ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.
ನವದೆಹಲಿ (ಡಿ.05) ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿ ಯಶಸ್ವಿಯಾಗಿದೆ. ಎರಡು ದಿನಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ಭೇಟಿ ಹಾಗೂ ಮಾತುಕತೆ, ರಾಷ್ಟ್ರಪತಿ ಭೇಟಿ,ಇಂಡೋ ರಷ್ಯಾ ಬ್ಯೂಸಿನೆಸ್ ಫೋರಂನಲ್ಲಿ ಭಾಷಣ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಉಭಯ ನಾಯಕರು ಪಾಲ್ಗೊಂಡಿದ್ದಾರೆ. ಇದೀಗ ವ್ಲಾದಿಮಿರ್ ಪುಟಿನ್‌ಗೆ ವಿಶೇಷ ಔತಣಕೂಟ ಆಯೋಜಿಸಲಾಗಿದೆ. ಔತಣಕೂಟದ ಬಳಿಕ ರಾತ್ರಿ 9 ಗಂಟೆಗೆ ಪುಟಿನ್ ಮಾಸ್ಕೋದತ್ತ ಪ್ರಯಾಣ ಬೆಳೆಸಲಿದ್ದಾರೆ. ಪುಟಿನ್ ವಿಶೇಷ ಔತಣಕೂಟಕ್ಕೆ ಹಲವರಿಗೆ ಆಹ್ವಾನ ನೀಡಲಾಗಿದೆ. ಆದರೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರಿಗೆ ಆಮಂತ್ರಣ ನೀಡಿಲ್ಲ. ಇದೇ ವೇಳೆ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್‌ಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಇದು ಕಾಂಗ್ರೆಸ್ ಕಣ್ಣು ಕಂಪಾಗಿಸಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಪ್ರತಿಪಕ್ಷಗಳನ್ನು ಪುಟಿನ್ ಭೇಟಿಯಿಂದ ದೂರವಿಟ್ಟಿದೆ ಎಂದು ಆರೋಪಿಸಿದೆ.
ಸಂಪ್ರದಾಯ ಮುರಿದಿದೆ ಎಂದ ರಾಹುಲ್ ಗಾಂಧಿ
ಕೇಂದ್ರ ಬಿಜೆಪಿ ಸರ್ಕಾರ ಸಂಪ್ರದಾಯ ಮುರಿದಿದೆ. ಭಾರತಕ್ಕೆ ಭೇಟಿ ನೀಡುವ ವಿಶ್ವನಾಯಕರ ಜೊತೆ ವಿಪಕ್ಷಗಳ ನಾಯಕರು, ವಿರೋಧ ಪಕ್ಷ ನಾಯಕರು ಭೇಟಿ ಮಾಡುತ್ತಿದ್ದರು. ಆದರೆ ಈ ಬಾರಿ ಮೋದಿ ಹಾಗೂ ಬಿಜೆಪಿ ಸರ್ಕಾರ ಆಹ್ವಾನ ನೀಡದೆ ವಿಪಕ್ಷ ನಾಯಕರನ್ನು ದೂರವಿಟ್ಟಿದ್ದಾರೆ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪ್ರೊಟೋಕಾಲ್ ನೆನಪಿರಲಿ ಎಂದ ಬಿಜೆಪಿ
ರಾಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ನೀಡಿಲ್ಲ ಅನ್ನೋ ವಿಚಾರ ಕುರಿತು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ವ್ಲಾದಿಮಿರ್ ಪುಟಿನ್ ಭಾರತ ಭೇಟಿಯಲ್ಲಿ ಕೆಲ ಪ್ರೊಟೋಕಾಲ್‌ಗಳಿವೆ. ಇದನ್ನು ವಿಪಕ್ಷ ನಾಯಕರು ಮರೆತಿದ್ದಾರೆ. ಭಾರತಕ್ಕೆ ಭೇಟಿ ನೀಡಿದವರು ಯಾವುದೇ ದೇಶದ ವಿದೇಶಾಂಗ ಸಚಿವರಲ್ಲ ಎಂದಿದ್ದಾರೆ. ಇದೇ ವೇಳೆ ಸರ್ಕಾರ ನೀಡಿದ ಹಲವು ಕಾರ್ಯಕ್ರಮಗಳಿಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದಾರೆ. ಇದೀಗ ಪುಟಿನ್ ಔತಣಕೂಟಕ್ಕೆ ಆಹ್ವಾನವಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ ಎಂದು ಅಣಕಿಸಿದ್ದಾರೆ.
ಬಿಜೆಪಿ ನಾಯಕರು ಇದೇ ವೇಳೆ ಆಹ್ವಾನ ಹಾಗೂ ವಿಪಕ್ಷ ನಾಯಕರು, ಕಾಂಗ್ರೆಸ್ ನಾಯಕರ ಹಾಜರಾತಿ ಕುರಿತು ಇತಿಹಾಸ ಕೆದಕಿದ್ದಾರೆ. 2025ರ ಗಣರಾಜೋತ್ಯವ ದಿನಾಚರಣೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜನ ಖರ್ಗೆಗೆ ಆಹ್ವಾನ ನೀಡಲಾಗಿತ್ತು. ಆದರೆ ಇಬ್ಬರೂ ಗೈರಾಗಿದ್ದರು. ರೆಡ್ ಫೋರ್ಟ್‌ನಲ್ಲಿನ ಸ್ವಾತಂತ್ರ್ಯ ದಿನಾಚರಣೆಗೂ ರಾಹುಲ್ ಗಾಂಧಿ, ಮಲ್ಲಿಕಾರ್ಜನ ಖರ್ಗೆ ಗೈರಾಗಿದ್ದರು. ಕರ್ತವ್ಯ ಪಥ ಉದ್ಘಾಟನೆ ಕಾರ್ಯಕ್ರಮಕ್ಕೂ ರಾಹುಲ್ ಗಾಂಧಿ ಗೈರಾಗಿದ್ದರು. ಇತ್ತೀಚೆಗೆ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್ ಗಾಂಧಿ ಗೈರಾಗಿದ್ದರು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.


