ಶ್ರೀಮಂತಿಕೆ ತಂದ ಸಾವು: ಸ್ನೇಹಿತನಿಗೆ ವಿಷ ಉಣಿಸಿದ 19 ವರ್ಷದ ಯುವಕ
ನಾಗಪುರದಲ್ಲಿ 18 ವರ್ಷದ ಯುವಕನೊಬ್ಬನನ್ನು ಆತನ ಸ್ನೇಹಿತನೇ ವಿಷ ಬೆರೆಸಿ ಕೊಲೆ ಮಾಡಿದ್ದಾನೆ. ಶ್ರೀಮಂತ ಹಿನ್ನೆಲೆಯ ಯುವಕನ ಮೇಲಿನ ಅಸೂಯೆಯೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗಪುರ: 18 ವರ್ಷದ ಯುವಕನೋರ್ವನ ಶ್ರೀಮಂತಿಕೆಯ ಹಿನ್ನೆಲೆಯಿಂದ ಅಸೂಯೆಗೊಳಗಾದ ಸ್ನೇಹಿತನೇ ಆತನಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ಕುಡಿಸಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ 19 ವರ್ಷದ ಮಿಥಿಲೇಶ್ ಅಲಿಯಾಸ್ ಮಂಥನ್ ರಾಜೇಂದ್ರ ಚಕೋಲೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಹುಡ್ಕೇಶ್ವರದ ನೀಲಕಾಂತ್ ನಗರ ನಿವಾಸಿಯಾಗಿದ್ದು, ತನ್ನ ನೆರೆಮನೆಯವನೇ ಆದ ವೇದಾಂತ್ ಅಲಿಯಾಸ್ ವಿಜಯ್ ಕಾಳಿದಾಸ್ ಖಂಡಟೆ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಲಾಗಿದೆ.
ಕೊಲೆಯಾದ ವೇದಾಂತ್ ಶ್ರೀಮಂತ ಹಿನ್ನೆಲೆಯಿಂದ ಬಂದಂತಹ ಹುಡುಗನಾಗಿದ್ದು, ಇತ್ತೀಚೆಗಷ್ಟೇ ವೇದಾಂತ್ ಮನೆಯವರು ಆಧುನಿಕ ಸೌಕರ್ಯಗಳಿರುವ ಎರಡಂತಸ್ಥಿನ ಮನೆಯನ್ನು ಕಟ್ಟಿಸಿದ್ದರು. ಆದರೆ ಆರೋಪಿ ಮಂಥನ್ ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದ ಗೆಳೆಯನ ಶ್ರೀಮಂತಿಕೆಯ ಬಗ್ಗೆ ಮಂಥನ್‌ಗೆ ಹೊಟ್ಟೆಯುರಿ ಇತ್ತು.
ರೀಲ್ಸ್‌ಗೆ ಆಕ್ಷೇಪ: ಲವರ್ ಜೊತೆ ಸೇರಿ ಗಂಡನ ಕತೆ ಮುಗಿಸಿದ ಇನ್ಸ್ಟಾ ಸ್ಟಾರ್
ಏಪ್ರಿಲ್ 8 ರಂದು ಆರೋಪಿ ಮಂಥನ್ ವೇದಾಂತ್‌ನನ್ನು ಸಮೀಪದ ಪಾನ್ ಶಾಪ್‌ಗೆ ಬರುವಂತೆ ಕರೆದಿದ್ದಾನೆ. ಅಲ್ಲಿ ಇಬ್ಬರು ತಂಪು ಪಾನೀಯ ಸೇವಿಸಿದ್ದಾರೆ. ಆದರೆ ಇದೇ ವೇಳೆ ವೇದಾಂತ್‌ಗೆ ತಿಳಿಯದಂತೆ ಆರೋಪಿ ಮಂಥನ್ ವೇದಾಂತ್‌ನ ಜ್ಯೂಸ್ ಗ್ಲಾಸ್‌ಗೆ ಜಿರಳೆ ನಿವಾರಕ ಜೆಲ್‌ನ್ನು ಹಾಕಿದ್ದಾನೆ. ಈ ಜ್ಯೂಸ್ ಕುಡಿದ ನಂತರ ವೇದಾಂತ್ ಮನೆಗೆ ಮರಳಿದ್ದು, ಆತನಿಗೆ ತಲೆ ತಿರುಗಲು ಶುರುವಾಗಿದೆ. ಅಲ್ಲದೇ ಸ್ವಲ್ಪ ಹೊತ್ತಿನಲ್ಲೇ ಆತನ ಸ್ಥಿತಿ ಗಂಭೀರವಾಗಿದೆ. ಕೂಡಲೇ ಆತನನ್ನು ಮನೆಯವರು ಸಮೀಪದ ಸಕ್ಕರದಾರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆತನಿಗೆ ವಿಷಪ್ರಾಶನವಾದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಕೂಡಲೇ ಚಿಕಿತ್ಸೆ ಆರಂಭಿಸಿದ್ದಾರೆ. ಆದರೆ ವೇದಾಂತ್ ಮತ್ತೆ ಮೇಲೆದಿಲ್ಲ, ಪ್ರಜ್ಞಾಶೂನ್ಯನಾಗಿದ್ದ ವೇದಾಂತ್ ಏಪ್ರಿಲ್ 12 ರಂದು ಮೃತಪಟ್ಟಿದ್ದಾನೆ.
ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಆದರೆ ವೈದ್ಯಕೀಯ ವರದಿಯು ಅವರ ದೇಹದಲ್ಲಿ ವಿಷವಿದೆ ಎಂಬುದನ್ನು ತೋರಿಸಿತ್ತು ಮತ್ತು ವೈದ್ಯರು ಅವರು ಗೊತ್ತಿದ್ದೂ, ಅಂತಹ ವಸ್ತುವನ್ನು ಸೇವಿಸಿರುವುದು ಅಸಂಭವವೆಂದು ಹೇಳಿದ್ದರು. ಹೀಗಾಗಿ ಪೊಲೀಸರಿಗೆ ಅನುಮಾನ ಶುರುವಾಗಿದ್ದು, ವೇದಾಂತ್‌ನ ಅಂತಿಮ ಕ್ಷಣಗಳ ಚಲನವಲನಗಳು ಮತ್ತು ಫೋನ್ ಕರೆಗಳನ್ನು ಪತ್ತೆಹಚ್ಚಿದಾಗ, ಆತನ ಕೊನೆಯ ಫೋನ್ ಕರೆ ಆರೋಪಿಗೆ ಹೋಗಿದೆ ಎಂಬುದನ್ನು ಪೊಲೀಸರು ಗಮನಿಸಿದ್ದಾರೆ. ಈ ವೇಳೆ ಆರೋಪಿ ತಾನು ಹಾಗೂ ಆತ ಜೊತೆಯಾಗಿ ಪಾನ್' ಅಂಗಡಿಯಲ್ಲಿ ಭೇಟಿಯಾಗಿ ನಂತರ ತಂಪು ಪಾನೀಯಗಳನ್ನು ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಪಾಕಿಸ್ತಾನಿಯಿಂದ ತೆಲಂಗಾಣದ ಇಬ್ಬರು ಕೆಲಸಗಾರರ ಹತ್ಯೆ!
ಹಾಗಿದ್ದೂ ಪೊಲೀಸರಿಗೆ ಮಂಥನ್ ವರ್ತನೆಯಿಂದ ಅನುಮಾನ ಮೂಡಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಸೂಯೆಯಿಂದ ತಾನೇ ಸ್ನೇಹಿತನಿಗೆ ವಿಷ ಉಣಿಸಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಆತನ ಕೊಲೆ ಮಾಡುವುದು ತನ್ನ ಉದ್ದೇಶವಾಗಿರಲಿಲ್ಲ, ಕೇವಲ ಆತನನ್ನು ಅಸ್ವಸ್ಥಗೊಳಿಸುವುದು ತನ್ನ ಗುರಿಯಾಗಿತ್ತು ಎಂದು ಆರೋಪಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಆರೋಪಿಯು ವೇದಾಂತ್ ಸ್ಥಿತಿ ಗಂಭೀರವಾದಾಗ ಭಯಭೀತನಾಗಿದ್ದ ಮತ್ತು ಪೊಲೀಸರನ್ನು ದಾರಿ ತಪ್ಪಿಸಲು ಮತ್ತು ಘಟನೆಯನ್ನು ಅಪಹರಣ ಅಥವಾ ಸುಲಿಗೆ ಯತ್ನದಂತೆ ಬಿಂಬಿಸಲು ನಕಲಿ ಸುಲಿಗೆ ಪತ್ರ ಬರೆದು ಬಲಿಪಶುವಿನ ತಂದೆಯ ಕಾರಿನ ಮೇಲೆ ಬಿಟ್ಟು ಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಛೇ ಎಂಥಾ ಸ್ನೇಹಿತರು ಇರ್ತಾರೆ ನೋಡಿ. ಬಹುತೇಕ ಯುವಕರು ಮನೆಯವರಿಗಿಂತ ಸ್ನೇಹಿತರನ್ನು ನಂಬುವುದೇ ಹೆಚ್ಚು ಹೇಳಿ ಕೇಳಿ ಸ್ನೇಹ ಬರುವುದಿಲ್ಲ ಗುಣ ನೋಡಿ ಸ್ನೇಹ ಮಾಡುವುದಕ್ಕೂ ಆಗುವುದಿಲ್ಲ, ಆದರೆ ಇಂತಹ ಘಟನೆ ನೋಡಿದ ನಂತರ ನಿಮ್ಮ ಮಕ್ಕಳ ಸ್ಣೇಹಿತರ ಮೇಲೂ ಈಗ ಒಂದು ಕಣ್ಣಿಡಬೇಕಿದೆ. ಜೊತೆಗೆ ಶ್ರೀಮಂತರಾಗಿದ್ದರೆ, ಶ್ರೀಮಂತಿಕೆಯನ್ನು ಕೇವಲ ಅನುಭವಿಸಿ ತೋರಿಸಿಕೊಳ್ಳಲು ಹೋಗಬೇಡಿ ಎಂದು ಮಕ್ಕಳಿಗೆ ಬುದ್ಧಿ ಹೇಳಬೇಕಾಗಿದೆ. ಒಟ್ಟಿನಲ್ಲಿ ಇದು ಯಾರನ್ನೂ ನಂಬಲಾಗದಂತಹ ಕಾಲ. ಈ ಬಗ್ಗೆ ನೀವೇನಂತಿರಿ...!