ಮಹಾರಾಷ್ಟ್ರದ ಅಕೋಲಾದಲ್ಲಿ ಭಾರೀ ಮಳೆಯಿಂದಾಗಿ ಶತಮಾನಗಳಷ್ಟು ಹಳೆಯದಾದ ಬಾಲಾಪುರ ಕೋಟೆ ಕುಸಿದಿದೆ. ಮಳೆಯಿಂದಾಗಿ ದೇಶದ ಹಲವು ಭಾಗಗಳಲ್ಲಿ ಗುಡ್ಡ ಕುಸಿತ ಸೇರಿದಂತೆ ಹಲವು ಅವಾಂತರಗಳು ನಡೆದಿವೆ.
ಅಕೋಲಾ: ದೇಶದಲ್ಲೆಡೆ ಧಾರಾಕಾರ ಮಳೆಯಾಗ್ತಿದ್ದು, ಇದರಿಂದ ಹಲವು ಪ್ರದೇಶಗಳಲ್ಲಿ ಅನೇಕ ಮಳೆ ಸಂಬಂಧಿ ಅನಾಹುತಗಳು ನಡೆದಿದೆ. ಹಲವೆಡೆ ಕಟ್ಟಡಗಳು, ಗುಡ್ಡಗಳು ಕುಸಿದಿವೆ. ಭಾರಿ ಮಳೆಗೆ ಮಹಾರಾಷ್ಟ್ರದ ಅಕೋಲಾದಲ್ಲಿರುವ ಶತಮಾನದಷ್ಟು ಹಳೆಯ ಬಾಲಾಪುರ ಕೋಟೆ ಕುಸಿದು ಬಿದ್ದಿದೆ. ಈ ಕೋಟೆ ಕುಸಿಯುತ್ತಿರುವ ದೃಶ್ಯ ಸ್ಥಳೀಯರ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೀರ್ಘಕಾಲದ ನಿರ್ಲಕ್ಷ್ಯ ಮತ್ತು ಭಾರೀ ಮಳೆಯಿಂದಾಗಿ ಈ ಕೋಟೆ ಹಠಾತ್ ಕುಸಿದಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲ, ಈ ಕೋಟೆ ಕಾಲದ ಹೊಡೆತಕ್ಕೆ ಸಿಲುಕಿ ಆಗಲೇ ಬಿರುಕು ಬಿಟ್ಟಿತ್ತು. ಇತ್ತೀಚೆಗೆ ಸುರಿದ ಮಳೆಗೆ ಕೋಟೆ ಮತ್ತಷ್ಟು ಶಿಥಿಲಗೊಂಡಿದ್ದು, ಕುಸಿದು ಬಿದ್ದಿದೆ. ಸ್ಥಳೀಯ ಇತಿಹಾಸಕಾರರು ಹೇಳುವಂತೆ ಈ ಕೋಟೆಯು ರಾಜಾ ಜಯಸಿಂಗ್ ಆಳ್ವಿಕೆಯ ಕಾಲದ್ದಾಗಿದ್ದು, ಮಹಾರಾಷ್ಟ್ರದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ.
ಕೋಟೆಯ ಒಂದು ಭಾಗ ಸಂಪೂರ್ಣ ಕುಸಿದಿದ್ದು, ಈ ಕೋಟೆ ಮಾನ್ ಮತ್ತು ಮಹೇಶ ನದಿಯ ಸಂಗಮ ಸ್ಥಳದಲ್ಲಿ ನಿರ್ಮಿತವಾಗಿದೆ. ಹಲವಾರು ಶತಮಾನಗಳ ಹಿಂದಿನ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಪ್ರಸ್ತುತ, ಕೋಟೆಯು ಉಪ-ವಿಭಾಗೀಯ ಅಧಿಕಾರಿ (SDO) ತಹಸೀಲ್ದಾರ್ ಕಚೇರಿ ಮತ್ತು ಪಂಚಾಯತ್ ಸಮಿತಿ ಸೇರಿದಂತೆ ಪ್ರಮುಖ ಆಡಳಿತ ಕಚೇರಿಗಳನ್ನು ಹೊಂದಿದ್ದು, ಪ್ರತಿದಿನ ನೂರಾರು ನಾಗರಿಕರು ಭೇಟಿ ನೀಡುತ್ತಾರೆ. ಆದರೆ, ಕುಸಿದ ಭಾಗವು ಕೋಟೆಯ ಖಾಲಿ ಪ್ರದೇಶದಲ್ಲಿತ್ತು. ಈ ಕೋಟೆ ದುರ್ಬಲ ಸ್ಥಿತಿಯಲ್ಲಿದ್ದರೂ ಪುರಾತತ್ತ್ವ ಶಾಸ್ತ್ರ ಇಲಾಖೆ ಯಾವುದೇ ಸಂರಕ್ಷಣಾ ಪ್ರಯತ್ನಗಳನ್ನು ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಗುಡ್ಡಕುಸಿತದ ವೀಡಿಯೋ ವೈರಲ್
