ್ತಮ ಗುಣಮಟ್ಟದಿಂದಾಗಿ ದಕ್ಷಿಣ ಭಾರತದಲ್ಲಿ ಇದರ ಬೇಡಿಕೆ ಶೀಘ್ರವಾಗಿ ಹೆಚ್ಚಾಯಿತು. 1997 ರ ವೇಳೆಗೆ ಉಜಾಲಾ ಇಡೀ ಭಾರತದಾದ್ಯಂತ ಮನೆಮಾತಾದ ಪ್ರಸಿದ್ಧ ಬ್ರ್ಯಾಂಡ್ ಆಗಿ ಹೊರಹೊಮ್ಮಿತು.

ಉತ್ಪನ್ನಗಳ ವಿಸ್ತರಣೆ ಮತ್ತು ಹೆಂಕೆಲ್ ಸ್ವಾಧೀನ

ಉಜಾಲಾದ ಅದ್ಭುತ ಯಶಸ್ಸಿನ ನಂತರ, ರಾಮಚಂದ್ರನ್ ಜ್ಯೋತಿ ಲ್ಯಾಬ್ಸ್ ಅನ್ನು ಬಹು-ಬ್ರ್ಯಾಂಡ್ ಕಂಪನಿಯಾಗಿ ವಿಸ್ತರಿಸಲು ನಿರ್ಧರಿಸಿದರು. ಮನೆಗಳನ್ನು ಕಾಡುತ್ತಿದ್ದ ಸೊಳ್ಳೆಗಳ ಕಾಟಕ್ಕೆ ಪರಿಹಾರವಾಗಿ ಕಂಪನಿಯು 'ಮ್ಯಾಕ್ಸೊ' ಸೊಳ್ಳೆ ನಿವಾರಕವನ್ನು ಮಾರುಕಟ್ಟೆಗೆ ತಂದಿತು. ಆರಂಭದಲ್ಲಿ ₹35 ಕೋಟಿ ಹೂಡಿಕೆ ಮಾಡಿದ ಈ ಬ್ರ್ಯಾಂಡ್, ಅತ್ಯಲ್ಪ ಅವಧಿಯಲ್ಲಿ ₹300 ಕೋಟಿ ವಹಿವಾಟು ನಡೆಸುವ ಬೃಹತ್ ಬ್ರ್ಯಾಂಡ್ ಆಗಿ ಬೆಳೆಯಿತು. ಕಂಪನಿಯು ಡಿಟರ್ಜೆಂಟ್‌ಗಳು, ಏರ್ ಫ್ರೆಶ್‌ನರ್‌ಗಳು, ಪಾತ್ರೆ ತೊಳೆಯುವ ಸೋಪುಗಳು ಮತ್ತು ಬಟ್ಟೆ ಆರೈಕೆ ವಿಭಾಗಗಳಲ್ಲಿ ಹಲವು ಉತ್ಪನ್ನಗಳನ್ನು ಪರಿಚಯಿಸಿತು. ತನ್ನ ಮಾರುಕಟ್ಟೆ ಸ್ಥಾನವನ್ನು ಇನ್ನಷ್ಟು ಬಲಪಡಿಸಲು, ಜ್ಯೋತಿ ಲ್ಯಾಬ್ಸ್ ಜರ್ಮನಿಯ ಪ್ರಸಿದ್ಧ 'ಹೆಂಕೆಲ್ ಲಿಮಿಟೆಡ್' ಭಾರತೀಯ ವಿಭಾಗವನ್ನು ಸ್ವಾಧೀನಪಡಿಸಿಕೊಂಡು ಉದ್ಯಮ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿತು.

ನಾಯಕತ್ವದ ಹಸ್ತಾಂತರ ಮತ್ತು ನವೀನ ಪಯಣ:

ಸಾಮಾನ್ಯ ಜನರ ದೈನಂದಿನ ಸಮಸ್ಯೆಗಳಿಗೆ ಸರಳ, ಗುಣಮಟ್ಟದ ಮತ್ತು ಕೈಗೆಟುಕುವ ಬೆಲೆಯಲ್ಲಿ ಪರಿಹಾರ ನೀಡುವುದೇ ಜ್ಯೋತಿ ಲ್ಯಾಬ್ಸ್‌ನ ಯಶಸ್ಸಿನ ರಹಸ್ಯ. ಎಂ.ಪಿ. ರಾಮಚಂದ್ರನ್ ಅವರ ದೂರದೃಷ್ಟಿಯ ನಾಯಕತ್ವದ ನಂತರ, ಅವರ ಮಗಳು ಎಂ.ಆರ್. ಜ್ಯೋತಿ ಅವರು ಕಂಪನಿಯ ನೂತನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ತಂದೆ ಹಾಕಿಕೊಟ್ಟ ದಾರಿಯಲ್ಲಿ ಸಂಸ್ಥೆಯನ್ನುಯಶಸ್ಸಿನತ್ತ ಮುನ್ನಡೆಸುತ್ತಿದ್ದಾರೆ.

ಕೇವಲ ₹5,000 ಸಾಲದೊಂದಿಗೆ ಆರಂಭಿಸಿ, ಸವಾಲುಗಳನ್ನು ಮೆಟ್ಟಿ ನಿಂತು ಸಾವಿರಾರು ಕೋಟಿ ಮೌಲ್ಯದ ಉದ್ಯಮ ಕಟ್ಟಿದ ಎಂ.ಪಿ. ರಾಮಚಂದ್ರನ್ ಅವರ ಕಥೆಯು ದೇಶದ ಪ್ರತಿಯೊಬ್ಬ ಉದ್ಯಮಶೀಲ ಯುವಕನಿಗೂ ಅತ್ಯಂತ ಸ್ಪೂರ್ತಿದಾಯಕವಾಗಿದೆ.