ಇಂಜೆಕ್ಷನ್ ನೀಡಿ 300 ಬೀದಿನಾಯಿಗಳನ್ನು ಹತ್ಯೆ ಮಾಡಿದಂತಹ ಅಮಾನವೀಯ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಶಯಂಪೇಟೆ ಮತ್ತು ಅರೆಪಲ್ಲಿ ಗ್ರಾಮಗಳಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಗ್ರಾಮದ ಸರಪಂಚರು ಸೇರಿದಂತೆ ಒಟ್ಟು 9 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹನುಮಕೊಂಡ: ಇಂಜೆಕ್ಷನ್ ನೀಡಿ 300 ಬೀದಿನಾಯಿಗಳನ್ನು ಹತ್ಯೆ ಮಾಡಿದಂತಹ ಅಮಾನವೀಯ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಶಯಂಪೇಟೆ ಮತ್ತು ಅರೆಪಲ್ಲಿ ಗ್ರಾಮಗಳಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಗ್ರಾಮದ ಸರಪಂಚರು ಸೇರಿದಂತೆ ಒಟ್ಟು 9 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳು ಮಾರಕ ಚುಚ್ಚುಮದ್ದು ಬಳಸಿ ಸುಮಾರು 300 ಬೀದಿ ನಾಯಿಗಳನ್ನು ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಭಾನುವಾರ ಪೊಲೀಸರು ಮತ್ತು ಪಶುವೈದ್ಯರು ನಾಯಿಗಳ ಹೂಳಲಾದ ಶವಗಳ ಮರಣೋತ್ತರ ಪರೀಕ್ಷೆ ನಡೆಸಲು ಗ್ರಾಮಗಳಿಗೆ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಕರೀಂನಗರ ಜಿಲ್ಲೆಯಲ್ಲಿ ಕಾರ್ಯಾಚರಿಸುವ ಎನ್‌ಜಿಒ ಸ್ಟ್ರೇ ಅನಿಮಲ್ ಫೌಂಡೇಶನ್ ಆಫ್ ಇಂಡಿಯಾ ಪರವಾಗಿ ಎ ಗೌತಮ್ ಎಂಬುವವರು ಈ ಬಗ್ಗೆಶಯಂಪೇಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಜನವರಿ 6 ರಿಂದ 8 ರ ನಡುವೆ ಇಬ್ಬರು ಬಾಡಿಗೆ ವ್ಯಕ್ತಿಗಳನ್ನು ನಿಯೋಜಿಸಿ ಶಯಂಪೇಟ್ ಮತ್ತು ಅರೆಪಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಬೀದಿ ನಾಯಿಗಳನ್ನು ಕೊಲ್ಲಲಾಗಿದೆ ಎಂದು ಗೌತಮ್ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಾಯಿಗಳ ಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿದೇಶದಿಂದ ರಹಸ್ಯವಾಗಿ ಆಗಮಿಸಿ ಸ್ನೇಹಿತನ ಜೊತೆ ಸೇರಿ ತಾಯಿಯನ್ನೇ ಕೊಂದ ಮಗ

ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ರಾಣಿ ಜನನ ನಿಯಂತ್ರಣ, ಸಂತಾನಹರಣ ಚಿಕಿತ್ಸೆ ಮತ್ತು ಲಸಿಕೆ ಹಾಕುವಂತಹ ಕ್ರಮಗಳನ್ನು ಸರ್ಕಾರ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ. ಗ್ರಾಮಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರಿಂದ, ಗ್ರಾಮದ ಸರಪಂಚ ಚುನಾವಣೆಯ ಸಮಯದಲ್ಲಿ ಸಾರ್ವಜನಿಕರು ಬೀದಿನಾಯಿಗಳ ನಿರ್ಮೂಲನೆ ಮಾಡಬೇಕು ಎಂದು ಬೇಡಿಕೆ ಇರಿಸಿದ್ದರು. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮದ ಹಿರಿಯರೊಬ್ಬರು ಹೇಳಿದ್ದು, ದೂರು ನೀಡಿರುವುದನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹಿಜಾಬ್ ಧರಿಸಿ ರೀಲ್ಸ್ ಮಾಡ್ತಿರುವ ಮುಸ್ಲಿಂ ಇನ್‌ಫ್ಲುಯೆನ್ಸರ್‌ಗೆ ಜೀವ ಬೆದರಿಕೆ

ಇತ್ತ ಗೌತಮ್ ಅವರು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಇಬ್ಬರು ಸರಪಂಚ್‌ಗಳು ಮತ್ತು ಅವರ ಪತಿಯರು, ಉಪ ಸರಪಂಚ್, ಇಬ್ಬರು ಗ್ರಾಮ ಕಾರ್ಯದರ್ಶಿಗಳು ಮತ್ತು ಇಬ್ಬರು ದಿನಗೂಲಿ ಕಾರ್ಮಿಕರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.