ಪಾತಕಿಗಳಾದ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ರನ್ನು ನಡು ರಸ್ತೆಯಲ್ಲಿಯೇ ಶೂಟ್‌ ಮಾಡಿ ಕೊಂದ ಮೂವರು ಹಂತಕರ ಪೈಕಿ ಒಬ್ಬನಾದ ಮೋಹಿತ್‌ ಸಿಂಗ್‌ ಅಲಿಯಾಸ್‌ ಶಾನಿ, 90ರ ದಶಕದಲ್ಲಿ ಡಾನ್‌ ಆಗಿದ್ದ ಶ್ರೀಪ್ರಕಾಶ್‌ ಶುಕ್ಲಾ ಎನ್ನುವವರ ಫ್ಯಾನ್‌ ಆಗಿದ್ದ ಎನ್ನುವುದು ತಿಳಿದುಬಂದಿದೆ. 

ನವದೆಹಲಿ (ಏ.17): ಪ್ರಯಾಗ್‌ ರಾಜ್‌ ಆಸ್ಪತ್ರೆಗೆ ಎಂದಿನ ಹೆಲ್ತ್‌ ಚೆಕಪ್‌ಗಾಗಿ ಬರುತ್ತಿದ್ದ ಪಾತಕಿಗಳಾದ ಅತೀಕ್‌ ಅಹ್ಮದ್‌ ಹಾಗೂ ಅಶ್ರಫ್‌ರನ್ನು ಪೊಲೀಸರ ನಡುವೆಯೇ ನಡು ರಸ್ತೆಯಲ್ಲಿ ಮೂವರು ಹಂತಕರು ಶೂಟ್‌ ಮಾಡಿ ಕೊಂದಿದ್ದರು. ಈ ಮೂವರ ಪೈಕಿ ಮೋಹಿತ್‌ ಸಿಂಗ್‌ ಅಲಿಯಾಸ್‌ ಶಾನಿ ಕೂಡ ಒಬ್ಬ. ಬರೀ 23 ವರ್ಷದ ಮೋಹಿತ್‌, 1990ರ ಹೈ ಪ್ರೊಫೈಲ್‌ ಡಾನ್‌ ಆಗಿದ್ದ ಶ್ರೀಪ್ರಕಾಶ್‌ ಶುಕ್ಲಾ ಅವರ ದೊಡ್ಡ ಫ್ಯಾನ್‌ ಆಗಿದ್ದ ಎನ್ನುವುದು ತಿಳಿದುಬಂದಿದೆ. ಈವರೆಗೂ ಮೋಹಿತ್‌ ವಿರುದ್ಧ 14 ಕೇಸ್‌ಗಳು ದಾಖಲಾಗಿವೆ. ಮೋಹಿತ್‌ ಸಿಂಗ್‌ ಎಷ್ಟು ಅಪಾಯಕಾರಿ ಎಂದರೆ, ಎರಡೂ ಕೈಗಳಿಂದ ಅತ್ಯಂತ ನಿಖರವಾಗಿ ಶೂಟ್‌ ಮಾಡಲು ಪಂಟರ್‌ ಆಗಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪೊಲೀಸರ ಪ್ರಕಾರ, ಅತ್ಯಾಧುನಿಕವಾಗಿರುವ ಟರ್ಕಿಶ್‌ ಪಿಸ್ತೂಲ್‌ಅನ್ನು ಬಳಸಿಕೊಂಡು ಅಶ್ರಫ್‌ನ ತಲೆಗೆ ಗುಂಡು ಹಾಕಿದ್ದು ಮೋಹಿತ್‌ ಎಂದು ಹೇಳಿದ್ದಾರೆ. ಈತನ ವಿರುದ್ಧ ಕೊಲೆಯತ್ನ ಮತ್ತು ದರೋಡೆ ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿ ಮೂರು ಪ್ರಕರಣಗಳಲ್ಲಿ ದಾಖಲಿಸಲಾಗಿದೆ. ಈತನನ್ನು 2021ರಿಂದ ಚಿತ್ರಕೂಟ ಜೈಲಿನಲ್ಲಿ ಇರಿಸಲಾಗಿತ್ತು.

