ದೆಹಲಿಯಲ್ಲಿ ಉದ್ಯಮಿಯೊಬ್ಬರ ಪತ್ನಿಯನ್ನು ಜಿಮ್ ಟ್ರೈನರ್ ಅಪಹರಿಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 

ನವದೆಹಲಿ: ಉದ್ಯಮಿಯೊಬ್ಬರ ಪತ್ನಿಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪದ ಮೇಲೆ ಜಿಮ್ ಟ್ರೈನರ್‌ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆ ಕೊಲೆ ಆರೋಪಿಯ ಜಿಮ್‌ಗೆ ಜಿಮ್ ಮಾಡುವುದಕ್ಕಾಗಿ ಬರುತ್ತಿದ್ದಳು. 4 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿಯ ಸಿವಿಲ್ ಲೈನ್‌ನ ಗ್ರೀನ್ ಪಾರ್ಕ್‌ನಿಂದ 4 ತಿಂಗಳ ಹಿಂದೆ ಉದ್ಯಮಿಯ ಪತ್ನಿಯನ್ನು ಅಪಹರಿಸಲಾಗಿತ್ತು. ತೀವ್ರ ವಾಗ್ವಾದದ ನಂತರ ಆಕೆಯನ್ನು ಕೊಲೆ ಮಾಡಿದ ಆರೋಪಿ ಬಳಿಕ ಶವವನ್ನು ವಿಐಪಿ ರೋಡ್‌ನ ಡಿಎಂ ಕಾಂಪೌಂಡ್ ಬಳಿ ಇರುವ ಆಫೀಸರ್ ಕ್ಲಬ್‌ನ ಆವರಣದಲ್ಲಿ ಹೂತು ಹಾಕಿದ್ದ. 

ಸಂಶಯದ ಮೇಲೆ ಜಿಮ್ ಪೊಲೀಸರು ಅರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆಫೀಸರ್ ಕ್ಲಬ್‌ನ ಆವರಣದಲ್ಲಿ ಹೂತು ಹಾಕಿದ್ದ ಮಹಿಳೆಯ ಶವವನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ದೆಹಲಿ ಪೂರ್ವ ಡಿಸಿಪಿ, ಶ್ರವಣ್‌ಕುಮಾರ್ ಸಿಂಗ್, ಈ ಘಟನೆ ಜೂನ್ 24 ರಂದು ನಡೆದಿದೆ. ಕೊಲೆಯಾದ ಮಹಿಳೆ ಆರೋಪಿಯ ಜಿಮ್‌ಗೆ ಟ್ರೈನಿಂಗ್‌ಗಾಗಿ ಹೋಗುತ್ತಿದ್ದಳು. 

ಜಿಮ್‌ನಲ್ಲಿ ಯಾವುದು ಕ್ಷುಲ್ಲಕ ಕಾರಣಕ್ಕೆ ಮಹಿಳೆ ಹಾಗೂ ಜಿಮ್ ಟ್ರೈನರ್ ಮಧ್ಯೆ ವಾಗ್ವಾದ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಆರೋಪಿ, ಮಹಿಳೆಯನ್ನು ಅಪಹರಿಸಿ ಕೊಲೆ ಮಾಡಿದ್ದಾನೆ. ಬಳಿಕ ಗುಂಡಿ ತೋಡಿ ಶವವನ್ನು ಹೂತು ಹಾಕಿದ್ದಾನೆ. ತನಿಖೆ ವೇಳೆ ಮೊದಲಿಗೆ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ ಆತ ಬಳಿಕ ವಿಚಾರಣೆ ತೀವ್ರಗೊಳಿಸಿದಾಗ ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.