ಸೌದಿ ಅರೇಬಿಯಾದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳದ ಅಬ್ದುಲ್ ರಹೀಂ, 20 ವರ್ಷಗಳ ನಂತರ ಬಿಡುಗಡೆಯಾಗಿದ್ದಾರೆ. ಸಾರ್ವಜನಿಕವಾಗಿ ಸಂಗ್ರಹಿಸಿದ 34 ಕೋಟಿ ರೂಪಾಯಿ ರಕ್ತದ ಹಣವನ್ನು ಪಾವತಿಸಿ, ಅವರು ಇದೀಗ ತಮ್ಮ ತವರು ರಾಜ್ಯಕ್ಕೆ ಮರಳಿದ್ದಾರೆ.
ಕಲ್ಲಿಕೋಟೆ: ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಕಳೆದ 20 ವರ್ಷಗಳಿಂದ ಸೌದಿ ಅರೇಬಿಯಾದ ಜೈಲಲ್ಲಿದ್ದ ಕೇರಳದ ವ್ಯಕ್ತಿ ಬಕ್ರೀದ್‌ನಂದು ತವರು ರಾಜ್ಯ ಕೇರಳಕ್ಕೆ ಮರಳಿದ್ದು, ತಮ್ಮ ಪರಿವಾರವನ್ನು ಸೇರಿಕೊಂಡಿದ್ದಾರೆ. 2006ರಲ್ಲಿ 17 ವರ್ಷದ ಹುಡುಗನ ಸಾವಿಗೆ ಕಾರಣವಾದ ಆರೋಪದಲ್ಲಿ ಬಂಧಿತ ಅಬ್ದುಲ್ ರಹೀಂರನ್ನು ಬರೋಬ್ಬರಿ 34 ಕೋಟಿ ರು. ಬ್ಲಡ್‌ಮನಿ (ಮೃತ ಸಂತ್ರಸ್ತರ ಪರಿವಾರಕ್ಕೆ ದೋಷಿಯ ಕಡೆಯವರು ನೀಡುವ ಪರಿಹಾರಧನ) ನೀಡಿ ಬಿಡಿಸಿಕೊಂಡು ಬರಲಾಗಿದೆ.
ಅಷ್ಟಕ್ಕೂ ಆಗಿದ್ದೇನು?
ಕೇರಳದಲ್ಲಿ ಆಟೋ, ಶಾಲೆಯ ಬಸ್ ಚಾಲಕನಾಗಿದ್ದ ರಹೀಂ, ಅದೇ ಕೆಲಸಕ್ಕೆಂದು 2006ರಲ್ಲಿ ಸೌದಿ ರಾಜಧಾನಿ ರಿಯಾದ್‌ಗೆ ಹೋಗಿದ್ದರು. ಅಲ್ಲಿ ಅವರ ಮಾಲೀಕನ 17 ವರ್ಷದ ಮಗನನ್ನು ನೋಡಿಕೊಳ್ಳುವ ಜವಾಬ್ದಾರಿ ಇವರಿಗೇ ನೀಡಲಾಗಿತ್ತು. ಪಾರ್ಶ್ವವಾಯುವಿಗೆ ತುತ್ತಾಗಿ ಕೃತಕ ಉಸಿರಾಟದಿಂದ ಜೀವ ಹಿಡಿದಿಟ್ಟುಕೊಂಡಿದ್ದ ಆ ಹುಡುಗನನ್ನು ರಹೀಂ ಗಾಡಿಯಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ವೇಳೆ ಆತನ ಉಸಿರಾಟದ ಉಪಕರಣ ಕಳಚಿಬಿದ್ದು, ಸಾವನ್ನಪ್ಪಿದ್ದ.
ಸಾರ್ವಜನಿಕವಾಗಿ ನಿಧಿ ಸಂಗ್ರಹಿಸಿ ನೀಡಿದ ಕುಟುಂಬ
ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್, 2011ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಮೃತ ಬಾಲಕನ ಪರಿವಾರದವರು 2024ರಲ್ಲಿ 34 ಕೋಟಿ ರು. ನೀಡಿದರೆ ಕ್ಷಮಿಸುವುದಾಗಿ ಒಪ್ಪಿಕೊಂಡಿದ್ದರು. ಆದರೆ ಅಷ್ಟು ಹಣ ಹೊಂದಿಸಲು ಶಕ್ತವಾಗಿರದ ರಹೀಂ ಕುಟುಂಬ, ಅದಕ್ಕಾಗಿ ಸಾರ್ವಜನಿಕವಾಗಿ ನಿಧಿ ಸಂಗ್ರಹಿಸಲು ಮುಂದಾಗಿತ್ತು. ಹೀಗೆ ಸಂಗ್ರಹವಾದ 47 ಕೋಟಿ ರು.ನಲ್ಲಿ 34 ಕೋಟಿ ರು.ವನ್ನು ಮೃತನ ಕುಟುಂಬಕ್ಕೆ ನೀಡಿ, 20 ವರ್ಷಗಳ ಸೆರೆವಾಸ ಪೂರೈಸಿದ ರಹೀಂ, ಮೇ 20ರಂದು ಬಿಡುಗಡೆಯಾದರು.
ಕೊನೆಗೂ ಸುದೀರ್ಘ ಅಗ್ನಿಪರೀಕ್ಷೆ ಜಯಿಸಿ, ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ರಹೀಂ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದು, ತಾವು ಜೀವಂತವಾಗಿ ಹಿಂದಿರುಗಲು ಸಹಾಯ ಮಾಡಿದ ಎಲ್ಲರಿಗೆ ಧನ್ಯವಾದ ಸಲ್ಲಿಸಿದ್ದಾರೆ.