ಮೋಹಿತ್‌ ಸಿಂಗ್‌ನ ಹಿರಿಯಣ್ಣ ಪಿಂಟು ಸಿಂಗ್‌ ತಮ್ಮನ ಬಗ್ಗೆ ಮಾತನಾಡಿದ್ದಾರೆ. 12 ವರ್ಷಗಳ ಹಿಂದೆಯೇ ಆತ ಮನೆಯನ್ನು ತೊರೆದಿದ್ದಾನೆ. ಈವರೆಗೂ ಮತ್ತೆ ಮನೆಗೆ ಭೇಟಿಯನ್ನೇ ನೀಡಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಟಿವಿಯಲ್ಲಿ ಬಂದ ನ್ಯೂಸ್‌ಗಳನ್ನು ನೋಡಿದ ಬಳಿಕ ಅತೀಕ್‌ ಹಾಗೂ ಆಶ್ರಫ್‌ ಅವರ ಕೊಲೆಯಲ್ಲಿ ತಮ್ಮನ ಪಾತ್ರವಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ. ಸ್ಥಳೀಯರು ಕೂಡ ಮೋಹಿತ್‌ ಬಗ್ಗೆ ಮಾತನಾಡಿದ್ದು, ಆತು ಓದುವುದರಲ್ಲಿ ಅಷ್ಟೆಲ್ಲಾ ಜಾಣ್ಮೆ ತೋರುತ್ತಿರಲಿಲ್ಲ. 8ನೇ ತರಗತಿಯಷ್ಟೇ ಪಾಸ್‌ ಆಗಿದ್ದ ಎಂದು ಹೇಳಿದ್ದಾರೆ.
'ನನ್ನ ತಂದೆ ಜಗತ್‌ ಸಿಂಗ್‌ 10 ವರ್ಷಗಳ ಹಿಂದೆ ನಿಧನರಾದರು. ಅವರ ಹಿಂದೆಯೇ ನಮ್ಮ ತಾಯಿ ಕೂಡ ಸಾವು ಕಂಡರು. ನಮಗೆ ಯಾವುದೇ ಭೂಮಿಯಾಗಲಿ ಆಸ್ತಿಯಾಗಲಿ ಇಲ್ಲ. ನಮ್ಮ ತಂದೆಯ ಸಾವಿನ ಬಳಿಕ ನಮ್ಮ ಇಡೀ ಕುಟುಂಬ ಮೋಹಿತ್‌ ಜೊತೆ ಅಂತರ ಕಾಯ್ದುಕೊಂಡಿತು' ಎಂದು ಪಿಂಟು ಹೇಳಿದ್ದಾರೆ.

ಇನ್ನು ಆತನ ಕುರಿತಾಗಿಯೂ ನನಗೆ ಅಷ್ಟಾಗಿ ನೆನಪುಗಳಿಲ್ಲ. ನಾವು ಅಂದು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೆವು. ಆತನಿಗೆ ಚಿಕ್ಕಂದಿನಿಂದಲೂ ಓದಿನ ಬಗ್ಗೆ ಯಾವುದೇ ಆಸಕ್ತಿ ಇದ್ದಿರಲಿಲ್ಲ. ಗನ್‌ಗಳ ಬಗ್ಗೆಯೇ ಅತೀವ ಆಸಕ್ತಿ ತೋರುತ್ತಿದ್ದ ಎಂದು ಪಿಂಟು ಹೇಳಿದ್ದಾರೆ. ಪಿಂಟು ತಮ್ಮ ಊರಿನಲ್ಲಿ ಸಣ್ಣ ಚಹಾ ಹಾಗೂ ಸಮೋಸಾ ಅಂಗಡಿಯನ್ನು ಹೊಂದಿದ್ದಾರೆ.

