ಟ್ರಂಪ್-ಮಮ್ದಾನಿ ಭೇಟಿ ಉಲ್ಲೇಖಿಸಿ ರಾಹುಲ್ ಗಾಂಧಿ ಕಿವಿ ಹಿಂಡಿದ್ರಾ ಶಶಿ ತರೂರ್?, ಭಾರತದಲ್ಲಿ ನನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ ಎಂದಿರುವ ಶಶಿ ತರೂರ್ ನೀವು ಎನು ಮಾಡುತ್ತಿದ್ದೀರಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪ್ರಮುಖ ನಾಯಕರನ್ನು ಪ್ರಶ್ನಿಸಿದ್ದಾರೆ.

ನವದಹಲಿ (ನ.22) ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಹೊಗಳುತ್ತಾ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಲವು ಬಾರಿ ಮೋದಿ ಹೊಗಳಿ ಕಾಂಗ್ರೆಸ್‌ನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದೀಗ ಶಶಿ ತರೂರ್ ಟ್ವೀಟ್ ಮೂಲಕ ಒಂದೇ ಕಲ್ಲಿನಲ್ಲಿ ಎರಡಲ್ಲ ಹಲವು ಹಕ್ಕಿ ಹೊಡೆದಿದ್ದಾರೆ. ಇತ್ತೀಚೆಗೆ ಹೊಸದಾಗಿ ಆಯ್ಕೆಯಾದ ನ್ಯೂಯಾರ್ಕ್ ಮೇಯರ್ ಜೊಹ್ರನ್ ಮಮ್ದಾನಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭೇಟಿಯಾಗಿದ್ದಾರೆ. ಇದೇ ಭೇಟಿ ಉಲ್ಲೇಖಿಸಿರುವ ಶಶಿ ತರೂರ್, ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ,ವಿರೋಧ ಪಕ್ಷಗಳು ಹೇಗೆ ಕೆಲಸ ಮಾಡಬೇಕು, ಎಲ್ಲಿ ಎಡವುತ್ತಿದೆ ಅನ್ನೋದನ್ನು ಹೇಳಿದ್ದಾರೆ. ಜೊತೆಗೆ ಹಲವರ ಕಿವಿ ಹಿಂಡಿದ್ದಾರೆ.

ಟ್ರಂಪ್-ಮಮ್ದಾನಿ ವಿಡಿಯೋ ಹಂಚಿಕೊಂಡು ತರೂರ್ ಪಾಠ

ಶ್ವೇತಭವನದಲ್ಲಿ ಜೊಹ್ರನ್ ಮಮ್ದಾನಿ ಹಾಗೂ ಡೋನಾಲ್ಡ್ ಟ್ರಂಪ್ ಭೇಟಿಯಾಗಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಶಶಿ ತರೂರ್, ಇದು ಪ್ರಜಾಪ್ರಭುತ್ವ ಹೇಗೆ ಕೆಲಸ ಮಾಡಬೇಕು ಅನ್ನೋದಕ್ಕೆ ಉದಾಹರಣೆಯಾಗಿದೆ ಎಂದಿದ್ದಾರೆ. ಚುನಾವಣೆ ವೇಳೆ ನಿಮ್ಮ ಸಿದ್ಧಾಂತ, ನಿಮ್ಮ ವಿಚಾರಧಾರೆಗಳ ಮೂಲಕ ಒಬ್ಬರ ವಿರುದ್ದ ಮತ್ತೊಬ್ಬರು ಸ್ಪರ್ಧಿಸುತ್ತಾರೆ. ರಾಜಕೀಯ, ರಣತಂತ್ರ, ಆರೋಪ ಪ್ರತ್ಯಾರೋಪ ಎಲ್ಲವೂ ಚುನಾವಣೆ ವೇಳೆ ಉತ್ತಮ. ಆದರೆ ಒಮ್ಮೆ ಚುನಾವಣೆ ಮುಗಿದ ಬಳಿಕ ಜಿದ್ದಾಜಿದ್ದಿ ಮುಗಿತು. ಬಳಿಕ ಪರಸ್ಪರ ಸಹಕಾರ ಅತ್ಯವಶ್ಯಕ. ಜನರು ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಕೆಲಸ ಮಾಡಬೇಕು, ಆಡಳಿತ ಹಾಗೂ ವಿರೋಧ ಪಕ್ಷ ದೇಶದ ಜನರಿಗಾಗಿ ಸೇವೆ ಸಲ್ಲಿಸಲು ಪ್ರತಿಜ್ಞೆ ಮಾಡಿರುತ್ತಾರೆ. ಈ ರೀತಿಯ ಪರಸ್ಪರ ಸಹಾಕರ ಭಾರತದಲ್ಲಿ ನಾನು ನಿರೀಕ್ಷಿಸುತ್ತಿದ್ದೇನೆ. ನನ್ನ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಶಿ ತರೂರ್ ಹೇಳಿದ್ದಾರೆ.

