ಒಡಿಶಾ ರೈಲು ಅಪಘಾತವಾಗಿ 27 ದಿನ: ಇನ್ನೂ ಪತ್ತೆ ಆಗದ 81 ಶವಗಳ ಗುರುತು; ಶವಗಳಿಗಾಗಿ ಕಾಯುತ್ತಿರುವ 35 ಕುಟುಂಬಗಳು
ಮೃತಪಟ್ಟ ವ್ಯಕ್ತಿಗಳ ಸುಮಾರು 35 ಕುಟುಂಬಗಳು ಭುವನೇಶ್ವರ ಅತಿಥಿಗೃಹದಲ್ಲಿ ಬೀಡುಬಿಟ್ಟಿದ್ದು, ಶವ ಹಸ್ತಾಂತರಕ್ಕೆ ಕಾದಿವೆ. ಒಟ್ಟಾರೆ 84 ಕುಟುಂಬಗಳು ತಮ್ಮ ದೇಹದ ಡಿಎನ್‌ಎ ಸ್ಯಾಂಪಲ್‌ಗಳನ್ನು ರೈಲ್ವೆಗೆ ನೀಡಿವೆ.
ಭುವನೇಶ್ವರ (ಜೂನ್ 29, 2023): 292 ಜನರ ಬಲಿಪಡೆದ ಒಡಿಶಾದ ಬಾಹಾನಗಾ ರೈಲು ದುರಂತದಲ್ಲಿ 81 ಶವಗಳ ಗುರುತು ಇನ್ನೂ ಪತ್ತೆ ಆಗಿಲ್ಲ. ಅಪಘಾತವಾದ ಜೂನ್ 2 ರ ದಿನದಿಂದ ಈ ಶವಗಳು ಶವಾಗಾರದಲ್ಲೇ ಬಾಕಿ ಇವೆ. ಸದ್ಯ ಭುವನೇಶ್ವರ ಏಮ್ಸ್‌ನಲ್ಲಿ ಶವಗಳನ್ನು ಇರಿಸಲಾಗಿದ್ದು, ಗುರುತು ಪತ್ತೆಗೆ ಭಾರೀ ಹೆಣಗಾಟ ನಡೆದಿದೆ.
ಮೃತಪಟ್ಟ ವ್ಯಕ್ತಿಗಳ ಸುಮಾರು 35 ಕುಟುಂಬಗಳು ಭುವನೇಶ್ವರ ಅತಿಥಿಗೃಹದಲ್ಲಿ ಬೀಡುಬಿಟ್ಟಿದ್ದು, ಶವ ಹಸ್ತಾಂತರಕ್ಕೆ ಕಾದಿವೆ. ಒಟ್ಟಾರೆ 84 ಕುಟುಂಬಗಳು ತಮ್ಮ ದೇಹದ ಡಿಎನ್‌ಎ ಸ್ಯಾಂಪಲ್‌ಗಳನ್ನು ರೈಲ್ವೆಗೆ ನೀಡಿವೆ. ಏಕೆಂದರೆ ಶವಗಳು ಗುರುತು ಪತ್ತೆಯಾಗದಷ್ಟು ಘಾಸಿಗೊಂಡಿರುವ ಕಾರಣ ಡಿಎನ್‌ಎ ಮೂಲಕವೇ ಅವುಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಬೇಕಿದೆ. ಆಸ್ಪತ್ರೆಯಲ್ಲಿರುವ ಶವಗಳ ಸಂಖ್ಯೆ 81 ಆದರೂ, ಇತರ 3 ಶವಗಳು ನಾಪತ್ತೆ ಆಗಿವೆ ಎನ್ನಲಾಗಿದೆ. ಹೀಗಾಗಿ 84 ಕುಟುಂಬಗಳು ಡಿಎನ್‌ಎ ಸ್ಯಾಂಪಲ್ ನೀಡಿವೆ.
ಇದನ್ನು ಓದಿ: ಒಡಿಶಾ ರೈಲು ದುರಂತ: ಗುರುತೇ ಸಿಗದೆ ಅನಾಥವಾದ 83 ಶವ; ಕೃತಕ ಬುದ್ಧಿಮತ್ತೆ ಬಳಸಿ ಮೃತರ ಗುರುತು ಪತ್ತೆಗೆ ಯತ್ನ
ಆದರೆ ಅತಿಥಿಗೃಹದಲ್ಲಿ ವಾರಸುದಾರ ಕುಟುಂಬಗಳು ಕಾದು ಕಾದು ಸುಸ್ತಾಗಿವೆ. ಬಿಹಾರದ ಬೇಗುಸರೈ ಜಿಲ್ಲೆಯಿಂದ ಬಂದಿರುವ ಬಸಂತಿ ದೇವಿ ಎಂಬ ಮಹಿಳೆ ಮಾತನಾಡಿ, ‘ಅನೇಕ ದಿನಗಳಿಂದ ಇಲ್ಲಿದ್ದೇನೆ. ಡಿಎನ್‌ಎ ಸ್ಯಾಂಪಲ್ ನೀಡಿದ್ದೇವೆ. ನನ್ನ ಗಂಡ ಯೋಗೇಂದ್ರ ಪಾಸ್ವಾನ್ ಬೆಂಗಳೂರು - ಹೌರಾ ರೈಲಿನಲ್ಲಿದ್ದ. ಆತ ಮೃತನಾಗಿದ್ದಾನೆ. ನಮ್ಮದು ಗುತ್ತಿಗೆ ಕಾರ್ಮಿಕ ಕುಟುಂಬ. ಊರಿನಲ್ಲಿ ಕೂಲಿ ಕೆಲಸ ಬಿಟ್ಟು ಇಲ್ಲಿ ಪತಿಯ ಶವಕ್ಕೆ ಕಾದಿದ್ದೇನೆ. ಶವ ಹಸ್ತಾಂತರಕ್ಕೆ ಇನ್ನೂ 5 ದಿನ ಆಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮುಂದೆ ಏನು ಮಾಡಬೇಕೋ ದಿಕ್ಕೇ ತೋಚುತ್ತಿಲ್ಲ’ ಎಂದರು.
ಇನ್ನೂ ಹಲವು ಕುಟುಂಬಗಳು ಕಾದು ಕಾದು ಸುಸ್ತಾಗಿ ಊರಿಗೆ ಮರಳಿವೆ.
ಇದನ್ನೂ ಓದಿ: ಒಡಿಶಾ ರೈಲು ದುರಂತದ ಬಳಿಕ ಮತ್ತೊಂದು ಅವಘಡ: 2 ರೈಲುಗಳು ಪರಸ್ಪರ ಡಿಕ್ಕಿ; ಹಳಿ ತಪ್ಪಿದ 12 ಬೋಗಿಗಳು!