2 ವಾರಗಳಲ್ಲಿ ನನ್ನನ್ನು ಕೊಲ್ಲಲಾಗುವುದು ಎಂದು ಮೊದಲೇ ಹೇಳಿದ್ದ ಯುಪಿ ಗ್ಯಾಂಗ್‌ಸ್ಟರ್‌!

ಸ್ಥಳೀಯರು ಮಾಧ್ಯಮಗಳಿಗೆ ನೀಡಿರುವ ಮಾಹಿತಿಗಳ ಪ್ರಕಾರ, ಮೋಹಿತ್‌ ಊರಿನ ಸೈಬರ್‌ ಕಫೆಗಳಿಗೆ ಖಾಯಂ ಆಗಿ ಭೇಟಿ ನೀಡುತ್ತಿದ್ದ. ದೇಶದ ಪ್ರಖ್ಯಾತ ಕ್ರಿಮಿನಲ್‌ಗಳ ಅದರಲ್ಲೂ 90ರ ದಶಕದ ಕುಖ್ಯಾತ ಡಾನ್‌ ಆಗಿದ್ದ ಶ್ರೀಪ್ರಕಾಶ್‌ ಶುಕ್ಲಾನ ಚಿತ್ರಗಳನ್ನು ಪ್ರಿಂಟ್‌ ಮಾಡಿಸಿಕೊಂಡು ಹೋಗುತ್ತಿದ್ದ ಎಂದಿದ್ದಾರೆ. ಆಗ ಮೋಹಿತ್‌ನಿಗೆ ಹೆಚ್ಚೆಂದರೆ, 10 ವರ್ಷ ವಯಸ್ಸು. ಪಾರ್ಟಿಗಳಿಗೆ ಹೋಗುವುದು, ಸಮಾಜದ ಜೊತೆಗೆ ಬೆರೆಯುವುದನ್ನು ಮೋಹಿತ್‌ ಎಂದಿಗೂ ದ್ವೇಷಿಸುತ್ತಿದ್ದ. ಇನ್ನು ಕ್ರೈಮ್‌ ಬ್ರ್ಯಾಂಚ್ ಅಧಿಕಾರಿಗಳ ಪ್ರಕಾರ, ಕಚ್ಚಾಬಾಂಬ್‌ಗಳನ್ನು ತಯಾರಿಸುವುದರಲ್ಲೂ ಮೋಹಿತ್‌ ಪಂಟರ್‌ ಆಗಿದ್ದ. ಅದನ್ನು ಆನ್‌ಲೈನ್‌ನಿಂದ ಕಲಿತುಕೊಂಡಿದ್ದ ಎಂದಿದ್ದಾರೆ. ಮೂರು ಬಾರಿ ಆತ ನಗರದಲ್ಲಿ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದೊಡ್ಡ ಡಾನ್‌ ಆಗಲು ದೊಡ್ಡ ತಲೆಯನ್ನೇ ತೆಗೆಯಬೇಕೆಂದು ಯುಪಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹತ್ಯೆ!

ಅದರೊಂದಿಗೆ ಡ್ರಗ್ಸ್‌ಗಳನ್ನು ಸಾಗಿಸಿದ, ಶಸ್ತ್ರಾಸ್ತ್ರಗಳನ್ನು ಸಾಗಿಸಿದ ಕೇಸ್‌ಗಳು ಈತನ ಮೇಲಿದೆ. ಹಲವಾರು ಪ್ರಕರಣಗಳಲ್ಲಿ ಜೈಲು ಸೇರಿದ್ದ ಶಾನಿ, ಆ ಜೈಲಿನಲ್ಲಿ ಯಾರನ್ನೆಲ್ಲಾ ಭೇಟಿಯಾಗಿದ್ದ ಅವರೊಂದಿಗೆ ಈತನ ಸಂಬಂಧ ಹೇಗಿತ್ತು ಎನ್ನುವುದರ ವಿಚಾರಣೆಯನ್ನೂ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.