ಚಿರತೆಯೊಂದು ತಂದೆ-ಮಗನ ಮೇಲೆ ದಾಳಿ ಮಾಡಿದೆ. ತನ್ನ ಮಗನನ್ನು ರಕ್ಷಿಸಲು, 60 ವರ್ಷದ ತಂದೆ ಈಟಿ ಮತ್ತು ಕುಡುಗೋಲಿನಿಂದ ಚಿರತೆಯೊಂದಿಗೆ ಹೋರಾಡಿ ಅದನ್ನು ಕೊಂದಿದ್ದಾರೆ. ಈ ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಈಗ ಅರಣ್ಯ ಇಲಾಖೆ ಅವರ ವಿರುದ್ಧವೇ ಪ್ರಕರಣ ದಾಖಲಿಸಿದೆ.
ಅಪ್ಪ ಮಗನ ಮೇಲೆ ಚಿರತೆ ದಾಳಿ: ಮಗನ ಉಳಿಸಲು ಚಿರತೆಯ ಕೊಂದ ತಂದೆ
ಸೋಮನಾಥ್ ಗಿರ್: ಮಗನನ್ನು ಚಿರತೆ ದಾಳಿಯಿಂದ ರಕ್ಷಿಸಲು 60 ವರ್ಷದ ವ್ಯಕ್ತಿಯೊಬ್ಬರು ಈಟಿ ಹಾಗೂ ಕುಡುಗೋಲು ಬಳಸಿ ಚಿರತೆ ವಿರುದ್ಧ ಹೋರಾಡಿ ಮಗನನ್ನು ಉಳಿಸಿಕೊಂಡಿದ್ದಾರೆ. ಈ ಮಾನವ ಹಾಗೂ ಪ್ರಾಣಿ ಸಂಘರ್ಷದಲ್ಲಿ ಚಿರತೆ ಉಸಿರು ಚೆಲ್ಲಿದ್ದರೆ, 60 ವರ್ಷದ ವ್ಯಕ್ತಿ ಹಾಗೂ ಅವರ ಮಗ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನ ರಕ್ಷಣೆಗಾಗಿ ಚಿರತೆಯನ್ನು ಕೊಂದ ವ್ಯಕ್ತಿಯ ವಿರುದ್ಧ ಈಗ ಅರಣ್ಯ ಇಲಾಖೆ ಕೇಸ್ ದಾಖಲಿಸಿದೆ. ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಬ್ಬರ ಮೇಲೆಯೂ ಚಿರತೆ ದಾಳಿ ಮಾಡಿತ್ತು. ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಬಾಬುಭಾಯ್ ನರನ್‌ಭಾಯ್ ವಜಾ ಎಂಬುವರು ತಮ್ಮ ಮನೆಯ ಶೆಡ್‌ನಲ್ಲಿ ಕುಳಿತಿದ್ದಾಗ ಕತ್ತಲೆಯ ಮರೆಯಲ್ಲಿ ಚಿರತೆಯೊಂದು ಇದ್ದಕ್ಕಿದ್ದಂತೆ ಅವರ ಮೇಲೆ ಎರಗಿದೆ.
60 ವರ್ಷದ ತಂದೆಯ ಕಿರುಚಾಟ ಕೇಳಿ, ಅವರ 27 ವರ್ಷದ ಮಗ ಶಾರ್ದೂಲ್ ತಕ್ಷಣ ಕೋಣೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಚಿರತೆ ಬಾಬುಭಾಯಿಯನ್ನು ಬಿಟ್ಟು ಶಾರ್ದೂಲ್ ಮೇಲೆ ಮುಗಿಬಿದ್ದಿದೆ.
ಇದನ್ನೂ ಓದಿ; ತಲೆಯಲ್ಲಿ ಹುಳು ಆಗುತ್ತಾ? ಎಡಗಾಲು ಎಡಗೈಗೆ ಹಠಾತ್ ಪಿಟ್ಸ್: ಸಿಟಿಸ್ಕ್ಯಾನ್ ರಿಪೋರ್ಟ್ ನೋಡಿ ರೈತನಿಗೆ ಆಘಾತ
ನಾನು ರಾತ್ರಿ ಶೆಡ್‌ನಲ್ಲಿ ಮಲಗಿದ್ದಾಗ, ಚಿರತೆ ಬಂದಿತು. ಅದನ್ನು ಹೆದರಿಸಲು ನಾನು ಕೂಗಿದಾಗ, ಅದು ನನ್ನ ಕಡೆಗೆ ಬಂದು ನನ್ನ ಮೇಲೆ ದಾಳಿ ಮಾಡಿ ನನ್ನ ಗಂಟಲಿನಲ್ಲಿ ಹಿಡಿದುಕೊಂಡಿತು. ನನ್ನ ಕಿರುಚಾಟ ಕೇಳಿ ಮಗ ಓಡಿ ಬಂದಿದ್ದಾನೆ. ಈ ವೇಳೆ ಚಿರತೆ ನನ್ನನ್ನು ಬಿಟ್ಟು ಮಗನ ಮೇಲೆರಗಿತು. ಮಗನನ್ನು ಚಿರತೆ ಬಾಯಿಯಿಂದ ಬಿಡಿಸಲು ಕುಡುಗೋಲು ಹಾಗೂ ಈಟಿ ಬಳಸಿ ಚಿರತೆ ಮೇಲೆ ದಾಳಿ ಮಾಡಿದ್ದು, ಅದನ್ನು ಕೊಂದು ಹಾಕಿದ್ದಾಗಿ ಹೇಳಿದ್ದಾರೆ. ಘಟನೆಯ ಬಳಿಕ ನಾವು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾಗಿ ಬಾಬುಭಾಯಿ ಹೇಳಿದ್ದಾರೆ.
ಚಿರತೆ ಕೊಂದ ತಂದೇ ಮಗನ ವಿರುದ್ಧ ಕೇಸ್
ಘಟನೆಯಲ್ಲಿ ತಂದೆ ಮತ್ತು ಮಗ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೊದಲು ಉನಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡವು ತಕ್ಷಣ ಸ್ಥಳಕ್ಕೆ ತಲುಪಿ ಘಟನೆಯಲ್ಲಿ ಬಳಸಲಾದ ಆಯುಧಗಳನ್ನು ವಶಪಡಿಸಿಕೊಂಡಿದೆ. ಚಿರತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ ತಮ್ಮ ಜೀವ ಉಳಿಸಲು ಚಿರತೆಯನ್ನು ಕೊಂದ ಬಾಬುಭಾಯ್ ಮತ್ತು ಶಾರ್ದೂಲ್ ವಿರುದ್ಧ ಅರಣ್ಯ ಇಲಾಖೆ ಕಾಡು ಪ್ರಾಣಿಯನ್ನು ಕೊಂದ ದೂರು ದಾಖಲಿಸಿದ್ದು, ಹೆಚ್ಚಿನ ತನಿಖೆ ಆರಂಭಿಸಿದೆ.
ಇದನ್ನೂ ಓದಿ; ತಮಾಷೆಗೆ ಮಾಡಿದ್ವಿ ವೈರಲ್ ಆಗೋಯ್ತು ಎಂದ ಸ್ನೇಹಿತರು: ವೈರಲ್ ಆದ ಪಿಜ್ಜಾ ಡೆಲಿವರಿ ಬಾಯ್‌ಗೆ ಈಗ ಮತ್ತೊಂದು ಸಂಕಷ್ಟ