ಸೂಕ್ಷ್ಮವಾಗಿ ವಿಷಯ ಮಂಡಿಸಿದ ತರೂರ್

ಶಶಿ ತರೂರ್ ಒಂದೇ ಸಂದೇಶದಲ್ಲಿ ಹಲವು ವಿಚಾರಗಳನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಭಾರತದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಪರಸ್ಪರ ಸಹಕಾರದಿಂದ ಸಾಗುತ್ತಿಲ್ಲ, ಅಂತರ ಹಚ್ಚಿದೆ. ಚುನಾವಣೆ ಮುಗಿದ ಆಡಳಿತ ಸಮಯದಲ್ಲೂ ಚುನಾವಣೆ ರೀತಿಯ ವಾತತಾವರಣ ಸೃಷ್ಟಿಸಲಾಗುತ್ತಿದೆ ಎಂಬುದನ್ನು ತರೂರ್ ಹೇಳಿದ್ದಾರೆ. ಈ ಮೂಲಕ ಕೇಂದ್ರ ಬಿಜೆಪಿ ಹಾಗೂ ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್ ಈ ರೀತಿ ನಡೆದುಕೊಳ್ಳುತ್ತಿಲ್ಲ ಎಂದಿದ್ದಾರೆ. ಪ್ರಮುಖವಾಗಿ ದೇಶದಲ್ಲಿ ಮತ್ತೆ ಚುನಾವಣೆ ರೀತಿಯ ಆರೋಪ ಪ್ರತ್ಯಾರೋಪಗಳು, ದಾಖಲೆ ಇಲ್ಲದೆ ಆರೋಪಗಳು ಮಾಡಲಾಗುತ್ತಿದೆ ಎಂದು ಪರೋಕ್ಷವಾಗಿ ಹೇಳುವ ಮೂಲಕ ಕಾಂಗ್ರೆಸ್ ಕಿವಿ ಹಿಂಡಿದ್ದಾರೆ. ದೇಶ ಮೊದಲು ಅನ್ನೋದನ್ನು ತರೂರ್ ಸ್ಪಷ್ಟವಾಗಿ ಹೇಳಿದ್ದಾರೆ. ಇದೇ ಸಂದೇಶದ ಕೊನೆಯ ಸಾಲುಗಳಲ್ಲಿ ಶಶಿ ತರೂರ್ ಈಗ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಮೋದಿ, ಕೇಂದ್ರ ಸರ್ಕಾರ ಹೊಗಳಿದರೂ ಶಶಿ ತರೂರ್ ಒಬ್ಬ ಕಾಂಗ್ರೆಸ್ ಮ್ಯಾನ್. ಆದರೆ ತರೂರ್ ಹೇಳಿಕೆಗಳಿಂದ ಕಾಂಗ್ರೆಸ್ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಚುನಾವಣೆಗೆ ಮುಗೀತು, ಈಗ ನಾನು ಪರಸ್ಪರ ಸಹಕಾರದಿಂದ ಜನರ ಒಳಿತಿಗಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕರಿಗೆ ತನ್ನ ಉದ್ದೇಶ ಕುರಿತು ಸಾರಿ ಹೇಳುವ ಪ್ರಯತ್ನ ಮಾಡಿದ್ದಾರೆ.

Scroll to load tweet…

ತರೂರ್ ಟ್ವೀಟ್ ಬೆನ್ನಲ್ಲೇ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಪ್ರತಿಕ್ರಿಯಿಸಿದ್ದಾರೆ. ತರೂರ್ ತಮ್ಮ ಟ್ವೀಟ್ ಮೂಲಕ ಕಾಂಗ್ರೆಸೆ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್ ನಾಯಕರು ದೇಶ ಮೊದಲು ಎಂದು ಕಾರ್ಯಪ್ರವೃತ್ತರಾಗಬೇಕು, ಗಾಂಧಿ ಕುಟುಂಬವಲ್ಲ ಎಂದು ಪೂನವಾಲ ಹೇಳಿದ್ದಾರೆ.