ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಂದೇಡ್‌ನಲ್ಲಿ ಮಾಜಿ ಮುಖ್ಯಮಂತ್ರಿ ವಸಂತರಾವ್ ನಾಯಕ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಮಹಾರಾಷ್ಟ್ರ (ಮೇ.26): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಮಾಜಿ ಮುಖ್ಯಮಂತ್ರಿ ವಸಂತರಾವ್ ನಾಯಕ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ, ಆಪರೇಷನ್ ಸಿಂಧೂರ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಶಾ ತೀವ್ರವಾಗಿ ಟೀಕಿಸಿದರು.
ಸುದ್ದಿ ಸಂಸ್ಥೆ ANI ವರದಿಯ ಪ್ರಕಾರ, ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ, ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿದರೆ, ಗುಂಡಿಗೆ ಶೆಲ್‌ನಿಂದಲೇ ಉತ್ತರ ನೀಡಲಾಗುವುದು. ಪಾಕಿಸ್ತಾನಿ ಭಯೋತ್ಪಾದಕರನ್ನು ಹುಡುಕಿ ನಿರ್ಮೂಲನೆ ಮಾಡಲಾಗುವುದು. ನಮ್ಮ ಹೆಣ್ಣುಮಕ್ಕಳ ಸಿಂದೂರ ಅಳಿಸಲು ಯತ್ನಿಸಿದರೆ ನಾಶವಾಗುವುದು ಖಚಿತ, ಅವರಿಗೆ ಹಾನಿ ಮಾಡುವವರಿಗೆ ರಕ್ತದಿಂದಲೇ ಪ್ರತಿಕ್ರಿಯಿಸಬೇಕಾಗುತ್ತದೆ. ಎಂದು ಎಚ್ಚರಿಸಿದರು.
ಬಾಳಾ ಸಾಹೇಬ್ ಠಾಕ್ರೆ ಇಂದು ಇಲ್ಲಿದ್ದಿದ್ದರೆ:
“ಬಾಳಾ ಸಾಹೇಬ್ ಠಾಕ್ರೆ ಇಂದು ಇಲ್ಲಿದ್ದರೆ, ಆಪರೇಷನ್ ಸಿಂದೂರ್‌ಗಾಗಿ ಅವರು ಪ್ರಧಾನಿ ಮೋದಿಯವರನ್ನು ಅಪ್ಪಿಕೊಳ್ಳುತ್ತಿದ್ದರು. ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. ಆದರೆ ಉದ್ಧವ್ ಠಾಕ್ರೆ ಅವರ ಪಕ್ಷಕ್ಕೆ ಏನಾಗಿದೆಯೋ ನನಗೆ ತಿಳಿಯದು. ನರೇಂದ್ರ ಮೋದಿ ಅವರ ಸರ್ಕಾರ 11 ವರ್ಷಗಳಿಂದ ಇಲ್ಲಿ ಅಧಿಕಾರದಲ್ಲಿದೆ ಎಂಬುದನ್ನು ಪಾಕಿಸ್ತಾನ ಮರೆತಿದೆ ಎಂದು ಗೃಹ ಸಚಿವ ಅಮಿತ್ ಶಾ ಎಚ್ಚರಿಸಿದರು.
ಆಪರೇಷನ್ ಸಿಂದೂರ್ ಪ್ರತಿದಾಳಿ ಪಾಕಿಸ್ತಾನಕ್ಕೆ ನಡುಕ:
ಉರಿ, ಪುಲ್ವಾಮಾ ಮತ್ತು ಪಹಲ್ಗಾಮ್ ದಾಳಿಗಳಿಗೆ ಸರ್ಜಿಕಲ್ ಸ್ಟ್ರೈಕ್, ವಾಯುದಾಳಿ ಮತ್ತು ಆಪರೇಷನ್ ಸಿಂದೂರ್ ಮೂಲಕ ಭಾರತ ತಕ್ಕ ಪ್ರತಿಕ್ರಿಯೆ ನೀಡಿದೆ ಎಂದ ಶಾ, ಆಪರೇಷನ್ ಸಿಂದೂರ್‌ನಿಂದ ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಲಾಗಿದೆ. ಇದು ಜಗತ್ತಿಗೆ ಒಂದು ಸಂದೇಶ ನೀಡಿದೆ. ಅದೇನೆಂದರೆ ಭಾರತೀಯ ಸೇನೆ ಮತ್ತು ಜನರಿಗೆ ತೊಂದರೆ ನೀಡಿದವರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.
ಪಾಕಿಸ್ತಾನದ ವಾಯು ರಕ್ಷಣೆಯನ್ನು ಭಾರತೀಯ ಸೇನೆ ನಾಶಪಡಿಸಿದಾಗ, ಒಂದೇ ಒಂದು ಕ್ಷಿಪಣಿಯೂ ಭಾರತದ ನೆಲವನ್ನು ಮುಟ್ಟಲಿಲ್ಲ. ಯಾರಾದರೂ ದಾಳಿ ಮಾಡಿದರೆ, ಗುಂಡಿಗೆ ಶೆಲ್‌ನಿಂದಲೇ ಉತ್ತರ ನೀಡಲಾಗುವುದು ಎಂದು ಮೋದಿಯವರ ನಿಲುವನ್ನು ಪುನರುಚ್ಚರಿಸಿದರು.