ಹಾಗೆಯೇ ಹಿಮಾಚಲ ಪ್ರದೇಶದಲ್ಲಿಯೂ ಮಳೆಯ ಆರ್ಭಟ ಜೋರಾಗಿದ್ದು, ಶಿಮ್ಲಾದ ಕುಮರಸೈನ್ ಸಮೀಪದ ಬಡಗಾಂವ್ ಬಳಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಂತಹ ಘಟನೆ ನಡೆದಿದೆ. ಬೃಹತ್ ಗಾತ್ರದ ಗುಡ್ಡ ಹಠಾತನ್ನೇ ಕಿರಿದಾದ ರಸ್ತೆಯ ಮೇಲೆ ಕುಸಿದಿದ್ದು, ಈ ಸಮಯದಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ಇರಲಿಲ್ಲ ಈ ದೃಶ್ಯವೂ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿಮ್ಲಾ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಕಳೆದ ಸೋಮವಾರದಿಂದಲೂ ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಲೇ ಇವೆ. ರಸ್ತೆಯ ಮೇಲೆಯೇ ಗುಡ್ಡಗಳು ಕುಸಿದ ಪರಿಣಾಮ ಹಲವು ಸ್ಥಳಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಹೊಳೆ ದಾಟಲು ಹೋಗಿ ಸಿಲುಕಿದವರ ರಕ್ಷಣೆ
ಹಾಗೆಯೇ ಮಳೆ ಸಂಬಂಧಿ ಮತ್ತೊಂದು ಪ್ರಕರಣದಲ್ಲಿ ಕಾರಿನಲ್ಲಿ ಉಕ್ಕಿ ಹರಿಯುತ್ತಿದ್ದ ಹೊಳೆ ದಾಟುವುದಕ್ಕೆ ಹೋಗಿ ಒಬ್ಬ ಶಿಕ್ಷಕ ಹಾಗೂ ಮತ್ತಿಬ್ಬರು ನೀರಿನ ಮಧ್ಯೆ ಸಿಲುಕಿಕೊಂಡಿದ್ದು, ಅವರನ್ನು ಬಳಿಕ ಸ್ಥಳೀಯರು ರಕ್ಷಿಸಿದ್ದಾರೆ. ಉತ್ತರ ಪ್ರದೇಶದ ಖಾನ್‌ಪುರದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಮಳೆಯಿಂದಾಗಿ ಉಕ್ಕಿ ಹರಿಯುತ್ತಿದ್ದ ನದಿಯನ್ನು ಕಾರಿನಲ್ಲಿ ದಾಟಲು ಹೋಗಿ ಈ ಘಟನೆ ನಡೆದಿದೆ.
ನದಿಯಲ್ಲಿ ಕೊಚ್ಚಿ ಹೋದ ಟ್ರಾಕ್ಟರ್
ಹಾಗೆಯೇ ಒಡಿಶಾದಲ್ಲೂ ಭಾರಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ರಾಜ್ಯದ ಅತ್ಯಂತ ದೊಡ್ಡ ನದಿಯಾದ ಮಹಾನದಿ ಉಕ್ಕಿ ಹರಿಯುತ್ತಿದೆ. ಉಕ್ಕಿ ಹರಿಯುತ್ತಿದ್ದ ನದಿಯ ಕಾಲುವೆಯನ್ನು ದಾಟುವುದಕ್ಕೆ ಹೋಗಿ ಟ್ರಾಕ್ಟರ್ ಒಂದು ಕೊಚ್ಚಿ ಹೋಗಿದ್ದರೆ ಅದರಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ಈಜಿ ಪಾರಾಗಿದ್ದಾರೆ. ಈ ವೀಡಿಯೋ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಒಡಿಶಾ ರಾಜಧಾನಿ ಭುವನೇಶ್ವರದಿಂದ ಸುಮಾರು 224 ಕಿ.ಮೀ ದೂರದಲ್ಲಿರುವ ಬೌಧ್ ಜಿಲ್ಲೆಯ ಕುರುಮುಂಡ ಕಾಲುವೆಯ ಬಳಿಯ ಮನಮುಂಡ-ಸಗಡ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ರಸ್ತೆ ಸುಮಾರು ನಾಲ್ಕು ಅಡಿಗಳಷ್ಟು ಪ್ರವಾಹದ ನೀರಿನಲ್ಲಿ ಮುಳುಗಿತ್ತು.
